ಬೀದಿಗೆ ಬಾರದ ತಂಟೆ-   ಬಿ.ಟಿ.ನಾಯಕ್ ಕಥೆ

ಕಥಾ ಸಂಗಾತಿ

ಬೀದಿಗೆ ಬಾರದ ತಂಟೆ

ಬಿ.ಟಿ.ನಾಯಕ್

‘ಅಪ್ಪಾ ಅಪ್ಪಾ ಪಕ್ಕದ ಮನೆಯವ್ರು ನಮ್ಮ ಅಂಗಳಕ್ಕೆ ಕಸ ಚೆಲ್ಲಿದ್ದಾರೆ. ಕಸ ಹಾರಾಡ್ತಾ ಇದೆ’ ಎಂದ

ಮಗರಾಮ ‘ಅಭಿ’.

‘ಹಾಗಾ… ಬೇಗ ಬೇಗ ನಡೀ ಅವರನ್ನು ಚೆನ್ನಾಗಿ ವಿಚಾರಿಸೋಣ ‘ ಎಂದ ಅಪ್ಪ ಮಹಾಶಯ ರಾಮೇಶ್ವರ.

‘ಅಯ್ಯೋ, ಮೊದಲು ಸ್ವಲ್ಪ ವಿಚಾರಿಸ್ರೀ. ಒಮ್ಮೆಲೇ ದುಡುಕುವುದು ಬೇಡ ‘ ಎಂದಳು ಯಜಮಾನಿ ‘ ಹರಿಣಿಬಾಯಿ.

‘ಸುಮ್ಮ ಸುಮ್ಮನೇ ನನ್ನನ್ನು ಅಷ್ಟು ಕನಿಷ್ಠ ಮಾಡ ಬೇಡ್ವೇ ..ನನಗೆ ಅಷ್ಟು ಅರಿವಿಲ್ಲವೇ ?’ ಎಂದ ಯಜಮಾನ.

ಈಗ ಅವರ ಅಂಗಳಕ್ಕೆ ಬಂತು ತಂಟೆ. ಮನೆ ಮಂದಿನೇ ಅಂಗಳಕ್ಕೆ ಇಳಿದರು.

‘ಏಯ್ ವಿಶಾಲಪ್ಪ.. ಇದೇನ್ರೀ ನಮ್ಮ ಅಂಗಳದಲ್ಲಿ ಹೀಗೆ ಕಸ ಚೆಲ್ಲಿದ್ದಾರೆ ನಿಮ್ಮವರು ? ಹೊರಗೆ ಬನ್ರೀ.’ ಎಂದ ರಾಮೇಶ್ವರ.

ಏಕೋ ವಿಶಾಲಪ್ಪಗೆ ಇವರ ಧ್ವನಿ ಕೇಳಿಸಿಲ್ಲ ಏಂದು ಅನ್ನಿಸಿತು.  ಹಾಗಾಗಿ, ಆತ ಹೊರಗೆ ಬರಲಿಲ್ಲ. ಆದರೇ, ಆತನ ಮಗ

‘ಗಿರಿ’ ಹೊರಗೆ ಬಂದವನೇ ಹೀಗೆ ಕೇಳಿದ;

‘ಏನು ಅಂಕಲ್ ಕೂಗಿ ಕೊಂಡ್ರಾ.. ?’

‘ಮೈ ಏಲ್ಲಾ ಉರಿದಾಗ ಕೂಗೋದೇ ಮತ್ತೇ ‘ ಎಂದ ರಾಮೇಶ್ವರ.

‘ಅದೇನು..ಅಂಕಲ್..ಅಪ್ಪನ್ ಕರೀssಲಾ ‘ ?.

‘ಲೋ..ಬೇಗ ಕರೆ..ಯೋ..ನನಗೆ ತಳ ಮಳ ಆಗ್ತಾ ಇದೆ’ ಎಂದ.

‘ಬಿಡಿ ಅಂಕಲ್ ಸುಮ್ಮ ಸುಮ್ನೇ  ಟೆನ್ಷನ್ ಯಾಕೆ.  ಇರೀ ಕರೀತೇನೆ’ ಎಂದು ಒಳಗೆ ಓಡಿದ.

