ವ್ಯಾಲಂಟೈನ್ಸ್ ಡೇ ಸ್ಪೆಶಲ್

ಒಲವು-ಗೆಲುವು

Image result for images of love written in blood

ದೀಪಾಜಿ

ಒಂದು ಕಾಲು ಕೆಜಿಯಷ್ಟು ತೂಗುವ ಗ್ರೀಟಂಗೂ ಕವರಿನಿಂದಾಚೆ ತೆಗೆದೊಡನೆ ಎರಡು ಪುಟದ ಮೇಲೊಂದಂದು ಬಿಳಿ ಪಾರಿವಾಳಗಳು ಪುಟಿದು ಕುಳತದ್ದು ನೋಡುತ್ತಿದ್ದಂತೆ ಮದ್ಯದಲ್ಲಿನ ಅಂಗೈ ಅಗಲದ ಕಡುಗೆಂಪು ಹೃದಯ ಅದರಾಳದೊಳಗಿಂತ ವಾದ್ಯಸಂಗೀತ ಕಿವಿ ದಾಟಿ ಎದೆ ತಾಕುತ್ತದೆ. ಪುಟ ತಿರುಗಿಸಿದರೆ ಜೋಡಿ ಗುಲಾಬಿ ಹೂ ಗಳು ಅದರ ಕೆಳಗೆ ಮೂರು ಸಾಲಿನ ಹನಿಗವನ.

   ಮೂರು ಬಾರಿ ಉಸಿರೆ…. ಉಸಿರೆ.. ಉಸಿರೆ… ಉಸಿರಾಗಿ ಬಾ ಹೆಸರಾಗಿ ಬಾ ಈ ಬರಡು ಬದುಕಿಗೆ ಹಸಿರಾಗಿ ಬಾ..

  ಅಬ್ಬಾ..!!

  ಗ್ರೀಟಿಂಗ್ ಕಾರ್ಡಿನ ಎನ್ವಲಪ್ ಕವರಿನೊಳಗಡೆ ಇನ್ನೂ ಭಾರ ಉಳಿದಿದೆ ಕೈ ಹಾಕಿದರೆ ಒಂದು ಡಾರ್ಕ್ ಚಾಕಲೇಟ್ ಮತ್ತೊಂದು ಒರಟು ಒರಟಾದ ನಾಲ್ಕು ಮಡಿಕೆಯ ಹಾಳೆ.

    ಎರಡನ್ನು ಹೊರ ತೆಗೆದು ಹಾಳೆಯ ಮಡಿಕೆಗೆಳನ್ನ ಬಿಚ್ಚಿದರೆ ಬಿಳಿ ಹಾಳೆಯ ತುಂಬ ರಕ್ತದೋಕುಳಿ ..! 

 “I LOVE YOU MY LOVE ❤

ಎಂಬ ಪದಗಳು ಒಂದು ಹೃದಯದ ಚಿತ್ರ, ರಕ್ತ ಮರಗಟ್ಟಿದ ಹಾಳೆ ಮುಖಕ್ಹಿಡಿದು ಓದುತ್ತಿದ್ದಂತೆ ಅರೆಕ್ಷಣ ತಲೆ ಗಿರ್ರನೆ ತಿರುಗಿ ನಿಂತಂತಾಯಿತು, ಭಯ ಉದ್ವೇಗ ಒಂದಾಗಿ ಎದುರಿಗಿದ್ದ ಪ್ರೇಮ ನಿವೇದಕನ ಕೈ ಗಮನಿಸಿದರೆ ಬಲಗೈ ಮದ್ಯದ ಮೂರು ಬೆರಳುಗಳು ಶ್ವೇತ ವರ್ಣದ ಬ್ಯಾಂಡೇಜಿನೊಳಗಡೆ ಮುಲುಗಿ ಮಲಗಿದ್ದವು. ಪ್ರೀಯತಮನ ಈ ವಿಕಾರವನ್ನ ಕಂಡ  ಹೂವಿನಂತ ಹುಡುಗಿ ಕೈಲಿದ್ದ ಗ್ರೀಟಿಂಗು ಚಾಕಲೆಟ್ ಅವನ ರಕ್ತ ಸಿಕ್ತ ಪತ್ರ ಎಲ್ಲ ಅಲ್ಲೆ ಕೈ ಬಿಟ್ಟುಬಿಟ್ಟಳು..

