ಮರೆಯಲಾಗದ ಆ ಬಾಲ್ಯದ ದಿನಗಳು

ನೆನಪುಗಳ ಸಂಗಾತಿ

ಮರೆಯಲಾಗದ ಆ ಬಾಲ್ಯದ ದಿನಗಳು

ಲಕ್ಷ್ಮೀದೇವಿ ಪತ್ತಾರ

ನನ್ನ ಬಾಲ್ಯದ ದಿನಗಳೆಂದರೆ ಅದೊಂದು ಹಬ್ಬ.ದಿನ ದಿನವೂ ನಿತ್ಯನೂತನ . ನಮ್ಮ ಆಟ , ಪಾಠ,ಓಡಾಟ,ಬಗೆ ಬಗೆ ಊಟ ನೆನೆಸಿಕೊಂಡರೆನೆ ಮೈಮನ ಪುಳಕಗೊಳ್ಳುವುದು.

           ಎಂಟು ಅಥವಾ ಒಂಬತ್ತನೇ ತರಗತಿವರಿಗೆ ನಾನು ಬಾಲ್ಯವನ್ನು ಸಂಭ್ರಮಿಸಿದಷ್ಟು ಬೇರೆ ಯಾರು ಸಂಭ್ರಮಿಸಿರಕ್ಕಿಲ್ಲವೇನು ಎನಿಸುತ್ತದೆ.ಅಷ್ಟು ಸಂಭ್ರಮಾನಂದ ನನ್ನ ಬಾಲ್ಯ ನನಗೆ ಕೊಟ್ಟಿದೆ.ಬಾಲ್ಯದ ಸವಿನೆನಪಿನ ಬುತ್ತಿ ಬಿಚ್ಚಿದರೆ ಒಂದಕ್ಕಿಂತ ಒಂದು ವಿಶಿಷ್ಟ ಅಪರೂಪದ ರುಚಿಕಟ್ಟಾದ ಭೋಜನ ಒದಗಿಸುವ ಘಟನಾವಳಿಗಳು.

ನಾನು ಹುಟ್ಟಿ ಬೆಳೆದು, ನನ್ನ ಬಾಲ್ಯವನ್ನೆಲ್ಲಾ ಕಳೆದದ್ದು  ಈಗೀನ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಎಂಬ ಸುಂದರ  ಸಮೃದ್ಧ ಸಂತೃಪ್ತ ಊರಿನಲ್ಲಿ ಎಂಬುದು ನನಗೊಂದು ಹೆಮ್ಮೆ.ನನ್ನ ಬದುಕಿನ ಬುನಾದಿ ಗಟ್ಟಿಗೊಳಿಸಿದ ಊರು ಈ ಡಂಬಳ.

