ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ.
ಪ್ರಮಿಳಾ ಎಸ್.ಪಿ.
ಈಗ್ಗೆ ಹನ್ನೆರೆಡು ವರ್ಷಗಳ ಕೆಳಗೆ ಕಾಲೇಜಿನ ಗೆಳತಿಯರೆಲ್ಲ ಗುಂಪು ಸೇರಿ ಒಂದು ತೀರ್ಮಾನ ಕ್ಕೆ ಬಂದರು.ಯಾರಿಗೆಲ್ಲಾ ಪ್ರೇಮಿ ಇದ್ದಾನೋ ಅವರು ಹಸಿರು ಬಟ್ಟೆ ತೊಡುವುದು…ಯಾರಿಗೆ ಪ್ರಿಯತಮ ಇಲ್ಲವೋ ಅವರು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬರುವುದು ಎಂದು.ನಾಳೆ ಪ್ರೇಮಿಗಳ ದಿನ ಹೀಗೆ ಆಚರಿಸೋಣ ಎಂದರು.ಹಳ್ಳಿ ಹುಡುಗಿ ನಾನು.ಅದರ ಕಲ್ಪನೆ ಇಲ್ಲದ ನಾನು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬಂದೆ.ಇಡೀ ದಿನ ಹಾಡು ಆಟ ಪಾಠ ಮುಗಿಸಿ ಹೊರ ಬರುವ ವೇಳೆಗೆ ಎದುರಿಗಿದ್ದ ಕಾರ್ ಶೋ ರೂಮಿನ ಯುವಕ ಕೈ ನೀಡಿ ಕೆಂಪು ಗುಲಾಬಿ ಚಾಚಿದ.
ನಗುತ್ತಾ ತೆಗೆದುಕೊಂಡೆ.ಗುಲಾಬಿ ಸ್ವೀಕರಿಸಿ ದರೆ ಅವನ ಪ್ರೀತಿಯನ್ನು ಸ್ವೀಕರಿಸಿದಂತೆ ಎಂಬ ಕನಿಷ್ಠ ಆಲೋಚನೆ ನನಗೆ ಬರಲಿಲ್ಲ.
ಕೆಂಪು ಗುಲಾಬಿಯ ಇವನೊಂದಿಗೆ ಮಾತು,ಸ್ನೇಹ,ಪ್ರೇಮ ,ಸುತ್ತಾಟ ಪ್ರಾರಂಭವಾಯಿತು.ಜಗತ್ತಿನ ಕಣ್ಣಿಗೆ ನಾವು ಕಾಣಿಸಿದರೂ ನಮ್ಮ ಕಣ್ಣಿಗೆ ಜಗತ್ತು ಕಾಣಲಿಲ್ಲ.
ಅಪ್ಪನ ಸಾವಿನಿಂದಾಗಿ ಅಮ್ಮ ಸಂಸಾರದ ನೊಗ ಹೊತ್ತಿದ್ದಳು.ಇಬ್ಬರು ಅಕ್ಕಂದಿರ ಮದುವೆ ಮುಗಿದಿತ್ತು.ಅಕ್ಕ ಭಾವ ಸೇರಿ ಬೇರೆ ಕಡೆಗೆ ನನ್ನ ಮದುವೆ ಒಪ್ಪಂದ ಮಾಡಿಕೊಂಡರು.ನಾನು ಇವನೇ ಪ್ರೇಮ…ಪ್ರೇಮವೇ ಇವನು ಎಂದು ಭಾವಿಸಿ ಈಗ್ಗೆ ಹನ್ನೊಂದು ವರ್ಷದ ಕೆಳಗೆ “ಪ್ರೇಮಿಗಳ ದಿನ”ವೇ ಉಟ್ಟ ಬಟ್ಟೆಯಲ್ಲಿ ಹೊರಟು ಬಂದೆ.ಅಂದಿಗೆ ಅಮ್ಮನ ಮತ್ತು ಅಮ್ಮನ ಕಡೆಯ ಎಲ್ಲರೂ ಹರಿದ ಚಪ್ಪಲಿ ಎಸೆದಂತೆ ಮನಸ್ಸಿನಿಂದ ತೆಗೆದುಬಿಟ್ಟರು.
ಇವನ ನಂಬಿ ಹಿಂದೆ ಬಂದೆ.ಕಾಫಿ ತೋಟದ ಬೆಟ್ಟದ ಮೇಲೊಂದು ಒಂಟಿಯಾದ ಪುಟ್ಟ ಮನೆ.ಮುಖ್ಯ ರಸ್ತೆಗೆ ಐದು ಕಿಲೋಮೀಟರ್ ದೂರ.ಅಕ್ಕ ಪಕ್ಕದಲ್ಲಿ ಮನೆಗಳ ಸುಳಿವೂ ಇಲ್ಲ.ಅತ್ತೆ ಮಾವ ಅತ್ತಿಗೆ ಮನೆ ತುಂಬಿಸಿಕೊಂಡರು.ಇವನ ಹೆಜ್ಜೆಗೆ ಗೆಜ್ಜೆಯ ನಾದವಾದೆ. ಉಸಿರಿಗೆ ದ್ವನಿಯಾದೆ.ನನ್ನೊಳಗೆ ನಾನೇ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದೆ.ಹೊಸತನ… ಹೊಸಬಾಳು ಖುಷಿ ನೀಡಿತು.ಎರೆಡು ಮುದ್ದಾದ ಗಂಡು ಮಕ್ಕಳು ಹುಟ್ಟಿದವು.ತಾಯ್ತನ ತೃಪ್ತಿ ತಂದಿತ್ತು.
