ನವಿಲನು ಮುಟ್ಟಿದ ಚಿತ್ರ
ಬಿದಲೋಟಿ ರಂಗನಾಥ್
ನವಿಲನು ಮುಟ್ಟಿದ ಚಿತ್ರ
ಅವಳ ನಿಟ್ಟುಸಿರ ಸದ್ದಿನಲಿ
ಬೆವತ ಹೃದಯದ ಬಾಗಿಲು
ಗೆದ್ದಲಿಡಿದು ನೋವಿನಲಿ ಮುಕ್ಕಾಗುತ್ತಿದೆ
ಹಿಡಿದಿದ್ದ ಗುಲಾಬಿಯ ಬಣ್ಣದ ಗುರುತಿನ ಭಾವ
ಗಾಳಿ ಮಳೆ ಬಿಸಿಲಿಗೆ ನಲುಗಿದರೂ ಅಳಿಸುತ್ತಿಲ್ಲ
ಕಾಮನ ಬಿಲ್ಲಿನ ಮೇಲೆ ಇಬ್ಬರೂ ಕೂತು
ನವಿಲನು ಮುಟ್ಟಿದ ಚಿತ್ರ
ಮುಗಿಲ ಮೇಲೆ ಹಾಗೇ ಇದೆ
ತಣ್ಣನೆಯ ಸ್ಪರ್ಶದ ಆ ನಿನ್ನ ನಗು
ಮುಂಗುರುಳ ಮೇಲೆ ಆಡಿಸಿದ ಬೆರಳ ಆಟ
ಕತ್ತಲೆಯಲಿ ಕರಗಿದ ನಮ್ಮಿಬ್ಬರ
ಚಿತ್ತ ದಾರಿಯ ಪಯಣ
ರೆಪ್ಪೆಯಡಿಯ ಗೂಡಲ್ಲಿ ಅವಿತು ಕೂತಿದೆ
ನಮ್ಮಿಬ್ಬರ ನಡುವೆ ಅಡ್ಡಲಾಗಿ ನಿಂತಿದ್ದ
ಆ ಸಣ್ಣ ಗೆರೆಯ ಮೇಲೆ ಯಾವುದೋ ಹೆಜ್ಜೆಯ ಸಪ್ಪಳ
ನೆಲದ ನಡಿಗೆಯ ಬಿರುಸಿಗೆ
ಕೊಂಡಿ ಕಳಚಿಕೊಂಡ ಸಂಬಂಧ.
***********