ಅಂಕಣ ಸಂಗಾತಿ

ಕುಸುಮ ಮಂಜುನಾಥ್

ಸಿನಿ ಸಂಗಾತಿ

ದಿ ಗ್ರೇಟ್  ಇಂಡಿಯನ್ ಕಿಚನ್ (ಮಲಯಾಳಂ) 

ಅದೊಂದು ಅಡಿಗೆಮನೆ ಅಲ್ಲಿ ಹೊತ್ತು ಹೊತ್ತಿಗೆ ಬಗೆ ಬಗೆಯ ಖಾದ್ಯಗಳು ತಯಾರಾಗುತ್ತವೆ ದೋಸೆ ಉಯ್ಯಲಾಗುತ್ತೆ, ಮಸಾಲೆ ಬೇಯಿಸಲಾಗುತ್ತೆ, ಶಾವಿಗೆ ಒತ್ತಲಾಗುತ್ತೆ, ಆ ಮನೆಯ ಒಡತಿಗೆ ಬಿಡುವಿಲ್ಲದ ದುಡಿತ. ಹೊತ್ತಿಗೂ ಕೆಲಸ , ಅಡುಗೆ ಮಾಡುವುದು ,ಮನೆಯನ್ನು ಸ್ವಚ್ಛಗೊಳಿಸುವುದು ,ಬಟ್ಟೆ ಒಗೆಯುವುದು ಇತ್ಯಾದಿ ,ಇತ್ಯಾದಿ ….ಆ ಮನೆಯ ಗಂಡಸರೋ ಶತಸೋಮಾರಿಗಳು, ತಾವು ತಿಂದ ತಟ್ಟೆಯನ್ನು ಎತ್ತಿಡಲಾರದವರು. ತಟ್ಟೆಯಲ್ಲಿ ಉಳಿದ ಪದಾರ್ಥಗಳನ್ನು ಹಾಗೆ ಬಿಟ್ಟು ಸ್ವಚ್ಛಗೊಳಿಸದೆ ಓಡುವವರು. ಅವರ ತಟ್ಟೆಗಳನ್ನು ತೊಳೆದು ಶುಭ್ರಗೊಳಿಸಿ ಮನೆಯನ್ನು ನೋಡಿಕೊಳ್ಳುವುದು ಗೃಹಿಣಿಯ ಕೆಲಸ ಎಂಬುದು ಆ ಮನೆಯ ವಾಸಿಗಳಾದ ತಂದೆ ಮಗನ ಭಾವನೆ. ಆ ಮನೆಯಲ್ಲಿ ಬೇಯುವವರು ಇಬ್ಬರು ಅವರೇ ಅತ್ತೆ ಹಾಗೂ ಸೊಸೆ.

              ಹೊಸದಾಗಿ ಮನೆ ತುಂಬಿಸಿಕೊಂಡ ಸೊಸೆಯ ದಿನಚರಿಯ ಚಿತ್ರಣ ದೊಂದಿಗೆ ಚಿತ್ರದ ಆರಂಭ . ಅತ್ತೆ ಮಾವ ಹಾಗೂ ಈ ನವ ದಂಪತಿಯರ ಮಧ್ಯಮವರ್ಗದ ಸಂಸಾರದಲ್ಲಿ ಹೆಣ್ಣು ಮಕ್ಕಳದು ಕೊನೆ ಮೊದಲಿಲ್ಲದ ದುಡಿತ, ತನ್ನ ಗಂಡನ ಬ್ರಶ್ ಗೆ ಟೂತ್ಪೇಸ್ಟ್ ಹಾಕಿ ತಂದು ಕೊಡುತ್ತಾಳೆ ಅತ್ತೆ , ಪತಿ ಹೊರಟಾಗ ಚಪ್ಪಲಿಯನ್ನು ತಂದು ಮುಂದಿಡುತ್ತಾರೆ ಆಕೆ.

ಬಗೆ ಬಗೆಯಾದ ರುಚಿಯಾದ ಅಡುಗೆ ದಿನವೂ ತಯಾರಾಗುತ್ತದೆ, ತಿಂದುಂಡು ಹಾಗೆ ಎದ್ದು ಹೋಗುತ್ತಾರೆ ಆ ಮನೆಯ ಗಂಡಸರು .

              ಹೊಸದಾಗಿ ಆ ಮನೆ ಸೇರುವ ಯುವತಿ ಆಧುನಿಕಳು, ಸ್ವತಂತ್ರಳಾಗಿ ಯೋಚಿಸ ಬಲ್ಲವಳು, ತನ್ನ ಕಾಲ ಮೇಲೆ ತಾನು ನಿಲ್ಲಲು ನೃತ್ಯ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಲು ಅಪೇಕ್ಷಿಸುತ್ತಾಳೆ. ಆದರೆ ಅವಳ ಮಾವನಿಂದ ಅದಕ್ಕೆ ವಿರೋಧ ಬರುತ್ತದೆ, ಮನೆಯ ಹೆಣ್ಣು ಮಕ್ಕಳು ಮನೆ ಕಾರ್ಯಗಳನ್ನು ಮಾಡುತ್ತಾ, ಮಕ್ಕಳ ಲಾಲನೆ ಪೋಷಣೆ ಮಾಡ್ತಾ ಮನೆಯಲ್ಲಿ ಉಳಿಬೇಕು ಎಂಬುವುದು ಅವರ ತಾಕೀತು. ಈ ಮನೆಯ ವಿದ್ಯಮಾನಗಳು ಅವಳಿಗೆ ಅಚ್ಚರಿ ತಂದರೂ ಹೊಂದಿಕೊಳ್ಳಲು ಪ್ರಯತ್ನಿಸುತ್ತಾಳೆ ಆಕೆ. ತನ್ನ ಅತ್ತೆ ದೂರದ ಮಗಳ ಮನೆಗೆ ತೆರಳಿದಾಗ, ಮನೆಯ ಸಮಸ್ತ ಜವಾಬ್ದಾರಿ ಹೊರಬೇಕಾಗುತ್ತದೆ ಅವಳು.

. ಆಧುನಿಕ ಪರಿಸರಗಳೆಲ್ಲವಿದ್ದರೂ ಅಲ್ಲಿ ಯಾವುದನ್ನು ಬಳಸುವಂತಿಲ್ಲ ದೋಸೆಗೆ ಕಲ್ಲಿನಲ್ಲಿ ಅರೆದ ಚಟ್ನಿಯೇ ಆಗಬೇಕು, ಅಡುಗೆ ಮಾಡಲು ಸೌದೆ ಒಲೆಯೇ ಉರಿಯಬೇಕು, ಬಟ್ಟೆ ಶುಚಿಗೊಳಿಸಲು ವಾಷಿಂಗ್ ಮೆಷಿನ್ ಬಳಸುವಂತಿಲ್ಲ, ಯಾರ ಸಹಾಯವಿಲ್ಲದೆ ವಿಶಾಲವಾದ ಆ ಮನೆಯ ಕೆಲಸ ಕಾರ್ಯಗಳಲ್ಲಿ ತೊಡಗಿ ಸಾವಕಾಶವಾಗಿ ಅಲ್ಲಿ ಬೇಯುವ ಬೆಳೆಯಂತೆ ಅವಳು ಬೇಗೆಯಿಂದ ಬೇಯುತ್ತಾಳೆ. ಹಗಲಿನಲ್ಲಿ ಎಡೆಬಿಡದೆ ದುಡಿತ, ರಾತ್ರಿಯಲ್ಲಿ ಪತಿಯೊಡನೆ ಯಾಂತ್ರಿಕ ಸರಸ ಸಲ್ಲಾಪ , ಮನಸಿದ್ದೋ ಮನಸಿಲ್ಲದೆಯೋ ಪತಿಯ ಕಾಮ ತೃಷೆ ಯನ್ನು ಇಂಗಿಸಬೇಕಾದ ಅನಿವಾರ್ಯ, ಈ ಹೆಣ್ಣು ಮಗಳಿಗೆ  ಸ್ವಲ್ಪ ವಿಶ್ರಾಂತಿ ಸಿಗುವುದು ಅವಳ ಋತುಚಕ್ರದ ಮೂರು ದಿನಗಳಲ್ಲಿ ಮಾತ್ರ.

