ಅಂಕಣ ಸಂಗಾತಿ

ಸುಜಾತಾ ರವೀಶ್ ರವರ ಲೇಖನಿಯಿಂದ

ನೆನಪಿನ ದೋಣಿಯಲಿ

ಕಸಿನ್ಸ್ _ಬಾಳ ಮೊದಲ ಗೆಳೆಯರು

ಜುಲೈ ೨೪ ವಿಶ್ವ ಕಸಿನ್  ಗಳ ದಿನವಂತೆ .  ಇತ್ತೀಚೆಗೆ ಪ್ರತಿಯೊಂದು ಸಂಬಂಧಗಳಿಗೂ ವಸ್ತುಗಳಿಗೂ ಒಂದೊಂದು ದಿನವಿಟ್ಟು ಗುರುತಿಸುವುದು ಸಾಮಾನ್ಯವಾಗಿಬಿಟ್ಟಿದೆ . ಹಾಗಾಗಿ ಬೆಳಿಗ್ಗೆ ಯಾವುದೋ ಪೋಸ್ಟ್ನಲ್ಲಿ ಇಂದು ವಿಶ್ವ ಕಸಿನ್ಸ್   ದಿನ ಎಂದು ಓದಿದಾಗ ….ಕಸಿನ್ಸ್ ಎಂಬ ಹೆಸರೇ ತರುವ ಮಧುರ ಅನುಭೂತಿ ಗಳು ಸಿಹಿನೆನಪುಗಳು ಮನಃಪಟಲಕ್ಕೆ ನುಗ್ಗಿ ಕಿರುನಗೆ ತಾನಾಗಿ ಸುಳಿಯಿತು . 

ಸೋದರ ಸೋದರಿಯರ ಮಕ್ಕಳು ಒಬ್ಬರಿಗೊಬ್ಬರು ಕಸಿನ್ಸ್ ಆಗುತ್ತಾರೆ . ಕನ್ನಡದಲ್ಲಿ ದಾಯಾದಿ ಎಂಬ ಪದವಿದ್ದರೂ ಕಸಿನ್ ಎನ್ನುವುದೇ ಹೆಚ್ಚು ಬಳಕೆಯಲ್ಲಿರುವುದರಿಂದ ಅದನ್ನು ಬಳಸುವುದೇ ಸೂಕ್ತ ಎಂದುಕೊಂಡಿರುವೆ .  

ಹಾಗೆಯೇ ಕಸಿನ್ ಗಳ ಮಕ್ಕಳು ಪರಸ್ಪರ  ಸೆಕೆಂಡ್ ಕಜಿನ್ಸ್ ಆಗುತ್ತಾರೆ.  ಜ್ಯೂ   ಕಮ್ಯುನಿಟಿಯಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಒಬ್ಬರೊಬ್ಬರಿಗೆ ಕಸಿನ್ಸ್ ಆಗಿರುತ್ತಾರಂತೆ . ಇರಲಿ ಹೆಚ್ಚುಹೆಚ್ಚು  ಕಸಿನ್ಸ್ ಇದ್ದಷ್ಟೂ ಹೆಚ್ಚುಹೆಚ್ಚು ಖುಷಿ ತಾನೆ? 

ಮೊದಲು ಅವಿಭಾಜ್ಯ ಕುಟುಂಬಗಳಿದ್ದಾಗ ಒಬ್ಬರೊಬ್ಬರಿಗೆ ಹೆಚ್ಚಿನ ಬಳಕೆ; ಒಂದೇ ಮನೆಯಲ್ಲಿ ಇರುತ್ತಿದ್ದದ್ದು ಅಣ್ಣ ತಮ್ಮಂದಿರ ಮಕ್ಕಳುಗಳು ಸ್ವಂತ ಅಣ್ಣ ತಂಗಿ ಅಕ್ಕ ತಮ್ಮಂದಿರೇ ಅನ್ನುತ್ತಿದ್ದರು .  ಇನ್ನೂ ಅತ್ತೆ ಮಕ್ಕಳು ಮಾವನ ಮಕ್ಕಳು ಬೇರೆ ಬೇರೆ . 

ಈಗ ಚಿಕ್ಕ ಚಿಕ್ಕ ಕುಟುಂಬಗಳಾಗಿ ಕವಲೊಡೆದಿರುವುದರಿಂದ ಎಲ್ಲರೂ ಒಬ್ಬರಿಗೊಬ್ಬರು ಕಸಿನ್ ಗಳೇ . 

