ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಕಾವ್ಯೋದ್ಯಾನ :ಲೇಖನಗಳು

ಲೇಖಕರು :ಎಲ್ ಎಸ್ ಶೇಷಗಿರಿರಾವ್

ಕಾವ್ಯೋದ್ಯಾನ :  ಲೇಖನಗಳು

ಲೇಖಕರು :ಎಲ್ ಎಸ್ ಶೇಷಗಿರಿರಾವ್ 

ಪ್ರಥಮ ಮುದ್ರಣ  ೨೦೧೮

ಪ್ರಕಾಶಕರು ಅಂಕಿತ ಪುಸ್ತಕ 

ಲಕ್ಷ್ಮೇಶ್ವರ ಸ್ವಾಮಿರಾವ್ ಶೇಷಗಿರಿರಾವ್ ಸಾಹಿತ್ಯ ವಲಯದಲ್ಲೆಲ್ಲಾ ಎಲ್ಎಸ್ಎಸ್ ಎಂದೇ  ಚಿರಪರಿಚಿತ ಹೆಸರು. ೧೬.೦೨.೧೯೨೫ ರಲ್ಲಿ ಜನಿಸಿದ ಇವರು ಶ್ರೇಷ್ಠ ಹಿರಿಯ ಸಾಹಿತಿ ವಿಮರ್ಶಕ ಮತ್ತು ನಿಘಂಟು ತಜ್ಞರು.  ಬಿ ಎ ಆನರ್ಸ್ ಪದವಿ ಪರೀಕ್ಷೆಯಲ್ಲಿ ಎಸ್ ಸಿ ನಂಜುಂಡಯ್ಯ ಚಿನ್ನದ ಪದಕ ಪಡೆದು ಹತ್ತೊಂಬತ್ತನೆಯ ವಯಸ್ಸಿಗೆ ಪ್ರಾಧ್ಯಾಪಕರಾಗಿ ಅಖಂಡ ನಲವತ್ತು ವರ್ಷ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಾಹಿತ್ಯ ಬೋಧಿಸಿದ ಹೆಗ್ಗಳಿಕೆ ಇವರದು. ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಇವರು ಕನ್ನಡ ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ಶ್ಲಾಘನೀಯ. ಇವರ ಕೃತಿಗಳ ಪಟ್ಟಿ ನೋಡಿ .

4 ಸಣ್ಣಕಥೆಗಳ ಸಂಕಲನಗಳು,  ೨೪ ವಿಮರ್ಶಾತ್ಮಕ ಗ್ರಂಥಗಳು, 4 ನಾಟಕಗಳು 6 ನಿಘಂಟುಗಳು (ಕನ್ನಡ ಕನ್ನಡ ಇಂಗ್ಲಿಷ್ ಇಂಗ್ಲಿಷ್ ಕನ್ನಡ) 4 ಅನುವಾದಿತ ಕೃತಿಗಳು, ಸಂಪಾದಿತ 9 ಕೃತಿಗಳು, ಇಂಗ್ಲಿಷ್ ಲ್ಲಿ ಅನುವಾದಿತ ಸಂಪಾದಿತ ಕೃತಿಗಳು ಮೂವತ್ತೊಂದು, ಮಕ್ಕಳ ಸಾಹಿತ್ಯ 9 ಕೃತಿಗಳು, ಮಕ್ಕಳಿಗಾಗಿ 4 ಕೃತಿಗಳು. ಅತ್ಯಂತ ಮಹತ್ವವಾದುದು ಎಂದರೆ ರಾಷ್ಟ್ರೋತ್ಥಾನ ಪರಿಷತ್ತಿನ ಭಾರತ ಭಾರತಿ ಪುಸ್ತಕಗಳ ಸಂಪಾದಕತ್ವ. ಇಷ್ಟೆಲ್ಲಾ ಕೃತಿಗಳನ್ನು ಕಾರ್ಯಗಳನ್ನು ವ್ಯಕ್ತಿಯಾಗಿ ಇವರು ನಿರ್ವಹಿಸಿರುವುದು ತುಂಬಾನೇ ಅಚ್ಚರಿಯ ವಿಷಯ. ತಮ್ಮ ತೊಂಬತ್ತ ನಾಲ್ಕನೆಯ ವಯಸ್ಸಿನಲ್ಲಿ ೨೦.೧೨.೨೦೧೯ರಲ್ಲಿ ಇಹಲೋಕ ತ್ಯಜಿಸಿದರು. 