ಇಲ್ಲಿ ಉತ್ತಮ ಶಿಕ್ಷಣ ನೀಡುವ ಶಾಲೆ ಗಳಿದ್ದವು.ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಬೆಳೆಸಲು ಪ್ರತಿವರ್ಷ ಈ ಊರಲ್ಲಿ ನಾಟಕ ,ದೊಡ್ಡಾಟ, ಸಣ್ಣಾಟ, ಜಾತ್ರಾ ಸಮಯದಲ್ಲಿ ತೋಂಟದ  ಪೂಜ್ಯ ಶ್ರೀಗಳಿಂದ ಪ್ರವಚನ, ದೇವಿ ಪುರಾಣ ಹೀಗೆ ಒಂದಿಲ್ಲ ಒಂದು ಕಾರ್ಯಕ್ರಮಗಳು ವರ್ಷವಿಡೀ ನಡೆಯುತ್ತಿದ್ದವು. ಇವನ್ನೆಲ್ಲ ನೋಡಿ ಕೇಳಿ ನಮಗೆ ಸಾಹಿತ್ಯಾಸಕ್ತಿ, ನಮ್ಮ ಸಂಸ್ಕೃತಿ ಬಗ್ಗೆ ಅಭಿಮಾನ ಪ್ರೀತಿ ಹೊಮ್ಮುತ್ತಿತ್ತು .ಊರಿಗೆ ಹೊಂದಿಕೊಂಡಂತೆ ಬಗೆಬಗೆ  ತೋಟಗಳು, ದೊಡ್ಡಕೆರೆ , ಶಿಲ್ಪಕಲಾ ವೈಭವ ಪ್ರದರ್ಶಿಸುವ ಜಕಣಾಚಾರಿಯ ದೇವಸ್ಥಾನಗಳು, ತೋಂಟದಾರ್ಯ ಮಠ ಹೀಗೆ ಹಲವಾರು ದೇವಸ್ಥಾನಗಳು ಈ ಊರಲ್ಲಿ ಇದ್ದವು.ಅಲ್ಲದೆ ಊರಿಗೆ ಸಮೀಪದಲ್ಲಿ ಕಪ್ಪತಗುಡ್ಡ ಇತ್ತು. ಇಲ್ಲಿಗೆ ನಮ್ಮ ಓಣಿಯ ಯಳಮಲೆ ಎನ್ನುವ ಶ್ರೀಮಂತರ ಟ್ಯಾಕ್ಟರ್ ಅಮವಾಸ್ಯೆಗೊಮ್ಮೆ ಹೋಗುತ್ತಿತ್ತು ಅದರಲ್ಲಿ ನಾನು ಸೇರಿ  ಓಣಿಯ ಎಲ್ಲಾ ಮಕ್ಕಳು ಹೋಗುತ್ತಿದ್ದೆವು. ನಮಗೆ ಹಲವು ವಿಶೇಷತೆಗಳನ್ನು ಹೊಂದಿರುವ ಆ ಗುಡ್ಡ ಹತ್ತುವ ಸಂಭ್ರಮ ಹೇಳತೀರದು.ಅಲ್ಲಿನ ಗಂಗಿಬಾವಿ ನೀರು ಎಷ್ಟೊಂದು ತಿಳಿ ಅಂದರೆ ಕನ್ನಡಿಯಲ್ಲಿ ನಮ್ಮ ಮುಖವೇ ಕಾಣುವಂತೆ ಅದರ ತಳದಲ್ಲಿರುವುದು ಕಾಣುತಿತ್ತು. ಅದರ ಗೋಡೆಯ ಬಳಪದ ಕಲ್ಲುಗಳನ್ನು ತಂದು ನಾವು ಪೇಣೆ ಮಾಡಿ ಬರೆಯುತ್ತಿದ್ದೆವು.ಅಲ್ಲಿನ ಮೆಟ್ಟಿಲು ಗಳನ್ನು ಹತ್ತುವಾಗ ಬಣ್ಣ ಬದಲಾಗುವ ವಿಸ್ಮಯ ಕಂಡು ಆಶ್ಚರ್ಯ ಪಡುತ್ತಿದ್ದೇವು.

