ಕಾವ್ಯಯಾನ

ಆ ಗುಡಿಗಳಲ್ಲಿ

ಜ್ಯೋತಿ ಡಿ.ಬೊಮ್ಮಾ.

ಆ ಗುಡಿಗಳಲ್ಲಿ..

ಪರದೆ ಹಾಕಿದ ಗರ್ಭಗುಡಿಯೊಳಗೆ
ಅರ್ಚಕರು ದೇವಿಯ ಮೈ ಮುಟ್ಟಿ ಬಟ್ಟೆ ಬದಲಾಯಿಸಿ ,ಬೊಟ್ಟಿಟ್ಟು,ಸಿಂಗರಿಸಿ ಹೊರಗೆ
ದರ್ಶನಕ್ಕೆ ನಿಂತ ಸ್ತ್ರೀಯರನ್ನೂ ಮುಟ್ಟಿಸಿಕೊಳ್ಳದೆ
ಮೆಲಿಂದಲೆ ಎಸೆದ ಪ್ರಸಾದವನ್ನೂ ಭಕ್ತಿಯಿಂದ
ಸ್ವೀಕರಿಸಿ,ಕಣ್ಣಿಗೊತ್ತಿಕೊಂಡು ಪರವಶರಾಗಿ
ದೇವಿಯೆಡೆ ನೋಡಿದಾಗ..
ಮೂಕಳಾಗಿ ನಿಂತ ದೇವಿಯೂ
ನಿಟ್ಟುಸಿರು ಹಾಕುತಿದ್ದಳು
ಒಳಗೊಳಗೆ ಬೇಯುತ್ತ
ಕೇಳುವಂತಿತ್ತು ನೋಟ
ನಿಮ್ಮೊಳಗಿರದ ಅದಾವ ಶಕ್ತಿ ದೇವಾಲಯದಲ್ಲಿದೆ.

ಮುಟ್ಟಾದವರೂ ದೇವರನ್ನೂ ಮುಟ್ಟಬಾರದು
ಎಂಬ ಸಂಪ್ರದಾಯದಿಂದ ದೇವಿಯೂ ನಡುಗುವಳು
ತನ್ನೊಳಗೂ ಸ್ರವಿಸುವ ಸ್ರಾವ ಕಾಣದಂತೆ
ತಡೆಗಟ್ಟುವದು ಹೇಗೆಂದು ತಿಳಿಯದೆ..

ಹೋಗಲಿ ಬಿಡಿ
ಮುಟ್ಟಬೇಡವೆಂದಮೇಲೆ ಮುಟ್ಟುವ ಹಠವೇಕೋ
ಮುಟ್ಟಿದ ತಕ್ಷಣ ಸಮತೆ ಕನಸು ನನಸಾಗುವದೇ..!

ಮುಟ್ಟಿನ ಮಡುವಿನಲ್ಲಿ ಈಜಾಡಿ
ಧರೆಗೆ ಬಿದ್ದ ಕ್ಷಣದಿಂದಲೆ ಶ್ರೇಷ್ಠರೆನಿಸಿಕೊಂಡ
ಅವರೇ ತುಂಬಿರಲಿ ದೇವಸ್ಥಾನದೋಳಗೆ.

ಆ ಗುಡಿಗಳಲ್ಲಿ
ಅರ್ಚಕರ ಆಟದ ಬೋಂಬೆಯಾದ
ಶಿಲೆಗಳು ಸನ್ನೆ ಮಾಡುತಿವೆ ನಮಗೆ..
ಹೋಗು ಬರದಿದ್ದರೆ ನಷ್ಟವೇನಿಲ್ಲ..
ನಿನ್ನ ದೇಹವೇ ದೇಗುಲವಾಗಿಸಿಕೋ..
ನನ್ನನ್ನು ಅಲ್ಲೆ ಪ್ರತಿಸ್ಟಾಪಿಸು..ಎಂದು.

*******

Leave a Reply

Back To Top