ಚಲಿಸುವ ಮುಳ್ಳು

ಚಲಿಸುವ ಮುಳ್ಳು

person standing beside wall clock

ಚಂದ್ರಪ್ರಭ ಬಿ.

ಚಲಿಸುವ ಮುಳ್ಳು

ಆಗಲೇ ನಿನಗೆ ಐವತ್ತಾತs !
ಅವ ತಮಾಷೆಗಿಳಿದ..
ಹ್ಞೂಂ.. ನಿನಗ ಅರವತ್ತಾಗುವಾಗ
ನನಗಿನ್ನೆಷ್ಟಾಗಬೇಕು?
ಹೆಚ್ಚುತ್ತಿದ್ದ ಈರುಳ್ಳಿ ಕಣ್ಣ ತೋಯಿಸಿತು

‘ಹೆರಳಿಗೆ ಹೂ ಮುಡದರೆ ನೀ
ಅದೆಷ್ಟ ಚಂದ ಕಾಣತೀ ಈಗಲೂ’ ಅವ ಹೇಳಿದ
ಹೆರಳೆಲ್ಲಿದೆ.. ಈಗಿರವುದು ಒಂದು ಮೋಟು ಜಡೆ ಅಷ್ಟೇ..
ಒಗ್ಗರಣೆ ಹೊತ್ತಕೊಂಡೀತೆಂದು
ಉರಿ ಸಣ್ಣ ಮಾಡುತ್ತ ಹೇಳಿದೆ

‘ಆ ಲೇಖಕರು ಮುನ್ನುಡಿ ಬರೆದು ಕೊಟ್ಟರೇನು ನಿನಗೆ..
ಮತ್ತ ನಿನ್ನ ಪುಸ್ತಕ ಬಿಡುಗಡೆ ಯಾವಾಗ?’
ಮುತುವರ್ಜಿಯಿಂದ ಅವ ಕೇಳಿದ
‘ಇಲ್ಲ ನಾಡಿದ್ದು ಭೇಟಿಯಾಗಿ ವಿಚಾರಿಸುವೆ
ನಾಳೆ ದೀಪು ಶಾಲೇಲಿ ಪಾಲಕರ ಸಭೆಗೆ ಹೋಗಲಿಕ್ಕುಂಟು’

‘ಇಳಿ ಸಂಜೆ ಪೇಟೆಗೆ ಹೋಗಿ ಇದನ್ನೆಲ್ಲ ತರಲಿಕ್ಕಿದೆ
ಮನೇಲಿರಿ.. ಬೈಕ್ ಮೇಲೆ ತಾಸಿನಲ್ಲಿ ಹೋಗಿ ಬಂದೇವು’
ನನ್ನ ಮಾತು..
‘ಹಾಗೇ ಐಸ್ ಕ್ರೀಂ ಪಾರ್ಲರ್ ಗೆ ಹೋಗೋಣ
ಆ ಹಸಿರು ಸೀರೇಲಿ ನೀ ಚಂದ ಕಾಣುವಿ
ಅದನ್ನೇ ಉಟ್ಟುಕೊ…’
ನಾನಾಗಲೇ ಬೂದು ಬಣ್ಣದ
ಚೂಡೀದಾರ ಎತ್ತಿಟ್ಟಿದ್ದೆ!

ದಿನಸಿ ಅಂಗಡಿಯಲ್ಲಿ ಸಾಮಾನಿನ ಲಿಸ್ಟ್ ಕೊಟ್ಟು
ಪಾರ್ಲರಿಗೆ ಹೋಗಿ ಕುಳಿತೆವು
ಹುಡುಗ ಒಂದೇ ಉಸಿರಲ್ಲಿ ಐಸ್ ಕ್ರೀಂ ಲಿಸ್ಟ್ ಒಪ್ಪಿಸಿದ
ಆತನ ಮುಗ್ಧತೆ ಕಂಡು ಗಲಗಲನೆ ನಕ್ಕು ಬಿಟ್ಟೆ
‘ಹೀಂಗ ನಕ್ಕರ ನೀ ಚಂದ ಕಾಣಸ್ತೀ ನೋಡು’
ಅವ ಅಕ್ಕರೆಯಿಂದ ನುಡಿದ..

‘ಈ ಸ್ಟ್ರಾಬೆರಿ.. ಕುಲ್ಫೀ ಐಸ್ ಕ್ರೀಂ ಶಶಿದು ಫೇವರಿಟ್
ಕಡೀ ಪೇಪರ ನಾಳೆ ಮುಗೀತದಲ್ಲ.. ನಾಡದು ಬರಬಹುದು ಊರಿಗೆ..’ ನಾ ಹೇಳಿದೆ..
ಫೋನಿನ ಮೇಲೆ ಫೋನು ಬರುತ್ತಲೇ ಇತ್ತು ಅವಗೆ
‘ಯಾರು ಒಂದೇ ಸಮ ಮಾಡ್ತಿರೂದು.. ಏನಂತ?’
‘ಏನಿಲ್ಲ, ಕಲಾಭವನದಾಗ ಸಂಗೀತ ಸಂಜೆ ಐತಲ್ಲ
ಲಗೂ ಬಾ ಅಂದ ಸೋಮು’

ಸಾಮಾನು ಸಮೇತ ನನ್ನ ಮನೆ ತಲುಪಿಸಿ
ಅವ ಮತ್ತೊಂದು ರೌಂಡ್ ಹೊರ ಹೊರಟ
‘ ಅವ್ವ ಈ ಲೆಕ್ಕ ನನಗ ತಿಳೀವಲ್ತು ಸ್ವಲ್ಪ ಬಾ ಇಲ್ಲೆ’
ದೀಪು ದನಿ…
‘ಬಂದೆ ಇರು ಮಗಾ.. ಅಜ್ಜಿಗೆ ಮಾತ್ರೆ ಕೊಡೂದಷ್ಟ ಬಾಕಿ’

ಮಗೂ ಲೆಕ್ಕ ಕೇಳಿದ ತಕ್ಷಣ ನೆನಪಾಯ್ತು
ನಾಳಿನ ವರ್ಕಶಾಪ್ ಗೆ ನನಗೆ ಪಿಪಿಟಿ ತಯಾರಿ ಮಾಡಲಿಕ್ಕಿತ್ತು!
ಜೊತೆಗೆ ಪ್ರಾತ್ಯಕ್ಷಿಕೆ ಮಾದರಿ..
‘ಆಫೀಸಿಗೆ ಹೋಗ್ತ ಅಪ್ಪನಿಗೆ ನಿನ್ನ ಬಿಟ್ಟ ಹೋಗಾಕ
ಹೇಳವ್ವಾ.. ಇವೆಲ್ಲಾ ಹೊತಕೊಂಡ ಯಾವಾಗ ಹೋಗ್ತಿ ನೀ’
ದೀಪು ಮಾತು

ತನ್ನನ್ನು ಮೀರಿಸಿ ನಾ ಓಡುತ್ತಿರುವೆನೆಂದು
ಮುನಿಸಿಕೊಂಡಿದೆಯೊ ಎಂಬಂತೆ ನಿಂತು ಬಿಟ್ಟಿದ್ದ ಗಡಿಯಾರಕ್ಕೆ ಸೆಲ್ಲು ಬದಲಾಯಿಸಿದೆ
ಮುಳ್ಳು ಚಲಿಸತೊಡಗಿತು…

***********

One thought on “ಚಲಿಸುವ ಮುಳ್ಳು

Leave a Reply

Back To Top