ಅಂಕಣ ಸಂಗಾತಿ

ಸುಜಾತಾ ರವೀಶ್ ರವರ ಲೇಖನಿಯಿಂದ

ನೆನಪಿನದೋಣಿಯಲಿ

ದಸರಾ ವಸ್ತುಪ್ರದರ್ಶನ _ ಮೆಲುಕು

ದಸರಾ ಜಂಬೂಸವಾರಿ ಇವೆಲ್ಲವುಗಳ ಸಂಭ್ರಮ ನಡೆಯುತ್ತಿದ್ದಂತೆ ಫಲಪುಷ್ಪ ಪ್ರದರ್ಶನಕ್ಕಂತೂ ಭೇಟಿಯಾಗಿರುತ್ತಿತ್ತು ಏಕೆಂದರೆ ಅದು ವಿಜಯದಶಮಿಯೊಂದಿಗೆ ಕೊನೆಗೊಳ್ಳುತ್ತಿತ್ತು.  ಆದರೆ ಇನ್ನೂ ಅಂಗಡಿ ಮಳಿಗೆಗಳು ಸರಿಯಾಗಿ ತೆರೆದಿರುವುದಿಲ್ಲ ಎಂಬ ಕಾರಣದಿಂದ ಆ ಸಮಯದಲ್ಲಿ ವಸ್ತುಪ್ರದರ್ಶನ ಭೇಟಿ ಇರುತ್ತಿರಲಿಲ್ಲ .  ನಂತರದ ದಿನಗಳಲ್ಲಿ ದೀಪಾವಳಿಗೆ ಮುಂಚೆ ಒಂದು ಭೇಟಿ ಆಗಲೇಬೇಕಿತ್ತು . ಅಲ್ಲಿಂದ ಡಿಸೆಂಬರ್ ನಲ್ಲಿ ವಸ್ತು ಪ್ರದರ್ಶನ ಮುಗಿಯುವ ತನಕ ಸುಮಾರು ಬಾರಿ ಹೋಗುವುದು ಇದ್ದೇ ಇರುತ್ತಿತ್ತು .ಸಾಮಾನ್ಯ ಶನಿವಾರಗಳಂದೇ ನಮ್ಮ ತಂದೆ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದುದು.  

ಸುಮಾರು 4 ಗಂಟೆ ವೇಳೆಗೆ ವಿಶ್ವೇಶ್ವರ ನಗರದ ನಮ್ಮ ಮನೆ ಬಿಟ್ಟು ಬಸ್ಸಿನಲ್ಲಿ ಹೊರಟರೆ ಸಂಸ್ಕೃತ ಪಾಠಶಾಲೆಯ ಬಳಿ ಇಳಿದು ಅಲ್ಲಿಂದ ವಸ್ತುಪ್ರದರ್ಶನದೆಡೆಗೆ ನಮ್ಮ ನಡಿಗೆ.  ಆರಂಭದಲ್ಲೇ ಇರುವ ಬೊಂಬಾಯ್ ಮೀಠಾಯಿ ಕಾಟನ್ ಕ್ಯಾಂಡಿಯಿಂದ ಆರಂಭವಾದರೆ ನಮ್ಮ ತಿನ್ನುವ ಮೆಷಿನ್ ಗಳು ನಿಲ್ಲುತ್ತಿದ್ದುದು ಆಚೆ ಬರುವಾಗಲೇ. ಅಬ್ಬಬ್ಬಾ ವಸ್ತುಪ್ರದರ್ಶನಕ್ಕೆ ಹೋಗುವುದೆಂದರೆ ತಿನ್ನುವುದಕ್ಕೇ ಎಂದು ಅಂದುಕೊಳ್ಳುವಷ್ಟು ವಿಧವಿಧದ ತಿಂಡಿಗಳು . ಆಗಲೇ ಹೇಳಿದಂತೆ ಕಾಟನ್ ಕ್ಯಾಂಡಿ ತೆಗೆದುಕೊಂಡು ಮುಖ ಬಾಯಿ ಎಲ್ಲಾ ಅಂಟು ಮಾಡಿಕೊಂಡು ತಿನ್ನುತ್ತಿದ್ದುದು. ಇದು ತೀರಾ ಹತ್ತು ವರ್ಷದ ಒಳಗೆ. ನಂತರ ಕಾಟನ್ ಕ್ಯಾಂಡಿ ಬಿಟ್ಟುಹೋಯಿತು . ಮೊದಲನೇ ಸಾಲು ಬೆಡ್ಶೀಟ್ ದಿಂಬು ಕವರ್ ಗಳ ಅಂಗಡಿಗಳೇ ಹೆಚ್ಚು ಇದ್ದುದರಿಂದ ಅಪ್ಪ ಅಮ್ಮ ಅಲ್ಲಿ ನೋಡುತ್ತಿದ್ದರೆ  ನಮಗೆ ಬಲೂನುಗಳು ವಾಟರ್ ವಾಲ್ ಟಕ್ಕಾಟಿಕ್ಕಿ ಬಾಯಲ್ಲಿ ಊದಿ ನೊರೆಗುಳ್ಳೆ ಹಾರಿಸುವ ಸಾಧನ ಇಂತಹವುಗಳ ಬಗ್ಗೆ ಹೆಚ್ಚು ಗಮನ .