ಇಷ್ಟೆಲ್ಲಾ ಮಹತ್ಸಾಧನೆಯ ತ್ರಿವಿಕ್ರಮ ಸಾಹಸದ ಈ ವಾಮನ ಮೂರ್ತಿಗೆ ಲಭಿಸಿದ ಪುರಸ್ಕಾರಗಳು ಅನೇಕ .ಕರ್ನಾಟಕ ರಾಜ್ಯೋತ್ಸವ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ ವರ್ಧಮಾನ ಪ್ರಶಸ್ತಿ` ಡಾಕ್ಟರ್ ಅನಕೃ ಪ್ರಶಸ್ತಿ` ಬಿಎಂಶ್ರೀ ಪ್ರಶಸ್ತಿ` ಬಿ ಎಂ ಇನಾಮದಾರ ಪ್ರಶಸ್ತಿ `ಕಾವ್ಯಾನಂದ ಪ್ರಶಸ್ತಿ` ದೇವರಾಜ ಬಹದ್ದೂರ್ ಪ್ರಶಸ್ತಿ` ಮಾಸ್ತಿ ಪ್ರಶಸ್ತಿ ಇತ್ಯಾದಿ. ಉಡುಪಿಯಲ್ಲಿ ನಡೆದ  ೨೦೦೭ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .

ನವ್ಯಸಾಹಿತ್ಯ ಚಳುವಳಿ ಕಾಲದಲ್ಲಿಯೂ ಸತತವಾಗಿ ತಮ್ಮ ವಿಮರ್ಶೆಯನ್ನು ಬರೆಯುತ್ತ ಬಂದ ಇವರನ್ನು “ಸಜ್ಜನಿಕೆಯ ಸಾಹಿತ್ಯ ಗಿರಿ” ಎಂದು ಕರೆದಿರುವುದು ಅತಿಶಯೋಕ್ತಿ ಅಲ್ಲವೇ ಅಲ್ಲ.

ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ .ಮನಸ್ಸಂತೋಷಕ್ಕಾಗಿ ಕನ್ನಡ ಸಾಹಿತ್ಯ ಓದುತ್ತಾ ಬೆಳೆದವಳು.  ಇಂಗ್ಲಿಷ್ ಕಾವ್ಯ ಪ್ರಕಾರಗಳು ಪಠ್ಯ ಪುಸ್ತಕದಲ್ಲಿ ಓದಿದವಷ್ಟೆ.  ಮಿಕ್ಕ ಸ್ವಂತ ಆಸಕ್ತಿಯ ಓದಿನಲ್ಲಿ ಆಂಗ್ಲ ಕಾದಂಬರಿಗಳು ಇದ್ದವಷ್ಟೆ . ಹಾಗಾಗಿ ಆಂಗ್ಲ ಕವನಗಳ ಕವಿಗಳ ವಿಷಯದಲ್ಲಿ ನನ್ನದು ತೀರಾ ಹೆಬ್ಬೆಟ್ಟು. ಸ್ವಲ್ಪ ದಿನಗಳ ಹಿಂದೆ ಆನ್ ಲೈನ್ ನಲ್ಲಿ ಪುಸ್ತಕ ಹುಡುಕುವಾಗ ಈ ಪುಸ್ತಕ ಕಣ್ಣಿಗೆ ಬಿದ್ದಿತು. ಸ್ವಲ್ಪವಾದರೂ ಇಂಗ್ಲಿಷ್ ಕವಿಗಳ ಬಗ್ಗೆ ತಿಳಿಯಲು ಸಹಾಯಕವಾಗಬಹುದೆಂದು ಇದನ್ನು ಓದಲಾರಂಭಿಸಿದೆ .ಶ್ರವಣ ಮಾಧ್ಯಮವಾಗಿದ್ದರೆ ಕಾಲೇಜಿನ ಕೊಠಡಿಯಲ್ಲಿ ಕುಳಿತು ಪಾಠ ಕೇಳಿದ ಅನುಭವ ಕೊಡುವ ಲೆಕ್ಚರ್ ರೀತಿಯ ಬರಹಗಳು. ನನ್ನ ಅಜ್ಞತೆಯನ್ನು ಚೂರಾದರೂ ಹೋಗಲಾಡಿಸಿವೆ. 

