ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಸಾವಿರಸುಳ್ಳು ಹೇಳಿ ಒಂದ್ ಮದ್ವಿ ಮಾಡ್ ಬೇಕು.

ಸವಿತಾ ಇನಾಮದಾರ್

ಮನುಜನ ಜೀವನದಲ್ಲಿ ಬರುವ ಪ್ರತಿಯೊಂದು ಕ್ಷಣ ಅಥವ ಸಂದರ್ಭ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಅಲ್ಲವೇ? ಆ ಕ್ಷಣದ ನಿರೀಕ್ಷೆಯಲ್ಲಿದ್ದ ತವಕ, ತುಡಿತ, ಆತುರ, ಕಾತರ, ಆನಂದ, ಭಯ, ತೃಪ್ತಿ…ಹೂಂ…ಇನ್ನೂ ಅನೇಕ ಭಾವನೆಗಳು ನಮ್ಮೆಲ್ಲರ ಮನದಾಳದಿಂದ ಹೊರ ಹೊಮ್ಮುತ್ತವೆ ಅಲ್ಲವೆ? ನಾನು ನನ್ನೆಲ್ಲಾ ಭಾವನೆಗಳ ಬೀಜವನ್ನು ದೆಹಲಿಯ ಸಂಪತ್ಭರಿತವಾದ ಭುವಿಯಲ್ಲಿ ನೆಟ್ಟಿದ್ದೇನೆ. ನಿಮ್ಮ ಪ್ರೀತಿಯ ಸಿಂಚನ ಪಡೆದಾಗ ಮಾತ್ರ ಈ ಬೀಜ ಮೊಳಕೆಯೊಡೆದು ಸೂರ್ಯನ ದರ್ಷನ ಪಡೆಯುವಂತಾಗಲು ಸಾಧ್ಯ. ನಿಮ್ಮೆಲ್ಲರ ಸಹಕಾರ ದೊರೆತಾಗ ಮಾತ್ರ ಅದು ಎಲ್ಲೆಡೆಗೂ ಹಬ್ಬಲು ಸಾಧ್ಯ. ಭಾವನೆಗಳಿಗೆ ವಯಸ್ಸಿನ ಮಿತಿಯಿಲ್ಲ. ಕಾರಣ ಭಾವನೆಗಳು ಹುಟ್ಟೋದು ನಿಜ ಜೀವನದಲ್ಲಿ ನಡೆಯುವ ಘಟನೆಗಳನ್ನ ನೋಡಿ, ಸವಿನೆನಪುಗಳ ಕೊಂಡಿ ಬಿಚ್ಚಿದಾಗ. ಈ ನೆನಪುಗಳು ಸದಾ ಅಮರ ಅಲ್ವೇ? ಮೊದಲ ಪ್ರೀತಿಯ ರಂಗಿನ ಹಾಗೆ.

ಮಳೆಗಾಲದಲ್ಲಿ ಬಲು ನಿರೀಕ್ಷೆಯಿಟ್ಟು ಬಿತ್ತಿದ ಈ ಬೀಜ ಖಂಡಿತ ಮೊಳಕೆಯೊಡೆಯುತ್ತೆ ಅನ್ನೋ ಭರವಸೆ ನನಗಿದೆ.

ಓದುಗರ ಮೆಚ್ಚುಗೆಯ ಒಂದು ಮಾತೇ ಸಾಕು, ನನ್ನ ಬರಹದ ಮೆರವಣಿಗೆ ಆದಂತೆ ಸಂತೋಷವಾಗುತ್ತೆ.