ವಿಶಾಲಪ್ಪ ಹೊರಗೆ ಬರುವವರೆಗೂ ರಾಮೇಶ್ವರನ ಜೀವ ತಳಮಳಿಸುತ್ತಿತ್ತು. ಆತ ಅವರ ಬಾಗಿಲೆಡೆಗೆ ನೋಡುತ್ತಲೇ ನಿಂತ.  ಆದರೇ, ಬಾಗಿಲಲ್ಲಿ ಮತ್ತೇ ಗಿರಿನೇ ಕಂಡಾಗ;

‘ಅದೇನೋ..ಹಾಗೆಯೇ  ಬಂದೆ.  ನಾನು ಹೇಳಿದ್ದು ನಿನ್ನ ಅಪ್ಪಂಗೆ ಹೇಳಲಿಲ್ವಾ ?’

‘ಇಲ್ಲಾ ಅಂಕಲ್, ನಮ್ಮ ಅಪ್ಪ ಬಾತ್ ರೂಮಿನಲ್ಲಿದ್ದಾರೆ . ಒಂದರ್ಧ ಗಂಟೆ ಯಾಗಬಹುದು ಎಂದು ಹೇಳಿದ್ರು’ ಎಂದ.

‘ಅದೇನೋ ಬಾತ್ ರೂಮಿನಲ್ಲಿ ಏನ್ಮಾಡ್ತಾರೆ ?’

‘ಅಯ್ಯೋ ಬಿಡಿ  ಅಂಕಲ್..ಬಾತ್ರೂಮಿನಲ್ಲಿ ಬೇರೇ ಏನಾದ್ರೂ ಮಾಡಲಿಕ್ಕಾಗುತ್ತದೆಯೇ ?’

‘ಅಧಿಕ ಪ್ರಸಂಗಿ..ನಾನು ಕೇಳಿದ್ದು, ಅದೆಷ್ಟು ಸಮಯ ಹಿಡಿಯುತ್ತೆ ಎಂದು’

‘ಅದೇ ಹೇಳಿದ್ನಲ್ಲಾ ಅಂಕಲ್ ಅರ್ಧ ಗಂಟೆ ಎಂದು’.

‘ಆಯ್ತು..ಆಯುತು..ನಾನ್ ಇಲ್ಲೇ ಇರ್ತೇನೆ ಬೇಗ ಬಾ ಅಂತ ಹೇಳು ‘ ಎಂದು ಘರ್ಜಿಸಿದರು.

‘ಸರಿ ಅಂಕಲ್..’ ಎಂದು ಮತ್ತೇ ಒಳಗೆ ಹೋದ.

ಸ್ವಲ್ಪ ಹೊತ್ತಾದ ಮೇಲೆ ಮತ್ತೇ ಗಿರಿ ಹೊರಗೆ ಬಂದ.

‘ಅಂಕಲ್ ನಮ್ಮ ಅಪ್ಪ ಹೊರಗೆ ಬಂದಿದ್ದರಂತೆ, ಅದೇಕೋ ಮತ್ತೇ ಒಳಗೆ ಹೋದರಂತೆ ‘ಎಂದ.

‘ಅದೇನು.. ಬಾತ್ ರೂಮ್ ಆಟಾ ಆಡೋದಿಕ್ಕೆನಾ ಇರೋದು ? ಯಾಕೆ ಬರಬೇಕು ಮತ್ತು ಮರಳಿ ಯಾಕೆ ಹೋಗಬೇಕು ?’

‘ಏನೋ ಗೊತ್ತಿಲ್ಲ ಅಂಕಲ್.’ ಎಂದು ಮತ್ತೇ ಗಿರಿ ಹೊರಟು  ಹೋದ. ಈಬಾರಿ ಗಿರಿನ ಅಮ್ಮ ‘ಮಂಗಳಮ್ಮ’ ಹೊರಗೆ ಬಂದರು. ಬಂದವರೇ;

‘ಏನಣ್ಣ ಕೂಗಿ ಕೊಂಡ್ರಾ ?’

‘ಅಯ್ಯೋ ನಿನ್ನ ಯಜಮಾನ ಏನು ಮಾಡ್ತಿದಾನಮ್ಮ ?’

