ತಿಂಗಳ ಕವಿ- ವಾಣಿ ಭಂಡಾರಿ

ಕವಿಕಾವ್ಯ ಸಂಗಾತಿ

ಹಲವು ಪ್ರತಿಭೆಗಳ ಕವಿ

ವಾಣಿ ಭಂಡಾರಿ

ಕವಿ ಪರಿಚಯ:

     ಇವರು ಮೂಲತಃ ಮಲೆನಾಡಿನ ಸಸ್ಯ ಸಮೃದ್ಧ ಮಡಿಲಾದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರ (ಜುಲೈ14) ರಂದು ರತ್ನ ಭಂಡಾರಿ‌ ಹಾಗೂ ವೆಂಕಟ್ಟಪ್ಪ ಭಂಡಾರಿ ಅವರ ಸುಪುತ್ರಿಯಾಗಿ ಜನಿಸಿದ ಇವರು ಬಾಲ್ಯದಿಂದಲೇ ಸಾಹಿತ್ಯ ಸಂಗೀತ ಪ್ರಿಯರು.ಮನೆಯ ಪರಿಸರವು ಅದಕ್ಕೆ ತಕ್ಕುದಂತೆ ಇದ್ದ ಪ್ರಯುಕ್ತ ಚಿಕ್ಕಂದಿನಿಂದಲೇ ಆಟಪಾಠ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಿಟ್ಟಿಸಿ ಕೊಳ್ಳುತ್ತಿದ್ದರು.ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ಇವರು ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದುಕೊಂಡು ಉಪನ್ಯಾಸಕರಾಗಿ ಸೇವೆ‌ ಸಲ್ಲಿಸುತ್ತಲೇ ತಮ್ಮ ವಿದ್ಯಾರ್ಥಿಗಳಿಗೆ ಕಥೆ,ಕವನ ಚುಟುಕು ಭಾವಗೀತೆ ಹೀಗೆ ಹತ್ತಾರು ಪ್ರಕಾರಗಳನ್ನು  ವಿದ್ಯಾರ್ಥಿಗಳ ಕೈಯಲ್ಲಿ ಬರೆಸಿ ಅವರ ಸೃಜನಶೀಲತೆಯನ್ನು ಚಿಕಿತ್ಸಕ ಮನೋದೃಷ್ಟಿಗೆ ಒಳಪಡಿಸುತ್ತಿದ್ದರು.ತಮ್ಮ SSCL ವ್ಯಾಸಂಗ ಮುಗಿಯುತ್ತಿದ್ದಂತೆ ಓದಿನ ಜೊತೆಗೆ ಜ್ಯೋತಿಷ್ಯವನ್ನು ಗುರುಮುಖೇನ ಕಲಿತು ಹಾಗೂ ಸಂಗೀತ ಅಭ್ಯಾಸವನ್ನು ಮಾಡುತ್ತ,”ಬಹುಮುಖ ಪ್ರತಿಭೆ” ಪ್ರಶಸ್ತಿಯನ್ನು “ನಮ್ಮೂರ್ ಪೌಂಡೇಷನ್ ಹೈದರಾಬಾದ್” ಇವರಿಂದ ಪಡೆದಿರುವುದು ಇವರ ಸೃಜನಶೀಲತೆಗೆ ಮತ್ತೊಂದು ಗರಿ.