ಇನ್ನು ಸಾಯಂಕಾಲ ಆದರೆ ಸಾಕು  ನಾವು ಆಡುವ ಆಟಗಳು ಒಂದೇ ಎರಡೇ.ಕುಂಟಲೇಪಿ, ರೀಚ್ ಆಟ, ಲಗೋರಿ, ಕಣ್ಣು ಮುಚ್ಚಾಲೆ ಆಟ,ಬಚೂಕ (ಬಳಿ ತುಣುಕುಗಳಿಂದಾಡುವ ಆಟ)ಆಟ,ಚಕ್ಕಾ ಆಟ ,ಆನೆಕಲ್ಲಾಟ ಹೀಗೆ ರಾತ್ರಿ ತನಕ  ಆಡುತ್ತಲೇ ಇರುತ್ತಿದ್ದವು. ಕಣ್ಣು ಮುಚ್ಚಾಲೆ ಆಟ ಆಡುವಾಗಲಂತೂ ಅಡಗಿಕೊಳ್ಳಲು ಗಿಡ ಏರಿ ಕುಳಿತು ಕೆಳಗಿಳಿಯಲು ಪರದಾಡಿದ್ದು,, ಹಗೆವಿನಲ್ಲಿ ಬಿದ್ದಿದ್ದು,ಬೇರೆ ಓಣಿಗೆ ಹೋಗಿ ಆಟ ಮುಗಿದು ಪೂರ್ಣ ಕತ್ತಲಾದ ಮೇಲೆ ಮನೆಗೆ ಬಂದಿದ್ದು ಮರೆಯುವದುಂಟೆ? ನೆನೆಸಿಕೊಂಡರೆ ಈಗ ನಗು ಉಕ್ಕಿ ಬರುತ್ತದೆ. ಇನ್ನು ನಾನು ಮಾಡುವ ಸಾಹಸಗಳು ಹೇಳತೀರದು.ನಮ್ಮೂರ ದೊಡ್ಡ ಕೆರೆ ಕಟ್ಟೆ ಮೇಲೆ ನೀರು ನಲವತ್ತೂ, ಐವತ್ತು ಅಡಿ ಆಳದವರಿಗೆ ನೀರು ಬೀಳುತಿತ್ತು.ಆ ಕಟ್ಟೆ ಒಂದು ಕಡೆ ನಾಲ್ಕೈದು ಆಳದ ನೀರು.ಇನ್ನೊಂದು ಕಡೆ ಜಲಪಾತದಂತೆ ಸುರಿಯುವ ನೀರು.ಅಂತಹ  ಕಟ್ಟೆ ಮೇಲೆ  ಜುಳು ಜುಳು ಹರಿಯುವ ನೀರಿನ ಮೇಲೆ ನಾನೇ ಮುಂದಾಗಿ ನನ್ನ ಗೆಳತಿಯರನ್ನು ಕರೆದುಕೊಂಡು ಒಂದು ತುದಿಯಿಂದ ಹೋಗಿ ಇನ್ನೊಂದು ತುದಿಯಲ್ಲಿ ಇಳಿದು ಬರುತ್ತಿದ್ದೆ. ಆ ಸಾಹಸ  ನೆನೆಸಿಕೊಂಡರೆ ಈಗಲೂ ಮೈ ಜುಮ್ ಎನ್ನುತ್ತದೆ. ಇನ್ನು ಒಂದು ಸಾಹಸದ ಘಟನೆ ಹೇಳಲೇ ಬೇಕು.ಅದೇನೆಂದರೆ ಪ್ರತಿ ವರ್ಷ ಕಾಮದಹನ ನಮ್ಮ ಮನೆ ಮುಂದೆಯೇ ಮಾಡುತ್ತಿದ್ದರು. ಕಾಮದಹನದ ಬೆಂಕಿ ಐದಾರು ಅಡಿ ಅಗಲದ  ಕೆಂಡದ ಆಕಡೆ ಈಕಡೆ ಹುಡುಗರು ಜಿಗಿಯುವದನ್ನು ಕಂಡು ನಾನು  ಯಾಕೆ ಜಿಗಿಯಬಾರದೆಂದು ಯೋಚಿಸಿ  ಜಿಗಿದೇ ಬಿಟ್ಟಿದೆ. ಜಿಗಿದದ್ದು ಸರಿಯಾಗಿ ಬೆಂಕಿ ಕೆಂಡದ ಮಧ್ಯದಲ್ಲಿ !  ಎರಡೂ ಕಾಲುಗಳ ಸುಡಿಸಿಕೊಂಡಿದ್ದು ಎಂದೂ ಮರೆಯಲಾಗದ ಘಟನೆ. ಆಗ ಆ ಧೈರ್ಯ ನನಗೆ ಹೇಗೆ ಬರುತಿತ್ತು ಗೊತ್ತಿಲ್ಲ.ಎಲ್ಲದಕ್ಕೂ ಧೈರ್ಯ ದಿಂದ ಮುನ್ನುಗ್ಗು ವ ಸ್ವಭಾವ ಹುಟ್ಟಿನಿಂದಲೇ ಬಂದಿರಬಹುದು ಅನಿಸುತ್ತೆ.ಆದರೆ ಆಗಿನ ಆ ಧೈರ್ಯ, ಶಕ್ತಿ ಈಗಿಲ್ಲ ಎಂಬುದಂತೂ ಸತ್ಯ.ಹೀಗೆ ಹಲವು ಸಾಹಸಗಳನ್ನು ಬಾಲ್ಯದಲ್ಲಿ ಮಾಡಿದ್ದಂತೂ ನಿಜ.