‘ಅವರಾ..ಸುಮಾರು ಒಂದು ಘಂಟೆ ಆಯಿತು. ಬಾಥರೂಮಿನೊಳಕ್ಕೆ ಹೋಗ್ತಾರೆ ಮತ್ತು ಮರಳಿ ಮರಳಿ ಹೋಗ್ತಾರೆ ಅಷ್ಟೇ.. ‘

‘ಹೌದಾ..ಏನು ಸಮಸ್ಯೆ ?’ ಎಂದು ರಾಮೇಶ್ವರ ವಿಚಾರಿಸಿದಾಗ;

‘ಬಾತ್ರೂಮ್ ಸಮಸ್ಯೆ..ಬೇಕಂತಲೇ ಯಾರೂ ಅಲ್ಲಿಗೆ ಹೋಗೋದಿಲ್ಲ ಅಲ್ಲವಾ ಅಣ್ಣ ?’

‘ಸರಿ..ಸರಿ ನಾನು ಆಮೇಲೆ ಬಂದು ಮಾತಾಡ್ತೇನೆ ‘ ಎಂದು ತಮ್ಮ ಮನೆ ಒಳಗೆ ಹೋಗಲು ತಯಾರಾದರು ಆಗ;

‘ಏನಾದರೂ ಹೇಳೋದಿತ್ತಾ ಅಣ್ಣ ?’ ಮಂಗಳಮ್ಮ ಕೇಳಿದ್ಲು.

‘ಈಗ ಬೇಡ ಆಮೇಲೆ ವಿಚಾರಿಸುತ್ತೇನೆ ‘ ಎಂದು ತಮ್ಮ ಮನೆ ಒಳಗೆ ಹೋಗುವಾಗ ಮಂಗಳಮ್ಮ ಮತ್ತೊಮ್ಮೆ ಕೇಳಿದ್ಲು;

‘ಅಣ್ಣಾ ಏನಾದ್ರೂ ಇದ್ರೇ ಹೇಳಿ. ನಾನು ಅವರನ್ನು ವಿಚಾರಿಸುತ್ತೇನೆ’ ಎಂದಳು. 

‘ಏನಿಲ್ಲಮ್ಮಾ..ನಿಮ್ಮಅಂಗಳ ಎಷ್ಟು ಸ್ವಚ್ಛ ಇದೆ..ನಮ್ಮ ಅಂಗಳ ಅಷ್ಟೇಕೇ ಕಸ ತುಂಬಿದೆ ತಿಳಿಯುತ್ತಿಲ್ಲ ‘ ಎಂದನು. ಅದಕ್ಕವಳು;

‘ಯಾಕೆ..ಅತ್ತಿಗೆ ಊರಲ್ಲಿ ಇಲ್ಲವಾ ? ಇಲ್ಲದಿದ್ದರೇ ಹೇಳಿ ನಾನು ನಿಮ್ಮ ಅಂಗಳ ಗೂಡಿಸುತ್ತೇನೆ ‘ ಎಂದಳು.

‘ಅವಳು ಮನೆಯಲ್ಲೇ ಇದ್ದಾಳೆ..ನೀನು ಗೂಡಿಸುವುದು ಬೇಕಿಲ್ಲ ‘ ಎಂದ ಅಲ್ಪ ಸ್ವಲ್ಪ ಕೋಪದಿಂದ ರಾಮೇಶ್ವರ.

‘ಯಾಕೆ ಅತ್ತಿಗೆಗೆ ಹುಶ್ಯಾರು ಇಲ್ವಾ. ಇರ್ಲಿ ಬಿಡಿ ನಾನೇ ಗೂಡಿಸುತ್ತೇನೆ ‘ ಎಂದಳು. ಅಷ್ಟರಲ್ಲಿ ರಾಮೇಶ್ವರನ ಶ್ರೀಮತಿ ಹೊರಗೆ ಬಂದಳು. ಬಂದವಳೇ;