ಛೇ,,ಛೇ ಛೇ.. ಹೋಗೀ ಹೋಗಿ ಈ ಸುಡು ಸುಡೂ ದಿಲ್ಲೀಗೇ ಯಾಕಪ್ಪಾ ನನ್ನ ಮದ್ವೀ ಮಾಡೀ ಕೊಟ್ರೋ ಅಂತ ಪ್ರತೀ ಸರೆ ಬ್ಯಾಸಿಗಿ ಬಂತಂದ್ರ ಮನಸು ಕಿರಿಕಿರಿ ಮಾಡ್ತಿರ್ತದ. ಆದ್ರ ಇದ್ರಾಗ ತಪ್ಪು ನನ್ನದ ಅದ ಅಂತ ನೆನಪಿಗೆ ಬಂದಾಗ ನಾಲಗಿ ಕಡಿದು ಸುಮ್ಮನಾಗ್ತೀನಿ. ನನ್ನ ಮದ್ವಿಗಿಂತ ಮೊದಲ ನಮ್ಮವ್ವಗ- ನೋಡವಾ.. ಅಕ್ಕನ ಹಾಂಗ ನನಗ ಇಲ್ಲೇ ಹತ್ರದಾಗ ಕೊಡಬ್ಯಾಡಾ..ಹ್ನಿತ್ತಲ ಗಿಡಾ ಮದ್ದಲ್ಲಾ ಅಂತಾಗ್ತದ. ನಾ ಬರ್ತೀನೀಂದ್ರ ನೀವೆಲ್ಲಾ ಕಾಯ್ಕೋತ ಕೂಡಬೇಕು ನೋಡು ಅಂತಿದ್ದೆ. ಈಗ ಅಗದೀ ಹಾಂಗ ಆತು ನೋಡ್ರಿ. ದಿಲ್ಲಿಯಿಂದ ಮಗಳು ಬರ್ತಾಳಂತ ರಾತ್ರಿಯಿಡೀ ನಮ್ಮನಿಯವ್ರೆಲ್ಲಾ ಕಾಯ್ಕೋತ ಕೂಡತಾರ ಪಾಪ. ಒಂದ್ ಮುಂಜಿವಿ ಇಲ್ಲಾ, ಮಂಗಳಾಗೌರಿ, ಕುಬಸಾ, ಹೆಸರಿಡೂದಿಲ್ಲಾ…ಯಾವುದಕ್ಕೂ ಪಟ್ ಅಂತ ಹೋಗ್ಲಿಕ್ಕೆ ಬರಾಂಗೇ ಇಲ್ಲಾ.

ಹಂಗಾಗಿ ಹುಡುಗ್ರಿಗೆ ಸೂಟಿ ಯಾವಾಗ ಆಗ್ತದೋ ಅಂತ ಕಾಯ್ಕೋತ ಕೂತಿರ್ತೀವಿ. ಈ ದಿಲ್ಲೀ ಬ್ಯಾಸಿಗಿ ಧಗೆಯ ಬೇಗೆಯಿಂದ ಪಾರಾಗೋ ಖುಶಿ ಎಷ್ಟಿರತದ ಅಂದ್ರ ಒಂದು ತಿಂಗಳಾ ಮೊದ್ಲ ಪ್ಯಾಕಿಂಗ್ ಸುರೂ ಮಾಡಿಬಿಟ್ಟಿರ್ತೀನಿ. ಅದನ್ನ ನೋಡಿ ನವಾವ್ರಿಗೆ ತಾವೊಬ್ಬರ ಇಲ್ಲೆ ಇರಬೇಕಾಗ್ತದಲ್ಲಾ ಅನ್ನೂ ಸಂಕಟ ಪಾಪ.

ಅದಕ್ಕ ತಡೀಲಿಕ್ಕೆ ಆಗದ – ಯಾರ್ಯಾರಿಗೆ ಏನೇನ್ ಬೇಕೋ ಅದರ ಲಿಸ್ಟ್ ಹಿಡಕೊಂಡ್ ಗರಾಗರಾ ಅಂತ ಪ್ಯಾಟ್ಯಾಗ ಸುತ್ತೂ ಹೊತ್ತಿನ್ಯಾಗ ನಿನಗ ಬಿಸ್ಲು ಹತ್ತಾಂಗಿಲ್ಲಾ ಅಲ್ಲಾ’ ಅಂತ ನಮ್ಮಾವ್ರೂ ಕಾಡಿಸ್ತಿರ್ತಾರ. ನೂರ್ ಕಡೇ ಸುತ್ತಾಡಿ ಹೊತಕೊಂಡ ಬಂದ ಸಾಮಾನಾ ತೋರಿಸೂದ್ರಾಗ ನನಗಂತೂ ಅವ್ರ ಮಾತು ಕೇಳಿಸಾಂಗೇ ಇಲ್ಲ..

ನಮ್ಮ ಮುಂದಿಗೆ ಏನಾದರೂ ಕೊಟ್ಟಾಗ ಅವರ ಮಾರಿ ಹ್ಯಾಂಗ್ ಆರಳತದ ಅನ್ನೋ ಯೋಚನಿಯೊಳಗ ಮತ್ತ ಅದರ ಜೋಡೀ ನಮ್ಮ ಕೂಲರ್ ಸಪ್ಪಳದಾಗ ಏನೇನೂ ಕೇಳಿಸಾಂಗೇ ಇಲ್ಲ ನೋಡ್ರಿ. ನನ್ನ ಖುಶಿ ನೋಡಿ ಅವರ ಮಾತೆಲ್ಲಾ ಅಡಿಗಿ ಹೋಗ್ತದ.

