ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ.
ವಿಜಯಶ್ರೀ ಹಾಲಾಡಿ
ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ……(ಮಕ್ಕಳ ಕತೆ)
ಅವತ್ತು ಬೆಳಗ್ಗೆ ಚಳಿ. ಇಬ್ಬನಿ ಹನಿ ಕೂತ ನಾಚಿಕೆ ಮುಳ್ಳಿನ ಗಿಡ ಮತ್ತಷ್ಟು ನಾಚಿ ಮಣ್ಣ ಹೆಗಲಿಗೆ ತಲೆ ಇಟ್ಟಿತ್ತು. ಸುತ್ತ ಕಣ್ಣರಳಿಸಿ ನೋಡಿದ ಬೆಳ್ಳಿಬೆಕ್ಕು ಬಾಳೆಗಿಡದ ಬುಡದಲ್ಲಿ ಶ್ರದ್ಧೆಯಿಂದ ಗುಂಡಿ ತೋಡತೊಡಗಿತ್ತು. ನಿನ್ನೆ ಪುಟ್ಟ ಹೇಳುತ್ತಿದ್ದ ‘ಬೆಳ್ಳಿಯ ಬಾಲ ಟಿಶ್ಯೂ ಪೇಪರ್, ಸುಸ್ಸು ಮಾಡಿ ಅದರಲ್ಲೇ ಒರೆಸಿಕೊಳ್ಳೋದು.’ ಅಂತ! ಬೆಳ್ಳಿಗೆ ನಗು ಬಂತು. ಹಾಗೆ ಒಂದು ಹಾಡು ಗುನುಗತೊಡಗಿತು. ‘ಅದ್ಸರಿ ಪ್ರತಿ ದಿನ ನೋಡ್ತೀನಿ ಈ ಬಾಗಾಳು ಮರ ಬೆಳ್‌ಬೆಳಗ್ಗೆ ಒಂದಷ್ಟು ಹೂ ತಯಾರಿಸಿ ಎಸೆದಿರುತ್ತಲ್ಲ, ಏನು ಸೊಕ್ಕು ಅಂತೀನಿ’ !! ಬೆಳ್ಳಿಬೆಕ್ಕಿಗೆ ಒಬ್ಬೊಬ್ನೆ ಮಾತಾಡೋ ಚಟ! ‘ನಮ್ಮ ಪುಟ್ಟನ ಶಾಲೆಯಲ್ಲಿ ಸಿ.ಸಿ. ಕ್ಯಾಮರಾ ಅಂತೆ.. ಕಥೆ ಪಡ್ಚ ಆಯ್ತು. ಆ ಕ್ಯಾಮರಾದಡಿ ಓದುವುದು ಹೇಗಪ್ಪ, ಹರಟೆ ಹೊಡೆಯುವುದು ಹೇಗೆ, ಹುಣಸೇಬೀಜ ತಿನ್ನೋದು ಹೇಗೆ, ಕದ್ದು ಆಡೋವಾಗ ಕ್ಯಾಮರಾ ಆಫ್ ಮಾಡ್ತಾನಾ ಹೇಗೆ, ” ” “’ ನಗು ಬಂದು ಉರುಳಿ ಉರುಳಿ ನಕ್ಕು ಬಿಟ್ಟಿತ್ತು.
‘ಹೂ ಗುಂಡಿ ಸರಿ ಹೋಗಿಲ್ಲ ಇನ್ನು’ ತನ್ನ ತಲೆಗೆ ತಾನೇ ಹೊಡೆದುಕೊಂಡು ಮಿದು ಪಂಜದಲ್ಲಿ ಮಣ್ಣು ಹೊರ ಹಾಕತೊಡಗಿತು. ‘ಹೂಂ ಬೆಳ್ಳಿ ಶಹಭಾಷ್ ಈಗ ಸರಿ ಹೋಯ್ತು’ ಪಟಪಟ ಬಾಲ ಬಡಿದು ಗುಂಡಿ ಮೇಲೆ ಕೂರಬೇಕೆನ್ನುವಾಗ..‘ಇದೆಂತದಪ್ಪ ಆ ಹಲಸಿನ ಮರದ ಮೇಲೆ?’ ಥಟ್ಟ ಎದ್ದು ಹಲಸಿನ ಮರದ ಕಡೆಗೆ ನೆಗೆಯಿತು. ನೋಡುವುದೆಂತ !! ಅಲ್ಲೂ ಒಂದು ಸಿ.ಸಿ. ಕ್ಯಾಮರಾ! ‘ಹಾಂ ಇದೆಂತ ಕಥೆಯಪ್ಪ ಪುಟ್ಟನ ಅಪ್ಪ ಹಾಕಿಸಿದ್ದ ಅಂತ’. ಬೆಳ್ಳಿ ಮೂಗಿನ ಮೇಲೆ ಬೆರಳಿಟ್ಟು ಬಾಲದ ಮಣ್ಣನ್ನು ಕೊಡವಿತು. ‘ಅಯ್ಯೋ ಕ್ಯಾಮರಾ ನಾನು ತೋಡಿದ ಗುಂಡಿಯನ್ನೇ ನೋಡುತ್ತಿದೆ ಥೂ. ಕಕ್ಕ ಮಾಡೋದು ಹೇಗೆ ಈಗ?’ ಯೋಚಿಸುತ್ತಾ ಬೆಳ್ಳಿಗೆ ಸಿಟ್ಟು ಬಂದು ಬಿಳಿಯ ಮುಖ ಕೆಂಪಾಯಿತು.
ಧಪಧಪ ಕಾಲು ಬಡಿಯುತ್ತಾ ಮನೆಯೊಳಗೆ ಓಡಿ ಕಂಪ್ಯೂಟರ್ ಹತ್ತಿ ಹೊದಿಕೆಯೊಳಗೆ ತಲೆ ಹಾಕಿ ಮಲಗಿತು. ‘ಎಲ್ಲರೂ ಕೇಳಿಸಿಕೊಳ್ಳಿ ಇನ್ನು ನಾಲ್ಕು ದಿನ ಕಕ್ಕ ಮಾಡೋಲ್ಲ, ಐದನೇ ದಿನ ಆ ಸಿ.ಸಿ. ಕ್ಯಾಮರಾ ಅಲ್ಲಿಂದ ಹೋದರೆ ಸರಿ ಇಲ್ಲಾ ಅಂದ್ರೆ ಅಷ್ಟೆ! ಪುಟ್ಟ ನನ್ನನ್ನು ಕಳಕೋಬೇಕಾಗುತ್ತೆ, ನಂಗೇನೂ ಬೇರೆ ಮನೆ ಸಿಗಲ್ವ..’ !?ತಿರುತಿರುಗಿ ಗೊಣಗಿತು. ಹೆದರಿಕೆ ಏನೀಗ ಜೋರಾಗೇ ಅರಚಿತು. ಪುಟ್ಟನ ಅಮ್ಮ ಬಂದು ‘ಈ ಬೆಕ್ಕಿಗೆ ಏನಾಯ್ತಪ್ಪ ಪೋಕಾಲ’ ಎಂದು ತಲೆಗೆ ಮೊಟಕಿದರು. ಬೆಳ್ಳಿ ಸುಯ್ಯನೆ ಬಾಲ ಮಡಚಿ ಚಳಿ ಚಳಿ ಎನ್ನುತ್ತ ನಿದ್ದೆಯ ನಾಟಕ ಮಾಡಹತ್ತಿತು!
*****************************