ವಿವಿಧ ಆಕಾರದ ಬಲೂನುಗಳು ಕಡ್ಡಿ ಸಿಕ್ಕಿಸಿ ಗುಂಡನೆಯ ಬಲೂನು ಅದರೊಳಗೆ ಗಿಲಿಗಿಲಿ ಶಬ್ದ ಬರುತ್ತಿತ್ತು ವಾಟರ್ ಫಾಲ್ ಅಂತೂ ಎಷ್ಟೋ ವೇಳೆ ಮನೆಗೆ ಹೋಗುವ ವೇಳೆಗೆ ದಾರ ಕಿತ್ತು ಹೋಗಿರುತ್ತಿತ್ತು .  ಬಿಂದಿ  ಟೇಪು ಸರ ಕ್ಲಿಪ್ ಬಳೆಗಳಂತೂ ಯಾವತ್ತೂ ಬಯಕೆಗಳ ಪಟ್ಟಿಯಲ್ಲಿ . ಎಷ್ಟು ತೆಗೆದುಕೊಂಡರೂ ಅದು ತೆಗೆದುಕೊಳ್ಳಬೇಕಿತ್ತು ಇದು ತೆಗೆದುಕೊಳ್ಳಬೇಕಿತ್ತು ಎನ್ನುವ ತಹತಹ . ನಾವು ಮೂವರು ಸಹೋದರಿಯರು ಇದ್ದುದರಿಂದ, ಇವನ್ನು ಯಾರದು ಯಾರು ಬೇಕಾದರೂ ಬಳಸಬಹುದು ಆದ್ದರಿಂದ ಬೇರೆ ಬೇರೆ ವಿಧದವುಗಳನ್ನು ತೆಗೆದುಕೊಂಡು ವಿನಿಮಯ ಮಾಡಿಕೊಳ್ಳುತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ . Maximum utilisation of available resources . 

ನಂತರದ ತಿರುವಿನಲ್ಲಿ ಬಟ್ಟೆ ಅಂಗಡಿಗಳು ಆರಂಭವಾಗುತ್ತಿದ್ದವು ಆಗ ರೆಡಿಮೇಡ್ ಬಟ್ಟೆ ಹಾಕಿ ಕೊಳ್ಳದ್ದರಿಂದ ಅಷ್ಟೊಂದು ಅದರ ಬಗ್ಗೆ ಗಮನವಿಲ್ಲ. ಅಮ್ಮನಿಗೆ ಸೀರೆಗಳು ಮತ್ತು ಕಡೆಯ ತಂಗಿಗೆ ಕೆಲವೊಂದು ಮ್ಯಾಕ್ಸಿ ಮಿಡಿಗಳ ವ್ಯಾಪಾರವಾಗುತ್ತಿತ್ತು .ಸೀರೆ ಉಡಲು ಆರಂಭಿಸಿದ ಮೇಲೆ ಅಲ್ಲಿಯೂ ಸೀರೆ ಖರೀದಿ ಮತ್ತು ವ್ಯಾನಿಟಿ ಚೀಲಗಳ ಖರೀದಿ ಗೆ ಮೊದಲ ಆದ್ಯತೆ .

