ಕಾವ್ಯಸಂಗಾತಿ
ಸತ್ತ ಚಂದ್ರಮನ ಶವ ಯಾತ್ರೆ
ದೇವರಾಜ್ ಹುಣಸಿಕಟ್ಟಿ
ಪಡಸಾಲೆಯಲ್ಲಿ ಚಂದ್ರಮ
ಸತ್ತು ಬಿದ್ದಿದ್ದಾನೆ…!!
ಕರಾಳ ದಿನ ವೆಂದು….
ಬೀದಿಗೊಂದು ಬಿದಿಗೆ ಚಂದ್ರನ
ತಂದು….
ನಡು ಬೀದಿಯಲ್ಲಿ ಇಟ್ಟು…
ಮರೆತ ಮರೆವೆಗೆ ಮುಪ್ಪಡರಿದೆ….
ವರ್ಷಕ್ಕೊಮ್ಮೆ ಧೂಳು ಕೊಡವಿ
ಜೋರು ಜೋರು ಅರಚುತ್ತೇವೆ
ಚಂದ್ರನ ಹೊಳಪು ಹೊಳವು ಹೊರ
ಮೈಯಲ್ಲ ಸ್ಪರ್ಶಿಸಿ
ಒಂದಿಷ್ಟು ಬೀಗಿ ಬರುತ್ತೇವೆ…
ಬೇಕಂತಲೇ ಒಳಗಿಳಿಯುವುದ
ಮರೆಯುತ್ತೇವೆ….
ಮತ್ತದೇ…..
ರಕ್ಕಸರ ರಾಕ್ಷಸರಾಟಕ್ಕೆ
ಮೂಕ ಪ್ರೇಕ್ಷಕರಾಗುತ್ತೇವೆ…
ಸತ್ತ ಚಂದ್ರಮನಿಗೂ ಗೊತ್ತು…
ಆಟ ಹೊಸದಲ್ಲ ನೋಡಿ…
ಗುಂಡು ಹೊಕ್ಕ ಗುಂಡಿಗೆಯಿಂದಲೇ
“ಹೇ..ರಾಮ”…!ಎಂದವನಲ್ಲವೇ ಬಿಡಿ…!!
ಚಂದ್ರಮನಿಗೋ ನೋಟಿನೊಳಗೆ
ಉಳಿದ ಬಗೆ…
ಸ್ಟ್ಯಾಂಪ್ ಗಳಲಿ ನಕ್ಕ ಬಗೆ…
ಕಟಿಂಗ್ ಫ್ಲೆಕ್ಸ್ ಗಳಲಿ ಪ್ರೇಕ್ಷಕ ನಾದ ಬಗೆ….
ಇನ್ನು ಹೆಚ್ಚೆಂದರೆ….
ಊದುಬತ್ತಿ ಹೊಗೆ ಮೂಗಿಗಡರಿ….
ಕೆಮ್ಮು ಬರುವಷ್ಟು ಚೆಂದದ ಪಟಗಳಲ್ಲಿ…
ಅಲ್ಲಲ್ಲಿ ಅಳಿದುಳಿದ ಪಾಠಗಳಲ್ಲಿ..
ಅಶ್ರು ತರ್ಪಣ ವಿಡಲು ಉಳಿಸಿದ್ದೀವಲ್ಲವೆಂದು…
ಕಿಸಕ್ಕನೆ ನಕ್ಕು ಎದ್ದು
ಕೂರಬೇಕೆನ್ನಿಸಿದರೂ.. ಅಮವಾಸೆಯೇ
ಇರಬೇಕೆಂದು ನೆನೆದು….
ಮತ್ತೆ ಮೌನ ಪ್ರತಿ ಭಟನೆಗೆ
ಜಾರುತ್ತಾನೆ….
ಸತ್ತ ಚಂದ್ರಮನ
ಶವ ಯಾತ್ರೆ ಹೊರಡುತ್ತೆ ದಿನವೂ
ನನ್ನೂರ ಕನಸಿನ ಬೀದಿಯಲ್ಲಿ…
ಅದೇ ಅರೆ ಬೆತ್ತಲೆ ದೇಹ…
ಒಂದಿಷ್ಟು ಎಂದೂ ಸಾಯದ ನಗು…
ಮತ್ತದೇ….
ಮುಪ್ಪಡರದ ವೇದನೆ ಹೊತ್ತು….
ಹೂಳಲಾಗದ ಸುಡಲಾಗದ
ಮತ್ತೇನೂ ಮಾಡಿದರೂ ಉಳಿದು ಬಿಡುವ
ಚಂದಿರನ ಬಿತ್ತಿರುವ
ನನ್ನವರ ಎದೆಯ ನೆಲದಲ್ಲಿ…
ಒಂದಿಷ್ಟೇ ಇಷ್ಟು ನೆತ್ತರ ಕಂಬನಿ ತೆತ್ತು…..!