ಅಂಕಣ ಸಂಗಾತಿ

ಗಜಲ್ ಲೋಕ

ಅಭಿಷೇಕ್ ಬಳೆ ಅವರ ಗಜಲ್ ದುನಿಯಾದಲ್ಲಿ...

ಅಭಿಷೇಕ್ ಬಳೆ ಅವರ ಗಜಲ್ ದುನಿಯಾದಲ್ಲಿ...

      ದೋಸ್ತೊ…. ನಮಸ್ಕಾರ್… ಹೇಗಿದ್ದೀರಿ, ಗಜಲ್ ಬಾಲೆಯ ಕನವರಿಕೆಯಲ್ಲಿ ಇರುವಿರಾ; ನಿಮ್ಮ ಕನವರಿಕೆಯ ಕೂಗು ನನ್ನ ಹೃದಯವನ್ನು ತಟ್ಟುತ್ತಿದೆ. ಅದರ ಪ್ರತಿಫಲವಾಗಿಯೊ ಏನೊ ಗುರುವಾರ ಹತ್ತಿರವಾಗುತಿದ್ದಂತೆ ಗಜಲ್ ಗುಲ್ಶನ್ ನ ಮಹೆಕ್ ನನ್ನನ್ನು ಆವರಿಸಿಬಿಡುತ್ತದೆ. ಅದರ ಹಿನ್ನೆಲೆಯಲ್ಲಿ ಇಂದು ಮತ್ತೊಮ್ಮೆ ಗಜಲ್ ಲೋಕದ ಗುಲಾಬ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ಗುಲಾಬಿಯನ್ನು ಪ್ರೀತಿಸುವ ರಸಿಕರ ಮುಂದೆ ಪ್ರಸ್ತುತ ಪಡಿಸಲು..!! 

“ನಾವೆಲ್ಲರೂ ಪ್ರೀತಿಯಿಂದ ಹುಟ್ಟಿದ್ದೇವೆ

ಪ್ರೀತಿಯೆ ನಮ್ಮೆಲ್ಲರ ತಾಯಿ ಬೇರು”

