ಅಂಕಣ ಸಂಗಾತಿ
ಗಜಲ್ ಲೋಕ
ಬೆಂಗಾಲಿಯವರ ಗಜಲ್ ಗಳಲ್ಲಿ ಮನೋಚಿತ್ರಗಳು
..
ನಮಸ್ಕಾರಗಳು ನನ್ನ ಗಜಲ್ ಮನಸುಗಳಿಗೆ…
ಗಜಲ್ ಎನ್ನುವ ಪದ ಕಿವಿಯನ್ನು ಆಲಂಗಿಸುತ್ತಲೇ ಹೃದಯದಲ್ಲೊಂದು ಅಪರಿಮಿತ ಯೂನಿಕ್ ಕಂಪನ ಉಂಟಾಗುತ್ತದೆ. ವಾರ, ವಾರ ಒಬ್ಬೊಬ್ಬ ಶಾಯರ್ ಬಗ್ಗೆ ಬರೆಯುತ್ತ ಒಂದು ವರ್ಷ ದಾಟಿರುವುದು ಅರಿವಿಗೆ ಬಾರಲೆ ಇಲ್ಲ, ನನ್ನ ಮನಕ್ಕೆ ದಣಿವಾಗಿಲ್ಲ; ಗಜಲ್ ಲೋಕದಲ್ಲಿ ವಿಹರಿಸುವ ಬಯಕೆಯಂತೂ ಒಂದಿಷ್ಟು ಕಡಿಮೆಯಾಗಿಲ್ಲ. ಮೊದಲ ವಾರದಂತೆಯೇ ಇಂದೂ ಸಹ ಗಜಲ್ ಲೋಕದ ತಾರೆಗಳೊಂದಿಗೆ ತಮ್ಮ ಮುಂದೆ ಬರುತಿದ್ದೇನೆ, ಬೆಳದಿಂಗಳನ್ನು ಪ್ರೀತಿಸುವ, ಪೂಜಿಸುವ ಸಹೃದಯಿಗಳ ಮುಂದೆ ಪ್ರಸ್ತುತ ಪಡಿಸಲು..!!
“ನನ್ನ ಹಾಡುಗಳು ನಿಮ್ಮ ಹತ್ತಿರ ಬೆಂಬಲಕ್ಕಾಗಿ ಬರುತ್ತವೆ
ನನ್ನ ನಂತರ ಇವು ನನ್ನನ್ನು ನೆನಪಿಸುವುದಕ್ಕಾಗಿ ಬರುತ್ತವೆ”
–ದುಷ್ಯಂತಕುಮಾರ್
ಹೃದಯಗಳು ಮಾತಾಡುತ್ತವೆ, ಕೇಳುವ; ಸ್ಪಂದಿಸುವ ಜೀವಿಗಳು ಬೇಕು. ಈ ಭೂಮಂಡಲದಲ್ಲಿ ಅಸಂಖ್ಯಾತ ಜೀವಜಂತುಗಳು ಇವೆಯಾದರೂ ಅವುಗಳಲ್ಲಿ ಇತರರ ನೋವಿಗೆ, ನಲಿವಿಗೆ ಮರುಗುವ-ಸ್ಪಂದಿಸುವ ಜೀವಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಲೆ ಇದೆ. ‘ವಸುದೈವ ಕುಟುಂಬಕಂ’ ಎನ್ನುವ ನಾಡಲ್ಲಿಂದು ಮಾನಸಿಕ ತಳಮಳಗಳು, ಬಂಧಗಳಲ್ಲಿ ಬಿರುಕುಗಳು ಕಣ್ಣಿಗೆ ರಾಚುತ್ತಿವೆ. ಇಂದು ಮಾತ್ರ ಹೀಗೆನಾ, ಮೊದಲೆಲ್ಲ ತಂಗಾಳಿಯೆ ಬೀಸುತಿತ್ತಾ ಎನ್ನುವ ಸಿನಿಕತನಗಳಿಗೇನೂ ಬರವಿಲ್ಲ. ಎಲ್ಲ ಕಾಲದಲ್ಲಿಯೂ ಭಾವನೆಗಳ ಏರಿಳಿತ ಇದ್ದದ್ದೆಯಾದರೂ ಇಂದು ಮಾತ್ರ ಕಾಂಚಾಣದ ಸದ್ದು ಕಿವಿಗಡಚುವುತ್ತಿರುವುದು ಪ್ರತಿಯೊಬ್ಬರಿಗೂ ಅನುಭವಕ್ಕೆ ಬರದೆ ಉಳಿದಿಲ್ಲ. ಆದರೆ ದುರಂತವೆಂದರೆ ನಾವು ನಮ್ಮ ಅನುಭವಳಿಗೂ ಮುಖವಾಡ ತೊಡಿಸುತ್ತಿರುವುದು! ಇದೆಲ್ಲವೂ ಹಿನ್ನೆಲೆಗೆ ಸರಿದು ಅಮನ್-ಚಮನ್ ಮುನ್ನೆಲೆಗೆ ಬರಬೇಕಾದರೆ ಭಾವಗಳು ಬೆತ್ತಲೆಯಾಗಿ ನಿರ್ಮಲವಾಗಬೇಕಿದೆ. ಕೊಳೆತ ಮನಸ್ಥಿತಿ ಶುದ್ಧಿಯಾಗಬೇಕಾದರೆ ಸಾಂಸ್ಕೃತಿಕ ಪನ್ನೀರಿನ ಸೇವನೆ ಅತ್ಯಗತ್ಯವಾಗಿದೆ. ಈ ಕಾರಣಕ್ಕಾಗಿಯೇ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಅನಾಗರಿಕನನ್ನೂ ನಾಗರಿಕನನ್ನಾಗಿಸುತ್ತದೆ ಎನ್ನಲಾಗುತ್ತದೆ. ಭಾವನೆಗಳ ಅಭಿವ್ಯಕ್ತಿಯ ಸಾಧನವಾದ ಭಾಷೆಯನ್ನು ಬಳಸಿಕೊಂಡು ಹೃದಯಗಳೊಂದಿಗೆ ಸಂವಾದಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕಾವ್ಯವು ಜಗತ್ತಿನಾದ್ಯಂತ ಮನಸುಗಳನ್ನು ಬೆಸೆಯುವ ಕಾರ್ಯ ಸದ್ದಿಲ್ಲದೆ ಮಾಡುತ್ತ ಬರುತ್ತಿದೆ. ಕಾವ್ಯದ ಹರಹು ವಿಸ್ತಾರವಾಗುತಿದ್ದಂತೆ ಲಕ್ಷಣ, ಸ್ವರೂಪಗಳೊಂದಿಗೆ ಪ್ರತ್ಯೇಕಿಸಲಾಗುತ್ತ ಬಂದಿದೆ. ಅದರ ಫಲಶೃತಿಯೇ ‘ಗಜಲ್’. ಇಂದು ಕನ್ನಡದಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಚಾಂದನಿಯನ್ನು ಪ್ರೀತಿಸುತಿದ್ದಾರೆ, ಪೂಜಿಸುತಿದ್ದಾರೆ… ಅವರಲ್ಲಿ ಶ್ರೀ ಈರಣ್ಣ ಬೆಂಗಾಲಿಯವರೂ ಕೂಡ ಒಬ್ಬರು.
ವ್ಯಂಗ್ಯಚಿತ್ರಕಾರ, ಕವಿ ಹಾಗೂ ಗಜಲ್ ಕಾರರಾದ ಶ್ರೀ ಈರಣ್ಣ ಬೆಂಗಾಲಿ ಅವರು ಜನಿಸಿದ್ದು ೧೯೮೪ ರ ಜೂನ್ ೨೧ ರಂದು ಶ್ರೀ ಕೃಷ್ಣಪ್ಪ ಮತ್ತು ಶ್ರೀಮತಿ ಈರಾಮಣಿಯವರ ಮುದ್ದಿನ ಮಗನಾಗಿ ರಾಯಚೂರಿನಲ್ಲಿ ಜನಿಸಿದ್ದಾರೆ. ಎಂ.ಎ., ಎಮ್. ಎಂಡ್., ಎಂ.ಎಸ್.ಡಬ್ಲಿವ್ ಮುಗಿಸಿರುವ ಶ್ರೀಯುತರು ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು, ಅದರೊಂದಿಗೆ ಸಾಹಿತ್ಯದಲ್ಲೂ ಅನುಪಮ ಚಾಪನ್ನು ಮೂಡಿಸಿದ್ದಾರೆ. ಕತೆ, ಕವನ, ಲೇಖನ, ಹೈಕು, ವ್ಯಕ್ತಿ ಚಿತ್ರಣ, ಗಜಲ್… ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಏಕಲವ್ಯನ ರೇಖೆಗಳು (ವ್ಯಂಗ್ಯಚಿತ್ರ ಸಂಕಲನ), ಮುತ್ತುಗಳು (ಹನಿಗವನ ಸಂಕಲನ), ಕಮರಿದ ಕನಸು (ಹೈಕು ಸಂಕಲನ), ಕಾಡುವ ಗುಬ್ಬಿ (ಹೈಕು ಸಂಕಲನ), ಚಿನ್ನದ ನಾಣ್ಯ (ಸಂಪಾದನೆ), ಬಿಸಿಲೂರ ಸಾಧಕರು(ರಾಯಚೂರು ಜಿಲ್ಲೆಯ ಪ್ರತಿಭೆಗಳ ಪ್ರಾತಿನಿಧಿಕ ಸಂಕಲನ), ಹಸಿರ ಯೋಗಿ (ಪರಿಸರ ಪ್ರೇಮಿ ಈರಣ್ಣ ಕೋಸಗಿಯವರ ಯಶೋಗಾಥೆ), ಬೆಂಗಾಲಿ ರೇಖೆಗಳು (ವ್ಯಂಗ್ಯಚಿತ್ರ ಸಂಕಲನ), ಪಟ ಪಟ ಗಾಳಿಪಟ (ಮಕ್ಕಳ ಕವನ ಸಂಕಲನ).. ಮುಂತಾದ ಕೃತಿಗಳೊಂದಿಗೆ ‘ಚಿಮಣಿಯ ಬೆಳಕಿನಲ್ಲಿ’ ಹಾಗೂ ‘ಅರಿವಿನ ಅಂಬರ ಅಂಬೇಡ್ಕರ್’, ಎಂಬೆರಡು ಪ್ರಮುಖ ಗಜಲ್ ಸಂಕಲನಗಳ ಸಮೇತ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸೃಜನಶೀಲ ವ್ಯಕ್ತಿತ್ವವುಳ್ಳ ಶ್ರೀ ಈರಣ್ಣ ಬೆಂಗಾಲಿಯವರು ‘ರಾಯಚೂರು ವಾಹಿನಿ’ ಮತ್ತು ‘ನಮ್ಮ ರಾಯಚೂರು ವಾರಪತ್ರಿಕೆ’ಗಳ ದೀಪಾವಳಿ ವಿಶೇಷಾಂಕದ ಸಂಪಾದಕರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.
ಶ್ರೀಯುತ ಈರಣ್ಣ ಬೆಂಗಾಲಿಯವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಹಂಪಿ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ ಮುಂತಾದ ವೇದಿಕೆಗಳಲ್ಲಿ ಕವನ ವಾಚನ, ಗಜಲ್ ವಾಚನ ಮಾಡಿ ಸಹೃದಯಿಗಳ ಹೃದಯವನ್ನು ಗೆದ್ದಿದ್ದಾರೆ. ಇವರ ಹತ್ತಾರು ಲೇಖನಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಕ್ರಿಯಾಶೀಲತೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ‘ದಾವಣಗೆರೆ ಚುಟುಕು ಸಾಹಿತ್ಯ ಪರಿಷತ್ತು’ ನೀಡಿದ ‘ಪ್ರತಿಭಾ ಶಿರೋಮಣಿ’, ಗುಲಬರ್ಗಾ ವಿಶ್ವವಿದ್ಯಾಲಯದ ‘ರಾಜ್ಯೋತ್ಸವ ಪ್ರಶಸ್ತಿ’… ಪ್ರಮುಖವಾಗಿವೆ.