ಪ್ರವೃತ್ತಿಯಿಂದ DXN ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ ಇದರಜೊತೆಗೆಭಾವಗೀತೆ,ಕವನ,ಕಥೆಗಳು,ನ್ಯಾನೋಕಥೆ,ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ,ಶಾಯರಿ, ಗಜಲ್, ಆಧುನಿಕ ವಚನಗಳು, ತುಣುಕುಗಳು.ಸವಿನುಡಿ,ಕವಯಿತ್ರಿ,ಅಂಕಣಗಾರ್ತಿ,ವಿಮರ್ಶಕಿ,ಲೇಖಕಿ,ಗಜಲ್ಗಾರ್ತಿ,ಜೊತೆಗೆ ಜ್ಯೋತಿಷ್ಯ ಅಧ್ಯಯನವನ್ನು ಗುರುಗಳಾದ ವೈ ಎಸ್ ಪ್ರೇಮನಾಥ್ ಅವರಲ್ಲಿ ಕಲಿತುಮತ್ತು‌ ಸಂಗೀತದಲ್ಲಿ ಕರ್ನಾಟಿಕ್ ಜ್ಯೂನಿಯರ್  ಕಲಿಕೆ:-1-ಮೀನಾಕ್ಷಿ ಹೆಬ್ಬಾರ್(ಗುರುಗಳು)-ದಯಂತಿ( ಗುರುಗಳು) ಪ್ರಸ್ತುತ

“ಮಧುಮತಿ ಸಂಗೀತ ಶಾಲೆಯಲ್ಲಿ”  ಯಶಸ್ ಹೆಗಡೆ ಅವರ ಬಳಿ ಹಿಂದೂಸ್ತಾನಿ ಸಂಗೀತ ಮತ್ತು‌ ಸುಗಮ ಸಂಗೀತ ವನ್ನು ಅಭ್ಯಾಸ ಮಾಡುತ್ತಿದ್ದಾರೆ.,ಹಲವಾರು ಕ.ಸಾ.ಪ.ಮತ್ತು ಇತರೆ ಸಮ್ಮೇಳದ ಕಾರ್ಯಗಳಲ್ಲಿ‌ ಭಾಗವಹಿಸಿ ವಾಚನ ಉಪನ್ಯಾಸಗಳನ್ನು ನೀಡಿ,ಹಾಗೂ ಆಕಾಶವಾಣಿ ಯುವವಾಣಿ ಕಾರ್ಯಕ್ರಮದಲ್ಲಿ ರೆಡಿಯೋ ಸಂದರ್ಶನದ ಮೂಲಕ ಇವರ ಮಾತಿನ ಝಲಕ್ ಸಹ‌ ಕೇಳಬಹುದು.ಈಗಾಗಲೇ ನಾಡಿನ ಹಲವಾರು ಪತ್ರಿಕೆಯಲ್ಲಿ ತಮ್ಮ “ವಿಮರ್ಶಾ ಅಂಕಣ”ಗಳು “ಸತ್ಯವಾಣಿ ಕಟೋಕ್ತಿ”, “ವ್ಯಕ್ತಿತ್ವ ವಿಕಸನ” ಅಂತರ್ ದೃಷ್ಟಿ ವಿಮರ್ಶಾ ಅಂಕಣಗಳು,  “ಮಲ್ನಾಡು ಕವಳ” ಎಂಬ ಲಲಿತ ಪ್ರಬಂಧವು ವಿನಯವಾಣಿಯಲ್ಲಿ  ಪ್ರಕಟಗೊಳ್ಳುತ್ತಿದ್ದು, ನಾಡಿನ ಹಲವಾರು ಪತ್ರಿಕೆಯಲ್ಲಿ ಇವರ ಬರಹ‌ ಬಿತ್ತರಗೊಂಡಿದ್ದು, ಸಹೃದಯರ ಮನೆಮನತುಂಬಿದೆ..ಹೀಗೆ ತಮ್ಮನ್ನು ಕೇವಲ ಒಂದು ವಿಚಾರಕಷ್ಟೆ ಸೀಮಿತಗೊಳಿಸಿಕೊಳ್ಳದೆ ಮನುಷ್ಯ ಪ್ರೀತಿ‌ ಹಂಚುತ್ತಾ,ಭಾವೈಕ್ಯತೆಯನ್ನು ಬಿತ್ತುವ ಇವರು ಸಾಹಿತ್ಯ ಸಂಗೀತ ತನ್ನ ಉಸಿರು ಜೀವನಾಡಿ ಎಂದು ಸದಾ ಧ್ಯಾನಸ್ಥರಾಗಿ ಅದರೊಳಗೆ‌ ತನ್ಮಯರಾಗಿ ಬಿಡುತ್ತಾರೆ.

