ವ್ಯಾಲಂಟೈನ್ಸ್ ಡೇ ಗಝಲ್

ಎ.ಹೇಮಗಂಗಾ

ಗಝಲ್
ಬೆಳದಿಂಗಳ ರಾತ್ರಿಯೊಂದನು ನಿನ್ನ ಜೊತೆಯಲಿ ಕಳೆಯಬೇಕಿದೆ
ತಿಂಗಳ ತಿಳಿಬೆಳಕ ತಂಪಲಿ ಹರವಾದ ನಿನ್ನೆದೆಗೆ ಒರಗಬೇಕಿದೆ
ಕಣ್ಣ ಸನ್ನೆಯಲೇ ಪ್ರೀತಿ ನಿವೇದಿಸಿ ಒಲಿಸಿ ಒಲಿದು ನಲಿವ ತಂದೆ
ಸಂವೇದಿಸುವ ನಿನ್ನೆದುರು ಹೂತ ಭಾವಗಳ ತೆರೆದು ಇಡಬೇಕಿದೆ
ಒಡ್ಡನ್ನೊಂದನು ಕಟ್ಟಿದ್ದೇನೆ ಅಂತರಾಳದ ನೂರು ನೋವ ತೊರೆಗೆ
ಜಗದ ಜಂಜಡವನ್ನೆಲ್ಲಾ ನಿನ್ನ ತೋಳ್ಸೆರೆಯಲಿ ಮರೆಯಬೇಕಿದೆ
ಬಲವೆಲ್ಲಿದೆ ತನುವಲಿ ವಿರಹಾಗ್ನಿ ಅಣುಅಣುವನೂ ಸುಡುತಿರಲು ?
ಅಧರ ಮಧುಪಾನದಿ ಪ್ರಾಣಕೆ ತ್ರಾಣವನು ತುಂಬಿಕೊಳ್ಳಬೇಕಿದೆ
ಬದುಕ ಹಾದಿಯಲಿ ನಿನ್ನೊಲವ ಹಸಿರೊಂದಿರೆ ನಿತ್ಯೋತ್ಸವವೆನಗೆ
ಕಲ್ಲು ಮುಳ್ಳುಗಳ ಬದಿಗೊತ್ತಿ ಕೈಗೆ ಕೈ ಬೆಸೆದು ನಡೆಯಬೇಕಿದೆ
ಮರಣ ಬರುವುದೇ ಆದರೆ ಬರಲಿಬಿಡು ನಿನ್ನ ಅಕ್ಕರೆ ಉಡಿಯಲಿ
‘ಕಾಲ ನನಗಾಗಿ ನಿಂತಲ್ಲೇ ನಿಲ್ಲಲೆಂ’ದು ದೈವದಿ ಪ್ರಾರ್ಥಿಸಬೇಕಿದೆ
ತಿಳಿಯದು ‘ ಹೇಮ’ಳಿಗೆ ವಿಧಿಲಿಖಿತ ಏನೆಂದು ಭವಿತವ್ಯದಲಿ
ಪ್ರೇಮ ಸಂಯೋಗದಿ ನಿನ್ನಲ್ಲೇ ಶಾಶ್ವತವಾಗಿ ಲೀನವಾಗಬೇಕಿದೆ
*********