ಸುಡುವ ಧಾವಾಗ್ನಿ-ಸುವಿಧಾ ಹಡಿನಬಾಳರವರ ಕವಿತೆ

ಕಾವ್ಯ ಸಂಗಾತಿ

ಸುಡುವ ಧಾವಾಗ್ನಿ

ಸುವಿಧಾ ಹಡಿನಬಾಳ

ಮದುವೆ ಆಗಿ ವರುಷ
ಉರುಳುವುದರೊಳಗೆ
ಮಕ್ಕಳಾಗಿಲ್ಲ ಎಂಬ ಚಿಂತೆ
ಮಕ್ಕಳಾದುವೆಂದರೆ ಕಣ್
ರೆಪ್ಪೆಯಾಗಿ ಪೊರೆವುದೇನಂತೆ
ಬೆಳೆಯುತ್ತಲೆ ಕಾಡುವ
ಭವಿಷ್ಯದ ಚಿಂತೆ

ಯೌವ್ವನದ ಹೊಸ್ತಿಲಲ್ಲಿ
ಮಕ್ಕಳು ಮಾಡುವ
ಗನಾಂಧಾರಿ ಕೆಲಸಕ್ಕೆ
ತಲೆ ತಗ್ಗಿಸಿ ಒಳಗೊಳಗೇ
ಭೋರ್ಗರೆಯುವ ಕಡಲ
ತೆರೆಯಂತ ಒಡಲ ಧಾವಾಗ್ನಿ!

ಜೊತೆಗೆ ಸಾತ್ ನೀಡುವ
ಗಂಡನ ಕೊಂಕು ಮಾತಿಗೆ
ತಪ್ಪೆಲ್ಲ ನಿನ್ನದೆ ಎಂಬಂತ
ಬೆಂಕಿಯಂತ ಮಾತಿಗೆ
ಕೋಪದಲಿ ತೋರುವ ದರ್ಪಕೆ
ಅಸಹಾಯಕವಾಗಿ ಮಿಡಿವ
ಕಣ್ಣೀರಿಗೆ ಬಂಧನದ ಬೇಲಿ!

ಹೊರಗೆ ಉಗುಳಲಾರದೆ
ಸಿಡಿವ ರೋಷಾಗ್ನಿಗೆ
ಕೊತ ಕೊತ ಕುದಿವ
ಭೂತಳದ ಲಾವಾಗ್ನಿಗಿಂತ
ಮಿಗಿಲಾದ ಆವೇಶ
ಸ್ಫೋಟಗೊಂಡರೆ ಹೊತ್ತು
ಉರಿವ ಭಯ ಮೌನದಲಿ
ಸುಡುವ ಚಿಂತಾಗ್ನಿ ತಾಯ್ಮಡಿಲ
ದಹಿಸುವ ಕೆಂಡದಂತೆ

ಮೇಲ್ನೋಟಕ್ಕೆ ನಗೆಯ
ಮುಖವಾಡ ತನ್ನಷ್ಟಕ್ಕೆ
ಕರಗುವ ಕರ್ಪೂರದ ಹಾಗೆ
ಮತ್ತೆ ಮತ್ತೆ ಚಿಮ್ಮುವ ಚಿಲುಮೆಗೆ
ಪಾತಾಳ ಸೇರುವ ಆಘಾತ
ಇಷ್ಟಾಗಿಯೂ
ಮನೆ ಬೆಳಗುವ ನಂದಾದೀಪದಂತ
ಸಹಸ್ರಾರು ತಾಯಂದಿರಿಗೆ
ಶರಣು ಶರಣಿಂಬೆ


2 thoughts on “ಸುಡುವ ಧಾವಾಗ್ನಿ-ಸುವಿಧಾ ಹಡಿನಬಾಳರವರ ಕವಿತೆ

Leave a Reply

Back To Top