ಚಾರ್ಲಿ ಚಾಪ್ಲಿನ್ -ಜಗತ್ತಿನ ಎಲ್ಲರನ್ನೂ ಎಂದೆಂದೂ ಕಾಡುವ ಸಂಗತಿಗಳಿವು

ಅನುವಾದ ಸಂಗಾತಿ

ಚಾರ್ಲಿ ಚಾಪ್ಲಿನ್ –

ಜಗತ್ತಿನ ಎಲ್ಲರನ್ನೂ ಎಂದೆಂದೂ

ಕಾಡುವ ಸಂಗತಿಗಳಿವು

ಆಂಗ್ಲ ಮೂಲ:  ಚಾರ್ಲಿ ಚಾಪ್ಲಿನ್

ಕನ್ನಡಾನುವಾದ: ಧನಪಾಲ ನಾಗರಾಜಪ್ಪ

ಚಾರ್ಲಿ ಚಾಪ್ಲಿನ್ ಅವರು 1940ರಲ್ಲಿ ಸ್ವತಃ ಬರೆದು, ನಿರ್ದೇಶಿಸಿ, ಅಭಿನಯಿಸಿ, ನಿರ್ಮಿಸಿದ ದಿ ಗ್ರೇಟ್ ಡಿಕ್ಟೇಟರ್ ಚಲನಚಿತ್ರದ ಸಂಭಾಷಣೆಯ ತುಣುಕನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನವನ್ನು ಮಾಡಿದ್ದೇನೆ.

ಜಗತ್ತಿನ ಎಲ್ಲರನ್ನೂ ಎಂದೆಂದೂ ಕಾಡುವ ಸಂಗತಿಗಳಿವು

ನನ್ನನ್ನು ಕ್ಷಮಿಸಿ,

ನಾನು ಚಕ್ರವರ್ತಿಯಾಗಬಯಸುವುದಿಲ್ಲ, ಯಾಕೆಂದರೆ ಅದು ನನ್ನ ವೃತ್ತಿಯಲ್ಲ. ಯಾರನ್ನಾದರೂ ಆಳುವುದಾಗಲಿ, ಗೆಲ್ಲುವುದಾಗಲಿ ನನಗಿಷ್ಟವಿಲ್ಲ. ಸಾಧ್ಯವಾದರೆ ಯಹೂದಿಗಳಿಗೆ, ಯಹೂದಿಗಳಲ್ಲದವರಿಗೆ, ಕರಿಯರಿಗೆ, ಬಿಳಿಯರಿಗೆ – ಎಲ್ಲರಿಗೂ ಸಹಾಯ ಮಾಡಬಯಸುತ್ತೇನೆ. ನಾವೆಲ್ಲರೂ ಹೀಗೆ ಪರಸ್ಪರ ಒಬ್ಬರಿಗೊಬ್ಬರು ನೆರವಾಗಬೇಕೆಂದು ಬಯಸುತ್ತೇವೆ. ಯಾಕೆಂದರೆ ಇದು ಮನುಷ್ಯರ ಸಹಜವಾದ ಸ್ವಭಾವ. ಎಲ್ಲರೂ ಸಂತೋಷವಾಗಿರಬೇಕೆಂದು ನಾವು ಬಯಸುತ್ತೇವೆಯೇ ಹೊರೆತು ಯಾರೂ ದುಃಖದಲ್ಲಿರಲಿ ಎಂದು ಬಯಸುವುದಿಲ್ಲ.

ಒಬ್ಬರನ್ನೊಬ್ಬರು ದ್ವೇಷಿಸುವುದನ್ನಾಗಲಿ, ಕೀಳಾಗಿ ಕಾಣುವುದನ್ನಾಗಲಿ ನಾವು ಇಷ್ಟಪಡುವುದಿಲ್ಲ. ಈ ಜಗತ್ತಿನಲ್ಲಿ ಎಲ್ಲರಿಗೂ ಜಾಗವಿದೆ. ಈ ಚೆಂದದ ಜಗತ್ತು ಸಮೃದ್ಧವಾಗಿದ್ದು ಎಲ್ಲರ ಅಗತ್ಯತೆಗಳನ್ನು ಪೂರೈಸಬಲ್ಲದು. ನಮ್ಮ ಬದುಕಿನ ಹಾದಿ ಸುಂದರವು, ಸ್ವತಂತ್ರವೂ ಆಗಿರಬೇಕು. ಆದರೆ ನಾವು ಆ ಹಾದಿಯನ್ನೇ ಕಳೆದುಕೊಂಡಿದ್ದೇವೆ.

