ಕಾವ್ಯಯಾನ

ಕೊಡುವುದಾದರೂ ಯಾರಿಗೆ?

ವಿಜಯಶ್ರೀ ಹಾಲಾಡಿ

ಹೌದು
ಈ ಪ್ರೀತಿಯನ್ನು
ಮೊಗೆಮೊಗೆದು
ಕೊಡುವುದಾದರೂ ಯಾರಿಗೆ ?

ನೇರಳೆಮರಕ್ಕೆ ಅಳಿಲಿಗೆ
ಬೆಚ್ಚನೆ ಗೂಡಿನ ಹಕ್ಕಿಗೆ ?

ಹೆಣ್ತನದ ಪರಿಧಿಗೆ ಎಂದೂ ದಕ್ಕದ
ಮುಖ –ಮುಖವಾಡಗಳು …
ರಾತ್ರಿ -ಹಗಲುಗಳನ್ನು
ಗೆಜ್ಜೆಕಾಲಿನಲ್ಲಿ ನೋಯಿಸಲೆ …
ಯಾತನೆಯನ್ನು ನುಂಗುತ್ತಿರುವೆ
ಸಂಜೆಯ ಏಕಾಂತಗಳಲ್ಲಿ
ಹೆಪ್ಪುಗಟ್ಟಿದ ಇರುಳುಗಳಲ್ಲಿ ..

ಬೊಗಸೆಯೊಡ್ಡಿದ್ದೇನೆ
ಮಂಡಿಯೂರಿದ್ದೇನೆ
ಹಟಮಾರಿ ಕಡಲಾಗಿದ್ದೇನೆ..
ತರ್ಕಕ್ಕೆ ನಿಲುಕದ ಗಳಿಗೆ
-ಗಳಲ್ಲಿ ಒಂಟಿಹೂವಂತೆ
ನಿಂತುಬಿಟ್ಟಿದ್ದೇನೆ ..

ಲೆಕ್ಕವಿಟ್ಟಿಲ್ಲ ಕೋಗಿಲೆ
ಹಾಡಿದ ಹಾಡುಗಳನ್ನು…

ಉದುರಿಬಿದ್ದ ಗರಿಗಳನ್ನು
ಮತ್ತೆ ಹುಟ್ಟಿಸಿಕೊಳ್ಳಲು
ಸಾಧ್ಯವಾಗುವುದಾದರೆ
ಪ್ರೀತಿಯಿಂದ ಆರ್ತಳಾಗಿದ್ದೇನೆ.

(ಚಿತ್ರಕೃಪೆ-ವಿಜಯಶ್ರೀ ಹಾಲಾಡಿ)


Leave a Reply

Back To Top