ಶಾಲೆ ಕಾಲೇಜು ಅಕ್ಕಪಕ್ಕದ ಮನೆಯ ಮಕ್ಕಳು ಇವರುಗಳಿಗಿಂತ ಮೊದಲು ನಮಗೆ ಪರಿಚಿತವಾಗುವುದು ನಮ್ಮದೇ ಕುಟುಂಬ ವಲಯದ ನಮ್ಮ ಕಸಿನ್ ಗಳು .ಹಾಗಾಗಿ ಇವರೇ ನಮ್ಮ ಬದುಕಿನ ಮೊಟ್ಟಮೊದಲ ಗೆಳೆಯರು ಎನ್ನಲಡ್ಡಿಯಿಲ್ಲ . ರಕ್ತ ಸಂಬಂಧ ಮೊದಲು ಬಂದರೂ ನಂತರ ಅವರು ಆಯ್ಕೆಯಲ್ಲಿ ಗೆಳೆಯರಾಗಿ ಉಳಿಯುವುದರಿಂದ ಜೀವನವಿಡೀ ಇರುವ ಶಾಶ್ವತ ಸಂಬಂಧ ಅನುಬಂಧ ಏರ್ಪಡುತ್ತದೆ . ಅದನ್ನೇ ಈ ಇಂಗ್ಲಿಷ್ ಲೋಕೋಕ್ತಿ ಹೇಳುವುದು.

Cousins by blood friends by choice 

ಕೂಡು ಕುಟುಂಬಗಳು ಇರದಿದ್ದರೂ ಸಮಾರಂಭ ಊರ ಜಾತ್ರೆ ಅಥವಾ ಒಬ್ಬರ ಮನೆಗೊಬ್ಬರು ಭೇಟಿ ಇವುಗಳಿಂದೆಲ್ಲ ಕಸಿನ್ ಗಳ ಮಧ್ಯೆ ವಿಶ್ವಾಸ ಸ್ನೇಹ ಏರ್ಪಟ್ಟಿರುತ್ತದೆ ಅದನ್ನು ಹಾಗೆಯೇ ಉಳಿಸಿ ಬೆಳೆಸುವ ಜವಾಬ್ದಾರಿಯೂ ಇರುತ್ತದೆ . ಸೋದರ ಅಥವಾ ಸೋದರಿ ಹಾಗೂ ಗೆಳೆಯ ಗೆಳತಿ ಎರಡೂ ಸೇರಿದಂತಹ ಸಂಬಂಧ ಕಸಿನ್ ಗಳ ಮಧ್ಯೆ. ಹಾಗಾಗಿಯೇ ಇದು ತುಂಬಾ ವಿಶಿಷ್ಟ.

ನಮ್ಮ ತಂದೆಯ ಕಡೆ 3ಜನ ಅಕ್ಕ ತಮ್ಮಂದಿರು ತಾಯಿಯ ಕಡೆ 7ಜನ ಹೀಗಾಗಿ ನನಗೆ ಕಸಿನ್ಸ್ ಗಳು ಹೆಚ್ಚು . ದೊಡ್ಡವರಿಂದ ಮಾರ್ಗದರ್ಶನ ಪ್ರೀತಿ ಪಡೆದಿರುವೆ ಚಿಕ್ಕವರಿಗೆ ನನಗೆ ತಿಳಿದಷ್ಟನ್ನು ಹಂಚಿರುವೆ ಎಂಬ ಖುಷಿ . ನಮ್ಮ ಎಲ್ಲಾ ಸಂಬಂಧಿಕರು ಬೇರೆಬೇರೆ ಊರಲ್ಲಿದ್ದು ನಾವು ಮಾತ್ರ ಮೈಸೂರಿನಲ್ಲಿ ಇದ್ದುದರಿಂದ ದಸರೆ ರಜೆ ಅಥವಾ ಬೇಸಿಗೆ ರಜೆ ಬಂದರೆ ಸಾಕು ಒಬ್ಬರು ಒಬ್ಬರ ಮನೆಗೆ ಭೇಟಿಗಳಲ್ಲಿ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.ಎರಡೂ ಅಜ್ಜಿಯರ ಮನೆಗಳು ಅಷ್ಟೇ ಕಸಿನ್ ಗಳು

ಕಲೆಯುವ ಸ್ಥಳ . 

