ಅನುವಾದಿತ ಕವಿತೆ-ಉರ್ದೂ…!

ಅನುವಾದ ಸಂಗಾತಿ

ಅನುವಾದಿತ ಕವಿತೆ-ಉರ್ದೂ…!

ಉರ್ದೂ ಮೂಲ : ಗುಲ್ಜಾರ್
ತೆಲುಗು ಸ್ವೇಚ್ಛಾನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡಾನುವಾದ : ಧನಪಾಲ ನಾಗರಾಜಪ್ಪ

ಉರ್ದೂ…!
(ಅನುವಾದಿತ ಕವಿತೆ)

ನೀವೇ ಹೇಳಿ…!
ಇದೆಲ್ಲಿಯ ಮೊಹಬ್ಬತ್ ನನಗೆ ಉರ್ದೂ ಅಂದರೆ?
ಬಾಯಲ್ಲಿ ಕಮ್ಮಗೆ ಊರುತ್ತ ಕರಗಿಹೋಗುವ
ಪಾನ್ ಮಧುರ ರಸದಂತಿರುತ್ತವಲ್ಲಾ ಈ ಉರ್ದೂ ಪದಗಳು!

ಮತ್ತು ಆವರಿಸುವುದೇಕೆ ಉರ್ದೂ ಮಾತಾಡುವಾಗ?
ಒಳ್ಳೆಯ ಕಶ್ಮೀರಿ ಖಿಮಾಂ ಪಾನಿನ ಗಾಢವಾದ ಸ್ವಾದದಂತೆ
ಬಾಯಲ್ಲಿ ಬೆರೆಯುತ್ತಿರುವಾಗಲೇ
ಭಿನ್ನವಾದ ಭಾವಾರ್ಥಗಳನು ಮನೋಹರವಾಗಿ ಸೂಸುವುದು!

ಅಷ್ಟೇ ಯಾಕೆ..?
ಉರ್ದೂ ಮಾತುಗಳು ತುಟಿಗಳನು ತಾಕಿದೊಡನೆ
ಸವಿಯಾದ ದ್ರಾಕ್ಷಾರಸ ಗಂಟಲಲ್ಲಿ
ಗುಟುಕುಗಳಾಗಿ ಇಳಿದಂತಿರುವುದು!

ನಿಜ ಹೇಳಬೇಕೆಂದರೆ…
ಏನೋ ಉತ್ಕೃಷ್ಟವಾದ ಗುಣವಿದೆ ಉರ್ದೂವಿನಲ್ಲಿ!
ಮಾತನಾಡುವ ಮನುಷ್ಯನಿಗೆ
ಫಕೀರತನದಲ್ಲೂ ನವಾಬನ ದರ್ಪ ಕೊಡುತ್ತದೆ!

ಅಪರೂಪಕ್ಕೆ ಪದಗಳ ಅರ್ಥ ಸಿಗದಿದ್ದರೂ
ಬಲವಾದ ಕಂಠದಿಂದ ಧ್ವನಿಯೆತ್ತಿದ ಮೇಲೆ ನೋಡಿಕೊಳ್ಳಿ
ಪುಷ್ಕಳವಾದ, ಗಂಭೀರವಾದ ಪದಗಳ ಝರಿಯಾಗಿ ಹರಿಯುವುದು ಉರ್ದೂ!

ದೂರದಿಂದ ಎಲ್ಲಿಂದಲೋ…
ಗಾಳಿಯಲ್ಲೊಂದು ಉರ್ದೂ ಗಜಲ್ಲೋ, ಶಾಯರಿಯೋ ಕೇಳಿಸುತಿದೆ ಎಂದುಕೊಳ್ಳಿ
ಆಗ ಇನ್ನು ಹೇಗಿರುತ್ತದೆ ಎನ್ನುವಿರಿ?
ಶೀತಕಾಲದ ಚಳಿಯಲಿ ಓರೆಯಾಗಿ ತೆರೆದುಕೊಂಡ ಕಿಟಿಕಿಯೊಳಗೆ
ಬೆಚ್ಚಗಿನ ಬಿಸಲು ಬಳಕುತ ಬಂದಂತಿರುವುದು