 ನಮ್ಮ ಅಳಿಯಂದ್ರು ಪಾಪಾ… ಭಾಳ ಒಳ್ಯಾವ್ರು… ನೀ ಏನ ಮಾಡಿದ್ರೂ ಎಷ್ಟು ಸಮಾಧಾನದಿಂದ ಇರ್ತಾರವ್ವಾ ಅಂತ ನಮ್ಮವ್ವ ತನ್ನ ಅಳಿಯಾನ ಕೌತುಕ ಮಾಡತಿದ್ಲು. ಹೌದು ನೋಡ್ರಿ, ಎಲ್ಲಾ ಅತ್ತೆಂದ್ರಿಗೆ ಅಳಿಯಂದ್ರ ಮ್ಯಾಲೆ ಭಾಳ ಪ್ರೀತಿ, ಮಮಕಾರ ಇರ್ತದ. ಆದ್ರ ಅವ್ರಿಗೇನ್ ಗೊತ್ತು… ನಮ್ಮ ನಮ್ಮ ಮನೀ ಪ್ರೆಶರ್ ಕುಕ್ಕರ್ ಯಾವಾಗ ಎಷ್ಟು ಸರೆ ಶೀಟೀ ಹೊಡೀತದ ಅಂತ.

ಅಂತೂ ಇಂತೂ ಗೋವಾ ಎಕ್ಸಪ್ರೆಸ್ಸಿನ್ಯಾಗ ನಮ್ಮ ಸಾಮಾನೆಲ್ಲಾ ಇಡಿಸಿ, ದಿಲ್ಲಿಯಿಂದ ಬೆಳಗಾವಿಗೆ ಕಡೇ ಮಾರಿ ಮಾಡಿಕೊಂಡ್ ಹೊಂಟ್ವಿ. ಒಂದು ದಿನ, ಎರಡು ರಾತ್ರಿಯ ಪ್ರಯಾಣ. ಈಗಿನ ಹಾಂಗ ಆವಾಗ ಪ್ಲೇನ್ ಇರಲಿಲ್ಲ. ಈಗೂ ಪಟ್ ಅಂತ ಹೋಗ್ ಬೇಕಂದರೂ ಎರಡ ಕಡೇ ಬಲಾಯಿಸ ಬೇಕು.

ಬರ್ರೀ ಮುಂದೇನಾತೂಂತ ಹೇಳತೀನಿ.

ನಮ್ಮ ಗಾಡೀ ಗೋವಾ ಎಕ್ಸಪ್ರೆಸ ಇನ್ನ ಬಿಡೂ ಹೊತ್ತಾತು ಅಂತ ಸೀಟೀ ಹೊಡಿಯೂದಕ್ಕ ನಮ್ಮ ಮನಿಯವ್ರು ತಳಗ ಇಳಿದು- ಇಬ್ಬರೂ ಮಜಾ ಮಾಡ್ರಿ ಆದ್ರ ಭಾಳ ಗದ್ದಲಾ ಹಾಕ ಬ್ಯಾಡ್ರಿ’ ಅಂತ ಮಕ್ಕಳಿಗೆ ಹೇಳಕೋತ ‘ಮುಟ್ಟಿದ ಕೂಡ್ಲೆ ಫೋನ್ ಮಾಡು’ ಅಂತ ನನಗೂ ಹೇಳಿ ಒಲ್ಲದ ಮನಸಿಂದ ಬಾಯ್ ಅನಕೋತ ಗಾಡಿಯಿಂದ ಇಳಿದು ಹೋದ್ರು. ಅಷ್ಟರಾಗ ನಮ್ಮ ಕಂಪಾರ್ಟ ಮೆಂಟಿನ್ಯಾಗ ವಯಸ್ಸಾದ ದಂಪತಿಗಳು ಏದುಸಿರು ಬಿಡಕೋತ ಹತ್ತಿದ್ರು. ಕರೀ ಟೋಪೀ ಮಹಾಷಯರು ತಮ್ಮ ಹರಕಾ ಮುರಕಾ ಹಿಂದೀ ಒಳಗ ಸಾಮಾನು ತಂದಿಟ್ಟ ಕೂಲಿಗೆ ಬೈಕೋತ ತಮ್ಮ ಕೋಟಿನ ಕಿಶೆದಿಂದ ಐವತ್ತರ ನೋಟನ್ನ ತಗದು ಅವಂಗ ಕೊಟ್ರು. ಇಲ್ಲಿಯವ್ರು ಅಲ್ಲಾ ಅಂತ ಗೊತ್ತಾಗಿ ಹೆಚ್ಚ ರೊಕ್ಕಾ ಸುಲೀಲಿಕ್ಕೆ ಹತ್ಯಾನ ಈ ಸೂ ಮಗ ಅಂತ ಪುಷ್ಪಾರ್ಚನಿ ಮಾಡಕೋತ ಸಾಮಾನು ಇಳಿಸಿದ್ರು.