       ಇನ್ನೂ ಹತ್ತಾರು ಕೃತಿಗಳನ್ನು ಬಿಡುಗಡೆಗೆ ಕೈಯಲ್ಲಿರಿಸಿ ಕಾಯುತ್ತಿರುವ ಇವರು “ಸಂತನೊಳಗಿನ ಧ್ಯಾನ”  ಚೊಚ್ಚಲ ಗಜಲ್ ಕೃತಿಯು ಕನ್ನಡ ಪುಸ್ತಕ‌ ಪ್ರಾಧಿಕಾರಕ್ಕೆ ಆಯ್ಕೆಗೊಂಡು ಅದರ ವಿಮರ್ಶಾಕೃತಿಯೇ “ಸಂತ ಮತ್ತು  ಸಮೀಕ್ಷೆ” ಎಂದು ವ್ಯಕ್ತಪಡಿಸಿ ಖುಷಿಯಿಂದ ತಮ್ಮ ಬೊಗಸೆ ತುಂಬಿಸಿದ್ದಾರೆ.

ಅಚ್ಚಿಗಾಗಿ ಕಾದಿರುವ ಪುಸ್ತಕಗಳು

ಅಂತರ್ ದೃಷ್ಟಿ- ವಿಮರ್ಶಾ ಸಂಕಲನ

ತುಂಗೆ ತಪ್ಪಲಿನ ತಂಬೆಲರು ಭಾಗ:೧+೨

(ಸಂಶೋಧಾನ್ಮತಕ‌ ಕೃತಿ)

ವಚನಗಳು-೧

ಗಜಲ್ ಗಳು-೨

ಕವನ ಸಂಕಲನ-೪

ಸಾವನ್ನು ಮುಂದೂಡಿ ( ವ್ಯಕ್ತಿತ್ವ ವಿಕಸನ) ಕೃತಿ ಭಾಗ-೧+,,

ಮಲ್ನಾಡ ಕವಳ- ಲಲಿತ ಪ್ರಬಂಧ

ಸತ್ಯವಾಣಿ- ಕಟೋಕ್ತಿ

ಇತ್ಯಾದಿ ಇತ್ಯಾದಿ,,,,,


ವಾಣಿ ಭಂಡಾರಿಯವರ ಕವಿತೆಗಳು

ಜನ್ಮಾಂತರದ ನಂಟು

ಅದೆಂತ ಪ್ರೀತಿಯೊ ಹುಡುಗ
ನಿನ್ನದು
ನಿನ್ನ ನಲ್ಮೆಯ ಬಿಸಿಯಪ್ಪುಗೆಯಲಿ ಮೇಣವಾಗಿದ್ದರೆ ಕರಗಿ ಬಿಡುತ್ತಿದ್ದೆ
ಗಂಧದ ಘಮದಂತೆ ಸುವಾಸನೆ ಬೀರುತಿರುವೆ ನರನಾಡಿಯಲಿ

ನಾ ಹುಚ್ಚಿನೊ ನೀ ಹುಚ್ಚನೊ ತಿಳಿಯದು
ಒಲುಮೆಯ ಅಚ್ಚು ಮಚ್ಚೆಯಾಗಿದೆ ಹೃದಯದಲಿ
ಜನ್ಮ ಜನ್ಮಾಂತರ ನಂಟು
ಬೆಸದ ಕೊಂಡಿ
ಕಣ್ಣಾಲಿಗಳ ತುಂಬಾ
ನಿನ್ನದೆ ಗುಂಗು
ಹಗಲಿರುಳುಗಳೆ ನೀ‌ನಾದೆಯಲ್ಲ.