ನಂತರದ ಅಂಗಡಿ ಚಿಕ್ಕಿಗಳದು. ಅಗಲದ ದಿಲ್ಲಿ ಹಪ್ಪಳ ಅದರ ಮೇಲೆ ಮೆಣಸಿನ ಪುಡಿ ಉದುರಿಸಿ ಕೊಡುತ್ತಿದ್ದುದು ಯಾರು ಮುರಿದು ಬೀಳಿಸದೆ ತಿನ್ನುತ್ತಾರೆ ಎಂದು ಪೈಪೋಟಿ . ಇನ್ನೂ ವಸ್ತುಪ್ರದರ್ಶನ ಮೆಣಸಿನಕಾಯಿ ಬಾಳೆಕಾಯಿ ಬಜ್ಜಿ ಗಳದ್ದೇ 1ಸಂಭ್ರಮ . ಆಗೆಲ್ಲಾ ಈಗಿನಷ್ಟು ಆರೋಗ್ಯ ಫಿಟ್ನೆಸ್ ಎಂದೆಲ್ಲಾ ಯೋಚಿಸದೆ ತಿನ್ನುತ್ತಿದ್ದುದರಿಂದ ಬಗೆಬಗೆಯ ತಿನಿಸುಗಳನ್ನು ಆಸ್ವಾದಿಸುವ ಅವಕಾಶ.  ಮಧ್ಯೆಮಧ್ಯೆ “ತೀರ್ಥಮ್ ಸಮರ್ಪಯಾಮಿ” ಎಂಬಂತೆ ಕಾಫಿ ಅಥವಾ ಐಸ್ ಕ್ರೀಮ್ ಗಳ ಸೇವನೆ . ರಾಮಣ್ಣನ ಅಂಗಡಿ ಚುರುಮುರಿ ತಿನ್ನದಿದ್ದರೆ ವಸ್ತು ಪ್ರದರ್ಶನಕ್ಕೆ ಹೋಗಿದ್ದೇ ವೇಸ್ಟ್ ಎನ್ನುವ ಹಾಗೆ .  ಸೌತೆಕಾಯಿ ಸೀಬೆಕಾಯಿ ಪೈನಾಪಲ್ ಇತರ ಹಣ್ಣುಗಳ ತಿನ್ನುವ ಆಟವು ಇರುತ್ತಿದ್ದು ದಾದರೂ ಚಾಟ್ ಗಳ ಮುಂದೆ ಅವು ಸಪ್ಪೆ ಎನಿಸುತ್ತಿದ್ದವು . 

ಸರ್ಕಾರದ ವಿವಿಧ ಇಲಾಖೆಗಳು ಪ್ರಾಯೋಜಿಸಿರುವ ಪ್ರದರ್ಶನಗಳಂತೂ ಕಡ್ಡಾಯವಾಗಿ ನೋಡಲೇಬೇಕಿತ್ತು ನಿಜಕ್ಕೂ ಎಷ್ಟು ಸುಂದರವಾಗಿರುತ್ತಿದ್ದವು ಈಗೀಗ ಅವುಗಳ ಕಡೆ ತಿರುಗಿಯೂ ನೋಡುವುದಿಲ್ಲ ಎಂದರೆ ಅಂದಿನ ನಮ್ಮ ಆಸಕ್ತಿಯ ಮಟ್ಟ ಗುರುತಿಸಿಕೊಳ್ಳಬಹುದು . ಅದರಲ್ಲೂ ಅರಣ್ಯ ಇಲಾಖೆಯದಂತೂ ತುಂಬಾನೇ ಚೆನ್ನಾಗಿರುತ್ತಿತ್ತು.  ವಯಸ್ಕರ ಶಿಕ್ಷಣದಲ್ಲಿ ಪುಟ್ಟ ಪುಟ್ಟ ಪುಸ್ತಕಗಳು ಕೊಳ್ಳಲು ಸಿಗುತ್ತಿದ್ದವು  . ಗ್ರಾಮೋದ್ಯೋಗ ಖಾದಿ ನೀರಾವರಿ ವಿದ್ಯುಚ್ಛಕ್ತಿ ಈ ಎಲ್ಲಾ ಇಲಾಖೆಗಳ ಪ್ರದರ್ಶನಗಳನ್ನು ನೋಡುವುದರಿಂದ ಮನರಂಜನೆಯ ಜತೆಗೆ ಜ್ಞಾನಲಾಭ ಕೂಡ. 