ನಾವು ಮೊದ್ಲ ಬಂದಿದ್ವಿ ಹಂಗಾಗಿ ಆರಾಮಾಗಿ ಕೂತಿದ್ವಿ. ನಮ್ಮ ಮುಂದಿನ ಸೀಟಿನ್ಯಾಗ ಆ ಹಿರಿಯ ಮುತೈದಿ ಹುಶ್ಯಪ್ಪಾ ಅಂತ ಸುಸ್ತಾಗಿ ಕೂತಾಗ ನನಗ ನೋಡ್ಲಿಕ್ಕೆ ಆಗಲಿಲ್ಲ. ನೀರಿನ ಲೋಟ ಅವರ ಕೈಗೆ ಕೊಟ್ಟೆ. ಸುಸ್ತಾಗಿದ್ರೂ ಅದೆಷ್ಟು ಸೌಮ್ಯ ಮುಖ.. ನೀಳ ನಾಸಿಕ, ದುಡನೆಯ ಲಕ್ಷಣವಾದ ಮುಖ, ಹಣಿಮ್ಯಾಲೊಂದು ಢಾಳಾಗಿ ಕಾಣೂವಂಥಾ ದುಂಡಾದ ಕುಂಕುಮ, ಗಲ್ಲದ ಮ್ಯಾಲೆ ಮುದ್ದಾದ ಅರಿಷಿಣ ನಕ್ಕಾಗ ಅಗದೀ ನಮ್ಮವ್ವನ್ನ ನೋಡಿದಾಂಗ ಆತು. ನನ್ನ ನೋಡಿ – ಸುಖೀ ಭವಃ ಅಂದ್ರು. ಅದಕ್ಕ ಹಿಂದ ತಿರುಗಿ ನಿಂತ ಅವರ ಪತಿರಾಯರು – ಭಪ್ಪರೇ ಮಗಳ.. ನಾ ಇಲ್ಲೆ ಆ ಸೂ. ಮಗಾ ಹೆಚ್ಚ ರೊಕ್ಕಾ ಕೇಳಲಿಕ್ಕೆ ಹತ್ಯಾನಂತ ಬೈಬೇಕೂಂದ್ರ ನೀ ಸುಖೀ ಭವಃ ಅಂತೀಯಲ್ಲ’ ಅಂತ ಬಡಬಡಿಸಿದಾಗ ಸಿಟ್ಟು ಮತ್ತ ಬಿಸಿಲಿನ ಧಗಿಯಿಂದ ಅವ್ರ ಮಾರಿ ಇನ್ನಷ್ಟು ಕೆಂಪಾತು. ಆವ್ರ ಕೈಗೂ ಒಂದು ಲೋಟಾ ನೀರು ಕೊಟ್ಟಾಗ, ಸುಖೀ ಭವಃ ಅಂತ ಆಶೀರ್ವಾದ ತಂತಾನ ಹೊರಗ ಬಿತ್ತು. ಆವಾಗ ಅಜ್ಜಿಯ ಮುಖಾ ನೋಡಬೇಕಾಗಿತ್ತು. ತಾವು ಸುಮ್ಮನ ಹೆಂಡಾತಿನ್ನ ಗದರಿಸಿದ್ದಕ್ಕ ಅವ್ರಿಗೆ ಮುಜುಗುರ ಆಗಿ ಏನು ಮಾಡಬೇಕೂಂತ ತಿಳೀವಲ್ಲತಾತು.. ನಾ ಮತ್ತ ಮಕ್ಕಳು ಜೋರಾಗಿ ನಗಲಿಕ್ಕೆ ಸುರು ಮಾಡಿದ ಕೂಡ್ಲೇ ಅವ್ರೂ ನಮ್ಮ ಜೋಡಿ ನಗಲಿಕ್ಕೆ ಹತ್ತಿದ್ರು.