    ಇನ್ನು ಈ ಊರ ಜನರೆಲ್ಲರೂ ಯಾವುದಕ್ಕೂ ಕೊರತೆ ಇಲ್ಲದಂತೆ ಸುಖ ಸಮೃದ್ಧಿಯಿಂದ ,ಸೌಹಾರ್ದತೆಯಿಂದ  ಕೂಡಿ ಬಾಳುತ್ತಿದ್ದರು . ಓಣಿಯ ಅಮ್ಮಂದಿರು ಅವರು ಮನೆಗೆ ಹೋದರೆ ಸಾಕು ಏನಾದರೂ ತಿನ್ನಲು ಕೊಡುತ್ತಿದ್ದರು. ಇನ್ನೂ ಊರ ಸುತ್ತಮುತ್ತ ಇರುವ ತೋಟಗಳ ಪಕ್ಕದಲ್ಲಿ ಹರಿಯುವ ಕಾಲುವೆಗಳಲ್ಲಿ, ಕೆರೆಗಳಲ್ಲಿ ಬಟ್ಟೆ ತೊಳೆಯಲು ಹೋದಾಗ ಬಟ್ಟೆ ಒಗೆದಾದ ಮೇಲೆ ತೋಟದ ಮಾಲೀಕರಿಂದ ಸಾಕಷ್ಟು ಹಣ್ಣುಗಳನ್ನು ಕೇಳಿ ಪಡೆಯುತ್ತಿದ್ದೆವು.ಮಾಲಿಕರಿಲ್ಲದ ಸಮಯದಲ್ಲಿ ನಾವು ತೋಟ ಹೊಕ್ಕು  ಡೊರೆ ಹಣ್ಣುಗಳನ್ನು ಕದ್ದು ತಿನ್ನುತ್ತಿದ್ದೇವು. ಒಂದಿಷ್ಟು ಮನೆಗೂ ತೆಗೆದುಕೊಂಡು ಹೋಗುತ್ತಿದ್ದೇವು.ಪೇರಲ ಹಣ್ಣು ,ಮಾವಿನ ಹಣ್ಣು, ಬೋರೆಹಣ್ಣು, ಹುಣಸೆಹಣ್ಣು, ದ್ರಾಕ್ಷಿ ಹಣ್ಣು ,ಬೊಳಲಕಾಯಿ,ಮಲ್ನಾಡ್ ಹುಣಸೆ ಕಾಯಿ, ರೇಷ್ಮೆ ಗಿಡದ ಹಣ್ಣು.ಒಂದೇ ಎರಡೇ ನಾವು ತಿನ್ನುತ್ತಿದ್ದ ದ್ದು.ಹೀಗೆ ಹಣ್ಣು ತಿಂದು ತಿಂದು ತುಂಬಾ ಸದೃಢವಾಗಿ ಇದ್ದೆವು. ನಮಗೆ ಈಗಿನಂತೆ ಆರೋಗ್ಯ ಹಾಳು ಮಾಡಿಕೊಳ್ಳುವ ಬೇಕರಿ ತಿನಿಸುಗಳಾಗಲೇ ಬೀದಿಬದಿಯ ತಿನಿಸುಗಳಾಗಲಿ ಇರಲಿಲ್ಲ.ಮತ್ತು ಈಗಿನಂತೆ ಮನರಂಜನೆಗಾಗಿ  ಟಿವಿ ಮೊಬೈಲ್ ಅವಲಂಬಿಸುವ ಅಗತ್ಯವೂ ನಮಗೆ ಇರಲಿಲ್ಲ.  ನಮ್ಮ ತಂದೆ ಈ ಊರಲ್ಲೇ ಶ್ರೇಷ್ಠ ಗಣಿತ ಶಿಕ್ಷಕರೆಂದು ಹೆಸರು ಗಳಿಸಿದ್ದರು.