ಭಾವನೆಗಳ ಸಂತೆಯಲ್ಲಿ ಹಲವು ರೀತಿಯ ಭಾವಗಳು ನಮ್ಮ ಸಮಾಜವನ್ನು ಆವರಿಸಿವೆ. ಇಲ್ಲಿ ಮೆದು ಮನೋಲಹರಿಗಳು ಇರುವಂತೆ ವಿಕಾರ ಮನೋಸ್ಥಿಯನ್ನೂ ಕಾಣಬಹುದು. ಆದರೆ ಗಜಲ್ ಎನ್ನುವ ಕಾವ್ಯ ರಾಣಿ ಸುಕೋಮಲ ಭಾವನೆಗಳನ್ನು ಉಸಿರಾಡುತ್ತ ಬಂದಿದ್ದಾಳೆ. ಇದು ಜೋಗುಳ ಹಾಡುತ್ತಲೆ, ಜ್ವಾಲೆಯನ್ನು ಹರಡುತ್ತದೆ. ಪದನಾದವಾಗಿ, ಭಾವ ಬೆರಗಾಗಿ, ಅನುಭೂತಿ ಇಂಚರವಾಗಿ ಸಹೃದಯ ರಸಿಕರನ್ನು ಆಕರ್ಷಿಸುತ್ತಿದೆ. ಪ್ರೀತಿ, ಪ್ರೇಮ, ಪ್ರಣಯ, ಪ್ರೇಮಿಯ ವರ್ಣನೆ, ವಿರಹದ ಕನವರಿಕೆಯಂದೆಲ್ಲ ಮೃದುತ್ವವನ್ನು ಮೈಗೂಡಿಸಿಕೊಂಡಿದ್ದ ಗಜಲ್ ಇಂದು ಬದಲಾಗುತ್ತಿರುವ ಕಾಲಮಾನದಲ್ಲಿ ಪ್ರಗತಿಶೀಲ, ದಲಿತ, ಬಂಡಾಯ, ಜೀವನಪ್ರೀತಿ ಮೌಲ್ಯಗಳತ್ತ ವಾಲುತ್ತಿದೆ. “ಜಗದಲ್ಲಿರುವುದು ವಿರಹದ ನೋವೊಂದೇ ಅಲ್ಲ, ಇನ್ನೆಷ್ಟೋ ನೋವುಗಳಿವೆ” ಎಂಬ ಫೈಜ್ ಅಹ್ಮದ್ ಫೈಜ್ ರವರ ಮಾತು ಗಜಲ್ ಕಾರವಾನ್ ನಲ್ಲಿ ಬಿರುಗಾಳಿಯನ್ನೆ ಎಬ್ಬಿಸಿತು. ಈ ಬಿರುಗಾಳಿಯ ಪ್ರಭಾವಕ್ಕೆ ಒಳಗಾದವರಲ್ಲಿ ಶಾಯರ್ ಈರಣ್ಣ ಬೆಂಗಾಲಿಯವರೂ ಕೂಡ ಒಬ್ಬರು. ಇವರ ಗಜಲ್ ಗಳು ಸೂಕ್ಷ್ಮಗ್ರಾಹಿ ಮನಸ್ಸಿನ ಅಭಿವ್ಯಕ್ತಿಯಾಗಿದೆ. ಮನುಷ್ಯರ ಸಂವೇದನೆಯ ಹಲವು ರೂಪಗಳನ್ನು ಇವರು ತಮ್ಮ ಅಶಅರ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಜಾತಿಯತೆಯ ವಿಷಮತೆ, ಅಂತಃಕರಣದ ಆಲಾಪನೆ, ಧರ್ಮಗಳ ಹೆಸರಿನಲ್ಲಿ ನಡೆಯುವ ವ್ಯವಹಾರ, ಅಸಮಾನತೆ ಮತ್ತು ಅನ್ಯಾಯದ ಖಂಡನೆ, ಅಂಧಕಾರದ ತೊಳಲಾಟ, ಸಾಮಾನ್ಯ ಜೀವನದಲ್ಲೂ ರಾಜಕೀಯದ ಅಟ್ಟಹಾಸ…. ಇವೆಲ್ಲವೂ ಸಹೃದಯ ಓದುಗರ ಮನವನ್ನು ತಟ್ಟುವಂತೆ ಸುಖನವರ್ ಬೆಂಗಾಲಿಯವರು ತಮ್ಮ ಸಂಕಲನಗಳಲ್ಲಿ ದಾಖಲಿಸಿದ್ದಾರೆ. ಸದಾ ಸಮತೆ ಮತ್ತು ಸೋದರತೆಯ ಚಿಂತನೆ ಮಾಡುವ ಇವರು ಡಾ. ಅಂಬೇಡ್ಕರ್ ಅವರ ಜೀವನದ ಘಟನೆಗಳಿಗೆ ಗಜಲ್ ರೂಪ ನೀಡಿರುವುದು ಇವರ ಸೃಜನಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಅಂಬೇಡ್ಕರ್ ಅವರ ಜೀವನವು ಕತ್ತಲಿಂದಲೇ ಬೆಳಕನ್ನು ನೇಯ್ದ ಅದ್ಬುತ ಪ್ರತೀಕ. ಪ್ರತಿಯೊಂದು ಗಜಲ್ ನಲ್ಲೂ ಅಂಬೇಡ್ಕರ್ ಅವರ ಸಾಧನೆ ಕುರಿತ ವಿಶೇಷ ಹಾಗೂ ವಿಶೇಷಣಗಳಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಈ ಹಿನ್ನೆಲೆಯಲ್ಲಿ ‘ಅರಿವಿನ ಅಂಬರ ಅಂಬೇಡ್ಕರ್’ ಎನ್ನುವ ಗಜಲ್ ಕೃತಿಯು ಅಂಬೇಡ್ಕರ್ ಅವರ ಬಗ್ಗೆಯೇ ಬರೆಯಲಾಗಿರುವ ಪ್ರಥಮ ಗಜಲ್ ಸಂಕಲನವಾಗಿದೆ.