‘ಮಂಗಳಕ್ಕ ವಿಷ್ಯ ಏನೂ ಇಲ್ಲ. ಚಿಂತೆ ಮಾಡಬೇಡಿ. ‘

‘ಅಯ್ಯೋ, ಅತ್ತಿಗೆ ವಿಷ್ಯ ಏನೂ ಇಲ್ಲ ಅಂತೀರಿ, ನೀವು ಚೆನ್ನಾಗಿದ್ದೀರಿ ತಾನೇ ?’ ಮಂಗಳಕ್ಕ ಕೇಳಿದಾಗ;

‘ನಾನು ಆರೋಗ್ಯದಿಂದಲೇ ಇದ್ದೇನೆ. ನಮ್ಮ ಯಜಮಾನರಿಗೆ ಏನೋ ಅನುಮಾನವಾಯಿತು,ಅದಕ್ಕೆ ಅಂಗಳಕ್ಕೆ ಬಂದರು ಅಷ್ಟೇ ‘

‘ಹೌದಾ ..ಏನು ಅನುಮಾನ ?’

‘ಬಿಡಿ.. ಮಂಗಳಕ್ಕ ಪದೇ ಪದೇ ಏನು ವಿಚಾರಿಸುತ್ತೀರಾ. ಏನೋ ನಮ್ಮ ಅಂಗಳದಲ್ಲಿ ಕಸ ಬಿದ್ದಿತ್ತು. ಯಾರಾದ್ರೂ ಹಾಕಿರಬಹುದು ಎಂದು ಸ್ವಲ್ಪ ಕೋಪಗೊಂಡಿದ್ದಾರೆ ಅಷ್ಟೇ ‘ ಎಂದಳು.

‘ಓ..ಅದಾ ವಿಷ್ಯ.  ಅದು ಹೇಗಾಯಿತೆಂದರೇ, ಕಸದ ವ್ಯಾನ್  ಹೋಗುವಾಗ ಅದರಲ್ಲಿದ್ದ ಕಸ ನಿಮ್ಮ ಅಂಗಳಕ್ಕೆ ಬಿದ್ದಿದ್ದು ನಾನು ನೋಡಿದೆ. ಆಗ ಅವರನ್ನು ಶಪಿಸಿದೆಕೂಡ’ ಎಂದಳು.

ಆಗ ರಾಮೇಶ್ವರನ ಕೋಪ ಒಮ್ಮೆಲೇ ತಣ್ಣಗಾಯಿತು. ತಕ್ಷಣವೇ ಆತ;

‘ಮಂಗಳಮ್ಮ, ವಿಶಾಲಪ್ಪಗೆ ಅರೋಗ್ಯ ಸರಿ ಇಲ್ಲಾಂತ ಅನ್ನಿಸುತ್ತೆ. ನಾನು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೇ ?’ ಎಂದ.

‘ಅಣ್ಣ ಬೇಡ ಬಿಡಿ.. ನಾವೇ ಅವರಿಗೆ ಹಾಗೆ ಹೇಳಿದೆವು.  ಆದರೇ, ಆ ಮನುಷ್ಯ ಒಪ್ತಾ ಇಲ್ಲ. ಎಳೆ ನೀರು ಕುಡಿಯುತ್ತೇನೆ, ಸರಿ ಹೋಗುತ್ತೆ ಎಂದು ಹೇಳಿದ’ ಎಂದಳು.

ಹಾಗಾ, ನಾನು ಆತನಿಗೆ ಎಳೆ ಕಾಯಿ ತಂದು ಕೊಡುತ್ತೇನೆ’ ಎಂದು ಹೇಳಿ, ಮೈಮೇಲೆ ಒಂದು ಅಂಗಿಯನ್ನು ಸೇರಿಸಿಕೊಂಡು ರಾಮೇಶ್ವರ ಸರಸರನೇ ಹೊರಟು ಹೋದರು. ಒಂದು ಹತ್ತು ಹದಿನೈದು ನಿಮಿಷದಲ್ಲಿ ಸುಮಾರು ಐದು ಎಳೆ ನೀರಿನ ಕಾಯಿಗಳನ್ನು ತಂದು ವಿಶಾಲಪ್ಪನ ಮನೆಗೆ ಒಪ್ಪಿಸಿದರು. ಆಮೇಲೆ ಅವರೆಲ್ಲಾ ತಮ್ಮ ಮನೆಯೊಳಕ್ಕೆ ಸೇರಿಕೊಂಡರು.

