ಅನುವಾದ ಸಂಗಾತಿ
ಎಡೆಬಿಡದೆ ನಿನ್ನ ಶೋಕಕ್ಕೆ ಮದ್ದು!
ಆಂಗ್ಲ ಮೂಲ : ಪ್ರೊ. ಜಿ. ಎನ್ ಸಾಯಿಬಾಬಾ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ
ಇತ್ತ ನೋಡು…
ಕಂಬನಿ ತುಂಬಿದ ನಿನ್ನ ಕಂಗಳನು
ನನಗೆ ತೋರಿಸಲು ನಾಚುವೆಯೇಕೆ?!
ಇಂದಾದರೂ ಕಂಬನಿಯ ಮಳೆಯನು
ನೆರೆಯಂತೆ ಹರಿಯಲು ಬಿಡು!
ಈ ಲೋಕವೇ…
ಅನಂತವಾದ ವಿಷಾದ, ದುಃಖದಿಂದ ತಯಾರಾಗಿದೆಯಲ್ಲವೆ!
ಮತ್ತೆ ಇನ್ನೇಕೆ ಮುಚ್ಚುಮರೆ!
ನಿನ್ನೆದೆಯ ತುಂಬಾ ತುಂಬಿರುವ
ಎಡೆಬಿಡದೆ ಶೋಕವನು ಹೊರಹಾಕಲು ನೀನು ಸಂದೇಹಿಸಬೇಡ!
ನಿನ್ನ ಕಂಗಳಿಂದ…
ಕಂಬನಿಯ ಮಳೆ ನಿಂತಾಗಲಲ್ಲವೆ
ಹೊಸದಾಗಿ ಮೊಳೆತ ಅಚ್ಚಹಸಿರಾದ
ಚಿಗುರುಗಳನು ಎಣಿಸುತ್ತ…
ಆ ಚಿಗುರುಗಳು ಸುಂದರವಾದ ಕಾಡಾಗುವುದನು ನೋಡುವೆ ನೀನು!
ನಿನಗೆ ತಿಳಿದಿದೆಯೋ ಇಲ್ಲವೋ?
ಕಬೀರ್ ಸದಾ ಹೇಳುತ್ತಿದ್ದ ನೀನು ಅನುಭವಿಸುವ
ಧೀರ್ಘಕಾಲದ ದುಃಖಕ್ಕೆ ದಯೆಯಿರದ ವಿಷಾದಕ್ಕೆ
ಪ್ರೇಮ ಒಂದೇ ಮದ್ದು ಎಂದು!
ಮತ್ತೆ ಇನ್ನು ನೀನು ಕಂಬನಿಯ ಮರೆಮಾಡಬೇಡ!
ಆಂಗ್ಲ ಮೂಲ : ಪ್ರೊ. ಜಿ. ಎನ್ ಸಾಯಿಬಾಬಾ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ
ಜಿ. ಎನ್. ಸಾಯಿಬಾಬಾ
ಇವರ ಪೂರ್ಣ ಹೆಸರು ಗೋಕರಕೊಂಡ ನಾಗ ಸಾಯಿಬಾಬಾ. ಆಂಧ್ರಪ್ರದೇಶದ ಪೂರ್ವಗೋದಾವರಿ (ತೂರ್ಪುಗೋದಾವರಿ) ಜಿಲ್ಲೆಯ ಅಮಲಾಪುರದಲ್ಲಿ ಬಡ ರೈತ ಕುಟುಂಬದಲ್ಲಿ ಜನಿಸಿದರು. ಇವರಿಗೆ 05 ವರ್ಷಗಳಾಗಿದ್ದಾಗ ಪೋಲಿಯೋ ಖಾಯಿಲೆಗೆ ತುತ್ತಾಗಿದ್ದರಿಂದ ಪೂರ್ತಿಯಾಗಿ ಎರಡೂ ಕಾಲುಗಳು ಊನವಾದವು.
ಇವರು ಬಹಳ ವರ್ಷಗಳಿಂದ ಗಾಲಿಕುರ್ಚಿಯಲ್ಲಿ ಜೀವನ ಕಳೆಯುತ್ತಿದ್ದಾರೆ. 2013ರಲ್ಲಿ ಪಿಎಚ್.ಡಿ ಮಾಡಿದರು. ದಿಲ್ಲಿ ವಿಶ್ವವಿದ್ಯಾಲಯದ ಆನಂದ್ ಕಲಾಶಾಲೆಯಲ್ಲಿ ಆಂಗ್ಲ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದರು. ಇವರು ಓರ್ವ ಭಾರತೀಯ ವಿದ್ವಾಂಸರು, ಲೇಖಕರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರೂ ಹೌದು.
ಇವರಿಗೆ ಮಾವೋಯಿಸ್ಟ್ ಪಕ್ಷದೊಂದಿಗೆ ನಂಟಿದೆ ಎಂಬ ಆರೋಪದ ಮೇಲೆ 2014ರಲ್ಲಿ ಮಹಾರಾಷ್ಟ್ರ ಪೊಲೀಸರು ಅರೆಸ್ಟ್ ಮಾಡಿದರು. ಈ ಪ್ರಕರಣದಲ್ಲಿ ನ್ಯಾಯಾಲಯ ಇವರಿಗೆ ಜೀವಾವಧಿ ಕಾರಾಗಾರ ಶಿಕ್ಷೆಯನ್ನು ವಿಧಿಸಿತು. ನಾಗಪುರದ ಸೆಂಟ್ರಲ್ ಜೈಲಿನ ‘ಅಂಡಾ ಸೆಲ್’ನಲ್ಲಿ ಸುಧೀರ್ಘ ಕಾಲದ ಏಕಾಂತ ಸೆರೆವಾಸವನ್ನು ಅನುಭವಿಸಿದರು. ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರದ ಜಸ್ಟಿಸ್ ರೋಹಿತ್ ದೇವ್ ಮತ್ತು ಅನಿಲ್ ಪನಸಾರೆಯವರ ವಿಭಾಗೀಯ ಪೀಠ 14-10-2022ರಂದು ಕೂಡಲೇ ಸೆರೆವಾಸದ ಶಿಕ್ಷೆಯಿಂದ ಮುಕ್ತಗೊಳಿಸಿತು.
ಆಗ ಜೈಲಿನಿಂದ ಡಾ|| ಭಾರತಿಯವರಿಗೆ ತೆಲುಗಿಗೆ ಅನುವಾದಿಸಲು ‘The remedy for your prolonged grief’ ಎಂಬ ಕವಿತೆಯನ್ನು 07-10-2019ರಂದು ಬರೆದು ವಸಂತ ಎಂಬುವವರ ಮೂಲಕ ಕಳುಹಿಸಿದರು. ಆ ಕವಿತೆಯನ್ನು ತೆಲುಗು ಅನುವಾದದ ಮೂಲಕ ಕನ್ನಡಕ್ಕೆ ಅನುವಾದಿಸಲಾಗಿದೆ.
ಸಂಗಾತಿಗೆ ಶರಣು