ಕಾವ್ಯೋಧ್ಯಾನ ಶ್ರೇಷ್ಠ ಇಂಗ್ಲಿಷ್ ಕವನಗಳ ಪರಿಚಯ .ಒಟ್ಟು ಇಪ್ಪತ್ತ ನಾಲ್ಕು  ಕವಿಗಳ ಜೀವನ ಪರಿಚಯದೊಂದಿಗೆ ಅವರ ಮುಖ್ಯ ಪ್ರಸಿದ್ಧ ಒಂದೆರಡು ಕವನಗಳ ಬಗ್ಗೆ ಉಲ್ಲೇಖಿಸಿದ್ದಾರೆ. ರಾಬರ್ಟ್ ಬರ್ನ್ಸ್, ಬೈರನ್, ವರ್ಡ್ಸ್ ವರ್ತ್, ಜಾನ್ ಕೀಟ್ಸ್ ,ಯೇಟ್ಸ್  ಸ್ವಲ್ಪ ಕೇಳಿದ್ದ ಹೆಸರುಗಳು . ಜೆಫ್ರಿ ಚಾಸರ್, ಆಂಡ್ರ್ಯೂ ಮಾರ್ವೆಲ್, ಎಸ್ಟಿ ಕೋಲ್ರಿಜ್, ಎಮಿಲಿ ಡಿಕಿನ್ಸನ್ ಇವರನ್ನೆಲ್ಲ ಕೇಳಿಯೂ ತಿಳಿದಿರಲಿಲ್ಲ .ಇಂಗ್ಲೆಂಡ್ ಹಾಗೂ ಅಮೇರಿಕದ ಕವಿಗಳ ಉಲ್ಲೇಖವಿದೆ ಈ ಪುಸ್ತಕದಲ್ಲಿ.

ಸಾಮಾನ್ಯ ಹೆಂಗೆಳೆಯರ ಅನುಭವ ಇದು .ಸೀರೆ ಅಂಗಡಿಗೆ ಹೋದಾಗ ಎಲ್ಲಾ ವಿಧದ ಸೀರೆಗಳನ್ನು ಒಂದೊಂದು ಸಾಲಾಗಿ ಜೋಡಿಸಿಟ್ಟು ಇಷ್ಟವಾದ ಪ್ರಕಾರ ಹೇಳಿದರೆ ಅದರಲ್ಲಿನ ಮತ್ತಷ್ಟು ಬಣ್ಣ ಹಾಗೂ ವೆರೈಟಿಗಳನ್ನು ತೋರಿಸುತ್ತಾರೆ. ಆ ರೀತಿಯ ಒಂದು ಶೋಕೇಸ್ನ ಹಾಗೆ ಈ ಪುಸ್ತಕ. ನಮಗಿಷ್ಟ ಎನಿಸಿದ ಕವಿಯನ್ನು ನಾವು ಹೆಚ್ಚು ಆಳವಾಗಿ ಅಭ್ಯಸಿಸಬಹುದು. 

ಮೊದಲಿಗೆ ಜೆಫ್ರಿ ಚಾಸರ್ ನ “ದಿ ಪ್ರೊಲಾಗ್” (ಕ್ಯಾಂಟರ್ಬರಿ ಟೇಲ್ಸ್) ನ ಬಗ್ಗೆ ಹೇಳುತ್ತಾ ಹೊಸ ಇಂಗ್ಲಿಷ್ ಸಾಹಿತ್ಯ ಶುರುವಾದದ್ದೇ ಇವನ ಕಾಲದಲ್ಲಿ ಎಂಬ ಮಾಹಿತಿ ಕೊಡುತ್ತಾರೆ ಹಾಗೂ ಅಂದಿನ ಭಾಷಾಪ್ರಯೋಗ ಅರ್ಥಮಾಡಿಕೊಳ್ಳಲು ಕಷ್ಟವೆನ್ನುತ್ತಾರೆ.  