-ಜಲಾಲುದ್ದಿನ್ ರೂಮಿ

       ಮೂರ್ತ-ಅಮೂರ್ತಗಳ ಮೆದುವಾದ ಮಿಸ್ರಣವೆ ಈ ಸಂಸಾರ. ಇಲ್ಲಿ ಅಗಣಿತ ಜೀವಸಂಕುಲಗಳಿವೆ. ಆ ಜೀವಿಗಳಲ್ಲಿಯೆ ಯೂನಿಕ್ ಪೀಸ್ ಅಂದರೆ ಅದು ಮನುಷ್ಯ!! ಅದೂ ಯೂನಿಕ್ ಆದದ್ದು ಭಾವನೆಯ ಅಲೆಗಳಿಂದ, ವಿಚಾರಗಳ ಬಿತ್ತನೆಯಿಂದ ಹಾಗೂ ಕ್ರಿಯೆ-ಪ್ರತಿಕ್ರಿಯೆಗಳ ಸಾಮರಸ್ಯದ ಮಿಲನದಿಂದ ಎಂಬುದನ್ನು ನಾವು ಮರೆಯುವಂತಿಲ್ಲ. ‘ಭಾವ’ ಎನ್ನುವುದು ಯಾವಾಗಲೂ ಬೆತ್ತಲೆಯೆ ಆಗಿರುತ್ತದೆ. ಅದಕ್ಕೆ ರೂಪ ಸಿಗುವುದೆ ಅಭಿವ್ಯಕ್ತಿಯಿಂದ, ಸಂವಹನದಿಂದ ಮಾತ್ರ. ‘ಭಾಷೆ’ ಎಂಬ ನೂರ್ ವಿಕಾಸವಾದದ್ದು ಈ ಭಾವದ ಒತ್ತಡದಲ್ಲಿಯೆ!! ಇದರಿಂದಾಗಿಯೇ ಸಮಾಜದಲ್ಲಿ ಬಂದು-ಸಂಬಂಧಗಳು, ಕೊಡು-ಕೊಳ್ಳುವಿಕೆ, ಭಾವನೆಗಳ ವಿಲೇವಾರಿ, ರಂಜನೆ-ಮನೋರಂಜನೆ…ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿವೆ, ಬರುತ್ತಿವೆ. ಭಾವನೆಗಳಿಗೆ ಶಕ್ತಿಯಿದೆ. ಭಾವನಾತ್ಮಕ ಬುದ್ಧಿವಂತಿಕೆಯು ಆ ಶಕ್ತಿಯನ್ನು ಬಳಸಿಕೊಳ್ಳುವ ಸಾಮರ್ಥ್ಯವಾಗಿದೆ. ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ನಿರ್ವಹಿಸಲು, ಇದರಿಂದ ನಾವು ನಮ್ಮ ಪ್ರಮುಖ ಮೌಲ್ಯಗಳಿಗೆ ಮತ್ತು ತತ್ವಗಳಿಗೆ ಹೊಂದಿಕೆಯಾಗುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. “Your intellect may be confused, but your emotions will never lie to you” ಎಂಬ ಅಮೇರಿಕಾದ ಚಲನಚಿತ್ರ ವಿಮರ್ಶಕ ರೋಜರ್ ಎಬರ್ಟ್ ಅವರ ಸೂಕ್ತಿ ಇದನ್ನೆ ಸಾರುತ್ತದೆ. ತರ್ಕಬದ್ಧ ಆಲೋಚನೆಗಳು ಸೃಜನಶೀಲತೆಯನ್ನು ಭಾವನೆಗಳ ಮಾರ್ಗದಲ್ಲಿ ಮುನ್ನಡೆಸುವುದು ಕಡಿಮೆಯೇ ಎಂದು ಹೇಳಬಹುದು. ಅಂತೆಯೇ ಮನುಷ್ಯನನ್ನು ಭಾವನಾಜೀವಿ ಎನ್ನಲಾಗುತ್ತದೆ. ಈ ನೆಲೆಯಲ್ಲಿ ‘ಬರಹ’ ಬರಹಗಾರರಿಂದ ಸಹೃದಯರೆಡೆಗೆ ಸಾಗುವ ಪ್ರಕ್ರಿಯೆಯನ್ನು ಭಾವನೆಗಳ ಜಾತ್ರೆ ಎನ್ನಬಹುದು. ವ್ಯಷ್ಟಿ ಸೆಲೆಯಿಂದ ಸಮಷ್ಟಿಯತ್ತ ಸಾಗುವ ಸಾಹಿತ್ಯ ಜನಮಾನಸವನ್ನು ತಲುಪುವುದರೊಂದಿಗೆ ಅವರ ಹೃದಯಗಳಲ್ಲೂ ನೆಲೆ ಕಂಡುಕೊಳ್ಳಲು ಸಾಧ್ಯ. ಸೃಜನಶೀಲ ಹೃದಯಗಳ, ಮನಸುಗಳ ; ಬುದ್ದಿಮತ್ತೆಯ ಸಂಗಮವೆ ಗಜಲ್. ಇಂದು ಕರುನಾಡಿನಲ್ಲಿ ಗಜಲ್ ಎಂಬ ಪಾರಿಜಾತದ ಕಂಪು ಎಲ್ಲೆಡೆ ಹರಡುತ್ತಿದೆ. ತಾರೆಗಳೋಪಾದಿಯಲ್ಲಿ ಗಜಲ್ ಬರೆಯುವ ಹೃದಯವಂತರ ಸಂಖ್ಯೆ ಊರ್ಧ್ವಮುಖದತ್ತ ಸಾಗುತ್ತಿದೆ. ಅವರುಗಳಲ್ಲಿ ಕುಮಾರ್ ಅಭಿಷೇಕ ಬಳೆ ಮಸರಕಲ್ ಅವರೂ ಒಬ್ಬರು.

           ಅಭಿಷೇಕ್ ಬಳೆ ಮಸರಕಲ್ ರವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ ಪ್ರಭಾಕರ್ ಬಳೆ ಮಸರಕಲ್ ಮತ್ತು ದೇವಮ್ಮ ದಂಪತಿಗಳ ಮಗನಾಗಿ ೧೯೯೪ ರ ನವೆಂಬರ್ ೩೦ ರಂದು ಜನಿಸಿದರು. ಇವರು ಓದಿದ್ದು ಬಿ.ಎಸ್ಸಿ., ಬಿ.ಇಡಿ. ಬಾಲ್ಯದಿಂದಲೂ ಬರವಣಿಗೆಯಲ್ಲಿ ಅಭಿರುಚಿಯನ್ನು ಹೊಂದಿರುವ ಮಸರಕಲ್ ಅವರು ಪ್ರೌಢ ಶಾಲೆಯ ಹಂತದಲ್ಲಿರುವಾಗಲೇ “ಜಯ ಹೇ ಕರ್ನಾಟಕ ಮಾತೆ” ಎಂಬ ಮಕ್ಕಳ ಕವನ ಸಂಕಲನವನ್ನು ಪ್ರಕಟಿಸಿ ರಾಯಚೂರು ಜಿಲ್ಲೆಯ ಕಿರಿಯ ಕವಿ ಎನಿಸಿಕೊಂಡ ಹೆಗ್ಗಳಿಕೆ ಇವರದು. ತದನಂತರ “ಅಮ್ಮ ಮತ್ತು ಇತರೆ ಕವಿತೆಗಳು” ಎಂಬ ಕವನ ಸಂಕಲನ ಹಾಗೂ “ಗೋರಿ ಮೇಲಿನ ಹೂ”, “ಸಂತೆಯೊಳಗೆ ಸಿಕ್ಕ ಬುದ್ಧ” ಎಂಬ ಗಜಲ್ ಸಂಕಲನಗಳನ್ನು ಕನ್ನಡ ವಾಙ್ಮಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರಸ್ತುತ ಇವದು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸುತಿದ್ದಾರೆ.

      ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅಭಿಷೇಕ್ ಅವರ ಹಲವು ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸಾಹಿತ್ಯ ಕೃಷಿಗೆ ಹಲವು ಸಂಘ ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಚುಕ್ಕಿ ‌ಸಾಂಸ್ಕ್ರುತಿಕ ಪ್ರತಿಷ್ಠಾನ ಸಿರವಾರದ ವತಿಯಿಂದ ೨೦೧೬ ನೇ ಸಾಲಿನ ಉತ್ತಮ ಯುವ ಬರಹಗಾರ ಪ್ರಶಂಸತಾ ಪ್ರಶಸ್ತಿ, ಗೋರಿ ಮೇಲಿನ ಹೂ’ ಗಜಲ್ ಸಂಕಲನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ೨೦೧೯ ನೇ ಸಾಲಿನ ಶ್ರೀಮತಿ ಪಂಪಮ್ಮ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ, ಸಿರಿಗನ್ನಡ ವಚನ ಕಲ್ಯಾಣ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ಕವನ ಕುಸುರಿ ಪ್ರಶಸ್ತಿ… ಪ್ರಮುಖವಾಗಿವೆ.

         ಗಜಲ್ ಎಂದರೆ ರಕುತ ಕುದಿಯುವುದಲ್ಲ, ಬದಲಿಗೆ ನೋವನ್ನೂ ನೋಯಿಸದಂತೆ ಪ್ರೀತಿಸುವುದೆ ಆಗಿದೆ. ಕಂಬನಿಯನ್ನೂ ಮಧುರಾನುಭವದಿಂದ ಆಸ್ವಾದಿಸುವುದಾಗಿದೆ. ಪ್ರೀತಿಯ ನವಿರು ಭಾವವೆ ಇದರ ಸ್ಥಾಯಿ ಭಾವ. ಆದರೆ ಇಂದು ಕಾಲದ ಏರಿಳಿತದಲ್ಲಿ ಗಜಲ್ ಕವಲೊಡೆದ ಹಾದಿಯಲ್ಲಿ ಸಾಗುತ್ತಿದೆ. ಗಜಲ್ ನ ಅಶಅರ್ ಇಡೀ ಮನುಕುಲವನ್ನು ಪ್ರತಿನಿಧಿಸುತ್ತಿರುವುದನ್ನು ಇಂದಿನ ಗಜಲ್ ಕಾರರ ಗಜಲ್ ಗಳಲ್ಲಿ ಕಾಣುತ್ತೇವೆ. ಈ ದಿಸೆಯಲ್ಲಿ ಗಜಲ್ ಗೋ ಅಭಿಷೇಕ್ ಅವರ ಗಜಲ್ ಗಳಲ್ಲಿ ಪ್ರೀತಿ, ಪ್ರೇಮ, ವಿಪ್ರಲಂಭ ಶೃಂಗಾರ, ಕನಸು, ಕನವರಿಕೆ, ಸಾಮಾಜಿಕ ವಾಸ್ತವ, ಸಾಮಾಜಿಕ ಕಳಕಳಿ, ವರ್ತಮಾನದ ತಲ್ಲಣಗಳು, ಸಾಮರಸ್ಯ, ಬದುಕಿನ ವೈರುಧ್ಯಗಳು, ಶ್ರಮ ಸಂಸ್ಕೃತಿ ಸಂವೇದನೆ, ಅನ್ಯಾಯ-ಅತ್ಯಾಚಾರ-ಜಾತಿ-ಮತಧರ್ಮಗಳ ಖಂಡನೆ, ಸಾಮರಸ್ಯದ ಹಂಬಲ, ಮೌಲ್ಯಗಳ ಹುಡುಕಾಟ… ಮನುಷ್ಯನ ಬದುಕಿನ ಭಾವಗಳೆಲ್ಲವೂ ಮೆದುವಾಗಿ ಮುಪ್ಪರಿಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಷೇರ್ ಅನ್ನು ಗಮನಿಸಿ ಮುಂದೆ ಸಾಗೋಣ.