        ಇಂತಿರುವ ಹೆಣ್ಣು ಮಗಳ ಜೀವನದಲ್ಲಿ ತನ್ನ ದಯನೀಯ ಸ್ಥಿತಿಯ ವಿರುದ್ಧವಾಗಿ ಬಂಡೆದ್ದು ಪ್ರತಿಕ್ರಿಯಿಸುವ ಪರಿಸ್ಥಿತಿ ಬರುತ್ತದೆ.

          ತನ್ನ ಅಡುಗೆ ಮನೆಯಲ್ಲಿ ರಿಪೇರಿ ಮಾಡದೆ ಉಳಿದ ಬಚ್ಚಲಿನ ನೀರನ್ನು ತನ್ನ ಗಂಡ ಹಾಗೂ ಮಾವನ ಮೇಲೆ  ಎರಚುವ ಮೂಲಕ ಬಂಡಾಯ ಸಾರುವ ಆ ಹೆಣ್ಣು ಮಗಳು ತನ್ನ ಸೀಮಿತ ಪರಧಿಯನ್ನು ದಾಟಿ ಹೊರ ಬರುತ್ತಾಳೆ .

ಹೀಗೆ ಆ ಮನೆಯಿಂದ ಹೊರ ಬೀಳುವ ಹೆಣ್ಣು ಮಗಳು ತನ್ನ  ಬದುಕನ್ನು ಮತ್ತೆ ರೂಪಿಸಿಕೊಳ್ಳುವಳೇ? , ಮೂಗೆತ್ತಿನಂತೆ ದುಡಿಯಲು ತನ್ನನ್ನು ಒಗ್ಗಿಸಿಕೊಂಡಿದ್ದ ಒಡ್ಡಿಕೊಂಡಿದ್ದ ಆ ಹೆಣ್ಣು ಮಗಳು ಹೊರಬರುವಂತೆ ಪ್ರೇರೇಪಿಸಿದ ಸನ್ನಿವೇಶಗಳು ಯಾವುವು ??ಇವು ಚಿತ್ರದ ಕುತೂಹಲಕಾರಿ ಅಂಶಗಳು.

         ಇದು ಕೇರಳದ ಸುಂದರ ಪರಿಸರದ ಮಧ್ಯಮ ವರ್ಗದ ಹಿಂದೂ ಸಮಾಜದ ಮನೆಯೊಂದರ ಕಥೆಯ ಚಿತ್ರಣ ಈ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳಿಲ್ಲ .ಆಧುನಿಕ ಸಮಾಜದಲ್ಲಿ ಗಂಡಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ದುಡಿಯುತ್ತಾ  ಹೆಣ್ಣು ಪ್ರಗತಿ ಸಾಗಿಸುತ್ತಿರುವುದು ಒಂದೆಡೆಯಾದರೆ ಭಾರತೀಯ ಸಮಾಜದಲ್ಲಿ ಕೇವಲ ಅಡುಗೆ ಮನೆಗೆ ಸೀಮಿತವಾಗಿ ತನ್ನ ಆಸೆ ಆಕಾಂಕ್ಷೆಗಳನ್ನೆಲ್ಲ ಬದಿಗೊತ್ತಿ ದುಡಿಯುವ ಆಳಾಗಿ ಗಂಡಿನ ಆಶ್ರಯದಲ್ಲೇ ಅಡಿಯಾಳಾಗಿ ಉಳಿದಿರುವ ಲಕ್ಷಾಂತರ ಹೆಣ್ಣು ಮಕ್ಕಳ ಸ್ಥಿತಿಯ ಅನಾವರಣ ಇಲ್ಲಿದೆ.