    ಮತ್ತೆಂದೂ ಅವನ ದೃಷ್ಟಿ ಎದುರಿಸಲೇ ಇಲ್ಲ.

                          *

     ರಕ್ತದಲ್ಲದ್ದಿ ಬರೆದ ಪ್ರೇಮ ಪತ್ರಗಳು, ದುಬಾರಿ ಉಡುಗೊರೆಗಳು, ಪ್ರೀತಿಯ ಮಾನದಂಡಗಳಾ? ಪ್ರೀತಿಯ ತೂಕವನ್ನು ಹೆಚ್ಚಿಸಿ ಬಿಡಬಲ್ಲವಾ? ಪ್ರೀತಿಗೆ ಅಳತೆಗೋಲು ಯಾವುದು? ಪ್ರೇಮ ನಿವೇದನೆಯ ಪ್ರಕ್ರಿಯೆ ಹೇಗಿರಬೇಕು? ಪ್ರೀತಿಗಿಂತಲೂ ಹೆಚ್ಚು ಇಂತ ವಿಷಯಗಳೆ ಯುವ ಪ್ರೇಮಿಗಳನ್ನು ಹಾಳುಗೆಡುವುತ್ತಿವೆ.

   ಈ ಮೇಲಿನ ಯಾವ ಪ್ರಶ್ನೆಗೂ ನನ್ನ ಬಳಿಯು ಉತ್ತರವಿಲ್ಲ. ನನ್ನ ಬಳಿ ಅಷ್ಟೆ ಅಲ್ಲ ಬೇರಾರ ಬಳಿಯು ಈ ಪ್ರಶ್ನೊತ್ತರ ಮಾಲಿಕೆಗೆ ಸಿದ್ಧ ಉತ್ತರಪಟ್ಟಿಯೊಂದು ಸಿಗಲಾರದು. ಕಾರಣ ಇದು ಪ್ರೀತಿಯ ವಿಷಯ.

    ಪ್ರೀತಿ ಮನುಷ್ಯ ಪ್ರಾಣಿಯಲ್ಲಡಗಿರುವ ಅಷ್ಟು ಭಾವನೆಗಳಲ್ಲೆ ಅತ್ಯಂತ ಶ್ರೀಮಂತ ಭಾವನೆ,  ಅದಕ್ಕೆ ಆಕರ್ಷಣೆ,ಕಾಮ,‌ಮೋಹ, ಉನ್ಮಾದ, ಅತಿರೇಖಗಳನ್ನ ಲೇಪಿಸಿ ದಿನೆ ದಿನೆ ಪ್ರೀತಿಯ ವ್ಯಾಖ್ಯಾನವನ್ನು ಸಂಕುಚಿತಗೊಳಿಸುವ ಪ್ರಯತ್ನ ಎಗ್ಗಿಲ್ಲದೆ ನಡೆದಿದೆ.

   ಈ ಪ್ರೀತಿ, ಒಲವು, ಮಮಕಾರ, ಅಂತಃಕರಣ, ಬಾಂಧವ್ಯ ಇಂತವಕ್ಕೆಲ್ಲ ಯಾವ ಚೌಕಟ್ಟುಗಳು ಇಲ್ಲ ಪದಪುಂಜಗಳ ಬಂಧನದೊಳಗೆ ಇವು ನಿಲ್ಲಲಾರವು,

ಅಸಲು ಪ್ರೀತಿಗೆ ಇಂತದ್ದೆ ಎಂಬ ಬಂಧನ ನಿರ್ಬಂಧಗಳಿಲ್ಲವಾದ್ದರಿಂದ ಪ್ರೀತಿಯನ್ನ ಒಂದು ಪದದಲ್ಲಿ ಹೇಳಿದರೂ ಮುಗಿದೀತು ಇಲ್ಲವೆ ನಾಲ್ಕಾರು ಪುಟ ಪ್ರಬಂಧ ಬರೆದರೂ ಹೇಳುವುದಿನ್ನೂ ಉಳಿದೀತು.