ಸಮಾಜ ಬದಲಾಗಿದೆ ಎಂದು ಅಲವತ್ತುಕೊಳ್ಳುವ ನಾವುಗಳು ಸಮಯ-ಸಂದರ್ಭಗಳನ್ನು ನಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿರುವುದನ್ನು ಮಾತ್ರ ಮರೆಯುತ್ತಿದ್ದೇವೆ. ಉಪದೇಶಗಳು, ದಾಖಲೆಗಳು ನಮ್ಮನ್ನು ಆಳುತ್ತಿವೆಯೆ ಹೊರತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಸೋಲುತಿದ್ದೇವೆ ಎಂಬುದನ್ನು ಈ ಕೆಳಗಿನ ಷೇರ್ ಮೂಲಕ ಗಜಲ್ ಗೋ ಶ್ರೀ ಈರಣ್ಣ ಬೆಂಗಾಲಿಯವರು ಸಾಮಾಜಿಕ ವ್ಯವಸ್ಥೆಯ ಮುಖವಾಡವನ್ನು ಕಳಚಲು ಪ್ರಯತ್ನಿಸಿದ್ದಾರೆ.
“ಕಣ್ಣ ಮುಂದೆಯೇ ಬಿದ್ದವರನ್ನು ಎತ್ತದವರು ಸಮಾಜ ಸೇವಕರು
ಪ್ರಶಸ್ತಿ ಪುರಸ್ಕಾರ ಸನ್ಮಾನಗಳನು ಖರೀದಿಸುವವರು ಸಾಧಕರು“
‘ಸಮಾಜ ಸೇವಕ’ನ ವ್ಯಾಖ್ಯಾನವೇ ಇಂದು ಬದಲಾಗುತ್ತಿದೆ. ಸೇವೆಗಿಂತಲೂ ಅದನ್ನು ದಾಖಲಿಸುವ ಕೆಲಸವೇ ಮುಖ್ಯವಾಗುತ್ತಿದೆ. ಇದರಿಂದ ಮೌಲ್ಯಗಳ ಪಲ್ಲಟವಾಗುತಿದ್ದು, ಕಣ್ಣಾಮುಚ್ಚಾಲೆ ಆಟವು ಜಗಜ್ಜಾಹೀರಾಗುತ್ತಿದೆ. ದಾಖಲೆಯ ಈ ಪ್ರಪಂಚದಲ್ಲಿ ಎಲ್ಲವೂ ಮಾರಟಕ್ಕೀರುವುದು ಶೋಚನೀಯ. ಪ್ರಶಸ್ತಿ, ಪುರಸ್ಕಾರಗಳು ಸಮಾಜದಲ್ಲಿ ಒಂದು ರೀತಿಯ ಅನುಮಾನದ ಹುತ್ತವನ್ನು ಬೆಳೆಸುತ್ತಿರುವುದು ದುರಂತವಾದರೂ ಸತ್ಯ. ಹಾಗಂತ ಎಲ್ಲವನ್ನೂ, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಕ ಮಾಡಲಾಗದು ಎಂಬುದನ್ನು ಮರೆಯಲಾಗದು!