        ಹೆಣ್ಣು ಮಕ್ಕಳು ಶಬರಿಮಲೆಯನ್ನು ಪ್ರವೇಶಿಸುವ ವಿವಾದಿತ ವಿಷಯವನ್ನು ರೂಪಕದಂತೆ ಬಂಡಾಯದ ಸೂಚಕದಂತೆ ಚಿತ್ರದಲ್ಲಿ ಬಳಸಲಾಗಿದೆ . ಋತುಮತಿಯಾದ ಹೆಣ್ಣು ಮಕ್ಕಳು ಪೂಜಾ ಕಾರ್ಯಗಳಲ್ಲಿ ಭಾಗವಹಿಸಬಾರದೆಂಬ ನಿಯಮಗಳನ್ನು ಕಟ್ಟುಪಾಡುಗಳನ್ನು ಚಿತ್ರದ ನಾಯಕಿ ಪ್ರಶ್ನಿಸುವಲ್ಲಿ ಅವಳ ಅಸ್ಮಿತೆಯ ಹೋರಾಟವಿದೆ.

               ಹೀಗಾಗಿ ಈ ಚಿತ್ರ ಹೆಣ್ಣುಮಕ್ಕಳ ಬೇಗುದಿಯ ಒಳನೋಟದಂತಿದೆ .ಚಿತ್ರದ ನಾಯಕಿಯ ಪಾತ್ರಕ್ಕೆ ಹೆಸರಿಲ್ಲ ಏಕೆಂದರೆ ಆ ನಾಯಕಿ ಯಾರಾದರೂ ಆಗಿರಬಹುದು ಅವಳ ಪರಿಸ್ಥಿತಿ ಯಾರದ್ದೂ ಆಗಿರಬಹುದು ಎಂಬುದಾಗಿದೆ .

ಶೋಷಿಸಲ್ಪಡುವ ಹೆಣ್ಣಾಗಿ ದಿಟ್ಟತನದಿಂದ ಬಂಡೇಳುವ ನಾಯಕಿಯ ಪಾತ್ರದಲ್ಲಿ ನಿಮಿಷ ಸಜಯನ್ ಬಹಳ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ . ನಾಯಕಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಪತಿಯಾಗಿ ಸೂರಜ್ ವೆಂಜರಾಮುಡು ಅವರ ಅಭಿನಯ ಸಹಜವಾಗಿದೆ. ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಸಮಯೋಚಿತವಾಗಿವೆ. ಚಿತ್ರದ ಧ್ವನಿ ಗ್ರಹಣ ಬಹಳ ಸೊಗಸಾಗಿದೆ ತರಕಾರಿಗಳನ್ನು ಕತ್ತರಿಸುವ ಕಟಕಟ ಶಬ್ದವಾಗಲಿ ದೋಸೆಯ ಸುಯಿಗುಡಿಕೆಯಾಗಲಿ, ಕುಕ್ಕರ್ ಶಬ್ದವಾಗಲಿ ಎಲ್ಲವೂ ಚಿತ್ರದ ಗ್ರಹಿಕೆಗಪೂರಕ .ಅಡುಗೆ ಮನೆಯ ದೃಶ್ಯಗಳು ಪಾತ್ರಗಳ ಮುಖಭಾವಗಳೆಲ್ಲವೂ ಕ್ಯಾಮರಾದ ನೆರಳು ಬೆಳಕಿನಲ್ಲಿ ಪರಿಣಾಮಕಾರಿಯಾಗಿ ಸೆರೆಯಾಗಿದೆ.

        ಮಹಿಳಾ ಪ್ರಧಾನವಾದ ವಿಶೇಷ ಕಥೆಯನ್ನು ಪರಿಣಾಮಕಾರಿಯಾಗಿ ಅಚ್ಚುಕಟ್ಟಾಗಿ ನಿರ್ದೇಶಕರು ನಿರ್ದೇಶಿಸಿದ್ದಾರೆ.

             ಚಿತ್ರದ ಕೊನೆಯಲ್ಲಿ ಬಳಸಿಕೊಂಡಿರುವ ಹಾಡು ಚಿತ್ರದ ಆಶಯವನ್ನು ಎತ್ತಿ ಹಿಡಿಯುತ್ತದೆ ಹೆಣ್ಣನ್ನು ಮಹಾನ್ ಶಕ್ತಿಯಂತೆ ಪೂಜಿಸಲ್ಪಡುವ ಸಮಾಜದಲ್ಲಿ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಆಗಬಲ್ಲಳು ಎಂಬುದನ್ನು ತೋರಿಸುವ ನೃತ್ಯ ರೂಪಕ ಚಿತ್ರದ ಉತ್ಕೃಷ್ಟತೆಗೆ ಸಾಕ್ಷಿ.