ಜೀವ ಭಾವ ಹೊಸಹೊಸೆದು
ಬಲುಮೆ ಬುತ್ತಿ ತಿಂದು
ಎದೆಯ ಪಲ್ಲಾಂಗದಲಿ
ಕುಣಿಯುತ ನೆಗೆದು ಕೆನೆದು
ಜ್ವಾಲೆಯ ದಿಬ್ಬದೊಳಗೆ
ತಳಿರೆಲೆ ಕಟ್ಟಿ ತಟ್ಟಿ
ಚಂದನ ಲೇಪಿಸಿ
ಮುತ್ತೆಲ್ಲ ಹತ್ತಾಗಿ ನಿನ್ನೆದೆಯ ಸ್ವತ್ತಾಗಿ ಹೊತ್ತು ಮೀರಿ
ಹಬ್ಬ ಮಾಡಿದೆಯಲ್ಲ ಹುಡುಗ.

ಮಾಗಿಯ ಚಳಿ
ಬೆಗ್ಗಾರ ಬಿಸಿಲು ನಿನ್ನ ಬಿಸಿಯುಸಿರ ಕಾವು
ತಂಪೆರೆವ ನಂಬುಗೆಯ ಮಾತು
ಮನದ ಗೂಡೆಲ್ಲ ತಂಪಾಗಿ ಬೆವರುಕ್ಕಿತು.
ಬಿಡು ಹುಡುಗ ಸಾಕು
ಮುಂದಿನ ಜನ್ಮಕ್ಕೂ ಒಂದಿಷ್ಟು
ಉಳಿಸಿಕೊಳ್ಳೊಣ ಪ್ರೇಮಜಲವನು.
ಉಕ್ಕುವ ಪ್ರೀತಿ ಕಡಲನು
ಬೊಗಸೆಯಲಿ ಕಾಪಿಡಿದು
ಕಾಯುವೆ ಯುಗ ಯುಗಗಳಲಿ.
ನಿನ್ನಂತರಂಗದ ಆತ್ಮಸಖಿಯಾಗಿ.

********

ಬಹಳ ಹಿಂದುಳಿದುಬಿಟ್ಟೆ ನಾನು

ನನ್ನವ್ವನ ಹರಿದ ಸೀರೆಯಲಿ
ಅಂಟಿದ ಕಣ್ಣೀರ ಜಿಗುಟು,,
ನೊಂದ ನೋವ ಕೊಡದಲಿ
ತುಂಬಿದ ಹತಾಶೆ ಭಾವ
ಕಾಣಲಿಲ್ಲ ನನಗೆ.
ನನ್ನಪ್ಪನ ಬೆವರಿನ ಬಾವುಗಳು
ಅಡಗಿ ಕೂತು ಮರೆಮಾಚಿದ್ದು
ಹಾಳೆಟೊಪಿಯಲಿ ಆಂಟಿದ
ಹರಳೆಣ್ಣೆ ಮಂದತೆ
ಕಾವಿನ ನೋವು ತೋರಲಿಲ್ಲ‌
ಏಸು ಕಲಿತರೇನು
ಬಹಳ ಹಿಂದುಳಿದುಬಿಟ್ಟೆ ನಾನು.

ರೆಟ್ಟೆ ಮುರಿದು ಹೊಟ್ಟೆ
ಹಿಟ್ಟಾಗಿಸಿದ ಕರುಳ ಸಂಕಟ,,
ಭಾವಗಳಿಗೆ ಕೋಡಿಕಟ್ಟಿ
ಎದೆಯ ಒಳಗೆ ಪೇರಿಸಿದ್ದು
ತುತ್ತು ತುತ್ತಿಗೂ ಕಣ್ಣೀರೆ
ಒಲವ ಬಲವಾಗಿದ್ದು,,
ಮಡಲಿನೊಳಗೆ ಸುಖ
ನಿದಿರೆ ಜಾರುತ
ಅವ್ವನ ಒಡಲೊಳಗಿನ
ನಿಗಿ ನಿಗಿ ಕೆಂಡವಾಗಿ ಸುಟ್ಟಾ
ಬೂದಿ ನೋಡಲೇ ಇಲ್ಲ
ಏಸು ಬಲಿತರೇನು
ಬಹಳ ಹಿಂದುಳಿದುಬಿಟ್ಟೆ ನಾನು .