ಅವರು ಗಣಿತದಲ್ಲಿ ನನಗೆ ಅತೀವ ಆಸಕ್ತಿ ಬೆಳೆಸಿದ್ದಲ್ಲದೆ ಉತ್ತಮ ಗ್ರಂಥಗಳನ್ನು ಓದಲು ಕೊಡುತ್ತಿದ್ದರು. ನಮ್ಮ ಮನೆಗೆ ಯಾವಾಗಲೂ ಚಂದಮಾಮ, ಸುಧಾ ಪತ್ರಿಕೆಗಳನ್ನು ತರಿಸಿ ಓದಿನ ರುಚಿ ಹಚ್ಚಿದರು .ನಮ್ಮ ಮನೆಯ ಕೆಲಸಗಳನ್ನೆಲ್ಲ ನಾವೇ ಶ್ರಮವಹಿಸಿ  ಮಾಡುತ್ತಾ ಓದುತ್ತಿದ್ದೆವು. ಹೀಗಾಗಿ ಈ ಎಲ್ಲಾ ಕಾರಣಗಳಿಂದ ನಾವು ದೈಹಿಕವಾಗಿ ಮಾನಸಿಕವಾಗಿ ಸಬಲರಾಗಿ ಇದ್ದೆವು. ಯಾವುದೇ ಕೆಲಸವನ್ನು ಕೊಟ್ಟೂರು ಆಗಲ್ಲ ಎನ್ನದೆ ಅಚ್ಚುಕಟ್ಟಾಗಿ ಮಾಡುವ ಕ್ಷಮತೆ ನಮಗೆ ಕಲಿಸಿಕೊಟ್ಟ  ಊರು ಡಂಬಳ . ಅಲ್ಲದೆ ವಾರಕ್ಕೊಮ್ಮೆ ಸಂತೆಗೆ ಹೋಗುವುದು, ಅಂಗಡಿ ಹೋಗಿ ರೇಷನ್ ತರುವುದು, ಶೆಟ್ಟರ  ಅಂಗಡಿಗೆ ಹೋಗಿ ಸ್ವೀಟ್ ತರುವುದು,ಇದರ ನಡುವೆ  ತೋಟ,ಕೆರೆ, ದೇವಸ್ಥಾನಗಳನ್ನು ಸುತ್ತವುದು. ಮತ್ತೆ ಹಲವು ಸಾಹಸಗಳು.ಅವನ್ನು ಹೇಳುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ.ನನ್ನ ಆಗಿನ ಉತ್ಸಾಹ ಹುಮ್ಮಸ್ಸು, ಇಚ್ಛಾ ಶಕ್ತಿ, ಆತ್ಮವಿಶ್ವಾಸ ನೋಡಿ ನನಗೆ ಈಗ ದಿಗ್ಭ್ರಮೆ ಆಗುವುದು.ಅಷ್ಟೂ ಕೆಲಸವನ್ನು ನಾನು ಆಗ ಹೇಗೆ ಮಾಡುತ್ತಿದೆ ಎಂದು  ನೆನೆಸಿಕೊಂಡರೆ ಈಗಲೂ ಆಶ್ಚರ್ಯ, ಹೆಮ್ಮೆ ಅನಿಸುತ್ತದೆ.ಇದು ನನ್ನ ಊರಿನ ಕಥೆ ಆಯ್ತು.