ನಮ್ಮ ಪರಿಚಯ ಆಗ್ಲಿಕ್ಕೆ ಹೆಚ್ಚು ಹೊತ್ತು ಹತ್ತಲಿಲ್ಲ. ಶೀನೂ ಕಾಕಾ ನಮ್ಮ ಧಾರವಾಡ ಕಡೆಯವ್ರು ಅಂತ ಅವ್ರನ್ನ ನೋಡಿದ ಕೂಡ್ಲೆ ಅನಿಸಿತ್ತು. ಮತ್ತೇನ್ ಕೆಳ್ತಿರಿ..ಮಾತಿಗೆ ಮಾತು ಸುರು ಆತು. ಶೀನೂ ಕಾಕಾ ಮತ್ತ ಶಾಂತಾ ಕಾಕಿ ಬೆಳಗಾವಿ ಕಡೆಯವ್ರು. ಅಷ್ಟ ಅಲ್ಲಾ ನಮಗ ದೂರದಿಂದ ಬಳಗಾನೂ ಅಗ್ತಾರಂತ ತಿಳಿದು ಭಾಳ ಖುಶಿ ಆತು. ಮೊಬೈಲ್ ಫೋನ್ ಆವಾಗೇನಾದ್ರೂ ಇದ್ದಿದ್ರ ನಮ್ಮ ಮನಿಯಾವ್ರಿಗೆ ಹೇಳಿ ಬಿಡ್ತಿದ್ದೆ. ಅವ್ರಿಗೂ ನಾವೆಲ್ಲಾ ಅರಾಮಾಗಿ ತವರು ಮನೀ ಮುಟ್ಟತೀವೀಂತ ಸಮಾಧಾನಾ ಅಗ್ತಿತ್ತು.

ಇದರ ಬಗ್ಗೆ ಯೋಚಿಸ್ಲಿಕ್ಕೆ ಟೈಮ್ ಕೊಡದ ಕಾಕಾ- ಕಾಕಿ ತಮ್ಮ ಮಕ್ಕಳ ಮದವಿ ಮಾಡಿ ಎಲ್ಲಾ ಜವಾಬ್ದಾರಿ ಮುಗಿಸಿ ಈಗ ಕಾಶಿಯಾತ್ರಾ ಮಾಡಿ ಬಂದ್ವಿ ಅಂತ ತಮ್ಮ ಪ್ರಯಾಣದ ಬಗ್ಗೆ ಹೇಳಲಿಕ್ಕೆ ಸುರು ಮಾಡಿದ್ರು. ರಾತ್ರಿ ಕಳದು ಹ್ಯಾಂಗ್ ಬೆಳಗು ಹರೀತೋ ತಿಳೀಲಿಲ್ಲ. ಬೆಳಿಗ್ಗೆ ಶಾಂತಾ ಅಜ್ಜಿ ಅಂತ ನನ್ನ ಮಕ್ಕಳಿಬ್ಬರೂ ಅಜ್ಜಿಯ ಜೋಡಿ ಮಸ್ತ ಹರಟಿ ಹೊಡಕೋತ ಕೂತದ್ದನ್ನ ನೋಡಿ ಶೀನಣ್ಣಜ್ಜಾ ‘ಎಲ್ಲೀದ ನೋಡವಾ ಹುಡುಗಿ ಈ ಬಾಂಧವ್ಯ? ನೀ ಯಾರೋ ನಾವು ಯಾರೋ ಗೊತ್ತಿಲ್ಲದನ ಒಂದ ಡಬ್ಯಾಗ ಕೂತ್ವಿ. ಅಲ್ಲೆ ನೋಡ್ ನಿನ್ನ ಮಗಳು ಅಜ್ಜಿ ಅಜ್ಜೀ ಅನಕೋತ ಆಕಿ ತೊಡೀಮ್ಯಾಲೆ ಕೂತು ಹ್ಯಾಂಗ ಕಥೀ ಕೇಳಲಿಕ್ಕೆ ಹತ್ಯಾಳ ನೋಡು’. ಅಂದ್ರು. ಹೌದ್ರೀ ಕಾಕಾ… ನಿಮ್ಮ ಮಾತು ಅಗದೀ ಖರೇ ಅದರೀ.. ಮುಗ್ಧ ಮನಸಿನವ್ರಿಗೆ ಯಾವ ಜಾತಿ, ವಯಸ್ಸೂ ಕಾಣಾಂಗಿಲ್ಲ. ಎಲ್ಲಾ ಋಣಾನು ಬಂಧ ಹೌದಲ್ರೀ? ಅಂದಾಗ, ಶಾಂತಜ್ಜಿ ಹೌದವಾ…ಋಣಾನುಬಂಧ ಇಲ್ಲದಿದ್ರ ನಾ ಇವ್ರ ಜೋಡಿ ಇಷ್ಟು ವರ್ಷ ಸಂಸಾರ ನಡೆಸ್ತಿದ್ದಿಲ್ಲಾ ಮತ್ತ ಇಲ್ಲೆ ನಿನ್ನ ಮುಂದ ಕೂಡತಿದ್ದಿಲ್ಲಾ ನೋಡು’ ಅಂದ್ರು.