“ಆರಲಾರದು ನೀವು ಹಚ್ಚಿದ ಜ್ಞಾನಜ್ಯೋತಿ ಬೆಂಗಾಲಿ ಬದುಕಲಿ ದಿವ್ಯಜ್ಯೋತಿ
ನಿಮ್ಮ ಜೀವನವೇ ದಾರಿದೀಪ ಭಾರತ ಭಾಗ್ಯವಿದಾತರು ಬಾಬಾ ಸಾಹೇಬರು“
ಬಗೆಬಗೆಯ ಎಣ್ಣೆ -ತುಪ್ಪ ಹಾಕಿ ಹಚ್ಚಿದ ಎಷ್ಟೋ ದೀಪಗಳು, ಹಣತೆಗಳು ಆರಬಹುದು, ಆರುತ್ತವೆ. ಆದರೆ ಡಾ. ಬಿ.ಆರ್.ಅಂಬೇಡ್ಕರ್ ಅವರಿಂದ ಲಭಿಸಿದ ‘ಜ್ಞಾನದೀಪ’ ಯಾವತ್ತೂ ಆರಲಾರದು. ಕಾರಣ, ಅಕ್ಷರ ಜ್ಞಾನವನ್ನು ಯಾರೂ ಕದಿಯಲಾರರು, ಯಾರೂ ಮುರಿಯಲಾರರು, ಯಾರೂ ಆರಿಸಲಾರರು. ಇಲ್ಲಿ ಗಜಲ್ ಗೋ ಬೆಂಗಾಲಿ ಅವರು ಅಂಬೇಡ್ಕರ್ ಅವರು ಜನಸಾಮಾನ್ಯರ ಬದುಕನ್ನು ಕಟ್ಟಿಕೊಡಲು ಎದುರಿಸಿದ ಪ್ರಸಂಗಗಳ ಬಗ್ಗೆ ಸಹೃದಯ ಓದುಗರ ಗಮನವನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಓದು-ಬರಹ ಕೇವಲ ಮೇಲ್ವರ್ಗದವರ ಸ್ವತ್ತಾಗಿದ್ದ ಕಾಲಘಟ್ಟದಲ್ಲಿ ಅದನ್ನು ಪಡೆದ ಅವರ ಮನೋಬಲ ಅದ್ವಿತೀಯವಾದುದು. ಅಂತೆಯೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನವು ಸಾಧಿಸುವ ಹಂಬಲವಿರುವ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ.
ಗಜಲ್ ಎಂಬುದು ಕೇವಲ ನಾದಗಳ ತಾಳಕ್ಕೆ ಕುಣಿಯುವ ಶೋಕಿಯಲ್ಲ, ಹದಿಹರೆಯದ ಮನಸುಗಳ ಕನಸುಗಾರಿಕೆಯೂ ಅಲ್ಲ. ಇದು ಮಾನವನ ಅನುಭವದ ಎಲ್ಲಾ ಮಗ್ಗುಲ, ಮಜಲುಗಳನ್ನು ಒಳಗೊಂಡ ಜೀವನ್ಮುಖಿಯಾದ ಅಭಿವ್ಯಕ್ತಿಯಾಗಿದೆ. ಈ ದಿಸೆಯಲ್ಲಿ ಗಜಲ್ ಗೋ ಶ್ರೀ ಈರಣ್ಣ ಬೆಂಗಾಲಿಯವರಿಂದ ಕನ್ನಡ ಗಜಲ್ ಪರಂಪರೆಯು ವಿಶಾಲವಾಗಿ, ಹುಲುಸಾಗಿ ಬೆಳೆಯಲಿ; ಇವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ರಚನೆಯಾಗಲಿ ಎಂದು ಶುಭ ಕೋರುತ್ತೇನೆ.
“ಜಾತ್ರೆಯಲ್ಲಿ ನಮ್ಮವರ ರೂಪ ಕಾಣಿಸದಿದ್ದರೆ
ದೀಪಾವಳಿ ಹಬ್ಬವೂ ನೀರಸದಿಂದ ಕಳೆಗುಂದುತ್ತದೆ”
–ಮುಮತಾಜ್ ಗುರ್ಮಾನಿ
ಚಿಂತೆಯ ಚಿತೆಯಿಂದ ನೆಮ್ಮದಿಯ ಕಡೆಗೆ ಮನಸು ಹೊರಳಲು ಇರುವ ದಾರಿಯೆಂದರೆ ಗಜಲ್ ದುನಿಯಾದಲ್ಲಿ ನಮ್ಮನ್ನು ನಾವು ಮೈಮರೆಯುವುದು. ಹಾಗಂತ ಹೆಚ್ಚು ಮೈಮರೆಯುವಂತಿಲ್ಲ. ಕಾರಣ, ಸಮಯದ ಸರಪಳಿಯನ್ನು ಕಡೆಗಣಿಸುವಂತಿಲ್ಲ. ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ಹೋಗಲೆಬೇಕಿದೆ, ಮತ್ತೆ ಮುಂದಿನ ಗುರುವಾರ ತಮ್ಮ ಪ್ರೀತಿಯನ್ನರಸುತ ಬರಲು.. ಹೋಗಿ ಬರುವೆ, ಬಾಯ್….
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