ಪುಸ್ತಕ ಪರಿಚಯ

ತಗಿ ನಿನ್ನ ತಂಬೂರಿ ,

ಶರೀಫರ ತತ್ವ ಭಾಷ್ಯ”

ಕೃತಿ: ತಗಿ ನಿನ್ನ ತಂಬೂರಿ(ಶರೀಫರ ತತ್ವ ಭಾಷ್ಯ)

ಲೇಖಕಿ; ಚಂದ್ರಪ್ರಭ ಬಿ.

ಪ್ರಕಾಶಕರು: ಅಜಬ್ ಪ್ರಕಾಶನ, ನಿಪ್ಪಾಣಿ

ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಅಜಬ್ ಪ್ರಕಾಶನ, ನಿಪ್ಪಾಣಿ ರವರ ಹೊಸ ಪ್ರಕಟಣೆ.

ಬನಹಟ್ಟಿಯ ಚಂದ್ರಪ್ರಭಾ ಲೇಖನಿಯಿಂದ ಇದು ಚೊಚ್ಚಲ ಪುಸ್ತಕ. ಕನ್ನಡ ನಾಡಿನ ಬಹು ಜನಪ್ರಿಯ ಜಾನಪದ ಕವಿ, ತತ್ವ ಪದಕಾರ ಶರೀಫ ಸಾಹೇಬರ ಆಯ್ದ ೨೫ ತತ್ವ ಪದಗಳನ್ನು ಇಲ್ಲಿ ಲೇಖಕರು ಚರ್ಚೆಗೆ ಒಳಪಡಿಸಿದ್ದಾರೆ. ಪ್ರಸ್ತಾವನೆಯಲ್ಲಿ ಸ್ವತಃ ಲೇಖಕಿ ಹೇಳುವಂತೆ ಶಿವಯೋಗದ ಹಿನ್ನೆಲೆಯಲ್ಲಿ ಈ ಪದ್ಯಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಪೂರಕವಾಗಿ‌ ಬಸವಾದಿ ಶರಣರ ವಚನಗಳನ್ನು ಅಲ್ಲಲ್ಲಿ ಉಲ್ಲೇಖಿಸಿ ಶರಣರ ವಚನಗಳು ಹಾಗೂ ಶರೀಫರ ತತ್ವ ಪದಗಳಿಗಿರುವ ತಾತ್ವಿಕ ಹಿನ್ನೆಲೆಯತ್ತ ಬಲು ಸೊಗಸಾಗಿ ಗಮನ ಸೆಳೆಯಲಾಗಿದೆ. ಸಾಮಾನ್ಯ ಜನಜೀವನದ ಆಗು ಹೋಗುಗಳನ್ನೇ ರೂಪಕವನ್ನಾಗಿ ಮಾಡಿಕೊಳ್ಳುವಾಗಲೂ ಶರೀಫರ ತತ್ವ ಪದಗಳ ಗೂಢಾರ್ಥ ಪರಮಾರ್ಥ ಸಾಧನೆಯತ್ತ ಕೈ ಹಿಡಿದು ನಡೆಯಿಸುವುದನ್ನು ಲೇಖಕಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆಯಾ ಸಂದರ್ಭಗಳಲ್ಲಿ ಅಗತ್ಯವೆನಿಸುವ ದೃಷ್ಟಾಂತ ನೀಡುವ ಮೂಲಕ ಸಂಗತಿಗಳನ್ನು ಓದುಗ ಸ್ನೇಹಿ ಮಾಡುವ ನಿಟ್ಟಿನಲ್ಲಿ ಲೇಖಕರು ಪರಿಶ್ರಮ ಪಟ್ಟಿದ್ದು ಕಂಡು ಬರುತ್ತದೆ. ಸುದೀರ್ಘವಾದ ತಮ್ಮ ಪ್ರಸ್ಥಾವನೆಯಲ್ಲಿ ಯೋಗ, ಶಿವಯೋಗ ಇತ್ಯಾದಿ ಕುರಿತು ಹೇಳುವ ಲೇಖಕರು ಕಾವ್ಯ ಕುರಿತು ವ್ಯಕ್ತಪಡಿಸುವ ಅಧ್ಯಾಯ ಗಮನ ಸೆಳೆಯುತ್ತದೆ. ಅದೇ ರೀತಿ ಯೋಗದಲ್ಲಿ ಪ್ರಸ್ತಾಪವಾಗುವ ಹಲವಾರು ತಾಂತ್ರಿಕ ಪಾರಿಭಾಷಿಕ ಪದಗಳ ವಿವರಣೆ ಕೂಡಾ ಪೂರಕವಾಗಿದೆ. ಶರೀಫರ ಜೀವನದ ಆಗು ಹೋಗುಗಳನ್ನು ತಿಳಿಸುವ ಮೂಲಕ ಅವರೊಬ್ಬ ಸಮನ್ವಯದ ಹರಿಕಾರ ಎಂಬ ಅಂಶವನ್ನು ಕೊನೆಯಲ್ಲಿ ನಿರೂಪಿಸಲಾಗಿದೆ. ಶರೀಫರು ಬೇರೆಲ್ಲ ಆಗುವುದಕ್ಕಿಂತ ಮಿಗಿಲಾಗಿ ಓರ್ವ ಶಿವಯೋಗ ಸಾಧಕರಾಗಿದ್ದರು, ಅಪ್ಪಟ ಶರಣರಾಗಿದ್ದರು, ಮೌಢ್ಯ ವಿರೋಧಿಯಾಗಿದ್ದರು, ಜನಾನುರಾಗಿಯಾಗಿದ್ದರು ಎಂಬ ಸ್ಪಷ್ಟ ನಿಲುವನ್ನು ಲೇಖಕರು ಅತ್ಯಂತ ಶ್ರದ್ಧೆಯಿಂದ ನಿರೂಪಿಸುವುದನ್ನು ಇಲ್ಲಿ ಕಾಣಬಹುದು.

ಪುಸ್ತಕ ದೊರೆಯುವ ಸ್ಥಳ:
ರೂ. ೧೮೦/- ಬೆಲೆಯ ಪುಸ್ತಕ “ಅರು ಪ್ರಕಾಶನ” ಬನಹಟ್ಟಿ ಇವರಲ್ಲಿ ಲಭ್ಯವಿದೆ. ಸಂಪರ್ಕ ಸಂಖ್ಯೆ 9916542172
ಡಿ. ಎ. ಬಾಗಲಕೋಟ, ‘ಅರು ನಿಲಯ’, ಬೀಳಗಿ ಓಣಿ, ಬನಹಟ್ಟಿ 587311, ಜಿ.‌ ಬಾಗಲಕೋಟ – ಇವರನ್ನು ಸಂಪರ್ಕಿಸಬಹುದು.

Leave a Reply

Back To Top