      ಅದು ಹೂವಿನಂತೆ, ನಾವೇ ಬೆಳೆಸಿದ ಕುಂಡಲದಲ್ಲು ಅರಳಿಬಿಡಬಹುದು ಇಲ್ಲವೇ ಸ್ಮಶಾನದ ಬೇಲಿಯಲ್ಲು ಅರಳಿ ನಿಂತುಬಿಡಬಹುದು.ಪ್ರೀತಿಸ ಹೊರಟವರು ಮಾತ್ರ ಅಂತದೆ ಹೂ-ಮನಸ್ಸೊಂದನ್ನು ಕಾಯ್ದುಕೊಳ್ಳುವುದು ಮಾತ್ರ ಬಹುಮುಖ್ಯ. ನಾನವರನ್ನು ಪ್ರೀತಿಸುತ್ತೇನೆ ಅದಕ್ಕಾಗೆ ಎದುರಿನ ಆಕೆ/ಅವನು ನನ್ನನ್ನು ಪ್ರೀತಿಸಬೇಕೆಂಬುದು ಮಹಾ ದಡ್ಡ ಪ್ರೇಮಿಯ ನಿರೀಕ್ಷೆ. ಪ್ರೀತಿ ಕೊಡುವ ಸರಕೆ ಹೊರತು, ಇಸಿದುಕೊಳ್ಳುವ, ಪಡೆಯುವ, ನಿರೀಕ್ಷಿಸಿ ನಿಂತು ಹೊತ್ತು ತರುವ ಮಾಲಲ್ಲ.  ಪ್ರೀತಿ, ಅಕ್ಕ- ಚೆನ್ನಮಲ್ಲಿಕಾರ್ಜುನನ ಪ್ರೇಮಿಸಿದ ಪರಿಯಂತದ್ದು, ಪ್ರೀತಿ ಮೀರೆಯು ಕೃಷ್ಣನಿಗೆ ನುಡಿಸಿದ ತಂಬುರಿ ನಾದದಂತದ್ದು, ಅದಕ್ಕೆ ಆಕಾರವಿಲ್ಲ ಅನುಭವ-ಅನುಭಾವವಿದೆ ಅಷ್ಟೆ.

    ಅಂಚೆ,ತಂತಿ,ಮೊಬೈಲ್, ವಾಟ್ಸಾಪ್, ಇದ್ಯಾವುದು ಇಲ್ಲದ ಕಾಲದಲ್ಲೂ ಭುಮಿಯ ಮೇಲೆ ಅತ್ಯಂತ ಶ್ರೇಷ್ಠ ಪ್ರೇಮಿಗಳು ಬದುಕಿ ಹೋಗಿದ್ದಾರೆ. ಸಂವಹನ ಸಂಪರ್ಕದ ಗಾಳಿಗೆ ಸಿಕ್ಕು ಮಧುರ ಪ್ರೇಮ ಒಂದು ಸೋಂಕು ತಗಲಿ ಗಾಸಿಯಾಗದಿರಲಿ, ಸಣ್ಣ ಪುಟ್ಟ ಅಹಂಕಾರ ಜಂಭಗಳಿಗೆ ಜೋತು ಬಿದ್ದು ಪವಿತ್ರ ಪ್ರೇಮಿಗಳು ಬೆನ್ನು ಮಾಡಿ ಹೊರಟು ನಿಲ್ಲದಿರಲಿ.