ಶೇಕ್ಸ್ಪಿಯರ್ನ ಜೀವನಗಾಥೆಯ ವರ್ಣನೆಯೊಂದಿಗೆ ಸುನೀತಗಳ ಬಗ್ಗೆ ತಿಳಿಸುತ್ತಾ ಒಟ್ಟು ನೂರ ಐವತ್ತ್ ನಾಲ್ಕು ಸುನೀತಾ (ಸಾನೆಟ್) ನಲ್ಲಿ ಅತಿಶ್ರೇಷ್ಠವಾದುದು ಇಪ್ಪತ್ತು/ಇಪ್ಪತ್ತೈದು. ಆದರೆ ಅದಷ್ಟೇ ಸಾಕು ಶೇಕ್ಸ್ ಪಿಯರ್ ನನ್ನು ಶ್ರೇಷ್ಠ ಕವಿಗಳ ಪಂಕ್ತಿಯಲ್ಲಿ ರಲು ಪಂಕ್ತಿಯಲ್ಲಿ ರಿಸಲು ಎಂದು ಶ್ಲಾಘಿಸುತ್ತಾರೆ .ಲಕ್ಷ್ಮಿನಾರಾಯಣ ಭಟ್ಟರು ಶೇಕ್ಸ್ಪಿಯರನ ಸಾನೆಟ್ಗಳನ್ನು ಅನುವಾದ ಮಾಡಿದರೆ (ನನ್ನ ಮುಂದಿನ ಓದು ಅದು). ಹೆಣ್ಣು ಗಂಡಿನ ಮಧ್ಯದ ಕಾಮದ ಬಗೆಗಿನ ಸಾನೆಟ್ ನ ಅನುವಾದ ನೋಡಿ 

ಅತಿ ಕೀಳು, ಕ್ರಯೆಗೆ ಹಾಯುವವರೆಗೆ 

ಘಾತಕ, ಮೃಗೀಯ, ವಂಚಕ, ಹೇಯ ಎನಿಸುವುದು 

ಸುಖಿಸಿ ಮುಗಿಯಿತೊ ಮತ್ತೆ ಹೇಸುವುದು ಅದೇ ಗಳಿಗೆ 

ಆದರೆ “ತಿಳಿಯದಾರಿಗೂ ಮಾತ್ರ ನರಕ ಕೆಳೆಯುವ ನಾಕ ದೂರವಿರಿಸುವ ಸೂತ್ರ”. 

ಇಂಗ್ಲಿಷ್ ಸಾಹಿತ್ಯದ ರೊಮ್ಯಾಂಟಿಕ್ ಯುಗದ ಕವಿ ವಿಲಿಯಂ ವರ್ಡ್ಸ್ ವರ್ತ್.  ಇವನ ರಚನೆಗಳು ಖುಷಿಯಾಗಿ ಹಾಡುವ ಮಧುರ ಪ್ರೇಮ ಗೀತೆಗಳು.  ಅವನ ಪ್ರಕಾರ ಜಗತ್ತಿನಲ್ಲಿ 2 ಸಮನಿಲ್ಲದ ಅನುಭವಗಳು . ಅವಳ ಚೆಲುವು ಮತ್ತು ಅವನ ಪ್ರೇಮ ಅವುಗಳೇ ಪರಸ್ಪರ ಸಮಾನ ಎನ್ನುತ್ತಾನೆ.

O My luve’s like a red, red rose 

that is newly sprung in june 

O  my luv’s is like a melody 

that is sweetly played in tune 

ಇವನ Auld long syne (old long since)

ಎಂಬುದು ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಸ್ವಾಗತ ಕೋರುವ ಗೀತೆ ಇಂಗ್ಲಿಷ್ ಗೀತಗಳು ನಲ್ಲಿ ಬಿಎಂಶ್ರೀಯವರ ಅನುವಾದ ಗಮನಿಸಿ 

ಹಳೆಯ ಕೆಳೆಯರ ಮರೆಯಬಹುದೇ 

ಹಳೆಯ ಕಾಲದ ಜನಗಳ

ಹಳೆಯ ಕೆಳೆಯರ ಮರೆಯಬಹುದೇ 

ಕಳೆದ ಹಿಂದಿನ ದಿನಗಳ?

