ಅನುವಾದ ಸಂಗಾತಿ

ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್‌..

Photo of Clipped Heart-shaped Red Paper

ಇಂಗ್ಲಿಷ್ ಮೂಲ : ವಿಲಿಯಂ ಶೇಕ್ಸ್‌ಪಿಯರ್‌

Image result for photos of shakespeare


ಅನುವಾದ : ಚಂದ್ರಪ್ರಭಾ

ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್‌...

  ಕೆಲವು ಸಂಗತಿಗಳೇ ಹಾಗೆ. ಭಾವಕ್ಕೆ ನಿಲುಕಿದಂತೆ ಭಾಷೆಗೆ ನಿಲುಕುವುದೇ ಇಲ್ಲ. ಅದನೆಲ್ಲ ನೀವು ಆಸ್ವಾದಿಸಬಲ್ಲಿರಿ ಆದರೆ ಬಣ್ಣಿಸಲಾರಿರಿ. ಅಂಥ ಒಂದು ಸಂಗತಿ ಪ್ರೀತಿ.

ಈ ಸೃಷ್ಟಿಯ ಸಕಲವನ್ನೂ ಒಂದೆಳೆಯಲ್ಲಿ ಬಂಧಿಸಿಟ್ಟಿರುವುದು ಪ್ರೀತಿಯೊಂದೇ.‌ ಬಳ್ಳಿಗೆ ಆಸರೆಯಾದ ಮರ.. ದುಂಬಿಗೆ ಮಕರಂದವನೀವ ಹೂವು.. ಎದೆಯಮೃತ ಉಣಿಸಿ ಜೀವನವನ್ನೇ ಧಾರೆಯೆರೆವ ತಾಯಿ.. ಬೆರಳು ಹಿಡಿದು ನಡೆಯಿಸಿ ನಡಿಗೆ ಕಲಿಸುವ ಅಪ್ಪ.. ದಣಿವಿಗೆ ಆಸರೆಯಾಗುವ ಇರುಳು.. ದುಡಿಮೆಗೆ ಮುನ್ನುಡಿ ಬರೆವ ಹಗಲು.. ಓಡೋಡಿ ಬಂದ ನದಿಗೆ ಒಡಲಾಗುವ ಕಡಲು.. ಕಾರ್ಮುಗಿಲ ಅಂಚಿನಲ್ಲೂ ಹೊಳೆವ ಬೆಳ್ಳಿ ಗೆರೆ.. ಗಗನ,ತಾರೆ,ಚಂದ್ರ,ಚಂದ್ರಿಕೆ.. ಅಳು, ನಗು, ಒಲವು,ಚೆಲುವು, ರಾಗ ದ್ವೇಷ… ಎಲ್ಲದರಾಚೆ ನಿಂತು ಮುಗುಳ್ನಗುವ ಅನಂತ ಒರತೆ ಪ್ರೀತಿ.

ಪ್ರೀತಿ ಬೀಜ.. ದ್ವೇಷ ಕಳೆ ಕಸ. ಬೆಳೆಯುವಾಗ ಬಿರಬಿರನೆ ಬೆಳೆದು ಬಿಡುವಾಗಲೂ ಹಸಿವೆಗೆ ಅನ್ನವಾಗುವುದು ಬೀಜ ಮಾತ್ರ.