ಎಷ್ಟು ಆಶ್ಚರ್ಯ…
ಎಷ್ಟು ಅದ್ಭುತವು…
ಈ ಉರ್ದೂ ಅಂದರೆ!
ಹಾಗೆ ನೆಮ್ಮದಿಯಾಗಿ ಮೈಮರೆತು
ಗಲ್ಲಿಯಲಿ ನಡೆದುಕೊಂಡು ಹೋಗುತಿರುವ
ಒಂದು ಊರೂ ಹೆಸರೂ ತಿಳಿಯದ ದಾರಿಹೋಕ
ಇದ್ದಕ್ಕಿದ್ದಂತೆ ಒಂದು ಮಿರ್ಜಾ ಗಾಲೀಬನ ಷೇರ್ ಶುರುವಿಟ್ಟುಕೊಂಡರೆ
ಮತ್ತಿನಲ್ಲಿ ಮೈಮರೆತವನಂತೆ ಹಾಡುವನು!
ಆಗ ಅವನು ಅಪರಿಚಿತನಾದರೂ…
ಹೇಳಿ ಅಸಲು ಈ ದೇಶಕ್ಕವನು ಹೇಗೆ ಪರದೇಸಿಯಾಗುವನು?
ಅವನು ನನ್ನ ತಾಯ್ನೆಲದವನೇ ಆಗುವನಲ್ಲವೇ!

ಸೌಂದರ್ಯಭರಿತವಾದ ಅಲ್ಫಾಜಗಳೊಡನೆ
ಷೇರ್, ಶಾಯರಿ, ಟುಂರಿ, ಗಜಲ್ಲುಗಳೊಡನೆ
ಸಭ್ಯವಾದ, ವಿನಮ್ರವಾದ ಪದಗಳೊಡನೆ
ಸಂಪದತ್ವವಾಗಿ ಪರಿಮಳಿಸುವ ಉರ್ದೂ ಕೇಳಿಸುತ್ತಿದ್ದರೆ
ಈ ದೇಶದ ಸಂಸ್ಕೃತಿ, ನಾಗರಿಕತೆಯನು ಹೊರುತಿರುವ
ಒಂದು ಹಿಂದೂಸ್ಥಾನಿ ಭಾಷಾ ವಾರಧಿ
ಈ ಉರ್ದೂ ಎಂದೆನಿಸದೆ ಇನ್ನೇನಿಸುವುದು?
ಅಪರೂಪವಾಗಿ ಎದೆಗೊತ್ತಿಕೊಳ್ಳಬೇಕೆನಿಸದೆ
ಬೇರೆ ಹೇಗೆ ಅನಿಸುವುದು?


ಉರ್ದೂ ಮೂಲ : ಗುಲ್ಜಾರ್

ತೆಲುಗು ಸ್ವೇಚ್ಛಾನುವಾದ : ಗೀತಾಂಜಲಿ (ಡಾ|| ಭಾರತಿ)

ಡಾ|| ಭಾರತಿ :- ಇವರು ಹುಟ್ಟಿದ್ದು ಹೈದರಾಬಾದಿನಲ್ಲಿ. ಗೀತಾಂಜಲಿ ಎಂಬುವುದು ಇವರ ಕಾವ್ಯನಾಮ. ವೃತ್ತಿಯಿಂದ ಇವರು ಸೈಕೋಥೆರಾಪಿಸ್ಟ್ ಮತ್ತು ಮ್ಯಾರಿಟಲ್ ಕೌನ್ಸಲರ್ ಆಗಿದ್ದಾರೆ. ‘ಆಮೆ ಅಡವಿನ ಜಯಂಚಿಂದಿ’ (ಆಕೆ ಅಡವಿಯನ್ನು ಗೆದ್ದಳು-ಕಾದಂಬರಿ), ‘ಪಾದಮುದ್ರಲು’ (ಪಾದಮುದ್ರೆಗಳು-ಕಾದಂಬರಿ), ಲಕ್ಷ್ಮಿ (ಕಾದಂಬರಿ), ‘ಬಚ್ಚೇದಾನಿ’ (ಗರ್ಭಾಶಯ- ಕಥಾ ಸಂಕಲನ), ‘ಪಹೆಚಾನ್’ (ಮುಸ್ಲಿಂ ಸ್ತ್ರೀಯರ ಕಥಾ ಸಂಕಲನ), ‘ಪಾಲಮೂರು ವಲಸ ಬತುಕು ಚಿತ್ರಾಲು’ (ಪಾಲಮೂರು ಬಲಸೆ ಬದುಕಿನ ಚಿತ್ರಗಳು – ಕಥಾ ಸಂಕಲನ), ‘ಹಸ್ಬೆಂಡ್ ಸ್ಟಿಚ್’ (ಸ್ತ್ರೀ ವಿಷಾದ ಲೈಂಗಿಕ ಗಾಥೆಗಳು), ‘ಅರಣ್ಯ ಸ್ವಪ್ನಂ’ (ಕವನ ಸಂಕಲನ) ಇವು ಇವರ ಕೃತಿಗಳು. ಇವರ ಸಾಹಿತ್ಯ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಗಿದೆ.

ಕನ್ನಡಾನುವಾದ : ಧನಪಾಲ ನಾಗರಾಜಪ್ಪ

One thought on “ಅನುವಾದಿತ ಕವಿತೆ-ಉರ್ದೂ…!

Leave a Reply

Back To Top