ಸಾಯಂಕಾಲದ ವೆಳ್ಯೆಗೆ ವಿಶಾಲಪ್ಪ ಸುಧಾರಿಸಿಕೊಂಡ. ಕೂಡಲೇ ರಾಮೇಶ್ವರನನ್ನು ಭೇಟಿ ಮಾಡಲು ಉತ್ಸುಕನಾಗಿ, ಅವರ ಮನೆ ಮುಂದೆ ನಿಂತು ಕೂಗಿದ;

‘ರಾಮೇಶ್ವರಪ್ಪ..ಮನೇಲಿ ಇದೀರಾ ?’ ಆಗ ಅಭಿ ಹೊರಗೆ ಬಂದು;

‘ಏನು ಅಂಕಲ್ ನಮ್ಮಪ್ಪ ಬೇಕಿತ್ತಾ ?’

‘ಹೌದು ಕಣ್ಲಾ..ಏನ್ಮಾಡ್ತಿದ್ದಾರೆ ?’

‘ಬಾತ್ ರೂಮಿಗೆ ಹೋಗಿದ್ದಾರೆ. ಆಮೇಲೆ ನಿಮ್ಮಲ್ಲಿ ಕಳಿಸುತ್ತೀನಿ ‘ ಎಂದ.

‘ಏನು..ಅವರೂ ಕೂಡ ಬಾತ್   ರೂಮಿನಲ್ಲಿದ್ದಾರಾ ?’

‘ಹೌದು ಅಂಕಲ್ ‘

‘ಸರಿ..ಆಮೇಲೆ ಕಾಣ್ತೀನಿ.’ ಎಂದು ಹೊರಟು ಹೋದ.

ಒಂದರ್ಧ ಗಂಟೆಯಾದ ಮೇಲೆ ವಿಶಾಲಪ್ಪ ಒಂದೈದು ಎಳೆ ನೀರು ಕಾಯಿ ರಾಮೇಶ್ವರಪ್ಪ ಅವರ ಮನೆಗೆ ತಲುಪಿಸಿಬಿಟ್ಟ. ಆಮೇಲೆ ವಿಶಾಲಪ್ಪ ನೆಮ್ಮದಿಯಿಂದ ತಮ್ಮ ಮನೆ ಸೇರಿ ಕೊಂಡ.

ಸಾಯಂಕಾಲದ ಸಮಯ ಆರು ಗಂಟೆಗೆ ರಾಮೇಶ್ವರಪ್ಪ ಮತ್ತು ವಿಶಾಲಪ್ಪ ಇಬ್ಬರೂ ಅಂಗಳದಲ್ಲಿ ಸೇರಿದರು. ಆಗ ರಾಮೇಶ್ವರಪ್ಪ;

‘ಹೇಗಿದೆ ನಿಮ್ಮ ಅರೋಗ್ಯ ?’ ಎಂದು ವಿಶಾಲಪ್ಪನನ್ನು ವಿಚಾರಿಸಿದರು.

‘ನನಗೆ ಈಗ ಸಮಸ್ಯೆ ಇಲ್ಲ. ಬಹುಷಃ ನಿಮ್ಮ ಎಳೆ ಕಾಯಿಗಳು ಆರೋಗ್ಯದ ಕೆಲಸ ಮಾಡಿವೆ ಎಂದೆನಿಸಿತು’ ಎಂದು ಹೇಳಿ ಮಾತು ಮುಂದುವರೆಸಿದರು ;

‘ನಿಮ್ಮ ಅರೋಗ್ಯ ಹೇಗಿದೆ ರಾಮೇಶ್ವರಪ್ಪ ?’

