ಗಝಲ್
ಎ.ಹೇಮಗಂಗಾ
ಪ್ರೇಮಿಗಳ ದಿನವೇಕೆ ? ನಾವಿಬ್ಬರೂ ಪ್ರೇಮಿಸದ ದಿನವೇ ಇಲ್ಲ
ಪ್ರೀತಿಯ ಅಭಿವ್ಯಕ್ತಿಯೇಕೆ ? ಉತ್ಕಟವಾಗಿ ಪ್ರೀತಿಸದ ದಿನವೇ ಇಲ್ಲ
ಸಪ್ತಪದಿಯಲಿ ಒಂದಾದ ನಮಗೆ ಬಾಳು ದೈವ ನೀಡಿದ ಕೊಡುಗೆ
ಬೇರೆ ಉಡುಗೊರೆಯೇಕೆ? ಮುತ್ತಿನ ವಿನಿಮಯವಿರದ ದಿನವೇ ಇಲ್ಲ
ನಿನ್ನೊಲವ ಸಾಗರದಿ ಎಲ್ಲ ಮರೆತು ಮುಳುಗಿಹೋಗಿರುವೆ
ಹೊನ್ನಿನ ತೋಳಬಂದಿಯೇಕೆ? ತೋಳ್ಸೆರೆಯಿರದ ದಿನವೇ ಇಲ್ಲ
ಮಧುಶಾಲೆಯ ಬಾಗಿಲು ಕರೆದರೂ ನೀನತ್ತ ಇನ್ನು ಸುಳಿಯಲಾರೆ
ಮಧುಪಾನದ ಅಮಲೇಕೆ? ಪ್ರೀತಿ ನಶೆಯಿರದ ದಿನವೇ ಇಲ್ಲ
ಪವಿತ್ರ ಬಂಧನದಿ ಬೆಸೆದುಹೋಗಿರೆ ಅಂತರವೆಲ್ಲಿ ನಮ್ಮ ನಡುವೆ?
ಕಾಣದ ಸಗ್ಗದ ಮಾತೇಕೆ? ಮಿಲನ ಸುಖವಿರದ ದಿನವೇ ಇಲ್ಲ
*****************