      ಇನ್ನು ನನ್ನ ಅಜ್ಜಿ ಊರಿನಲ್ಲಿ ಇನ್ನೂ ವಿನೂತನ ಅನುಭವ, ಕಲಿಕೆ.ನನ್ನ ತಾಯಿ ತೌರು ಮನೆ ಕೋಟುಮಚಗಿ.ನಾವು ಪ್ರತಿವರ್ಷ ದಸರಾ ಸೂಟಿಗೆ ತಪ್ಪದೆ ಹೆಣ್ಣಜ್ಜಿ ಊರಿಗೆ ಹೋಗುತ್ತಿದ್ದೇವು.ಅಲ್ಲಿ  ನಮ್ಮ ಅಜ್ಜಿ ಇಲ್ಲದಿದ್ದರೂ ನಮ್ಮ ಸೋದರ ಮಾವಂದಿರು ಅವರ ಮಕ್ಕಳೊಂದಿಗೆ ಒಂದೇ ಓಣಿಯಲ್ಲಿ ಬೇರೆ ಬೇರೆ ಮನೆಗಳಲ್ಲಿ ಇರುತ್ತಿದ್ದರು.ನಾವು ಹೋಗಿ ಇರುತ್ತಿದ್ದದ್ದು ದೊಡ್ಡ ಮಾವನ ಮನೆಯಲ್ಲಿ.ಅವರಿಗೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣುಮಕ್ಕಳು.ಅಂತಹ ದೊಡ್ಡ ಕುಟುಂಬದಲ್ಲಿ ನಾವು ಒಂದಾಗಿ ಇರುವುದು ನಮಗೆ ತುಂಬಾ ಖುಷಿ ಕೊಡುತಿತ್ತು.ನಮ್ಮ ಮಾವಂದಿರು ಹೊಲ ,ಮನೆ, ಕುಲುಮೆಗಳಲ್ಲಿ ಬಹಳ ಶ್ರಮವಹಿಸಿ ದುಡಿಯುತ್ತಿದ್ದರು.ಮತ್ತು ನಮ್ಮನ್ನೆಲ್ಲಾ ಪ್ರೀತಿ ಯಿಂದ ನೋಡಿಕೊಳ್ಳುತ್ತಿದ್ದರು.ಅವರು ಕೊಡಿಸುವ ದೊಡ್ಡ ದೊಡ್ಡ ಬುಂದೆ ಉಂಡಿ, ಮಿರ್ಚಿ ಬಜ್ಜಿ ನನಗೆ ತುಂಬಾ ಇಷ್ಟವಾಗುತ್ತಿತ್ತು.ಇನ್ನು ಆ ಊರಲ್ಲಿ ನಡೆಯುವ ದಸರಾ ಹಬ್ಬವಂತೂ ಎಂದೂ ಮರೆಯಲಾಗದ್ದು.ಅಲ್ಲಿನ ದಸರಾ ಹಬ್ಬದ ದಿನಗಳು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿಬಿಟ್ಟಿವೆ.10 ದಿನಗಳು ಬಹಳ ಭಕ್ತಿ ಶ್ರದ್ಧೆಯಿಂದ ಪೂಜೆ ಮಾಡಿ ರಾತ್ರಿ 101ಪಣತಿಗಳನ್ನು ಬೆಳಗಿಸುತ್ತಿದ್ದರು.ನನಗೆ ಅದರಲ್ಲಿ ಪಾಲ್ಗೋಂಡು ದೀಪ ಬೆಳಗಿಸುವುದು ಎಂದರೆ ಕಣ್ಣಿಗೆ ಮನಸ್ಸಿಗೆ ಶೆಡಗರ.ಆ ಹತ್ತು ದಿನಗಳು ಪ್ರತಿ ರಾತ್ರಿ ಹೋಳಿಗೆ  ಊಟ ಇರುತಿತ್ತು.ಅಂದಾಜು 20 ರಿಂದ 25 ಜನರಿದ್ದರೂ ಸೋದರ ಮಾವನ ಸೊಸೆಯಂದಿರು ಪ್ರೀತಿ ಕಾಳಜಿಯಿಂದ ಬಿಸಿ ಬಿಸಿ, ಪುಟ್ಟ ಪುಟ್ಟ ಹೋಳಿಗೆಯನ್ನು ಬಡಿಸುತ್ತಿದ್ದರು.ಅದರ ರುಚಿ ಈಗಲೂ ಮರೆಯಲು ಸಾಧ್ಯವಾಗುತ್ತಿಲ್ಲ.