ಚಿಂತಾಮಣಿಯಲ್ಲಿ ನಮ್ಮ ತಾಯಿಯ ತವರು ಮನೆ .ಬೇಸಿಗೆ ರಜೆಯಲ್ಲಿ ಎಲ್ಲರೂ ಸೇರಿದರೆ ಹೆಚ್ಚು ಕಡಿಮೆ ಇಪ್ಪತ್ತು ಮೊಮ್ಮಕ್ಕಳು . 1 ಪುಟ್ಟ ಶಿಶುವಿಹಾರವೇ . ನಿಜಕ್ಕೂ ಸಹಕಾರ, ಹೊಂದಿ ಬಾಳುವ ಗುಣ, ಹಂಚಿ ತಿನ್ನುವ ಮನೋಭಾವ ಇವೆಲ್ಲವನ್ನು ಅಜ್ಜಿಯ ಮನೆಯ ವಾಸ ಕಲಿಸುತ್ತಿತ್ತು ಕಜಿನ್ ಗಳೇ ಮೊದಲ ಗುರುಗಳೂ ಆಗಿರುತ್ತಿದ್ದರು. ನಾನು ನನ್ನದು ಎಂಬ ಸ್ವಾರ್ಥ ಭಾವ ಕಡಿಮೆಯಾಗಲು ಈ ರೀತಿಯ ಭೇಟಿಗಳು ನಿಜಕ್ಕೂ ತುಂಬಾ ಸಹಾಯಕ ಎನಿಸುತ್ತದೆ . 

ಅಜ್ಜಿ ಮನೆ ಮಹಡಿಯ ಕೈತುತ್ತು, ಎಲ್ಲರೂ ಒಂದೆಡೆ ಹಾಸಿ ಮಲಗಿ ಕಥೆ ಕೇಳುವುದು ಬೆಳಿಗ್ಗೆಯಿಂದ ಸಂಜೆಯವರೆಗೆ ಆಟ ನಮಗೆ ತಿಳಿಯದ ಬೇರೆ ಕಲೆಗಳು ಹಾಡುಗಳನ್ನು ಒಬ್ಬರಿಗೊಬ್ಬರು ಕಲಿಸುವುದು ಕಲಿಯುವುದು;  ನಿಜ! ಯಾವುದೇ ವ್ಯಕ್ತಿತ್ವ ವಿಕಸನ ಶಿಬಿರಕ್ಕಿಂತ ಹೆಚ್ಚು ಚೇತೋಹಾರಿ ಉಪಯೋಗಿ. 

ಈಗಲೂ ನಾವೆಲ್ಲಾ ಕಸಿನ್ಸ್ ಗಳು ಉತ್ತಮ ಬಾಂಧವ್ಯ ಹೊಂದಿದ್ದೇವೆ .ತೀರಾ ಒಬ್ಬರ ಮನೆಗೆ ಒಬ್ಬರು ಆಗಾಗ್ಗೆ ಹೋಗಲು ಆಗದಿದ್ದರೂ ಎಲ್ಲರೂ ಭೇಟಿಯಾಗಲು ಅವಕಾಶವಿರುವಂತಹ ಸಮಾರಂಭಗಳನ್ನು ತಪ್ಪಿಸಿಕೊಳ್ಳುವುದೇ ಇಲ್ಲ.  ಅಲ್ಲಿ ಒಬ್ಬರೊಬ್ಬರ ಜತೆ ಹರಟೆ,   ಮಾತುಕತೆ ಎಲ್ಲಕ್ಕಿಂತ ನೋಡಿದೊಡನೆ ಉಂಟಾಗುವ ಆ ಆತ್ಮೀಯ ಭಾವ! ಏನೋ ಕಳೆದುಕೊಂಡದ್ದು ಸಿಕ್ಕಿದೆ ಎನ್ನುವ ಖುಷಿ ನಿಜಕ್ಕೂ ಅವೆಲ್ಲಾ ವರ್ಣಿಸಲಸದಳ . ಅನುಭವವೇದ್ಯ ಮಾತ್ರ . 