ಕಡೆಯಲ್ಲಿ ಆಟಗಳ ಬಳಿ ಬಂದರೆ ನನ್ನ ತಂಗಿಯರು ಜಯಂಟ್ ವೀಲ್ ಅದರಲ್ಲೆಲ್ಲ ಕೂರುತ್ತಿದ್ದರು ಆಟಗಳಿಂದ ನಾನು ಎಂದೆಂದೂ ದೂರ ಹಾಗಾಗಿ ಹೆಚ್ಚು ಹೋಗುತ್ತಿರಲಿಲ್ಲ . ಇಷ್ಟೆಲ್ಲಾ ಸುತ್ತಾಡಿ ಬಂದರೆ ಮನರಂಜನಾ ಕಾರ್ಯಕ್ರಮಗಳು ಸಂಗೀತ ಭಾವಗೀತೆ ಇತ್ಯಾದಿ ನಡೆಯುತ್ತಿದ್ದವು ಅವುಗಳನ್ನು ಒಂದಷ್ಟು ನೋಡಿಕೊಂಡು ಮತ್ತೆ ಅರಮನೆಯ ಕಡೆಯಿಂದ ಮುಖ್ಯ ಬಸ್ ಸ್ಟ್ಯಾಂಡ್ ಗೆ ಬಂದು ಬಸ್ ಹತ್ತಿದರೆ ಅಲ್ಲಿ ಜೇಬಿನ ಸಂಪನ್ನ . ನಂತರ ಸೋಮವಾರ ಶಾಲೆಯಲ್ಲಿ ಗೆಳತಿಯರ ಬಗ್ಗೆ ಅಂದು ಹೋದ ವಿಷಯ ತೆಗೆದು ಕೊಂಡ ವಸ್ತುಗಳ ಬಗ್ಗೆಯೇ ಮಾತು. ವಸ್ತುಗಳನ್ನು ಕೊಂಡಾಗ ನನ್ನ ಖುಷಿ ಅರ್ಧವಾದರೆ ಅದನ್ನು ಗೆಳತಿಯರ ಬಗ್ಗೆ ಹೇಳಿಕೊಂಡಾಗ ಇನ್ನರ್ಧ ಖುಷಿ ಸಂಪೂರ್ಣ ಸಮಾಧಾನ . ಆಗ ಮಾತ್ರ ವೆಂದಲ್ಲ ಈಗಲೂ ಅದೇ ಬುದ್ಧಿ . ಎಷ್ಟು ವಿಚಿತ್ರ ಅಲ್ವಾ ಅಥವಾ ಸಹಜವೂ ಇರಬಹುದು. 

ಅಪ್ಪ ಅಮ್ಮನ ಜೊತೆಯಲ್ಲಿ 1ಭೇಟಿಯಾದರೆ ಅಮ್ಮನ ಗೆಳತಿಯರೆಲ್ಲ ಸೇರಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾಗಿನ ಭೇಟಿಗಳೇ ಬೇರೆಯ ತರಹ. ಸೀರೆ ಅಂಗಡಿ ಪಾತ್ರೆ ಅಂಗಡಿಗಳ ಮುಂದೆಯೇ ಬಹಳಷ್ಟು ಸಮಯ ಕಳೆದು ಹೋಗುತ್ತಿತ್ತು . ಆದರೆ ಅದು 1ತರಹ ಬೇರೆಯದೇ ಖುಷಿ . ಕಾಲೇಜಿಗೆ ಬಂದಮೇಲೆ ಗೆಳತಿಯರೊಡನೆ ಹೋಗಲು ಒಪ್ಪಿಗೆ ಸಿಗುತ್ತಿತ್ತು . ಹಾಗಾಗಿ ಡಿಗ್ರಿಯ 3 ವರ್ಷಗಳೂ ಗೆಳತಿಯರೊಂದಿಗೆ ಒಮ್ಮೆ ಹೋದ ಅನುಭವ. ಮನೆಗೆ ಬರುತ್ತಿದ್ದ ನೆಂಟರೊಡನೆ ಒಂದು ಭೇಟಿ. ಹೀಗಾಗಿ ಕೆಲವೊಂದು ವರ್ಷ ಏಳೆಂಟು ಬಾರಿ ವಸ್ತುಪ್ರದರ್ಶನಕ್ಕೆ ಹೋಗಿದ್ದಿದೆ .  