ಇನ್ನು ವಿಶೇಷ ಎಂದರೆ ಆ 10 ದಿನಗಳು ಪ್ರತಿ ರಾತ್ರಿ ದೇವಿ ಪುರಾಣ ನಡೆಯುತಿತ್ತು.ಅದನ್ನು ಅತ್ತೆ, ಮಾವಂದಿರು , ನಾವೆಲ್ಲ ಮಕ್ಕಳು ತಪ್ಪದೇ ಭಾಗವಹಿಸಿ ಪೂರ್ಣ ಪುರಾಣ ಕೇಳಿ ಮಂಗಲ ಆದ ಮೇಲೆ ಮನೆಗೆ ಬಂದು ಊಟ ಮಾಡುತ್ತಿದ್ದೆವು.ಇದು ದಿನನಿತ್ಯದ ಪರಿಪಾಠ. ಪುರಾಣ ಕಥೆಗಳು, ತಬಲಾ ಸಾಥ್ ದೊಂದಿಗೆ ಹಾಡುವ ಹಾಡುಗಳು ಮನಸ್ಸಿಗೆ ಸ್ಪೂರ್ತಿದಾಯಕ, ಆನಂದದಾಯಕವಾಗಿದ್ದವು. ದೇವಿ ಪುರಾಣದಲ್ಲಿ ಬರುವ ದೇವಿಯ ವಿಶೇಷ ರೂಪಗಳು,ಅಸುರರ ಸೌಹಾರದ ಕಥೆಗಳು ತುಂಬಾ ರೊಚಕವಾಗಿದ್ದವು.ಹಾಗೂ ಅಸುರರು ಹೊರಗೆಲ್ಲಿ ಇಲ್ಲ ನಮ್ಮ ದುರ್ಗುಣಗಳೇ ಅಸುರರೆಂದು ಹೊಲಿಕೆ ಕೊಟ್ಟು ವಿವರಿಸುತ್ತಿದ್ದರು ಪುರಾಣ ಹೇಳುವ ಶಾಸ್ತ್ರೀಗಳು.ಈ ರೀತಿ ಪುರಾಣ ಶ್ರವಣ ದಿಂದ ನಮಗೆ ದೈವ ಭಕ್ತಿ, ನೈತಿಕ ಮೌಲ್ಯ ವೃದ್ಧಿಯಾಗುತಿತ್ತು. ಇನ್ನೂ ಒಂದು ಸಂತಸದ ಸಂಗತಿ ಎಂದರೆ ಈ ಮಹಾನವಮಿ  ಹಬ್ಬದಲ್ಲಿ ಬನ್ನಿ ಕೊಡುವ ಪದ್ಧತಿ.ನಮ್ಮವರು, ಪರರು ಎನ್ನದೆ ಏನೆ ಕೋಪ,ತಾಪ ಇದ್ದರೂ ಹಿರಿಕಿರಿಯರೆನ್ನದೆ ಎಲ್ಲರೂ ಒಬ್ಬರಿಗೊಬ್ಬರು ಬನ್ನಿ ವಿನಿಮಯ ಮಾಡಿಕೊಂಡು” ಬನ್ನಿ ತಗೊಂಡು ಬಂಗಾರದಂಗೆ ಇರೋಣ “ಎಂಬ ಸದಾಶಯದೊಂದಿಗೆ ಶುಭ ಹಾರೈಕೆಯೊಂದಿಗೆ ಪ್ರೀತಿ ಹಂಚಿಕೊಳ್ಳುತ್ತಿದ್ದರು. ಎಳೆಯರಾದ ನಮಗಂತೂ ಇದು ತುಂಬಾ ಸಂಭ್ರಮದ ಸಂತೋಷದ ಸಂಗತಿಯಾಗಿತ್ತು.ಬನ್ನಿ ಕೊಡುವಾಗ ಹಿರಿಯರು ಬನ್ನಿ ಜೊತೆಗೆ ತನ್ನ ಮಕ್ಕಳಿಗೆ ತಮಗೆ ತಿಳಿದಷ್ಟು ದುಡ್ಡನ್ನು ಕೊಡುತ್ತಿದ್ದರು .ನಾವು ಅದನ್ನು ಸೇರಿಸಿ ನಮಗೆ ಬೇಕಾದ ತಿಂಡಿ ತಿನಿಸುಗಳನ್ನು ಕೊಳ್ಳುತ್ತಿದ್ದೆವು . ಇದು ಮಕ್ಕಳಾದ ನಮ್ಮಲ್ಲಿ ಪ್ರೀತಿ-ವಿಶ್ವಾಸ ಸೌಹಾರ್ದತೆಯನ್ನು ಬೆಳೆಸುವ ಸಂದರ್ಭವಾಗಿತ್ತು.