‘ಅಯ್ಯೋ ನನಗೇನಾಗಿದೆ. ಏನೂ ಇಲ್ವಲ್ಲ. ಅದ್ಯಾಕೆ ನಿಮಗೆ ಈ ಅನುಮಾನ ಬಂತು ?’ ಎಂದು ರಾಮೇಶ್ವರಪ್ಪ ಕೇಳಿದಾಗ ವಿಶಾಲಪ್ಪ ಹೇಳಿದರು;

‘ಬಿಡಿ ವಿಶಾಲಪ್ಪ ನೀವೂ ನನ್ನ ಹಾಗೆ ಬಾತ್ರೂಮಿನಲ್ಲೇ ಅರ್ಧ ದಿನ ಕಳೆದಿರಿ ಅಂತ ತಿಳಿಯಿತು. ಅದಕ್ಕೇನೇ ನಾನು ನಿಮಗಂತಲೇ ಎಳೆಕಾಯಿಗಳನ್ನು ಕಳಿಸಿರೋದು ‘ಎಂದ.

‘ಅಯ್ಯೋ, ವಿಶಾಲಪ್ಪ ವಿಷಯವನ್ನು ನೀವು ತಪ್ಪಾರ್ಥ ಮಾಡಿ ಕೊಂಡಿರುವಿರಿ.  ನಿಜವಾಗಿ ನನಗೆ ಆ ಥರ ಏನೂ ಆಗಿಲ್ಲ.   ಆದರೇ, ನೀವು ನನ್ನನ್ನು ಕರೆದಾಗ ಮಾತ್ರ ಒಂದು ಬಾರಿ ಸಹಜವಾಗಿ ಬಾತ್ರೂಮಿಗೆ ಹೋಗಿದ್ದೆ ಅಷ್ಟೇ’. ಎಂದು ಹೇಳಿ ನಕ್ಕರು.

‘ಹೌದಾ..ಬಿಡಿ ನಿಮ್ಮ ಅರೋಗ್ಯ ಕೆಟ್ಟಿಲ್ಲವಲ್ಲ ಅದಕ್ಕೆ ಖುಷಿ ಇದೆ’ ಎಂದು ಆತನೂ ನಕ್ಕನು.

ಒಂದು ಹದಿನೈದು ನಿಮಿಷ ಹರಟೆ ಹೊಡೆದು ಅವರು ತಮ್ಮ ತಮ್ಮ ಮನೆಗಳನ್ನು ಸೇರಿ ಕೊಂಡರು.


16 thoughts on “ಬೀದಿಗೆ ಬಾರದ ತಂಟೆ-   ಬಿ.ಟಿ.ನಾಯಕ್ ಕಥೆ

  1. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವದು ಇದಕ್ಕೆ.

  2. ಕಥೆ ತುಂಬಾ ಸೊಗಸಾಗಿದೆ. ನಿರೂಪಣೆ ಚೆನ್ನಾಗಿದೆ. ಅಭಿಂದನೆಗಳು.

        1. ಮಯಾನಿ ಸರ್ ನಮಸ್ಕಾರ. ಹೇಗಿದ್ದೀರಾ.? ತಮ್ಮ ಅನಿಸಿಕೆ ನನಗೆ ಸ್ಪೂರ್ತಿ ನೀಡಿತು. ಧನ್ಯವಾದಗಳು.

  3. ಸಂವಹನದ ಕೊರತೆ, ತಾಳ್ಮೆಯ ಅಭಾವ ಕಥೆಯ ವಸ್ತುವಾಗಿ ಸರಳ ನಿರೂಪಣೆಯಲ್ಲಿ ಗೆದ್ದಿದೆ

  4. ಬೀದಿ ರಂಪಾಟ ಆಗಬಹುದಾದ ತಪ್ಪು ಕಲ್ಪನೆ
    ತಾಳ್ಮೆಯ ಮೂಲಕ ಬಗೆಹರಿಸುವ ಪ್ರಯತ್ನ ಕತೆಯಲ್ಲಿ
    ಚೆನ್ನಾಗಿ ಮೂಡಿ ಬಂದಿದೆ

    1. ತಮ್ಮ ಧನಾತ್ಮಕ ಟಿಪ್ಪಣಿ ನನಗೆ ಖುಷಿ ತಂದಿದೆ. ಧನ್ಯವಾದಗಳು.

    1. ನಿಮ್ಮ ಅನಿಸಿಕೆ ನೋಡಿ ಸಂತೋಷವಾಯಿತು. ಧನ್ಯವಾದಗಳು.

Leave a Reply

Back To Top