       ಪ್ರೀತಿ ಮತ್ತು ದ್ವೇಷ ಒಂದೇ ನಾಣ್ಯದ ಎರಡು ಮುಖಗಳು. ಪ್ರೀತಿಯ ತಿಳಿನೀರನ್ನು ದ್ವೇಷ ಯಾವಾಗಲೂ ಕದಡುತ್ತಲೆ ಬಂದಿದೆ. ಆದರೆ ಒಲವಿನ ನಿಲುವು ಮಾತ್ರ ಯಾವತ್ತೂ ತಿಳಿಯಾಗಿಯೆ ಇತ್ತು, ಇದೆ ಮತ್ತು ಇರುತ್ತದೆ. ಅಂತೆಯೇ ರಕ್ತದ ಮಡುವಿನಲ್ಲೂ ಅನುರಾಗವು ಅರಳುತ್ತಲೆ ಇದೆ. ಇಲ್ಲಿ ಶಾಯರ್ ಅಭಿಷೇಕ್ ಅವರು ಹೃದಯಗಳು ಹೇಗೆ ಪ್ರೀತಿಯಿಂದ ವಂಚಿತವಾಗಿ ನರಳುತ್ತಿರುವುದನ್ನು ದಾಖಲಿಸಿದ್ದಾರೆ.

ದ್ವೇಷ ಕಾರುವವರಿಗೆ ಪ್ರೀತಿಯೆಂದರೆ ಏನೆಂದು ಹೇಗೆ ಹೇಳಲಿ ಗಾಲಿಬ್

ರಕ್ತದ ರುಚಿ ಉಂಡ ನಾಲಿಗೆಗೆ ಮದಿರೆ ಹೇಗೆ ಕುಡಿಸಲಿ ಗಾಲಿಬ್

ಜಾಗತಿಕ ತಾಪಮಾನದ, ಭೋಗ ಸಂಸ್ಕೃತಿಯ ದಿನಮಾನಗಳಲ್ಲಿ ಮನುಷ್ಯ ಮೌಲ್ಯಗಳನ್ನು ದಫನ್ ಮಾಡಿ ವ್ಯಾಪಾರದ ಮನೋವೃತ್ತಿ ಬೆಳೆಸಿಕೊಂಡು ಅಧಃಪತನದತ್ತ ಸಾಗುತಿದ್ದಾನೆ. ಅಂತೆಯೇ ಇಲ್ಲಿ ಜನಮಾನಸಕ್ಕೆ ಪ್ರೀತಿಯ ಪಾಠ ಮಾಡಬೇಕಿದೆ ಎನ್ನುತ್ತಾರೆ. ನಿಜವಾಗಿಯೂ ನಮ್ಮ ಸಮಾಜಕ್ಕೆ ಲವ್ ಗುರುವಿನ ಅವಶ್ಯಕತೆ ಇದೆ ಎಂಬುದನ್ನು ಈ ಷೇರ್ ಸಾರುತ್ತಿದೆ. ಇದರೊಂದಿಗೆ ರಕುತದ ರುಚಿಗೆ ಬ್ರೇಕ್ ಹಾಕುವ ಜರೂರತ್ತು ಇದೆ. ಅದಕ್ಕೆ ಮದಿರೆ ಎಂಬ ಮೋಹಬ್ಬತ್ ಕುಡಿಸಬೇಕು ಎಂಬ ಕಾಳಜಿಯೂ ಇಲ್ಲಿ ಉಸಿರಾಡುತ್ತಿದೆ.‌