    ನಿವೇದಿಸಿದ ಪ್ರೀತಿ ದಕ್ಕಲಿಲ್ಲವೇ..? ಅದು ಸಿದ್ಧಿಸದಷ್ಟು ಕಾಲ ನೀವು ಉತ್ಖಟ ಪ್ರೇಮದ ತುತ್ತತುದಿಯ ತಂಗಾಳಿಗೆ ಎದೆಒಡ್ಡಿ ನಿಂತು ಆಸ್ವಾದಿಸಬಲ್ಲಿರಿ. ನಿಮ್ಮ ಮನದ ಕಣ್ಣಿಗೆ ಬಣ್ಣಬಣ್ಣದ ಕನಸುಗಳ ಹಾರ ತೊಡಿಸಬಲ್ಲಿರಿ.

   ದೈಹಿಕ ವಾಂಛೆಗಳಿಗೂ ನಿರ್ಮಲ ಪ್ರೀತಿಗೂ ಅಜಗಜಾಂತರ ಅಂತರವಿದೆ. ವಯೋ ಸಹಜ ದೈಹಿಕ ವಾಂಛೆಗೆ ಪ್ರೀತಿ ಎಂಬ ಹೆಸರಿಟ್ಟು ನಿಮ್ಮ‌ pure infatuation ನ್ನ ಹರಿಬಿಡದಿರಿ..

  ‌   ಪ್ರೀತಿ ಪಾತ್ರರೂ ಎಲ್ಲೆ ಇರಲಿ ಅವರ    ನೆಮ್ಮದಿಗಾಗಿ ನಿಮ್ಮದೊಂದು ಶುದ್ಧ ಪ್ರಾರ್ಥನೆ, ಮತ್ತೆನನ್ನೋ ಮಾಡುತ್ತೇನೆಂದು ಹೊರಟಾಗ ಒಂದೊಳ್ಳೆ ಶುಭ್ರ ಅಭಿನಂದನೆ, ಸಂಕಷ್ಟ ಎಂದು ಬಳಿಸುಳಿದಾಗ ಅಪ್ಪಿ ಬೆನ್ನು ಸವರಿ ನಾನಿದ್ದೇನೆ ಎಂಬ  ಸಣ್ಣ  ಭರವಸೆಯ ಬಿಗಿತ, ದುಃಖ ಎಂದು ಕಣ್ಣಪಸೆ ತೋರಿದಾಗ ಹಣೆಗೊಂದು ಮೃದು ಮುತ್ತಿನ ನವಿರು ಸ್ಪರ್ಶ‌ ಇಷ್ಟೇ ಶ್ರೀಮಂತ ಪ್ರೀತಿಯ ಪ್ರತೀಕಗಳು ಇದ್ಯಾವುದು ಸಾಧ್ಯವಿಲ್ಲದ ಸ್ಥಿತಿ  ನಿಮ್ಮದಾಗಿದ್ದರೆ ಒಂದು ಹಾರೈಕೆಯು ಸಾಕು ನಿಮ್ಮ ಪ್ರೇಮಿ ಗೆದ್ದು ಬರಲು.

    ಎಲ್ಲಾ ಪ್ರೇಮಗಳು ಮಧುವೆಯಲ್ಲೆ ಅಂತ್ಯವಾಗಬೇಕೆಂಬ ಹಂಬಲ ಬೇಡ ಪರಸ್ಪರರೆಡಿನ ಗೌರವದ ನೋಟವು ಜೀವನದುದ್ದಕ್ಕೂ ಆ ಪ್ರೀತಿಯನ್ನ ಜೀವಂತ ಉಳಿಸಿ ಗೆಲ್ಲಿಸಿ ಬಿಡುತ್ತದೆ..

 ‌‌   ಒಲವೆ ನಮ್ಮ ಬದುಕು

 ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು..

   ಬೇಂದ್ರೆ ಅಜ್ಜ ಹೇಳುವಂತೆ, ಈ ಒಲವೆ ಬದುಕಲು ಸಾಕಷ್ಟಾಯಿತು.

************************

2 thoughts on “ವ್ಯಾಲಂಟೈನ್ಸ್ ಡೇ ಸ್ಪೆಶಲ್

Leave a Reply

Back To Top