ನನಗ ಅವ್ರ ಮಾತಿನ ಅರ್ಥ ಆಗ್ಲಿಲ್ಲಾ.. ‘ಅಂದ್ರೇನು ಕಾಕಿ’ ಅಂತ ಕೇಳಿದಾಗ ಕಾಕಾ ಮಂದಹಾಸ ಬೀರುತ್ತಾ, ಶಾಂತಜ್ಜಿಯನ್ನು ಪ್ರೀತಿಯಿಂದ ನೋಡಕೋತ – ‘ಏ ಶಾಂತಾ..ಹೇಳ… ನಾವಿಬ್ರೂ ಹ್ಯಾಂಗ ಭೇಟಿಯಾದ್ವೀಂತ?’ ಅಂದ್ರು. ಅಜ್ಜಿಯ ಸುಕ್ಕುಗಟ್ಟಿದ ಗೌರ ವರ್ಣದ ಗಲ್ಲ ರಂಗೇರಿದಾಗ, ಮೋತಿಬಿಂದುವಿದ್ದ ಕಂಗಳಲ್ಲಿ ಮಿಂಚನ್ನು ಕಂಡಾಗ ದಂಗಾಗಿ ಕೂತ ಬಿಟ್ಟೆ. ಈ ಇಳಿ ವಯಸಿನ್ಯಾಗೂ ಆ ಅಮೃತ ಗಳಿಗೆಯನ್ನು ನೆನೆದು ಈ ಪಾಟೀ ಪ್ರತಿಕ್ರಿಯಿಸುವವರನ್ನು ಕಣ್ಣಾರೆ ಕಂಡಾಗ ಖರೇನ ಇದು ಇಂದಿನ ಯಾಂತ್ರಿಕ ಯುಗದಾಗ ಕಂಡು ಬರುವ ಅಪರೂಪದ ದೃಶ್ಯ ಅಂತ ಅನಿಸದೇ ಇರಲಿಲ್ಲ . ಅವರದ್ದು 62 ವರ್ಷಗಳ ಸುದೀರ್ಘವಾದ ದಾಪಂತ್ಯ ಜೀವನ ಅಂತ.

‘ ಹೋಗ್ರೀ… ಏನೇನೋ ಮಾತಾಡ್ತೀರಲ್ಲಾ?’ ಎಂದು ಬೊಚ್ಚು ಬಾಯನ್ನು ಉದ್ದಕೆ ಮಾಡಿ, ಸ್ವಲ್ಪ ಸಿಟ್ಟಿಗೆದ್ದಾವ್ರಂಗ ಮಾರಿ ಮಾಡಿದ್ರೂ ಮನಸಿನ್ಯಾಗ ಆ ಕ್ಷಣವನ್ನು ನೆನಿತಿರ್ತಾರ ಅಂತ ಅವ್ರ ಮಾರಿ ನೋಡೇ ಹೇಳಬಹುದಿತ್ತು. ಕಾಕಿಯ ಕೆಂಪು ಕೆಂಪಾದ ಮಾರಿ ನೋಡಿ – ‘ಓಹೋ ಬಾಯೀ ಸಾಹೇಬ್ರಿಗೆ ನಾಚಿಗೆಯಾಗ್ಲಿಕ್ಕೆ ಹತ್ತೇದ ಏನು?? ಸರಿ ಬಿಡು.ಹಾಂಗಾರ ನಾನ ಹೇಳ್ತೀನಿ’ ಎನ್ನುತ್ತಾ ಮುಂದಕ್ಕೆ ಸರಿದರು.