               ಭೋಗದ ವಸ್ತುವಿನಂತೆ ಹೆಣ್ಣು ಮಕ್ಕಳನ್ನು ಚಿತ್ರಿಸುವ  ಚಿತ್ರಗಳ ನಡುವೆ ಹೆಣ್ಣಿನ ಸಮಾನತೆಗೆ ಆದ್ಯತೆ ನೀಡುವ ಅವಳ ಸೂಕ್ಷ್ಮ ಮನಸ್ಸನ್ನು ಅನಾವರಣಗೊಳಿಸುವ ಇಂತಹ ಸಿನಿಮಾಗಳು ಆಶಾಕಿರಣ.

          ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಬರುವುದರ ಮೂಲಕ ಹೆಣ್ಣು ಮಕ್ಕಳ ಅಸ್ಮಿತೆ ಮತ್ತಷ್ಟು ಗಟ್ಟಿಯಾಗಲಿ ತನ್ಮೂಲಕ ಸಮಾಜದಲ್ಲಿ ಹೆಣ್ಣನ್ನು ನೋಡುವ ದೃಷ್ಟಿ ಬದಲಾಗಲಿ ಎಂಬ ಆಶಯದೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ.

       ಶ್ರೇಷ್ಠ ಮಲಯಾಳಂ ಭಾಷಾ ಚಿತ್ರ ಎಂಬ ಪ್ರಶಸ್ತಿಯನ್ನು ಚಿತ್ರವು ಪಡೆದಿದೆ.    ಒಂದು ಗಂಟೆ ನಲವತ್ತು ನಿಮಿಷ ಕಾಲಾವಧಿಯ ಈ ಸಿನಿಮಾ

“ದಿ ಗ್ರೇಟ್ ಇಂಡಿಯನ್ ಕಿಚನ್” ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ.

ಭಾಷೆ -ಮಲಯಾಳಂ

ಚಿತ್ರದ ನಿರ್ದೇಶಕರು -ಜಿಯೋ ಬೇಬಿ (Jeo baby)

ತಾರಗಣ -ನಿಮಿಷ ಸಜಯನ್ ,ಸೂರಜ್ ವೆಂಜರಾಮುಡು ,ಅಜಿತ್.ವಿ.ಎಂ, ಟೀ ಸುರೇಶ ಬಾಬು.

ಕಲಾ ನಿರ್ದೇಶನ -ಜಿತಿನ್ ಬಾಬು ಮನ್ನೂರ್.


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

One thought on “

  1. ಕುಸುಮಾಜೀ..ನೀವು ವೀಕ್ಷಿಸಿ, ವಿಮರ್ಶಿಸಿದ “ದಿ ಗ್ರೇಟ್ ಇಂಡಿಯನ್ ಕಿಚನ್” ಚಲನ ಚಿತ್ರವನ್ನ ನಾನು ಖಂಡಿತವಾಗ್ಲೂ ನೋಡದೇ ಇರಲಾರೆ! ಇದರಲ್ಲಿ ಕಾಣ ಸಿಗುವ ಸಂಕುಚಿತ ಮನದ ಪುರುಷ ಪಾತ್ರಗಳು ನಮ್ಮಲ್ಲಿ ಇನ್ನೂ ಜೀವಂತವಾಗಿದ್ದು, ತಾಂಡವ ನೃತ್ಯ ಮಾಡುತ್ತಿರುವುದರಿಂದಲೇ ಇಂದಿನ ದಿನಗಳಲ್ಲಿ ಹೂ ಮನದ, ಶಿಕ್ಷಣ ಪಡೆದ, ದಿಟ್ಟ, ಸ್ವಾಭಿಮಾನಿ ಹೆಣ್ಣುಮಕ್ಕಳು ‘ನಮಗೆ ಮದುವೆನೇ ಬೇಡ’ ಎಂಬ ನಿರ್ಧಾರ ತೆಗೆದುಕೊಳ್ತಿರೋದೇನೋ!?
    – “ಡಾ.ಗೀತಾ ಪಾಟೀಲ”

Leave a Reply

Back To Top