ಕಣದ ದೂಳಿನಲಿ
ಅಪ್ಪನ ಒಕ್ಕಲಾಟ
ಅವ್ವನ ನರಳಾಟ
ರಾಶಿ ರಾಶಿ ಗೊಣಬೆ
ನಚ್ಚಗಾದ ರೋಣಿನೊಳಗೆ
ಜಳ್ಳು ಭತ್ತಗಳ ನಡುವೆ
ಮೈ ಚೆಲ್ಲಿ ಕುಣಿದಿದ್ದೆ
ಗ್ವಾರೆಮಣಿಯಲಿ ಚದುರಿದ
ಅವರ ಕನಸುಗಳ ಮಧ್ಯೆ
ಕಣ್ಣಿನಲಿ ಮಸಣದ ಕಾವು
ಮೆತ್ತಿದ್ದು ಕಾಣಲಿಲ್ಲ
ಏಸು ಬೀರಿದರೇನು
ಬಹಳ ಹಿಂದುಳಿದುಬಿಟ್ಟೆ ನಾನು.

ಸೂರಿಗೆ ಕೈಚಾಚಿ ಮಳೆಗಾಲಕೆ
ದಬ್ಬೆ ಹಚ್ಚಿ ಹುಲ್ಲು ಮುಚ್ಚಿ,,
ಸೋರೊ ಮನೆಗೆ ಹಂಡೆ ಇಕ್ಕಿ
ಸೆರಗ ಬಿಚ್ಚಿ ಬಿಕ್ಕಿ ಮುಖ
ತೋಯದಂತೆ ತಡೆದ ನನ್ನವ್ವ,,,
ಮೋಟು ಬೀಡಿಗೆ ಬೆಂಕಿಗೀರದೆ
ಬಚ್ಚಿಟ್ಟು ನೆಲತಡವಿ
ನಾಳೆಗೆಂದ ಅಪ್ಪನ ಸಹನೆ
ಸುರಿವ ಜಡೀ ಮಳೆ
ಜೀರುಂಡೆಯ ನಾದ
ಕಪ್ಪೆಯ ಆಲಾಪನೆ
ನರಿಯ ಅಣಕ ಗೂಬೆ ಕುಹಕ
ಅಪ್ಪನ ಪದ‌ ಕಗ್ಗತ್ತಲ ನಡುವೆ
ಎದೆ ಬೀರಿದು ದಾಟಲೇ ಇಲ್ಲ.
ಅವ್ವನ ಭಾವ ಇರುಳ ಸೋನೆಯಲಿ
ಕರಗಿದ್ದು ಕಾಣಲೇ ಇಲ್ಲ
ಏಸು ಕಲಿತು ಬಲಿತು ಬೆರೆತು ತಿರುಗಿದರೇನು
ಬಹಳ ಹಿಂದುಳಿದುಬಿಟ್ಟೆ ನಾನು.

****

ಕವಿತೆ

book

ಕವಿತೆ ಬರೆಯುವುದೆಂದರೆ
ಎದೆಯೊಳಗಿನ ಭಾವವನ್ನೆಲ್ಲ
ಬಸಿದು ಕಸುವಿರಿಸಿ ಹೆತ್ತ
ಕೂಸಿಗಲಂಕರಿಸಿ ಲಾಲಿಸೊ ಕೆಲಸ.
ಅನುಭವದ ವಾಗ್ತನವ ಹಾಡಾಗಿ
ಹರಿಸಿ ನದಿಯಂತೆ,,,
ಸಮುದ್ರ ಸೇರಿ ಮಿಲನಗೊಳಿಸೊ ಕೆಲಸ.
ಭಾವದೋಘಕ್ಕೆ ಧರೆಯ
ಹಸನು ಮಾಡಿ ಭಾವದಲೆಯ
ಬೀಜಬಿತ್ತಿ ಫಸಲು ತೆಗೆವ ಕೆಲಸ.