‘ ನೋಡವಾ ಸವಿತಾ…ಈಕೀನ್ನ ಇವ್ರವ್ವ-ಅಪ್ಪ ನಮ್ಮ ಹಳ್ಳಿಗೆ ನಮ್ಮ ಕಾಕನ ಮಗ ರಂಗಣ್ಣಗ ತೋರಿಸಲಿಕ್ಕೆ ಅಂತ ಕರಕೊಂಡು ಬಂದಿದ್ರು. ಆದ್ರ ಅವತ್ತ ಭಾರೀ ಮಳಿ ಬಂದ ಕಾರಣ ಬೆಳಗಾವಿನಿಂದ ಬರಬೇಕಾದ ರಂಗಣ್ಣ ಅಲ್ಲೇ ಉಳಿದುಬಿಟ್ಟ. ನಮ್ಮ ಹಳ್ಳಿ ಮತ್ತ ಬೆಳಗಾವಿ ನಡುವ ಇದ್ದ ಘಟಪ್ರಭಾ ನದಿ ತುಂಬಿ ಹರಿದ, ಇದ್ದ ಒಂದ್ ರಸ್ತಾನೂ ಬಂದ್ ಆಗಿ ಬಿಟ್ಟಿತ್ತು. ಇನ್ನ ನಾಕೈದು ದಿನ ಹೀಂಗ ಅಂತ ಗೊತ್ತಾದಾಗ ನಮ್ಮಜ್ಜಿ ನನ್ನ ಕರೆದು- ‘ಶೀನು..ಹೆಣ್ಣಮಕ್ಕಳ ತಂದಿ- ತಾಯಂದಿರ ನೋವು ನಂಗೊತ್ತಪ್ಪ. ಅವರನ್ನ ಹಾಂಗ ಹ್ಯಾಂಗ ಬರಿಗೈಲೆ ಕಳಿಸೋದೂಂತ ತಿಳೀವಲ್ಲತು. ಇನ್ನ ಈ ರಸ್ತಾ ಸರಿಹೋಗಿ ನಿಮ್ಮಣ್ಣ ಯಾವಾಗ ಬರ್ತಾನೋ ಏನೋ?? ಅಲ್ಲೀವರೆಗೆ ಏನು ಮಾಡುದು?? ‘ ಸಾವಿರ ಸುಳ್ಳು ಹೇಳಿ ಒಂದ್ ಮದ್ವಿ ಮಾಡಬೇಕೂಂತಾರೋ ಹಿರೀರು’.. ಅಲ್ಲೋ ಕೇಳಿಲ್ಲೆ ಶೀನೂ..ನೀನ ಹೂಂ ಅಂದು ಬಿಡಪ್ಪ ಸಾಕು ..ಹುಡುಗಿ ಛೋಲೋ ಅದನೋ ’ ಅಂದ್ರು. ಇನ್ನ ದೊಡ್ಡವ್ರು ಹೇಳಿದ ಮ್ಯಾಲೆ ಮರುಮಾತಾಡ ಈಕೀ ಮಾರೀ ಸುದ್ದಾ ನೋಡದ ನಾ ತೆಪ್ಪಗೆ ಹೂಂ ಅಂದು ಬಿಟ್ಟೆ. ಅಷ್ಟ ಅಲ್ಲ…ನನ್ನ ನಶೀಬಕ್ಕ ನಮ್ಮಿಬ್ಬರ ಜಾತಕ ಸುದ್ದಾ ಕೂಡಿ ಬಂತು ಗೊತ್ತದೇನು?? ಹೂಂ…ಮುಂದ ಹ್ಯಾಂಗಪ್ಪಾ ಅಂತ ಯೋಚಿಸಕೋತ ಅಂಗಳದಾಗ ಹೋಗಿ ಮಾಡಾ ತುಂಬಿದ ಕರೆ ಆಕಾಶ ನೋಡ್ಕೋತ ನಿಂತೆ. ಎಲ್ಲಾಕಡೆಗೂ ಕಗ್ಗತ್ತಲಿ. ಎತ್ತಿಗೆ ಜ್ವರಾ ಬಂದ್ರ ಎಮ್ಮೀಗೆ ಬರಿ ಎಳದ್ರಂತ..ಹಂಗಾತಲ್ಲೋ ಶೀನೂ ನಿನ್ನ ಕಥಿ ಅಂತ ಾನಕೋತ ಮುಂದ ನನ್ನ ಜೀವನದಾಗೂ ಹೀಂಗ ಆದ್ರ?? ಅಂತ ನಮ್ಮಣ್ಣನ್ನ ಬೈಕೋತ ನಿಂತಿದ್ದೆ.