ದುರಾಸೆ ಮನುಷ್ಯರ ಆತ್ಮಗಳನ್ನು ವಿಷಮಯವಾಗಿಸಿದೆ. ಇದರಿಂದ ಜಗದಲ್ಲಿ ದ್ವೇಷದ ತಡೆಗೋಡೆಗಳು  ತಲೆಯೆತ್ತಿವೆ. ಇದು ನಮ್ಮನ್ನು ಸಂಕಟ ಮತ್ತು ರಕ್ತಪಾತದೆಡೆಗೆ ನಡೆಸಿದೆ. ನಾವು ವೇಗವನ್ನು ಹೆಚ್ಚಿಸಿಕೊಂಡಿದ್ದೇವೆ. ಆದರೆ ನಮ್ಮಲ್ಲೇ ನಮ್ಮನ್ನು ಬಂಧಿಸಿಕೊಂಡಿದ್ದೇವೆ.  ಅತಿಯಾದ ಯಾಂತ್ರೀಕರಣ  ನಮ್ಮನ್ನು ಕೊರಗುವಂತೆ ಮಾಡಿದೆ. ಜ್ಞಾನ ನಮ್ಮನ್ನು ಸಿನಿಕರನ್ನಾಗಿಸಿದೆ. ಬುದ್ಧಿ ನಮ್ಮನ್ನು ಕಠೋರ ಮತ್ತು ನಿರ್ದಯಿಗಳನ್ನಾಗಿಸಿದೆ.

ನಾವು ತುಂಬಾ ಆಲೋಚಿಸುತ್ತೇವೆ. ಆದರೆ ಕಡಿಮೆ ಅನುಭವಿಸುತ್ತೇವೆ. ಯಾಂತ್ರೀಕರಣಕ್ಕಿಂತ ನಮಗೆ ಮಾನವತೆ ತುಂಬಾ ಅಗತ್ಯವಾಗಿದೆ. ಜಾಣತನಕ್ಕಿಂತ ಕರುಣೆ, ಕೋಮಲತೆಗಳು ನಮಗೆ ಅತಿ ಅಗತ್ಯವಾಗಿವೆ. ಯಾಕೆಂದರೆ ಇವುಗಳಿಲ್ಲದೆ ಜೀವನ ಹಿಂಸೆಯಾಗುತ್ತದೆ ಮತ್ತು ಎಲ್ಲವೂ ಕಳೆದುಹೋಗುತ್ತವೆ.

ವಿಮಾನ ಮತ್ತು ರೇಡಿಯೋ ನಮ್ಮನ್ನು ಸಮೀಪವಾಗಿಸಿವೆ. ಈ ಅನ್ವೇಷಣೆಗಳು ಮನುಜನೊಳಗಿನ ಒಳಿತನ್ನು ಹುಡುಕುತ್ತ, ನಮ್ಮೆಲ್ಲರ ಐಕ್ಯತೆಗೆ ಅಗತ್ಯವಾದ ವಿಶ್ವವ್ಯಾಪಿ ಸೋದರತೆಯನ್ನು ಹುಡುಕುತ್ತ ಅಳುತ್ತಿದೆ.

ಈಗ ನನ್ನ ದನಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯನ್ನು ತಲುಪುತ್ತಿದೆ. ಹತಾಶರಾದ ಲಕ್ಷಾಂತರ ಗಂಡಸರೇ, ಹೆಂಗಸರೇ, ಚಿಕ್ಕ ಮಕ್ಕಳೇ, ವ್ಯವಸ್ಥೆಯ ಹಿಂಸೆಗೆ ಬಲಿಯಾದವರೇ ಮತ್ತು ಕಾರಾಗಾರದಲ್ಲಿರುವ ಮುಗ್ಧರೇ, ಯಾರಿಗೆ ನನ್ನ ದನಿ ಕೇಳಿಸುವುದೋ ಅವರಿಗೆ ನಾನು ಹೇಳುವುದೇನೆಂದರೆ “ಹತಾಶರಾಗಬೇಡಿ.”

