ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ

Silhouette of Person

ಕು.ಸ.ಮದುಸೂದನ

ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ!

ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ!

ಬರೆಸಿಕೊಳ್ಳಲು ಕವಿತೆ ಒಪ್ಪದಿದ್ದಾಗ

ಗದ್ಯದತ್ತ ಮುಖ ಮಾಡಲು ಮನಸು ಒಲ್ಲೆಂದಾಗಲೆಲ್ಲ ಅವನು

ಮಾಡುತ್ತಿದ್ದುದು ಒಂದೇ ಕೆಲಸ

ಅವಳಿಗೆ ಪ್ರೆಮಪತ್ರಗಳನ್ನು ಬರೆಯುತ್ತಿದ್ದು.

ಅವನೇನು ಆ ಪತ್ರಗಳನ್ನು ಪ್ರಿಯೆ ಎಂದೊ

ಇಲ್ಲಾ ಅವಳ ಹೆಸರಿನಿದಲೋ ಶುರು ಮಾಡುತ್ತಿರಲಿಲ್ಲ

ಪ್ರತಿ ಪತ್ರವೂ ಹಿಂದಿನ ಪತ್ರದ ಮುಂದುವರಿಕೆಯಂತಿರುತ್ತಿತ್ತು

ಅಲ್ಲಿಯೂ ಅವನೇನು ಅವಳನ್ನು ಚಿನ್ನ ರನ್ನ

ಎಂದು ಮುದ್ದಿಸುತ್ತಿರಲಿಲ್ಲ.

ಕಳೆದ ರಾತ್ರಿಯ ತನ್ನ ಒಂಟಿತನದ ಬಗ್ಗೆ,

ಈಗೀಗ ಹೆಚ್ಚುಹಣವಿಲ್ಲದ್ದರಿಂದ

ತಾನು ತರುತ್ತಿರುವ ಅಗ್ಗದ ಮದ್ಯದಬಗ್ಗೆ

ಅದೂ ಕಲಬೆರಕೆಯಾಗುತ್ತಿರುವ ಬಗ್ಗೆ

ಈಗ ತಾನಿರುವ ಮನೆಯ ಕೋಣೆಗಳಿಗೆ

ತಿಳಿಗುಲಾಬಿಯ ಬಣ್ಣ ಬಳಿಸಿ

ನವೀಕರಣಗೊಳಿಸುತ್ತಿರುವ ಬಗ್ಗೆ

ಅಂಗಳದ ತುಂಬೆಲ್ಲ ಗುಲಾಬಿಹೂಗಳ

ಹೊಸ ಹೂಕುಂಡಗಳ ತಂದಿಡುವ

ತನ್ನ ಯೋಜನೆಗಳ ಬಗ್ಗೆ

ಅದಕ್ಕಾಗಿಯೇ ತಾನು ಸ್ವಲ್ಪಸ್ವಲ್ಪ ಹಣ ಉಳಿಸುತ್ತಿರುವ ಬಗ್ಗೆ

ಈ ದಾವಂತದಲ್ಲಿ ಎಷ್ಟು ಕುಡಿದರೂ

ಏರದ ನಿಶೆಯ ಬಗ್ಗೆ

ತಾನು ಬರೆಯಲಿಚ್ಚಿಸಿದ್ದ ಅವಳ ಮೇಲಿನ

ಅದೊಂದು ಅದ್ಬುತ

ಪ್ರೇಮಕಾವ್ಯದ ಬಗ್ಗೆ

ಪ್ರತಿಬಾರಿ ಅದನ್ನು ಪ್ರಾರಂಭಿಸಲು ಹೊರಟಾಗಲು

ತನ್ನದೇ ಸಾವಿನ ಚರಮಗೀತೆಯ ಸಾಲುಗಳು ಮೂಡಿ

ತಾನು ಗಲಿಬಿಲಿಗೊಳ್ಳುವುದರ ಬಗ್ಗೆ

ಮತ್ತು ಮುಂದೊಂದು ದಿನ

ಅಜರಾಮರವಾಗಿರಬಹುದಾದ ಪ್ರೇಮ ಕಾವ್ಯವ ಬರೆದು

ಅವಳಿಗರ್ಪಿಸುವ ತನ್ನ ಕನಸಿನ ಬಗ್ಗೆ

ಬರೆಯುತ್ತ ಹೋಗುತ್ತಿದ್ದ.

ಹೀಗೆ ಎಷ್ಟೋ ವರುಷಗಳ ಕಾಲ ಅವನು

ಬರೆಯುತ್ತಲೇ ಹೋದ ಪತ್ರಗಳ ಲಕೋಟೆಯೊಳಗಿಟ್ಟು ಅಂಚೆಗೂ ಹಾಕದೆ

ತನ್ನ ಕೋಣೆಯ ಕಪಾಟಿನಲ್ಲಿ ಜೋಡಿಸಿಡುತ್ತಲೇ ಹೋದ.

ಅದೊಂದು ದಿನ ಅವನು ಸತ್ತಾಗ

ಅಂತ್ಯಕ್ರಿಯೆ ಮಾಡಲು ಅವನ ಬಂದುಗಳು

ಯಾರೂ ಇಲ್ಲವೆಂದಾದಾಗ

ಸದ್ಯ ಅವನನ್ನು ಸುಡಲು ಸೌದೆಗೆ ಹಣವನ್ನು

ಸರಕಾರ ಖರ್ಚು ಮಾಡಬೇಕಿಲ್ಲವಲ್ಲ

ಎಂದುಕೊಂಡ ನಗರಸಭೆಯ ಅಧಿಕಾರಿಗಳು

ಸಮಾದಾನದ ನಿಟ್ಟುಸಿರು ಬಿಟ್ಟರು

ಈಗಲೂ ಅವನ ಪಕ್ಕದ ಊರಿನ ಅಂಚೇ ಕಚೇರಿಗೆ

ಪ್ರತಿನಿತ್ಯ ಬಂದು ನಿಲ್ಲುವ ಅವಳು

ನನಗೇನಾದರು ಕಾಗದವಿದೆಯೇ?

ಎಂದು ಅಂಚೆಯವನನ್ನು ಕೇಳಿ

ನಿರಾಸೆಯಿಂದ ತಲೆತಗ್ಗಿಸಿ ಹೋಗುತ್ತಾಳೆ.

********

..

About The Author

3 thoughts on “ಕವಿತೆ ಕಾರ್ನರ್”

  1. ಬ್ಯೂಟಿಫುಲ್‌ ಸರ್.. ವಿಲೋಮ ವರಸೆಯ, ತನ್ನದೇ ಗತಿಯಲ್ಲಿ ಚಲಿಸುವ ಸರಳ ಸುಂದರ ಸಾಲುಗಳು…
    ಅಭಿನಂದನೆ.

  2. ಸುಂದರ ಮನಸ್ಸಿಗೆ
    ಸುಂದರ ಸಾಲುಗಳ
    ಸುಂದರ ಸವಿಯೂಟ
    ಕಾಡಲ್ಲಿ ಅರಳಿದ ಹೂವಿನಂತೆ,
    ಕಲ್ಲಿನಿಂದ ಸೂಕ್ಷ್ಮವಾಗಿ ಶಿಲೆಯ ಕೆತ್ತಿದನಂತೆ.

Leave a Reply

You cannot copy content of this page

Scroll to Top