ಮಾಲ್ಗಳು  ಸಹಾರಾ ಅಥವಾ ಬೇರೆ ತರಹದ ಪ್ರದರ್ಶನಗಳು ಇಲ್ಲದಿದ್ದಾಗ  ವಸ್ತು ಪ್ರದರ್ಶನಗಳು ಆಗಿನ ಸಾಮಾನ್ಯ ಮನರಂಜನಾ ಹಾಗೂ ಖರೀದಿಯ ತಾಣ .  

ವರ್ಷವಿಡೀ ಉಳಿತಾಯದ ಹಣ ವಸ್ತು ಪ್ರದರ್ಶನದಲ್ಲಿ ಬೇಕೆಂದ ವಸ್ತುಗಳನ್ನು ಕೊಳ್ಳಲು ಖರ್ಚು ಮಾಡುತ್ತಿದ್ದೆವು . ಅಲ್ಲದೆ ಅಣ್ಣ (ನಮ್ಮ ತಂದೆ) ದಸರೆಯ ಬೋನಸ್ ಬಂದಾಗ ಸ್ವಲ್ಪ ದುಡ್ಡು ಕೊಟ್ಟಿರುತ್ತಿದ್ದರು ಅದನ್ನು ಸಹ ವಸ್ತು ಪ್ರದರ್ಶನದಲ್ಲೇ ಖರ್ಚು.  ಸೀಮಿತ ಉಳಿತಾಯದಲ್ಲಿ ಜಾಣತನದಲ್ಲಿ ಖರ್ಚು ಆದ್ಯತೆಗಳ ಪಟ್ಟಿ ಇದೆಲ್ಲಾ ಕಲಿಯಲು ಅನುಕೂಲವಾಗಿತ್ತು . ಕೆಲವೊಂದು ಬಾರಿ ಇನ್ನೇನು ವಸ್ತು ಪ್ರದರ್ಶನ ಮುಕ್ತಾಯವಾಗುತ್ತದೆ ಎನ್ನುವಾಗ ಕಡಿಮೆ ದರದಲ್ಲಿ ಕೊಡುತ್ತಾರೆಂದು ಹೇಳಿ ಕಡೆಯ ದಿನ ಬೆಳಗಿನ ಮಧ್ಯಾಹ್ನದ ಸಮಯದಲ್ಲಿ ವಸ್ತುಪ್ರದರ್ಶನಕ್ಕೆ ಹೋಗಿದ್ದೂ ಉಂಟು. ಒಮ್ಮೆ ಡಿಗ್ರಿಯಲ್ಲಿ ಕಲಿಯುತ್ತಿದ್ದಾಗ ಯೋಚಿಸಿದ್ದುಂಟು ಕೆಲಸಕ್ಕೆ ಸೇರಿದ ಮೇಲೆ ಒಂದಿಡೀ ತಿಂಗಳ ಸಂಬಳವನ್ನಾದರೂ ತಂದು ಬೇಕೆನಿಸಿದ ಸಣ್ಣಪುಟ್ಟ ವಸ್ತುಗಳನ್ನೆಲ್ಲಾ ಕೊಂಡುಕೊಳ್ಳಬೇಕು ಎಂದು. ಜೀವನವೇ ಅಷ್ಟೇ ಅಲ್ಲವೇ ಹಲ್ಲಿದ್ದಾಗ ಕಡಲೆಯಿಲ್ಲ ಕಡಲೆ ಸಿಕ್ಕಿದಾಗ ಹಲ್ಲೆ ಇರುವುದಿಲ್ಲ . ಈಗ ಹಣವಿದ್ದರೂ ಆ ವಸ್ತುಗಳ ಮೇಲಿನ ಬಯಕೆಯೇ ಹೋಗಿಬಿಟ್ಟಿದೆ. ತೆಗೆದುಕೊಳ್ಳುವುದಾದರೂ ದಂಡ ಎಂಬಂತೆ ಆಗಿಹೋಗಿದೆ . ಒಂದು ಕಾಲದಲ್ಲಿ ಅತಿ ಪ್ರಿಯ ಎನಿಸಿದ್ದು ಈಗ ಸಾಧಾರಣ ಅಥವಾ ಬೇಡವೇ ಬೇಡ ಎಂಬಂತೆ ಆಗಿಹೋಗುವುದು ಬದುಕಿನ ಘಟ್ಟಗಳಲ್ಲಿ ಸಿಕ್ಕಾಪಟ್ಟೆ ಸಹಜ ಅಲ್ಲವಾ?