ಮನುಷ್ಯರು ದ್ವೇಷಿಸುವುದು ಕೊನೆಯಾಗುತ್ತದೆ. ಸರ್ವಾಧಿಕಾರಿಗಳು ಸತ್ತುಹೋಗುತ್ತಾರೆ. ಜನರಿಂದ ಕಸಿದುಕೊಂಡು ಶಕ್ತಿಯನ್ನು ಜನರಿಗೆ ಹಿಂದಿರುಗಿಸಲಾಗುತ್ತದೆ. ಮನುಷ್ಯ ಸಾಯುವ ತನಕ ಸ್ವಾತಂತ್ರ್ಯಕ್ಕೆ ಸಾವಿಲ್ಲ.

ಯೋಧರೇ,

ಕ್ರೂರಿಗಳಿಗೆ ನಿಮ್ಮನ್ನು ನೀವು ಒಪ್ಪಿಸಿಕೊಳ್ಳಬೇಡಿ. ಯಾರು ನಿಮ್ಮನ್ನು ಹತಾಶರನ್ನಾಗಿಸಿದರೋ, ಯಾರು ನಿಮ್ಮ ಜೀವನವನ್ನು ನಿರ್ಬಂಧಿಸಿದರೋ, ಯಾರು ನೀವು ಮಾಡಬೇಕು? ಏನು ಆಲೋಚಿಸಿಬೇಕು? ಏನು ಅನುಭವಿಸಿಬೇಕು? ಎಂದು ನಿರ್ದೇಶಿಸುವರೋ, ಯಾರೂ ನಿಮ್ಮನ್ನು ಅರೆದು ಮುಕ್ಕಿದರೋ, ಯಾರು ನಿಮ್ಮನ್ನು ದನಗಳಂತೆ ಕಂಡರೋ, ಯಾರು ನಿಮ್ಮನ್ನು ಫಿರಂಗಿಗಳಿಗೆ ಮೇವಾಗಿ ಬಳಸಿದರೋ ಆ ಅಸ್ವಾಭಾವಿಕ ಮನುಷ್ಯರಿಗೆ ನಿಮ್ಮನ್ನು ನೀವು ಒಪ್ಪಿಸಿಕೊಳ್ಳಬೇಡಿ. ಯಾಂತ್ರಿಕ ಮನಸ್ಸುಗಳು ಮತ್ತು ಯಾಂತ್ರಿಕ ಹೃದಯಗಳನ್ನು ಹೊಂದಿರುವ ಯಂತ್ರ ಮಾನವರಿಗೆ ನಿಮ್ಮನ್ನು ನೀವು ಒಪ್ಪಿಸಿಕೊಳ್ಳಬೇಡಿ.

ನೀವು ಯಂತ್ರಗಳಲ್ಲ! ಪಶುಗಳಲ್ಲ!

ನೀವು ಮಾನವರು! ನಿಮ್ಮ ಹೃದಯಗಳಲ್ಲಿ ಮಾನವೀಯ ಪ್ರೀತಿಯನ್ನು ಹೊಂದಿರುವಿರಿ. ದ್ವೇಷ ಮಾಡಬೇಡಿ. ಪ್ರೀತಿ ಮಾಡಲಾರದವರಷ್ಟೇ ದ್ವೇಷಿಸುತ್ತಾರೆ. ಅಸ್ವಾಭಾವಿಕವಾದವರು, ಪ್ರೀತಿ ಮಾಡಲಾರದವರು ಮಾತ್ರವೇ ದ್ವೇಷಿಸುತ್ತಾರೆ.

ಯೋಧರೇ!

ಗುಲಾಮಗಿರಿಗಾಗಿ ಕಾದಾಟ ಮಾಡಬೇಡಿ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ. ಸೈಂಟ್ ಲೂಕ್ ೧೭ನೇ ಅಧ್ಯಾಯದಲ್ಲಿ ಹೀಗೆ ಬರೆದಿದ್ದಾರೆ :- “ಮಾನವನೊಳಗೆ ದೇವರ ರಾಜ್ಯವಿದೆ.” ಅದು ಯಾರೋ ಒಬ್ಬರಲ್ಲಿ ಮಾತ್ರವಿಲ್ಲ; ಎಲ್ಲರಲ್ಲೂ ಇದೆ. ನಿಮ್ಮಲ್ಲೂ ಇದೆ. ಮಾನವರಾದ ನೀವು ಯಂತ್ರಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದ್ದೀರಿ. ಸಂತೋಷವನ್ನು ಸೃಷ್ಟಿಸುವ ಶಕ್ತಿಯೂ ನಿಮ್ಮಲ್ಲಿದೆ. ಜೀವನವನ್ನು ಸುಂದರ ಮತ್ತು ಸ್ವತಂತ್ರಗೊಳಿಸುವ ಶಕ್ತಿ ನಿಮ್ಮಲ್ಲಿದೆ.