ದಿನ ಕಳೆದಂತೆ ಅತ್ತೆ ಅತ್ತಿಗೆ ನಾನು ಕಾರಣ ಎಂದು ತೋರಿಸುತ್ತಾ ಕುಡಿಯಲು ಶುರುವಿಟ್ಟು ಕೊಂಡ.ಸಿಗರೇಟು ಹೊಗೆ ಆವರಿಸಿತು.ಕುಟುಂಬ ಕಲಹ ಹೆಚ್ಚಾಗಿ… ನನ್ನ ಬೆನ್ನು ಬಾಸುಂಡೆಗಳಿಗೆ ಜಾಗ ನೀಡಿತು.ತಲೆ ಕೂದಲು ತೆಳ್ಳಗಾದವು.ಕೆನ್ನೆಗಳ ಮೇಲೆ ಕಪ್ಪು ಮಚ್ಚೆಗಳು ದೊಡ್ಡವಾದವು.ಈಗ ನನ್ನ ಪಾಲಿಗೆ ಜಗತ್ತು ಕತ್ತಲಾಯಿತು. ಕಾಡಿನ ಹಸಿರು ಬೇಡವಾಯಿತು.ದಿನೇ ದಿನೇ ಹಕ್ಕಿಗಳ ಹಾಡು ಬೋರೆನಿಸಿತು.
ಕುಡಿದವನು ವಾಪಸ್ಸು ಮನೆಗೆ ಬರುವುದನ್ನು ಮರೆತುಹೋದ.ನಾನು ಒಂಟಿಯಾದೆ.ಅತ್ತೆ ಅತ್ತಿಗೆ ಮಾವ ಸೇರಿ ನನ್ನನ್ನು ಇಲ್ಲಿಂದಲೂ ಎಸೆದರು.
ಈಗ ನಾನು ಬೀಳುವುದಾದರೂ ಎಲ್ಲಿಗೆ…?
ಎರೆಡು ಮಕ್ಕಳನ್ನು ಏನು ಮಾಡಲಿ…?
ಉದ್ಯೋಗ ಕ್ಕೆ ಎಲ್ಲಿಗೆ ಹೋಗಲಿ…?
ಅರ್ಧಕ್ಕೆ ನಿಂತ ಓದಿಗೆ ಯಾವ ಕೆಲಸ ಸಿಕ್ಕೀತು…?
ನನ್ನ ಪಾಲಿಗೆ ಯಾರಿದ್ದಾರೆ…?
ಯಾರ ಪ್ರೇಮಕ್ಕೆ ನಾನು ಕಾಯಲಿ..?
ಮುದ್ದಾದ ಮಕ್ಕಳನ್ನು ಅವನ ಮನೆಯಲ್ಲೇ ಬಿಟ್ಟು ದೂರ ಹೊರಟು ಬಂದು ಹಾಸ್ಟೆಲ್ ಸೇರಿದ್ದೇನೆ.ಗಾರ್ಮೆಂಟ್ಸ್ ಗೆ ಕಾಲಿಟ್ಟು ಕೆಲಸ ಮಾಡಲು ನಿಂತಿದ್ದೇನೆ. ರಾತ್ರಿಗೂ…ಹಗಲಿಗೂ ವ್ಯತ್ಯಾಸ ಇಲ್ಲವಾಗಿದೆ.ಇವನ ಪ್ರೇಮವೂ ಇಲ್ಲ.ಮಕ್ಕಳಿಗೆ ವಾತ್ಸಲ್ಯ ನೀಡಲೂ ಆಗುತ್ತಿಲ್ಲ.
ಅಮ್ಮನ ಮನೆಯ ಮೆಟ್ಟಿಲೂ ತುಳಿಯಲಾಗುತ್ತಿಲ್ಲ.
ಹಾಸ್ಟೆಲ್ ಹಾಸಿಗೆಯ ಮೇಲೆ ಜೀವಂತ ಶವದಂತೆ ಮಲಗಿದ್ದೇನೆ.
ನಾಳೆ ಮತ್ತೊಂದು “ಪ್ರೇಮಿಗಳ ದಿನ” ಬಂದು ನಿಂತಿದೆ.ಹಸಿರು ಬಟ್ಟೆ,ಕೆಂಪು ಗುಲಾಬಿ ಕಾಣದಷ್ಟು ನೀರು ತುಂಬಿದೆ ನನ್ನ ಕಣ್ಣಿನೊಳಗೆ.ಕನಸಿನ ಮೂಟೆಗೆ ನೋವಿನ ದಾರ ಬಿಗಿದು ಆ ಮೂಟೆಯ ಮೇಲೆ ನಿಂತು ಹೇಳಲೇ….
“ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ”…ಎಂದು…!!?
*************************
ಚೆನ್ನಾಗಿದೆ, ಕುರುಡು ಪ್ರೀತಿ ನಂಬಿದ ಹೆಣ್ಣು ಮಕ್ಕಳಿಗೆ ಎಚ್ಚರಿಕೆ ನೀಡುವ ಕಥೆ.