ಬಂದು ಹೋಗು
ಡಾ.ಗೋವಿಂದ ಹೆಗಡೆ
ಬಾ ಶಂಭು, ಬಾ
ಕುಳಿತುಕೋ ಕ್ಷಣ ಸಾವರಿಸಿಕೋ
ಹುಷಾರು!
ನಿನ್ನ ಆ ಹಳೆಯ ಹುಲಿಯದೋ
ಆನೆಯದೋ ಚರ್ಮ
ಹರಿದುಹೋದೀತು!
ಹೊಸದು ಸಿಗುವುದು
ಸುಲಭವಲ್ಲ ಮಾರಾಯ!
ನಮ್ಮ ಮಂಗಮಾಯ ಕಲೆ
ನಿನಗೂ ತಿಳಿಯದೇನೋ
ಮತ್ತೆ ಅರಣ್ಯ ಇಲಾಖೆಯವರ
ಕೈಯಲ್ಲಿ ಸಿಕ್ಕೆಯೋ
ನಿನ್ನ ಕತೆ -ಅಷ್ಟೇ!
ಆ ಕೊರಳ ಹಾವು ಆ ಜಟೆ
ಅದಕ್ಕೊಂದು ಚಂದ್ರ
ಸಾಲದ್ದಕ್ಕೆ ಗೌರಿ!
ಕೈಯ ಭಿಕ್ಷಾಪಾತ್ರೆ ತ್ರಿಶೂಲ
ಕಪಾಲ ಮಾಲೆ
ಯಾಕಯ್ಯ ನಿನಗೆ ಈ
ಯುಗದಲ್ಲೂ ಅದೆಲ್ಲ?!
ನರಮನುಷ್ಯರಂತೆ ಎಲ್ಲ
ಬಿಟ್ಟು ಆರಾಮಾಗಿ ಇರಬಾರದೇ?
ಮನೆಯಲ್ಲಿ ಎಲ್ಲ ಕ್ಷೇಮವೇ
ನಿನ್ನ ಸತಿ ಗಿರಿಜೆ ಮುನಿದು
ಚಂಡಿಯಾಗಿಲ್ಲ ತಾನೆ ?
ಕರಿಮುಖ ಷಣ್ಮುಖರು ಕುಶಲವೇನಯ್ಯ
ಭಸ್ಮಾಸುರನಿಗೆ ನೀನೇ ವರ ಕೊಟ್ಟೆ
ಮತ್ತೆ ಪಾಡೂ ಪಟ್ಟೆ
ಮೋಹಿನಿ ಕಾಪಾಡಿದಳಂತೆ ನಿನ್ನ
ಈಗಿನ ಕತೆ ಬೇರೆ
ಭಸ್ಮಾಸುರನ ಚಹರೆ ಬದಲಾಗಿದೆ
ಕೊಬ್ಬಿ ಕಾಡುತ್ತಿದ್ದಾನೆ
ಕಾಪಾಡುತ್ತೀಯಾ ನೀನು
ಕರೆತರುವೆಯಾ ಮೋಹಿನಿಯನ್ನು
ದೇವ ದಾನವರ- ಯಾಕೆ
ಸಕಲ ಲೋಕಗಳ ಉಳಿಸಲು
ವಿಷ ಕುಡಿದವ ನೀನು
ಈ ಮನುಷ್ಯರ ಈ ಅವನಿಯ
ಉಳಿಸಲು ಏನಾದರೂ ಮಾಡಯ್ಯ
ಇಂದೇನೋ ಶಿವರಾತ್ರಿಯಂತೆ
ಅಭಿಷೇಕ ಅರ್ಚನೆ ಉಪವಾಸ ಜಾಗರಣೆ
ಎಂದೆಲ್ಲ ಗಡಿಬಿಡಿಯಲ್ಲಿ ಮುಳುಗಿದ್ದಾರೆ
ಜನ
ಬಾ, ಆರಾಮಾಗಿ ಕೂತು ಹರಟು
ಹೇಳು, ಕುಡಿಯಲು ಏನು ಕೊಡಲಿ
ಅನಾದಿ ಅನಂತನಂತೆ ನೀನು
ನಮ್ಮ ಆದ್ಯಂತವೂ ಲಕ್ಷಲಕ್ಷ
ತಾಪಗಳ ತುಂಬಿಕೊಂಡಿದ್ದೇವೆ
ಹಾಸಿ ಹೊದೆವಷ್ಟು
ಉಸಿರು ಕಟ್ಟುವಂತೆ
ಇಂದು ಬಂದಂತೆ
ಆಗೀಗ ಬಾ, ಮುಖ ತೋರಿಸು
ನಮ್ಮ ಆಚೆಗೂ ಇದೆ ಬದುಕು
ನೆನಪಿಸಲು ಬಂದು ಹೋಗು
ಸಾಧ್ಯವಾದರೆ ಮನುಕುಲವೆಂಬ
ಈ ಭಸ್ಮಾಸುರನ
ಅವನಿಂದಲೇ ಉಳಿಸಿ ಹೋಗು.
*********