ಈಗಂತೂ ವಾಟ್ಸಾಪ್ ಗುಂಪುಗಳು ಬಂದಮೇಲೆ ಒಬ್ಬರ ಜೊತೆ ಒಬ್ಬರು ಸಂವಹನ ಮತ್ತಷ್ಟು ಸುಲಭ . ಅಮ್ಮನ ಕಡೆಯ ಕಸಿನ್ಸ್ ನೆಲ್ಲಾ ಸೇರಿಸಿ “ಚಿಂತಾಮಣಿ ಬಳಗ” ಎಂಬ ವಾಟ್ಸಪ್ ಬಳಗ ಕಟ್ಟಿದ್ದೇವೆ .ಒಬ್ಬರು ಇನ್ನೊಬ್ಬರ ವಿಷಯ ತಿಳಿಯಲು ತಿಳಿಸಲು ಗುಂಪು ತುಂಬಾ ಸಹಕಾರಿ. ಹಾಗೆ ಹುಟ್ಟುಹಬ್ಬಗಳಿಗೆ ವಾರ್ಷಿಕೋತ್ಸವಗಳಿಗೆ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ವಿಷಯ ತಿಳಿಸಲು ಅಭಿನಂದನೆ ಶುಭಾಶಯ ಕೋರುವುದೂ ಇದರ ಮೂಲಕವೇ. ನಮ್ಮ ಅಮ್ಮನ ಮನೆಯ ಕಡೆಯ ಕಸಿನ್ಸ್ ಗಳ ಮತ್ತೊಂದು ವಿಶೇಷ ಇದೆ . ಪ್ರತಿವರ್ಷ ಡಿಸೆಂಬರ್ ಇಪ್ಪತ್ತೈದನೇ ತಾರೀಕು ನಾವೆಲ್ಲ ಸೇರಿ 1 ಸಮ್ಮಿಲನ ದಿವಸವನ್ನಾಗಿ ಆಚರಿಸುತ್ತೇವೆ . ಅಮ್ಮನ ಅಕ್ಕ ತಂಗಿ ಅಣ್ಣ ತಮ್ಮಂದಿರ ಯಾವುದಾದರೂ ಒಂದು ಕುಟುಂಬದ ಎಲ್ಲ ಮಕ್ಕಳು ಆತಿಥ್ಯದ ಹೊಣೆ ಹೊತ್ತು 1ಕಡೆ ಭೇಟಿ ನಿಗದಿ ಮಾಡಿ ಎಲ್ಲರೂ ಸೇರುತ್ತೇವೆ . ಈ ಪದ್ಧತಿ ಈಗ ಕುಟುಂಬದ ಸಂಪ್ರದಾಯವಾಗಿ ಹೋಗಿದೆ.  ಸಾಧ್ಯವಾದಷ್ಟು ಯಾರೊಬ್ಬರೂ ಇದನ್ನು ತಪ್ಪಿಸುವುದಿಲ್ಲ . ಹಾಗೆಯೇ ನಮ್ಮ ಗುಂಪಿನಲ್ಲಿ ಅತಿ ಚಿಕ್ಕ ವಯಸ್ಸಿಗೇ ವಿಧಿವಶರಾದ ನನ್ನ ಕಸಿನ್ ಗಳು ಬಾಬು ಮತ್ತು ವಾಣಿ ಅವರುಗಳನ್ನು ನಾವೆಲ್ಲಾ ಸಂಧಿಸಿದಾಗಲೆಲ್ಲಾ ನೆನಪಿಸಿಕೊಳ್ಳದೇ ಇರುವುದಿಲ್ಲ . 

ಮತ್ತೊಂದು ಇಂಗ್ಲೀಷ್ ನಾಣ್ಣುಡಿ ಹೀಗಿದೆ

In my cousin I find a second self. 

Isabel norton 

ಒಂದೇ ರಕ್ತ ಹಂಚಿಕೊಂಡಿರುವ ಸಾಮ್ಯತೆಯ ಕೌಟುಂಬಿಕ ಪರಿಸರ ಇರುವ ಮಕ್ಕಳು ಒಂದೇ ಅಚ್ಚಿನಂತೆ ಬೆಳೆಯುವುದು ಸಹಜವೇ. ಹಾಗಾಗಿ ಸ್ವಭಾವ ನಡವಳಿಕೆಗಳು ಒಬ್ಬರಿಂದ ಒಬ್ಬರಂತೆ ಇದ್ದು ನಮ್ಮನ್ನೇ ನಮ್ಮ ಕಸಿನ್ ಗಳಲ್ಲಿ ಕಾಣಬಹುದು ಒಂದು ರೀತಿಯ ಕನ್ನಡಿಯ ಪ್ರತಿಬಿಂಬದಂತೆ . ಹಾಗೆ ಕೆಲವು ಜನ್ಮಜಾತ ಪ್ರತಿಭೆಗಳು ಕಸಿನ್ ಗಳಲ್ಲಿ ಸಾಮಾನ್ಯವಾಗಿರುವುದನ್ನು ಗಮನಿಸಬಹುದು. 

