ಬಾಲೆಗೊಂದು ಕಿವಿಮಾತು…ಹಮೀದಾ ಬೇಗಂ ದೇಸಾಯಿ

ಕಾವ್ಯಸಂಗಾತಿ

ಬಾಲೆಗೊಂದು ಕಿವಿಮಾತು

ಹಮೀದಾ ಬೇಗಂ ದೇಸಾಯಿ

ಪ್ರಿಯ ಬಾಲೆ,
ಬಾಗಿಲಿಹುದು ಮನೆ ಮನೆಗೆ
ಆದರೆಲ್ಲವೂ ಅಲ್ಲ ಮಮತೆಯ ನೆಲೆ..
ಅರಿವಾಗುವುದು ಮುಂದೊಮ್ಮೆ
ತಿಳಿದಿರಲಿ ಕೋಮಲೆ..
ಉರಿಬಿಸಿಲಿನ ಹಿಂದೆಯೇ
ಇಹುದು ತಣ್ಣೆಳಲು;
ಕುದಿಮನದ ಬುಡದಲ್ಲೇ
ಪುಟಿವುದು ಶಾಂತಿ ಹೊನಲು..
ನಾ ಹೇಳಿದರೂ,
ಕಲಿಯುತಿರು ಕಾಲಕಾಲಕ್ಕೆ
ಜಗದ ವಿಶಾಲ ಶಾಲೆಯಲಿ
ಉದ್ದಗಲದ ವ್ಯವಹಾರದೆಳೆಗಳ ಚಿತ್ತಾರ
ಹೆಣೆಯುತಿರು ಪ್ರೀತಿ ಬಟ್ಟೆಯಲಿ..

ಪ್ರೀತಿ ತೋರುವ ಜೀವ
ಹೊನ್ನಿಗಿಂತಲೂ ಮೇಲು
ಆಪತ್ತಿಗಾಗುವ ಸ್ನೇಹಿ
ಭೂತಾಯಿಯಂತೆ..
ನಿನ್ನ ನೀ ಸವೆಸಿದರೂ ಪರರಿಗಾಗಿ
ನೀನರಳುವುದನು ಮರೆಯದಿರು..
ಅರಳಿ ಹೂವಾಗಿ ಬೆಳೆಯುವುದು
ಪ್ರತಿ ಮೊಗ್ಗಿನ ಹಕ್ಕು !
ಇಡು ಹೆಜ್ಜೆಯ ಎಚ್ಚರದಿ
ವಿಷ ವರ್ತುಲದ ಈ ಜಗದಿ
ನೋಡುತಿರು ಜಗವ
ಅರಿವಿನ ಕಂಗಳಿಂದ..

ಜೀವನದ ಸಿಹಿ ಸವಿದು
ಕಹಿಯ ನುಂಗಿ ಬದುಕಿದ
ಅಜ್ಜಿಯ ಪಕ್ವತೆ ತುಂಬಲಿ
ನಿನ್ನೆದೆಯ ತುಂಬ;
ಮನೆಗೆಂದೂ ನೀನೇ ಆಧಾರ
ಗೊತ್ತಿರಲಿ ನಿನಗೆ..

ನಿನ್ನ ಕಲ್ಪನೆ ಕನಸುಗಳಲಿ
ಇಡು ದೃಢ ನಂಬುಗೆಯ
ಮೂಡಲಿ ನಿನ್ನ ಅಸ್ತಿತ್ವ
ರಂಗೋಲಿ ಚುಕ್ಕೆಗಳ ಸಾಕಾರದಂತೆ..
ಕೊನಗೊಮ್ಮೆ ಹೇಳುವೆ ಬಾಲೆ
ಕಿವಿ ಮಾತನೊಂದು,
ಪ್ರೀತಿ ಸ್ನೇಹ ಸಮ್ಮಾನಗಳೆಲ್ಲ
ಪ್ರತಿಕ್ರಿಯೆಗಳು ನಿನ್ನದೇ ಕ್ರಿಯೆಗಳಿಗೆ…!


Leave a Reply

Back To Top