ಎಲ್ಲಾ ಹೇಳಿ ವಸ್ತುಪ್ರದರ್ಶನದ ಫೋಟೋಗಳ ಬಗ್ಗೆ ಹೇಳದಿದ್ದರೆ ನಡೆಯುತ್ತದೆಯೇ? ಈಗಿನ ಹಾಗೆ ಕೈಯಲ್ಲಿ ಕ್ಯಾಮೆರಾ ಅಥವಾ ಮೊಬೈಲ್ ಇರದಿದ್ದ ಕಾಲ.  ಸ್ಟುಡಿಯೋಗಳಿಗೆ ಹೋಗಿಯೇ ಫೋಟೋ ತೆಗೆಸಬೇಕಿತ್ತು. ಮತ್ತೆ ಆ ಫೋಟೋಗಳನ್ನು ಪಡೆಯಲು  ದಿನಗಟ್ಟಲೆ ಕಾಯಬೇಕಿತ್ತು . ಆದರೆ ವಸ್ತು ಪ್ರದರ್ಶನದ ಸ್ಟುಡಿಯೋಗಳಲ್ಲಿ ಕಾಯುವ ಗೋಜೇ ಇಲ್ಲ. ಅರ್ಧ ಗಂಟೆ ಅಥವಾ 1ಗಂಟೆ ಬಿಟ್ಟರೆ ಸಿದ್ಧವಾದ ಫೋಟೊಗಳು ಕೈ ಸೇರುತ್ತಿದ್ದವು . ಹಾಗಾಗಿ ಅಲ್ಲಿ ಫೋಟೋಗಳಿಗೆ ತುಂಬಾ ಡಿಮ್ಯಾಂಡ್ . ಎಷ್ಟೋ ಬಾರಿ ಕ್ಯೂನಲ್ಲಿ ನಿಂತಿದ್ದು ಸಹ ಇದೆ . ಹೀಗೆ ವಸ್ತು ಪ್ರದರ್ಶನದಲ್ಲಿ ತೆಗೆಸಿದ ಕಪ್ಪು ಬಿಳುಪು ಫೋಟೋಗಳು ನನ್ನ ಬಳಿ ಹಲವಾರು ಇದೆ. 