ಶಾಲೆಯ ದಿನಗಳಲ್ಲಿ ಓದಿದ “ಸಾಲಿಟರಿ ರೀಪರ್” ಪದ್ಯದ ಕರ್ತೃ ವಿಲಿಯಂ ವರ್ಡ್ಸ್ ವರ್ತ್ ನ ಬಗ್ಗೆ ತಿಳಿದ ಹಾಗಾಯಿತು. ಅವನ ಪ್ರಸಿದ್ಧ ಕೃತಿ ಟಿಂಟರ್ನ್ ಅಬೆ ಮತ್ತು ಲೂಸಿಯಾ ಕವನಗಳ ಉಲ್ಲೇಖವಿದೆ. “ಸಾಲಿಟರಿ ರೀಪರ್” ಕವನವನ್ನು ಕುವೆಂಪು ಅವರು ಅನುವಾದಿಸಿದ್ದಾರೆ. 

ಡಬ್ಲ್ಯೂ ಬಿ ಯೇಟ್ಸ್ : ರವೀಂದ್ರನಾಥ ಠಾಕೂರರ ಗೀತಾಂಜಲಿಯ ಇಂಗ್ಲೀಷ್ ಅನುವಾದಕ್ಕೆ ಮುನ್ನುಡಿ ಬರೆದು ಅದನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದವನು.  “ಬೈಜಾಂಟಿಯಂ” ಎಂಬ ಕಲ್ಪನಾ ನಗರಿಗೆ ಹೊರಡುವ ಪಯಣ ಮತ್ತು ಅಲ್ಲಿನ ವಾಸ್ತವ್ಯದ ಬಗೆಗಿನ ವಿವರಣೆ ಅದ್ಭುತವಾಗಿದೆ. ಯೇಟ್ಸ್ ಕವಿಯ ಏ ಪ್ರೇಯರ್ ಫಾರ್ ಮೈ ಡಾಟರ್ ಕವನವಂತೂ ಅತ್ಯಂತ ಹೃದಯಸ್ಪರ್ಶಿಯಾಗಿದೆ. 

ಪ್ರಪಂಚದ ಯಾವ ಭಾಗದಿಂದ ಯಾವುದೇ ಭಾಗಕ್ಕೆ ಹೋಗಲಿ ತಂದೆಯ ಪ್ರೀತಿ ಮಗಳ ಕಡೆಗೆ ಒಂದೇ ರೀತಿಯದು ಎಂದು ಇಲ್ಲಿ ನಿರೂಪಿತವಾಗುತ್ತದೆ . 

ಇನ್ನು ಸಾಹಿತ್ಯ ಪ್ರಿಯರು ಹೆಚ್ಚಾಗಿ ಬಳಸುವ ಇಂಗ್ಲಿಷ್ ಪದ ವೃಂದಗಳಲ್ಲಿ ಇವು 3 .

1.Beauty is truth truth is beauty 

2. A thing of beauty is joy forever

3.  Heard melodies are sweet but those unheard or more sweeter  

ಇವೆಲ್ಲ ಜಾನ್ ಕೀಟ್ಸ್ ಕವಿಯ ಕವನಗಳಿಂದ ಆರಿಸಿದೆ ಎಂದು ನನಗೂ ಇದನ್ನು ಓದಿದ ಮೇಲೆಯೇ ತಿಳಿದದ್ದು.  ತುಂಬಾ ಚಿಕ್ಕ ವಯಸ್ಸಿಗೆ (೨೬)ಕ್ಷಯ ರೋಗದಿಂದ ಸತ್ತ ಈ ಕವಿಯ ಅಚ್ಚುಮೆಚ್ಚಿನ ಪ್ರಕಾರ ಪ್ರಗಾಥಗಳು ಮತ್ತು ಓಡ್(ode) ನಮ್ಮ ಕನ್ನಡದ ಭಾವಗೀತೆಗಳನ್ನು ಹೋಲುತ್ತವೆ. 