ಈ ಜೀವನವನ್ನು ಅದ್ಭುತವಾದ ಸಾಹಸವನ್ನಾಗಿಸಲು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮಲ್ಲಿರುವ ಶಕ್ತಿಯನ್ನು ಉಪಯೋಗಿಸೋಣ.  ನಾವೆಲ್ಲರೂ ಒಗ್ಗೂಡೋಣ. ಎಲ್ಲರೂ ಒಗ್ಗಟ್ಟಾಗಿ ಒಂದು ಹೊಸ ಜಗತ್ತಿಗಾಗಿ ಹೋರಾಡೋಣ. ನಾವೊಂದು ಸಭ್ಯವಾದ ಜಗತ್ತಿಗಾಗಿ ಹೋರಾಟ ಮಾಡೋಣ. ಆ ಜಗತ್ತು ದುಡಿಯಲು ಅವಕಾಶ ನೀಡುವ, ಯುವಕರಿಗೆ ಭವಿಷ್ಯ, ವೃದ್ಧರಿಗೆ ಭದ್ರತೆಯನ್ನು ನೀಡುತ್ತದೆ. ಈ ಭರವಸೆಗಳನ್ನೇ ನೀಡಿ ಕ್ರೂರಿಗಳು ಪಟ್ಟಕ್ಕೇರಿದರು. ಆದರೆ ಅವರು ಸುಳ್ಳುಕೋರರು. ತಾವು ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಮುಂದೆಂದೂ ಕೂಡಾ ಈಡೇರಿಸುವುದಿಲ್ಲ.

ಸರ್ವಾಧಿಕಾರಿಗಳೇನೋ ಸ್ವತಂತ್ರರಾದರು. ಆದರೆ ಅವರು ಜನರನ್ನು ಗುಲಾಮರನ್ನಾಗಿಸಿದರು. ಈಗ ನಾವು ಆ ಭರವಸೆಗಳ ಈಡೇರಿಕೆಗಾಗಿ ಹೋರಾಟ ಮಾಡೋಣ. ದೇಶಗಳ ಗಡಿಗಳನ್ನು ದೂರ ಮಾಡಲು, ದುರಾಸೆಗಳ ದಮನ ಮಾಡಲು, ದ್ವೇಷ ಮತ್ತು ಅಸಹಿಷ್ಣುತೆಗಳ ವಿರುದ್ಧ ನಾವು ಹೋರಾಟ ಮಾಡೋಣ. ಅರಿವಿನ ಪ್ರಪಂಚಕ್ಕಾಗಿ ಹೋರಾಟ ಮಾಡೋಣ. ವಿಜ್ಞಾನ ಮತ್ತು ಪ್ರಗತಿಯ ಮೂಲಕ ಎಲ್ಲರಿಗೂ ಸಂತೋಷವನ್ನು ಕೊಡುವ ಜಗತ್ತಿಗಾಗಿ ನಾವು ಹೋರಾಡೋಣ.

ಯೋಧರೇ,

ಪ್ರಜಾಪ್ರಭುತ್ವದ ಹೆಸರಿನಲ್ಲಿ ಎಲ್ಲರೂ ಒಗ್ಗೂಡೋಣ.


ಆಂಗ್ಲ ಮೂಲ:  ಚಾರ್ಲಿ ಚಾಪ್ಲಿನ್

ಕನ್ನಡಾನುವಾದ: ಧನಪಾಲ ನಾಗರಾಜಪ್ಪ

ಧನಪಾಲ ನಾಗರಾಜಪ್ಪ

One thought on “ಚಾರ್ಲಿ ಚಾಪ್ಲಿನ್ -ಜಗತ್ತಿನ ಎಲ್ಲರನ್ನೂ ಎಂದೆಂದೂ ಕಾಡುವ ಸಂಗತಿಗಳಿವು

Leave a Reply

Back To Top