ಹಾಡಿನ ಪಾಡನ್ನು ಗುಣಿಸಿ
ಭಾಗಿಸುವ ಕೆಲಸದೊಳು
ನೋವಿನ ಒಲೆಯನ್ನು
ಆಗಾಗ ಕೆದಕಿ ಕೆಂಡವನೂದಿ
ತುಪ್ಪದುರಿ ಹಚ್ಚುವವರ
ಮನಕೂ ನೀರುಣಿಸಿ
ಮಲ್ಲೆ ನೆಡುವ ಕೆಲಸ.
ನೊಂದವರ ದನಿಯಾಗಿ
ಕಣ್ಣ ಕಾಡಿಗೆಯಂತೆ ಹೊಳೆದು
ಧರಣಿಯೊಡಲನು ತಂಪಾಗಿಸೊ ಕೆಲಸ.

ಉರಿಯಲ್ಲೊಂದು ಮಿಣುಕು
ದೀಪ ಮಾತಾಡಿದಾಗಲೂ
ಮಾತೆಲ್ಲ ಮೌನವಾಗಿಸೊ ಕೆಲಸ.
ಕಣ್ಣ ಬಿಂಬದೊಳಗೆ ಓಕುಳಿಯ
ರಂಗಿರದೆ ನೀರು‌ ಹರಿದರೂ
ಮೌನ ಧ್ಯಾ‌ನವಾದೊಡೆ ಆತ್ಮ
ಚಲನಗೊಳಿಸೊ ಕೆಲಸ.

ಭಾನು ಜೇನಾಗಿ ಕಾವ್ಯ ಕಡಲಾಗಿ
ಮೋಡ ಮಳೆಗರೆದು,,
ಭುವಿಯು ಬಿರಿಯುವ ಕೆಲಸ.
ಒಮ್ಮೊಮ್ಮೆ ತಂಪು
ಮತ್ತೊಮ್ಮೆ ಕಂಪು
ಮಗದೊಮ್ಮೆ ಉರಿಯಾಗಿಸಿ
ಕಾವಿಗೆ ಬಸಿರಾಗೊ ಕೆಲಸ.

ನೋವಿನಲೂ ನಲಿವಿನ
ಒಲವ ಸಿಂಚನಕೆ ಕಂಪು ಹರಿಸಿ,,
ಬಾಳ ನೇಗಿಲಿಗೆ ಹೆಗಲಾಗೊ ಕೆಲಸ.
ಮಿಂಚಿನೊಳು ಮೂಡುವ ಬೆಳಕ
ಭಾವಕೆ ತಂಪೆರೆದು ಮನದ ಹಸಿರಿಗೆ
ಹೆಸರಿಡುವ ಕೆಲಸ.

ದಣಿವೆಲ್ಲಿ ಕನಸಿಗೆ?
ಮನದಲ್ಲಿ ಸೋಪಾನವಿದ್ದೊಡೆ,,
ಹೃದಯಕೆ ಉಯ್ಯಾಲೆಯಾಗೊ ಕೆಲಸ.
ಕೊನೆಗೊಮ್ಮೆ ಮೋಹ ಪಾಶವ
ಕಳಚಿ ಆರು ಮೂರರೊಳಗೆ
ಹಾರಿಹೋಹುದ ಕಂಡು ದುಃಖಿಸಿ
ಮಕಮಕಿಸಿ ಮಂಥಿಸೊ ಕೆಲಸ.


Leave a Reply

Back To Top