ಅಪ್ಪ ಅಮ್ಮ ನನ್ನ ಜತೆ ನನ್ನನ್ನು ಎತ್ತಿಕೊಂಡಿರುವ ಫೋಟೋ ತುಂಬಾ ಚಿಕ್ಕವಳಿದ್ದಾಗ. ನಂತರ ನಾವು ಮೂವರು ಮೊದಲಿಗೆ ನಾವಿಬ್ಬರೇ ಅಕ್ಕತಂಗಿಯರು ನಂತರ ಕಡೆಯವಳು ಹುಟ್ಟಿದ ಮೇಲೆ ಮೂವರು ಅಕ್ಕತಂಗಿಯರು ಕ್ಲಿಕ್ಕಿಸಿದ ಫೋಟೋ . ಒಮ್ಮೆ ಅಣ್ಣನ ಗೆಳೆಯ ಬಾಲು ಅವರ  ಸಂಸಾರದೊಂದಿಗೆ ಹೋದಾಗ ಅವರ ಇಬ್ಬರು ಮಕ್ಕಳ ಜತೆ ನಾನು ಕುಳಿತು ತೆಗೆಸಿದ ಫೋಟೊ  ಹೀಗೆ . ಈಗ ಅವುಗಳನ್ನೆಲ್ಲ ತೆಗೆದಿಟ್ಟು ನೋಡುವಾಗ ಆ ಸವಿ ನೆನಪು ತನ್ನಿಂತಾನೆ ಹರಿದುಬರುತ್ತದೆ .

ಅಪ್ರಯತ್ನ ಮುಖದಲ್ಲಿ ನಗೆ ಮೂಡುತ್ತದೆ ಸಂಭ್ರಮ ನೆಲೆ ಮಾಡುತ್ತದೆ . 

ಮದುವೆಗೆ ಮುಂಚೆ ರವೀಶ್ ರೊಂದಿಗೆ ಒಮ್ಮೆ ವಸ್ತುಪ್ರದರ್ಶನ ಸುತ್ತಿದ್ದು ಮರೆಯಲಾಗದ ಸವಿ ನೆನಪು . ನಂತರವೂ ಎಷ್ಟೋ ವರ್ಷ ಪ್ರತಿ ಬಾರಿಯೂ ಹೋಗಿದ್ದೇವೆ. ಇದೀಗ ವಿಜಯದಶಮಿ ಮುಗಿದಿದೆ ಆದರೆ ವಸ್ತು ಪ್ರದರ್ಶನಕ್ಕೆ ಹೋಗುವ ಉತ್ಸಾಹವೇ ಇಲ್ಲ . ಇಡೀ ವರುಷ ಕಾದು ವಸ್ತು ಪ್ರದರ್ಶನಕ್ಕೆ ಎಷ್ಟು ಬಾರಿಯಾದರೂ ಬೇಸರವಿಲ್ಲದೆ ಹೋಗುತ್ತಿದ್ದ ಆ ಕಾಲವೆಲ್ಲಿ? ಅಯ್ಯೋ ತೆಗೆದುಕೊಳ್ಳುವುದು ಏನೂ ಇಲ್ಲ ತಿಂದರೆ ಆರೋಗ್ಯಕ್ಕೆ ಸರಿಹೋಗುವುದಿಲ್ಲ ಎಂದು ಒಂದು ಬಾರಿಯೂ ವಸ್ತುಪ್ರದರ್ಶನಕ್ಕೆ ಭೇಟಿ ಕೊಡದ ಈ ದಿನಗಳೆಲ್ಲಿ?

ಸಣ್ಣ ಸಣ್ಣ ವಿಷಯಗಳಲ್ಲಿ ಸಂತಸ ಕಾಣುವ ಅಭ್ಯಾಸ ಮರೆಯಾಗುತ್ತಿದೆಯೇ? ಅಥವಾ ಮನರಂಜನೆಗೆ ವಿವಿಧ ಆಯಾಮ ಮಗ್ಗುಲುಗಳು ದೊರಕಿ ಇದು ಕಡೆಯ ಸಾಲು ಸೇರುತ್ತಿದೆಯೇ ? ಏನಾದರೂ ಆಗಿರಲಿ;  

ಬದಲಾದ ಅಥವಾ ನಶಿಸಿದ ಆದ್ಯತೆಗಳ ಪಟ್ಟಿಯಲ್ಲಿ ವಸ್ತುಪ್ರದರ್ಶನ ಭೇಟಿಯೂ ಸೇರಿಕೊಂಡದ್ದು ವಿಪರ್ಯಾಸವೇ ಸರಿ.  “ಕಾಲಾಯ ತಸ್ಮೈನಮಃ” ಎನ್ನದೆ ವಿಧಿಯೇ ಇಲ್ಲ . 


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

Leave a Reply

Back To Top