ಬೀಗ್ರಿಗೆ ಅಂತ ಅವತ್ತ ರಾತ್ರಿ ಔತಣದ ಊಟ ತಯಾರಾಗ್ಲಿಕ್ಕೆ ಹತ್ತಿತ್ತು. ಮರದಿವ್ಸದ ಮಡೀ ಸೀರೀನ ಒಣಗಿಸಲಿಕ್ಕೇಂತ ನನ್ನ ತಂಗೀ ಜೋಡೀ ಅಟ್ಟಕ್ಕೆ ಹೋಗುತ್ತಿದ್ದ ನಾಗರಹಾವಿನಂಥಾ ಹೆಳ್ಳಿನ ಆ ಹುಡಗೀನ ನೋಡಿದೆ.. ಅಬ್ಬಾ ನೋಡಿದ್ ಕೂಡ್ಲೆ ಮಳೀನೀರು ಮೈ ಮ್ಯಾಲೆ ಬಿದ್ದರೂ ಎಚ್ಚರ ಇಲ್ಲದಂಗ ಅಲ್ಲೇ ನಿಂತು ಬಿಟ್ಟೆ. ನನ್ನ ಎದೀ ಬಡಿತ ನನಗ ಗೊತ್ತಿಲ್ಲದನ ಜೋರಾಗಿಬಿಟ್ತು.. ಅರೇ…ನಾನು ಹೂಂ ಅಂದಿದ್ದು ಈ ಸುಂದರೀಗೆ ಏನು?? ಅಂತ ತಿಳಿದಾಗ ಏನು ಮಾಡಬೇಕೂಂತ ತಿಳಿದ ಸುಮ್ನ ಆಕಿನ್ನ ಕಣ್ಣುಪಿಳುಕಿಸದನ ನೋಡ್ಕೋತ ಆ ಮಳ್ಯಾಗ ನಿಂತು ಬಿಟ್ಟಿದ್ದೆ. ಆಗ ಆಕಿ ಥಟ್ಟಂತ ತಿರುಗಿ ನನ್ನ ಕಡೆ ಒಮ್ಮೆ ನೋಡಿ ಕಿರುನಗಿ ಬೀರಿದಾಗ ಸ್ವರ್ಗ ಒಂದೇ ಗೇಣು…ನನ್ನ ಅದೃಷ್ಟಕ್ಕ ನಾನ ಬೆನ್ನು ಚಪ್ಪರಿಸಿಕೊಂಡಿದ್ದೆ ಹಹಹ…. ಅಣ್ಣಾ ನಿನಗಿಲ್ಲೋ ಈ ಅದೃಷ್ಟ ಅಂತ ಯಾರಿಗೂ ಕಾಣಿಸದಾಂಗ, ಹುಚ್ಚರಹಾಂಗ ಕುಣದೆ. ಪಾಲಿಗೆ ಬಂದದ್ದು ಪಂಚಾಮೃತ ’ ಎಂದೆನ್ನುತ್ತಾ ಅಜ್ಜಿಯ ಪಕ್ಕ ಬಂದು ಕುಳಿತಾಗ ಅವರಿಬ್ಬರ ಮುಖದ ಮೇಲೆ ಸತೋಷ, ಸಂತೃಪ್ತಿಯ ನಗು ಹರಡಿತ್ತು. ಇದನ್ನು ನೋಡಿ ನನ್ನ ಮನದಲ್ಲೂ ಒಂದು ಹೊಸ ಭಾವನೆ ಉದಯಿಸಿತ್ತು. ಪ್ರತಿಯೊಬ್ಬರ ಜೀವನದಲ್ಲಿ ಹೊಸ ಹೊಸ ನಂಟನ್ನು ಸೃಷ್ಟಿಸುವ ಆ ಬ್ರಹ್ಮನ ಗಂಟು ಹೀಗೇ ಗಟ್ಟಿಯಾಗಿರಬೇಕು, ಎಲ್ಲರ ದಾಂಪತ್ಯ ಜೀವನ ಸುಖಮಯವಾಗಬೇಕು ಎಂದು. ಅಜ್ಜ- ಅಜ್ಜಿಯರ ಈ ಮಧುರ ಪ್ರೇಮದ ಬಗ್ಗೆ ಅರಿತ ನಂತರ ಇಂತಹ ಇನ್ನಷ್ಟು ಸಂಬಂಧಗಳ ಬಗ್ಗೆ ತಿಳಿಯುವ ತವಕ ಹೆಚ್ಚುತ್ತಾ ಇದೆ.

ಮುಂದಿನ ಪ್ರಯಾಣದಲ್ಲಿ ಮತ್ಯಾರು ಸಿಗುತ್ತಾರೋ ನೋಡೋಣ.

ಸ್ನೇಹಿತರೇ, ನನ್ನ ಬರಹದ ಬಗ್ಗೆ

ನಿಮ್ಮ ಅನಿಸಿಕೆಗಳನ್ನ ತಿಳಿಸಿ, ಭಾವನೆಯ ಬಳ್ಳಿಯನ್ನು ಬೆಳೆಸಿ.


ಸವಿತಾ ಇನಾಮದಾರ್

Leave a Reply

Back To Top