ಕಾವ್ಯಯಾನ

ಗಝಲ್

Shallow Focus Photo of Pink Ceramic Roses

ಸುಜಾತಾ ಲಕ್ಮನೆ

ಗಜಲ್


ಕದ್ದು ಕದ್ದು ನೋಡುತ್ತ ಎಗ್ಗಿಲ್ಲದೇ ಕಿರುನಗೆ ತೂರಿದ್ದು ಅವನೇನಾ
ಕದಪು ಕೆಂಪಾಗಿಸಿ, ಊರ ತೇರಲ್ಲಿ ಹಿಂದ್ಹಿಂದೆ ಬಂದಿದ್ದು ಅವನೇನಾ

ಚುಮು ಚುಮು ಚಳಿಯ ಮುಂಜಾನೆಗೂ ಬೆಚ್ಚನೆಯ ಕನಸು
ಮೈಯೆಲ್ಲ ಚುಂಗೇರುವಂತೆ ಕಣ್ ಮಿಟುಕಿಸಿ ನಕ್ಕಿದ್ದು ಅವನೇನಾ

ಒರತೆ ಕಾಣದ ಒಡಲಾಳವೆಲ್ಲ ನೀರು ನೀರಾದ ಅನುಭಾವವೆನಗೆ
ಒಸರುವ ಜೀವ-ಭಾವಗಳಿಗೆ ಸುಖದಮಲು ತುಂಬಿದ್ದು ಅವನೇನಾ

ಹಿಡಿತ ತಪ್ಪಿ, ತೇಲಾಡಿ ಎಲ್ಲೆಂದರಲ್ಲಿ ಮನ ಬೀಡುಬಿಟ್ಟ ಕ್ಷಣಗಳೆಷ್ಟೋ
ಎನ್ನೆಲ್ಲ ತುಮುಲಗಳಿಗೆ ದಿಕ್ಕು ದಿಕ್ಕಾಗಿ ಒಡ್ಡು ಕಟ್ಟಿದ್ದು ಅವನೇನಾ

ಬೆಳಗೇರಿದಂತೆ ಇಬ್ಬನಿಯ ಮೈಯೊಳಗೆ ಹನಿ-ಹನಿಯಾಗುವ ಭಯ
ಬೆಡಗು ಬೆರಗನೆ ಬೆರೆಸಿ ಬರಸೆಳೆದು ಬೆಳಕನ್ನೆ ಬೀರಿದ್ದು ಅವನೇನಾ

ವರುಷಕ್ಕೊಂದೇ ದಿನ ಸಾಕೆ ಪ್ರೇಮಿಗಳ ದಿನದ ಸಂಭ್ರಮಾಚರಣೆಗೆ
ಹರುಷವನೆ ತೂಗುತ್ತ ದಿನನಿತ್ಯ ಸುರಚಾಪ ತೋರಿದ್ದು ಅವನೇನಾ

“ಸುಜೂ” ಕಟ್ಟಿ ಹಾರಿಸಿದ ಗಾಳಿಪಟದ ಬಾಲಕ್ಕೂ ಸೊಕ್ಕೇರಿದೆ ಇಂದು
ಸೊಗ ಸುರಿ ಸುರಿದು ಬಣ್ಣ ಬಣ್ಣದ ಬಯಕೆಗಳ ಬಿತ್ತಿದ್ದು ಅವನೇನಾ

**********

Leave a Reply

Back To Top