ಎಲ್ಲದಕ್ಕಿಂತ  ಮತ್ತು ಈ ಕವಿಯತ್ರಿಯನ್ನು ಓದಲೇ ಬೇಕೆಂಬ ಆಸೆ ಹುಟ್ಟಿಸಿದ್ದು ಎಮಿಲಿ ಡಿಕನ್ ಸನ್ .ಕವಿಯ ಜೀವನವನ್ನು ಕಾವ್ಯವನ್ನು ಪ್ರತ್ಯೇಕ ಇಡಬೇಕೆಂದು ಹೇಳಿದರೂ ಕೆಲವು ಸಂದರ್ಭದಲ್ಲಿ ಅದು ಸಾಧ್ಯವಾಗುವುದಿಲ್ಲ .ಚಿಕ್ಕ ಪಟ್ಟಣದ ಈಕೆ ಪಾದ್ರಿಯೊಬ್ಬನನ್ನು ಅತೀವವಾಗಿ ಪ್ರೀತಿಸುತ್ತಾಳೆ .ಆದರೆ ಆತ ವಿವಾಹಿತ ಎಂದು ತಿಳಿದ ಮೇಲೆ ದೂರಾಗಿ ಅವನ ನೆನಪಲ್ಲೇ ಜೀವನ ಕಳೆದು ಸಾವಿರಕ್ಕಿಂತಲೂ ಹೆಚ್ಚು ಕವನಗಳನ್ನು ರಚಿಸುತ್ತಾರೆ ..ಅವಳು ಬದುಕಿದಾಗ ಪ್ರಕಟವಾದದ್ದು ಒಂದೆರಡು. ಅವಳ ಮರಣಾನಂತರ ಅವಳ ತಂಗಿ ಅದನ್ನು ಪ್ರಕಟಿಸುತ್ತಾಳೆ ಹಾಗೂ ವಿಮರ್ಶಕರ ಪ್ರಶಂಸೆಗೆ ಅವು ಒಳಗಾಗುತ್ತದೆ 

Because i could not stop for death 

He kindly stopped for me 

The carriage  just held us 

And immortality 

ಅವಳ ಬದುಕಿನ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡಾಗ ಪದ್ಯಗಳು ಹೆಚ್ಚು ಇಷ್ಟವಾಗುತ್ತವೆ ಎನ್ನುತ್ತಾರೆ .ಸಾವು ಪ್ರೇಮ ಮತ್ತು ನಿಸರ್ಗ ಎಮಿಲಿಯ ಕವನದ ವಸ್ತುಗಳು.  ಅವಳ ಬಗ್ಗೆ ಲೇಖಕರು ನುಡಿದಿರುವ ಮಾತುಗಳು ” ಅವಳದೊಂದು ವಿಲಕ್ಷಣ ಸ್ಥಿತಿಯಾಯಿತು . ಒಂದು ಅರ್ಥದಲ್ಲಿ ಪ್ರೇಮವನ್ನು ದೂರ ಮಾಡಿದಳು; ತನ್ನ ಪ್ರೇಮಿಯನ್ನು ಎಂದೂ ಮತ್ತೆ ನೋಡದೆ.  ಇನ್ನೊಂದು ಅರ್ಥದಲ್ಲಿ ಪ್ರೇಮವನ್ನೆ ತನ್ನ ಬದುಕಿನಲ್ಲಿ ತುಂಬಿಕೊಂಡಳು; ಬೇರೆಲ್ಲವನ್ನೂ ದೂರಮಾಡಿ”. ಎಷ್ಟು ಅರ್ಥಪೂರ್ಣ ಅಲ್ಲವೇ?

ಕಡೆಯಲ್ಲಿ ಕೆಟ್ಟ ಪದ್ಯಗಳು ಮತ್ತು ಅಸಂಬದ್ಧ ಪದ್ಯಗಳು ಎಂಬ ವಿಷಯದಲ್ಲಿ ಜಿಜ್ಞಾಸೆ ನಡೆಸುತ್ತಾರೆ.  ಕನ್ನಡದಲ್ಲಿ ಈ ಪ್ರಕಾರ ಬೆಳೆಯದಿರುವ ಬಗೆಗೆ ವಿಷಾದ ವ್ಯಕ್ತಪಡಿಸುತ್ತಾರೆ. 

“ವಿಮರ್ಶೆ ಎಂದರೆ ಕವಿಪ್ರತಿಭೆಯಿಂದ ಹೊರಹೊಮ್ಮುವ ಸುಂದರ ಭಾವಮಯ ಕಾವ್ಯಕ್ಷೇತ್ರಗಳಲ್ಲಿ ಸೂಕ್ಷ್ಮಮತಿಯಾದ ಸಹೃದಯನು ಕೈಕೊಳ್ಳುವ ವಿಹಾರಯಾತ್ರೆ ಅಥವಾ ಸಾಹಸಯಾತ್ರೆಯ ಕಥನಕಾರ್ಯ”.                                       