ಈ ಪ್ರೀತಿಯ ಕುರಿತು ವ್ಯಾಖ್ಯಾನ ಬರೆದವರು ಅದೆಷ್ಟೋ ಜನ. ಆದರೆ ಇಂಗ್ಲಿಷ್ ಸಾಹಿತ್ಯದ ಮೇರು ಎನಿಸಿದ ಶೇಕ್ಸ್‌ಪಿಯರ್‌ ತನ್ನ ಸಾನೆಟ್ಟುಗಳಲ್ಲಿ ಪ್ರೀತಿಯ ಕುರಿತು ಹೇಳುವ ಖಚಿತ ಮಾತು ಎಲ್ಲ ಕಾಲದಲ್ಲೂ ಎಲ್ಲರಿಗೂ ಆಪ್ಯಾಯಮಾನವೆನಿಸಿವೆ. ತನ್ನ ಬಹುತೇಕ ಸಾನೆಟ್ಟುಗಳಲ್ಲಿ ಆತ ಪ್ರೀತಿಯ ಚಿರಂತನತೆ, ಘನತೆ, ಹಿರಿಮೆಯನ್ನು ಕುರಿತು ಬಣ್ಣಿಸುವನಾದರೂ ೧೧೬, ೧೩೦, ೧೪೭ ನೇ ಸಾನೆಟ್ಟುಗಳಲ್ಲಿ ಈ ಭಾವ ಹರಳುಗಟ್ಟಿ ನಿಂತಂತೆ ತೋರುತ್ತದೆ. ಕಾಲವನ್ನೂ ಮೀರಿದ ಅಮರತ್ವದ ಅಸ್ಮಿತೆಯನ್ನು ಕವಿ ಇಲ್ಲಿ ಪ್ರೀತಿಗೆ ಕೊಡುವುದನ್ನು ಓದಿ ಅನುಭವಿಸಿ ಆನಂದಿಸುವುದೇ ಸೊಗಸು. ಕಾಲವನ್ನು ಮೀರುವುದು ಮಾತ್ರವಲ್ಲ ಕಾಲದ ಪರಿಣಾಮಕ್ಕೆ ಅಧೀನವಾಗುವ ಚೆಲುವು, ತಾರುಣ್ಯಗಳಂಥ ಕ್ಷಣಿಕತೆಯನ್ನು ಮೀರಿದ ಅಂತರಂಗದ ನೈಜ ಪ್ರಭೆಯನ್ನಾಗಿ ಕವಿ ಪ್ರೀತಿಯನ್ನು ನಿರೂಪಿಸುವುದು ಆ ಕುರಿತು ಆತನಿನನ್ನ ವ ವಿಶಾಲ, ಸುಸ್ಪಷ್ಟ, ನಿಖರ ನಿಲುವಿನ ದ್ಯೋತಕವಾಗಿ ಕಂಡು ಬರುತ್ತದೆ. ತೆರೆದ ಮನಸ್ಸಿನ ಇಂಥ ವಸ್ತುನಿಷ್ಠ ನಿರೀಕ್ಷಣೆಗಳೇ ಆತನನ್ನು ಆರಾಧಿಸುವಂತೆ ಪ್ರೇರೇಪಿಸುತ್ತವೆ.

೧೧೬ ನೇ ಸಾನೆಟ್ಟಿನ ಕೆಲ ಸಾಲುಗಳಂತೂ ಗಾದೆ ಮಾತಿನಂತೆ ಬಳಕೆಯಾಗುವುದಿದೆ. ಶೇಕ್ಸ್‌ಪಿಯರ್‌ ನನ್ನು ಅನುವಾದಿಸಲು ತೊಡಗುವುದು ಹುಡುಗಾಟವಲ್ಲ.. ಆದರೂ ಒಂದು ಪ್ರಯತ್ನವಾಗಿ ಈ ನನ್ನ ಅನುವಾದ..

ಸುನೀತ-116

ನಿಜವಾದ ಹೃದಯಗಳ ಮಿಲನದಲ್ಲಿ

ಅಡೆತಡೆ ನುಸುಳುವುದನ್ನು ನಾನು ನಿರಾಕರಿಸುತ್ತೇನೆ

ಹೊರಳುವ ಹೊತ್ತಿನೊಂದಿಗೆ ಬಣ್ಣ ಬದಲಿಸುತ್ತ ಸಾಗಿದ್ದು

ಉಳಿ ತಾಕಿದೊಡನೆ ಬಾಗಿದ್ದು ಪ್ರೀತಿಯೇ ಅಲ್ಲ;

ಹೌದು, ಅದೊಂದು ಶಾಶ್ವತ ಗುರುತು

ಮತ್ತದು ಅಚಲವಾಗಿ ನಿಂತು ಬಿರುಗಾಳಿಯನ್ನೂ ದಿಟ್ಟಿಸುವುದು

ದಿಕ್ಕೆಟ್ಟ ದೋಣಿಗಳಿಗೆ ದಿಕ್ಕು ತೋರಿದುವ ದೀಪಸ್ತಂಭವದು

ಅದರ ಮೌಲ್ಯವನ್ನು ಅಳೆಯಲಾಗದು ನಿಜ

ಆದರೆ, ಖಂಡಿತ ಸಾಧ್ಯವಿದೆ ಆ ಎತ್ತರವನ್ನು ತಲುಪುವುದು

ಗುಲಾಬಿ ಕೆನ್ನೆ ಹವಳದ ತುಟಿ

ಕಾಲನ ಕುಡುಗೋಲ ಪರಿಧಿಗೆ

ಸಿಲುಕುವುದು ನಿಶ್ಚಿತ ಆದರೆ

ಕಾಲ ಹೊಸಕಬಹುದಾದ ಹೂವಲ್ಲ ಪ್ರೀತಿ

ನನ್ನ ಈ ನಿಲುವು ನಿಮಗೆ ಮಿಥ್ಯೆ ಎಂದು ತೋರಿದರೆ

ಈ ಸಾಲುಗಳ ನಾ ಬರೆಯುತ್ತಲೂ ಇರಲಿಲ್ಲ, ಮನುಷ್ಯನೆಂದೂ ಪ್ರೀತಿ ಮಾಡುವ ಸಾಹಸಕ್ಕೆ

ಇಳಿಯುತ್ತಲೂ ಇರಲಿಲ್ಲ

*************

Leave a Reply

Back To Top