ಕಾವ್ಯ ಜುಗಲ್ ಬಂದಿ

ಖಾಲಿತನದ ಗಳಿಗೆಯ ಕವಿತೆಗಳು

ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ (ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ) ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ

ಖಾಲಿತನದ ಗಳಿಗೆಯ ಕವಿತೆಗಳು

ಗಳಿಗೆ-6

ಇಂದು ಮನೆಯ ಸೋರುವ ಮಾಡಿನಂಚಲ್ಲಿ
ಸುರಿದ ಜೋರು ಮಳೆಯ ತೇವಕ್ಕೆ
ಮೊಳಕೆಯೊಡೆದ
ಒಂದೆರಡು..
ಅಲ್ಲ!
ಮೂರ್ನಾಲ್ಕು..
ಅಲ್ಲಲ್ಲ!!
ಐದಾರು..
ಅಣಬೆಗಳು
ನಿನ್ನ ನೆನಪಿಸಿದವು ಮಾಧವ..!

ನೀನಂದು
ಖಾಲಿ ಬೊಗಸೆ
ಮರುಭೂಮಿಯಾದ ಎದೆ
ಬಯಲಲಿ ಹಚ್ಚಿಟ್ಟ ಹಣತೆ ಆರಿದ ಭಾವ ತೊಟ್ಟು
ಗತ ನೆನಪುಗಳ ಹೊದ್ದ ಕತ್ತಲೊಳು
ಚಿತೆಗಳುರಿದ ಬೂದಿಯಿಂದ
ಎದ್ದು ಬರುವೆನು ನನ್ನದೆಂದುಕೊಂಡ ನೆಲದಲ್ಲಿ ಅಣಬೆಯಾಗಿ..
ಎಂದುಸುರಿ
ಮಾತಿನ ಮರೆಗೆ ಸರಿದು
ಈವರೆಗೆ ಸದ್ದು-ಗದ್ದಲಿಲ್ಲದ ಮೌನಕ್ಕೆ ಶರಣಾದ ರೀತಿಗೆ
ಮಾತು-ಗೀತುಗಳಿಲ್ಲದ
ಖಾಲಿತನದ
ಕೊರೆತ-ಮೊರೆತಗಳೆದ್ದಿವೆ ಭಾವಗೊಳದೊಳಗೆ..
ನಿನ್ನ ಬಗೆ ತಿಳಿವ ಉತ್ಕಟ ಎದೆಗುದಿಯೆದ್ದಿದೆ..

ಕ್ಷೇಮವಾಗಿಹೆಯೆಂದು ಭಾವಿಸಲೇ…?

ಮೌನವೆಂಬುದು
ಎಲ್ಲಾ ಬಗೆ ತಲ್ಲಣಕೆ ಮುಕ್ತಿ
ಎಂದು ಈಗ ತಾನೇ ಓದಿದೆ!

ವೀಣಾ ಪಿ.

ಬರಲೆಂದು ಮಳೆ ನನ್ನೂರಲ್ಲಿ
ನೂರು ದೇವರ ಪ್ರಾರ್ಥಿಸಿ
ನೆಟ್ಟು ಆಕಾಶಕ್ಕೆ ಕಣ್ಣು
ಗುಡ್ಡೆ ಬಿಳಿಯಾಯಿತೆ ಹೊರತು
ಇಲ್ಲಿ ಘನಮೋಡ ಕಟ್ಟಲಿಲ್ಲ!
ಒಂದು ಹನಿ ಮಳೆ ಸುರಿಯಲಿಲ್ಲ!
ಕ್ಷಾಮಕ್ಕೆ ತುತ್ತಾದ ಹಸಿರಿರದ ಊರಲ್ಲಿ
ಉಸಿರೊಂದರ ಹೊರತು
ಬೇರೇನೂ ಉಳಿದಿಲ್ಲ!

ನನ್ನ ಕೈಗಳಲಿ
ಗುದ್ದಲಿ ಪಿಕಾಸಿ ಹಿಡಿದು
ನೆಲದೆದೆಯ ಬಗೆಯುತಿಹೆ
ಹಸುಗೂಸುಗಳಿಗಾದರು ಸಿಗಲೆಂದು ಅಷ್ಟಿಷ್ಟು
ಕೆಸರುನೀರು

ಬರದ ಬೇಗೆಗೆ
ಹಳೆಯದೆಲ್ಲ ಮರತುಹೋಗಿದೆ
ಭೂತದ ಕಟ್ಟುಗಳ ಕತ್ತರಿಸಿ
ಈ ಕ್ಷಣದಲ್ಲಿ ಬದುಕುತಿರುವವನೊಳಗೆ
ಯಾವ ನೆನಪುಗಳೂ
ಉಳಿದಿಲ್ಲ!

ಎದ್ದು ಬರೋಣವೆಂದರೆ
ಕಾಲಿಗೆ
ತೊಡರುತಿಹ ಕರುಳು ಬಳ್ಳಿಗಳು
ವಿಶ್ವಾಘಾತುಕತನದ
ಪುರಾಣಗಳ ಕಥೆಗಳ ಬಿಚ್ಚಿ ಹಾಸುತಿವೆ!

ಮಾತಾಡಿಯೂ ಅರ್ಥವಾಗದ
ಜನರಿರುವ ಜಗದೊಳಗೀಗ
ಮಾತಿಗಿಂತ ಮೌನಕ್ಕೇ ಕಿಮ್ಮತ್ತಿದ್ದಂತಿದೆ!

ಕ್ಷಾಮದೂರಲ್ಲಿ
ಕ್ಷೇಮವೆಂಬುದೇ ಅಪದ್ದದ ಮಾತು!

ಬದುಕಿಸೀತು ಮೌನ..
ಕಾಯುತಿಹೆನು
ಮತ್ತೊಂದು ಮುಂಗಾರಿಗೆ!

ಮಾಧವ


ವೀಣಾ ಪಿ.

ಶ್ರೀಮತಿ ವೀಣಾ ಪಿ., ಹರಿಹರ …
ಇತಿಹಾಸ ಉಪನ್ಯಾಸಕಿ, ಸಂಶೋಧಕಿ, ಕವಯಿತ್ರಿ ಹಾಗೂ ಬರಹಗಾರ್ತಿಯಾಗಿದ್ದು, ಕನ್ನಡ ಸಾಹಿತ್ಯ ಹಾಗೂ ಐತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಇವರ ಚೊಚ್ಚಲ ಕೃತಿ “ಭಾವೋದ್ದೀಪ್ತಿ”ಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಗೊಂಡು ಪ್ರಕಟಗೊಂಡಿದೆ. ಬದುಕಿನಲ್ಲಿ ಭರವಸೆಗಳ ಬೆಂಬತ್ತುವಿಕೆ ಇವರ ಬರವಣಿಗೆಯ ಮೂಲ ಆಶಯವಾಗಿದೆ.

Leave a Reply

Back To Top