                  _ಕುವೆಂಪು (ಕಾವ್ಯ ವಿಹಾರ) 

ಆ ರೀತಿಯ ಸುಂದರ ವಿಹಾರಕ್ಕೆ ನಮ್ಮನ್ನು ಅಣಿಗೊಳಿಸುತ್ತಾರೆ . ತಮ್ಮ ಅರ್ಥೈಸುವಿಕೆಯ ರೆಕ್ಕೆ ಹಚ್ಚಿ ಕಾವ್ಯದ ಆಗಸದಲ್ಲಿ ಹಾರಲು ಕಲಿಸು ತ್ತಾರೆ.  ನಾವಷ್ಟಕ್ಕೆ ಓದಿದರೆ ಎಷ್ಟೋ ಹೊಳಹುಗಳು ಅವಿತು ಬಿಡಬಹುದು ಹರವುಗಳು ಮರೆಯಾಗಬಹುದು.  ಈ ವಿಮರ್ಶೆಯ ಪ್ರಕಾಂಡ ಬೆಳಕಿನ ಸಹಾಯದಲ್ಲಿ ಆಂಗ್ಲ ಕಾವ್ಯ ತಿಳಿಯದ ಅಜ್ಞಾನದ ಕತ್ತಲನ್ನು ಸ್ವಲ್ಪವಾಗಿಯಾದರೂ ಹೋಗಲಾಡಿಸಿಕೊಳ್ಳಬಹುದು . ಮುಂದೆ ವಿಸ್ತೃತವಾಗಿ ಓದಬೇಕೆಂದರೆ ಯಾರ ಕೃತಿಗಳನ್ನು ಓದಬೇಕು ಎನ್ನುವ ಸ್ಪಷ್ಟತೆ ಸಿಕ್ಕುತ್ತದೆ.  ವಿಸ್ತಾರ ಬಯಲಿನಲ್ಲಿ ನಿಂತು ಎತ್ತ ಕಡೆಗೆ ಹೋಗಬೇಕು ಎಂದು ತಿಳಿಯದೆ ವಿಭ್ರಾಂತನಾಗಿ ನಿಂತ ದಾರಿಗ ಓದುಗನಿಗೆ ನಕ್ಷೆ ಸಿಕ್ಕಿದಂತೆ.  

ಲೇಖಕರು ನವೋದಯ ಸಾಹಿತ್ಯದ ಜತೆ ಬೆಳೆಯುತ್ತಾ ಪ್ರಗತಿಶೀಲತೆಯನ್ನು ಅರಿತವರು. ಇವರನ್ನು “ಅಕ್ಷರ ಸಾಲಿನ ಬೆಳಕು” ಎಂದಿರುವುದು ಸೂಕ್ತ ಮತ್ತು ಸಮಂಜಸ.  ಇವರ ಆತ್ಮಚರಿತ್ರೆಯ ನುಡಿಮುತ್ತಿನೊಂದಿಗೆ ಇಂದಿನ ಬರಹ ಮುಗಿಸುವೆ .

ಸಾಹಿತ್ಯವು ಬಹಳ ದೊಡ್ಡದು.  ಬದುಕಿನ

ವರಗಳಲ್ಲೊಂದು.  ಆದರೂ ಬದುಕು ಅದಕ್ಕಿಂತ ದೊಡ್ಡದು”. 

ಸಂಗ್ರಹದಲ್ಲಿಟ್ಟುಕೊಂಡು ಆಗಾಗ ಮೆಲುಕು ಹಾಕುವ ಪುಸ್ತಕಗಳ ಪಟ್ಟಿಯಲ್ಲಿ ಇದಕ್ಕೆ ಅಗ್ರಸ್ಥಾನ. 


ಸುಜಾತಾ ರವೀಶ್  

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

2 thoughts on “

  1. ಕಾವ್ಯೋದ್ಯಾನ ಚೆನ್ನಾಗಿ ಪರಿಚಯ ಮಾಡಿ ಕೊಟ್ಟಿದ್ದೀರಿ. ಚೆನ್ನಾಗಿದೆ ಮೇಡಂ

    1. ಲೇಖನ ಓದಿ ಸ್ಪಂದಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ .
      ಸುಜಾತಾ ರವೀಶ್

Leave a Reply

Back To Top