ಮತ್ತೊಂದು ವಿಶೇಷ ನೋಡಿ! ನಮ್ಮ ಕಸಿನ್ ಗಳ ಜೊತೆ ಬೆರೆತಾಗ ನಮಗೆ ಎಷ್ಟು ವಯಸ್ಸಾಗಿದ್ದರೂ ನಾವು ಚಿಕ್ಕವರಂತೆಯೇ   ಆಗಿಬಿಡ್ತೀವಿ. ಕಳೆದ ವರ್ಷಗಳು ಗಣನೆಗೇ ಬರುವುದಿಲ್ಲ.  ನಮ್ಮ ಮನಸ್ಸಿನಲ್ಲಿ ಬಾಲ್ಯದ ನೆನಪು ತರುವಂತಹ ಇಂತಹ ಭೇಟಿಗಳು ಅದೆಷ್ಟು ಚೆನ್ನ! ಅಮೂಲ್ಯ ಅಲ್ಲವೇ?

ಹೀಗೆ ನಮ್ಮ ಸಂತಸದಲ್ಲಿ ತಾವೂ ನಲಿಯುವ, ಕಷ್ಟ ಬಂದಾಗ ಸಲಹೆ ಸಹಾಯ ನೀಡುವ ವಿಸ್ತೃತ ಕುಟುಂಬವೇ ಆಗಿರುವ ಕಸಿನ್ ಗಳು ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಪಾತ್ರ ನಿರ್ವಹಿಸುತ್ತಾರೆ ಎಂದು ಯೋಚಿಸಿದಾಗ ಅರ್ಥವಾಗುತ್ತದೆ . ಇಂದಿನ ದಿನಗಳಲ್ಲಿ 1 ಅಥವಾ ಎರಡೇ ಮಕ್ಕಳು ಇರುವ ಸಂಧರ್ಭಗಳಲ್ಲಿ ಈ ತಲೆಮಾರಿನ ಮಕ್ಕಳು ಕಸಿನ್ಸ್ ಎಂಬ ಸಂಬಂಧದ ಸವಿಯನ್ನು ಅನುಭವಿಸುವುದೇ ಇಲ್ಲವಲ್ಲ ಎಂಬ ಖೇದವಾಗುತ್ತದೆ . ಆ ಕೊರತೆಯನ್ನು ಸ್ವಲ್ಪವಾದರೂ ನೀಗಿಸಲು ಸಂಬಂಧಗಳ ಮಧ್ಯದ ಸೂಕ್ಷ್ಮತೆಯನ್ನು ಕಾಪಾಡಿಕೊಂಡು 

ಜತನದಿಂದ ಕಾಯ್ದುಕೊಳ್ಳುವ, ಸಂಬಂಧಿಗಳ ಜೊತೆ ಒಡನಾಟದ ಪ್ರಾಮುಖ್ಯತೆಯ ಅನಿವಾರ್ಯ ಪರಿಸ್ಥಿತಿ ಈಗ ಎದುರಾಗುತ್ತಿದೆ . ಸಮಾಜ ಜೀವಿ ಸಂಘಜೀವಿ ಆಗಲು “ಮನೆ ಗೆದ್ದು ಮಾರು ಗೆಲ್ಲು” ಎನ್ನುವಂತೆ ಹತ್ತಿರದ ಸಂಬಂಧಗಳ ಮಧ್ಯೆ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಲು ಇದು ಇಂದಿನ ಅಗತ್ಯತೆಯೂ ಕೂಡ . 

ಮತ್ತೆ ಇನ್ನೇಕೆ ತಡ?  ತುಂಬಾ ದಿನಗಳೊಂದ ಸಂಪರ್ಕದಲ್ಲಿ ಇಲ್ಲದ ಕಸಿನ್ ಗಳಿಗೆ 1ಹಲೋ ಹೇಳಿ ಬಿಡಿ ! ಒಡನಾಟದಲ್ಲಿ ಇರುವವರಿಗೆ  ಶುಭಾಶಯ ತಿಳಿಸಿಬಿಡಿ….


ಸುಜಾತಾ ರವೀಶ್    

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

Leave a Reply

Back To Top