    ಇದಲ್ಲದೆ ನಮ್ಮ ಒಬ್ಬ ಅತ್ತೆ ಅವರ ಹೆಸರು ಅಂಬಮ್ಮ ಅಂತ,ಅವರು ತುಂಬಾ ಚೆನ್ನಾಗಿ ಕಥೆಗಳನ್ನು ಹೇಳುತ್ತಿದ್ದರು.ರಂಗೋಲಿ ಹಾಕುವುದು,ಹೆಣಕೆ ಹಾಕುವುದರಲ್ಲಿ ಅವರು ತುಂಬಾ ಪರಿಣಿತರು.ಅವನೆಲ್ಲಾ ನೋಡಿ ನಾವು ಕಲಿಯುತಿದ್ದೆವು.ಮಕ್ಕಳಿಲ್ಲದ ಅವರು ನಮಗೆ ತುಂಬಾ ಪ್ರೀತಿ ಮಮತೆಯನ್ನು ತೋರಿಸುತ್ತಿದ್ದರು.

     ಹೀಗೆ ಹತ್ತಿರದಿಂದ ಎಲ್ಲರ ಕಷ್ಟಸುಖಗಳನ್ನು ನೋಡಿ ನಾವು ಸ್ಪಂದಿಸುತ್ತಾ ,ಒಳ್ಳೆ ಅನುಭವಗಳನ್ನು ತಿಳುವಳಿಕೆಯನ್ನು ಪಡೆಯುತ್ತಿದ್ದೆವು.ಹೀಗೆ ನನ್ನ ಹುಟ್ಟೂರು ಡಂಬಳ ಮತ್ತು ನಮ್ಮ ತಾಯಿ ಊರು ಕೋಟುಮಚಗಿಯಲ್ಲಿ ಕಳೆದ ದಿನಗಳು ನನ್ನ ಬಾಲ್ಯದ ಸವಿನೆನಪುಗಳಾಗಿ ಸದಾ ಸ್ಮರಣೀಯ  ಮತ್ತು ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಅವನ್ನು ನೆನೆಸಿಕೊಂಡರೆ ಸಾಕು ಮುಖದಲ್ಲಿ ಮಂದಹಾಸ ಚಿರಸ್ಥಾಯಿಯಾಗಿ ಉಳಿಯುತ್ತದೆ. ನಾನು ಇವತ್ತು ಏನೇ ಸಾಧಿಸಿದರು ಅದಕ್ಕೆ ಎರಡೂ ಹಳ್ಳಿಗಳ ಪರಿಸರ ಅಲ್ಲಿನ ಸಹೃದಯ ಸಜ್ಜನ ಬಂಧುಗಳು ನೀಡಿದ ಕೊಡುಗೆ ಅಪಾರ ಎಂದರೆ ತಪ್ಪಾಗಲಾರದು.

***

ಲಕ್ಷ್ಮೀದೇವಿ ಪತ್ತಾರ

4 thoughts on “ಮರೆಯಲಾಗದ ಆ ಬಾಲ್ಯದ ದಿನಗಳು

  1. ನಿಜಕ್ಕೂ ಅಂದಿನ ಬಾಲ್ಯ ಇಂದಿನ ಮಕ್ಕಳಿಗೆ ಇಲ್ಲವೇನೋ ಅನಿಸುತ್ತದೆ….!
    ಸೊಗಸಾದ ಬರಹ…..

Leave a Reply

Back To Top