     ಸಾಹಿತ್ಯ ಎಂಬುದು ಬದುಕನ್ನು ಸೊಗಸುಗೊಳಿಸುವ ಸಾಧನ. ಅದರ ಸಂಪರ್ಕಕ್ಕೆ, ಸೆಳೆತಕ್ಕೆ ಸಿಲುಕಿದವರು ಅಂತಃಸ್ಪುರಣವನ್ನು ಪಡೆಯುತ್ತಾರೆ. ಈ ನೆಲೆಯಲ್ಲಿ ಗಜಲ್ ಚೇತೋಹಾರಿ ದೃಶ್ಯಕಾವ್ಯವಾಗಿದ್ದು, ಬಾಳಿಗೆ ಸಂಸ್ಕಾರವನ್ನು ನೀಡುವ ಉಸ್ತಾದ್ ಆಗಿದೆ. ಇಲ್ಲಿ ಗಜಲ್ ಗೋ ಅಭಿಷೇಕ್ ಅವರು ಗಜಲ್ ಮಾಡಬೇಕಾದ, ಮಾಡಬಹುದಾದ ಕಾರ್ಯಗಳನ್ನು ಕುರಿತು ವಿವೇಚಿಸಿದ್ದಾರೆ.

ಬಾಯಿದ್ದು ಮಾತನಾಡದಿರುವವರಿಗೆ ದನಿಯಾಗಬೇಕಿದೆ ಗಜಲ್

ಜೀವವಿದ್ದು ಉಸಿರಾಡದಿರುವವರಿಗೆ ಉಸಿರಾಗಬೇಕಿದೆ ಗಜಲ್

ಪ್ರೀತಿ-ಪ್ರೇಮದ ಯುಗಳ ಗೀತೆಯ ಹೊರತಾಗಿಯೂ ಅಸಹಾಯಕ, ಅಮಾಯಕರ ಹಾಗೂ ಶೋಷಿತರ ಪ್ರತಿಭಟನೆಯ ದ್ಯೋತಕವಾಗಿ ಗಟ್ಟಿ ಧ್ವನಿಯಾಗಬೇಕು, ಪ್ರತಿಯೊಬ್ಬರ ಉಸಿರಿಗೆ ಹಸಿರಾಗಬೇಕು ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.

      ಬರವಣಿಗೆ ಒಂದು ಆಕಾರ ಪಡೆಯಲು ಭಾವನೆಗಳ ಸಂಗಮ ಅತ್ಯವಶ್ಯಕ. ಆದರೆ ಆ ಎಲ್ಲ ಸಂವೇದನೆಗಳು ಪ್ರೀತಿಯ ಸಿಂಚನದಲ್ಲಿ ಮಿಂದೇಳಬೇಕು. ಅಂದಾಗ ಮಾತ್ರ ಹೃದಯವನ್ನು ತಟ್ಟುವ, ಮನಸುಗಳನ್ನು ಬೆಸೆಯುವ ಗಜಲ್ ಗಳು ರೂಪ ಪಡೆಯುತ್ತವೆ. ಸುಖನವರ್ ಅಭಿಷೇಕ್ ಬಳೆ ಮಸರಕಲ್ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ರಚನೆಯಾಗಲಿ, ಅವುಗಳು ಸಂಕಲನ ರೂಪ ಪಡೆದು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ.

ಒಪ್ಪಿಕೊಳ್ಳುತ್ತೇನೆ ಜೀವನ ಇರೋದೆ ನಾಲ್ಕು ದಿನವೆಂದು

ಗೆಳೆಯರೇ ಆ ನಾಲ್ಕು ದಿನಗಳೂ ಬಹಳ ಆದವು”

ಫಿರಾಕ್ ಗೋರಖಪುರಿ

      ಗಜಲ್ ಗುಲ್ಜಾರ್ ನಲ್ಲಿ ವಿಹರಿಸುತಿದ್ದರೆ ಮನಸು ಯಾವತ್ತೂ ದಣಿಯಲಾರದು, ಸದಾ ಚೇತೋಹಾರಿಯಾಗಿಯೆ ಇರುವುದು!! ಈ ಗಜಲ್ ಜನ್ನತ್ ಅಂದರೇನೆ ಹಾಗೆ, ಇಂಗದ ದಾಹ, ಸಾಕೆನಿಸದ ಮೋಹ; ಬೇಕು ಬೇಕೆನಿಸುವ ತುಡಿತ. ಆದರೂ…ಕಾಲದ ಸರಪಳಿಯಲ್ಲಿ ಸಿಲುಕಿರುವ ಮುಸಾಫಿರ್ ನಾನು. ಇಂದು ಹೋಗಲೆಬೇಕಿದೆ, ಮತ್ತೆ ಮುಂದಿನ ಗುರುವಾರ‌ ಪ್ರೀತಿಯನ್ನರಸುತ ಬರಲು.. ಹೋಗಿ ಬರಲೆ, ಬಾಯ್.. ಟೇಕ್ ಕೇರ್ ದೋಸ್ತೊ…


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top