ಬೆಸುಗೆಯ ಕೊಂಡಿ

ಲಹರಿ

ಬೆಸುಗೆಯ ಕೊಂಡಿ

ಸುಲೋಚನಾ ಮಾಲಿಪಾಟೀಲ

ನಾ ಕಂಡ  ಬೆಸುಗೆಯ ಕೊಂಡಿ ಚಿಕ್ಕವರಿದ್ದಾಗ ರಜೆಗಳಲ್ಲಿ ಅಜ್ಜಿ ಊರಿಗೆ  ತಂದೆ ತಾಯಿಯ ಜೊತೆ ಹೊಗುತ್ತಿದ್ದೆವು. ಹಳ್ಳಿ ಊರು ಬಸ್ಸಿನ ಅನಕೂಲತೆ  ಇಲ್ಲದ ಕಾರಣ ಪಕ್ಕದ ಊರಿಗೆ ಬಸ್ ಬರುತ್ತಿತ್ತು, ನಂತರ ಎತ್ತಿನ ಬಂಡಿಯಲ್ಲಿ ಕುಳಿತು ನಮ್ಮೂರಿಗೆ ಹೋಗುತ್ತಿದ್ದೆವು. ಹೊರಡುವಾಗ ಸುತ್ತಮುತ್ತಲಿನ ತೋಟಗಳಲ್ಲಿನ ಬೇಳೆಗಳನ್ನು ನೋಡುತ್ತಾ, ಬರೀ ಹಸಿರು ಹಾಸಿಗೆ, ಕಣ್ಣು ಪಿಳಕಿಸುತ್ತ ನೊಡಿದ್ದೆ ನೊಡಿದ್ದು. ಸುತ್ತಮುತ್ತ ಗಿಡಗಳ ನೆರಳಲ್ಲಿ ನಮ್ಮ ಬಂಡಿ ಘಲ್ ಘಲ್ ಸಪ್ಪಳ ಮಾಡುತ್ತಾ ಹೋಗುವಾಗ ಸಂತೋಷದಿಂದ ಕುಣಿಯುತ್ತಿದ್ದೆವು. ನಮ್ಮಜ್ಜಿಯ ತೋಟ ಭೀಮಾನದಿ ದಂಡೆಯ ಮೇಲೆ ಇನ್ನೆನು ಕೇಳ್ತಿರಿ ಮುಂಜಾನೆಯೆದ್ದು ಸೀದಾ ನದಿಯಲ್ಲಿ ಡುಮ್ಕಿ ಹೊಡೆಯೊದು ನಂತರ ತೊಟಕ್ಕೆ ಹೋಗಿ ದಣಿವಾಗುವವರೆಗೆ ತಿರಗಿದ್ದೆ ತಿರುಗಿದ್ದು. ಹೊಲಗದ್ದೆಗಳ ವಾತಾವರಣವೇ ಬೇರೆ. ಎಷ್ಟು ಅನುಭವಿಸಿದರು ಸಾಲದು.

ಮುಂಜಾವಿನಲಿ ಸೂರ್ಯೋದಯದ ಸೌಂದರ್ಯ  ನೋಡಲು ಮನ ಸೂರೆಗೊಳ್ಳುವಂತಿರುತ್ತಿತ್ತು. ಕಬ್ಬಿನ ತೋಟದಲ್ಲಿ ನವಿಲುಗಳು ಸಂಭ್ರಮ ನೋಡುತ್ತಿದ್ದೆವು. ಕೋಗಿಲೆಗಳ ಹಾಗೆಯೇ ನವಿಲುಗಳ ಧ್ವನಿ ಕೂಡ ಬಹಳ ಮಧುರವಾಗಿರುತ್ತದೆ. ನಮ್ಮ ಮಾವ ತೋಟ ಬಹಳ ಸುಂದರವಾಗಿ ಮಾಡಿದ್ದರು. ಎಲ್ಲ ತರಹದ ಹಣ್ಣಿನ ಮರಗಳು, ಭತ್ತ, ಗೋಧಿ, ಜೋಳ, ಕಡ್ಲೆ , ತೊಗರಿ ಎಲ್ಲ ಧಾನ್ಯಗಳನ್ನು ಬೆಳೆಯುತ್ತಿದ್ದರು. ಚಿಕ್ಕ ಚಿಕ್ಕ ಮಡುವು ಮಾಡಿ ತರಕಾರಿಗಳನ್ನೆಲ್ಲ ಬೆಳೆಯುತ್ತಿದ್ದರು. ಆಗಿನ ಕಾಲದಲ್ಲಿ ಮನೆಗಳಲ್ಲಿ ಕುದುರೆಗಳಿರುತ್ತಿದ್ದವು. ಹಿರಿಯರೆಲ್ಲ ಕುದುರೆಯ ಮೇಲೆಯೇ ಓಡಾಡುತ್ತಿದ್ದರು. ತೋಟದಲ್ಲಿ ಎತ್ತುಗಳು ಮೂಲಕ ಮಟ್ಟಿ ಹೊಡೆದು ಬೆಳೆಗಳಿಗೆ ನೀರು ಉಣ್ಣಿಸುತ್ತಿದ್ದ ರು. ಆಳು ಮಗ ಜಾನಪದ ಹಾಡು ಹಾಡುತ್ತಾ ಮಡಿ ಮಾಡಿ ನೀರು ಬಿಡುತ್ತಿದ್ದ. ಮಧ್ಯಾಹ್ನ ಬಂಡಿಯಲ್ಲಿ ಬುತ್ತಿಯ ಜೋತೆ ಮಾವನ ಮಕ್ಕಳೆಲ್ಲ ಬರುತ್ತಿದ್ದರು. ಎಲ್ಲರೂ ಕೂಡಿ ಮರದ ಕೆಳಗೆ ಕುಳಿತು ಊಟ ಮಾಡುತ್ತಿದ್ದೆವು. ತೋಟದಲ್ಲಿ ಕುಳಿತು  ಡಬಲ್ ಡಬಲ್ ರೊಟ್ಟಿ, ಜಿದ್ದು ಕಟ್ಟಿ ತಿನ್ನುತ್ತಿದ್ದೆವು, ನಂತರ ಮುಟ್ಟಾಟವಾಡಿ ಹುಲ್ಲಿನ ಮೇಲೆ ಹೊರಳಿಡಿ ಅಲ್ಲೆ ಸ್ವಲ್ಪ ಮಲಗುತ್ತಿದ್ದೆವು. ಇಳಿ ಹೊತ್ತಿಗೆ ಎಲ್ಲ ಪಕ್ಷಿಗಳು ತೋಟದ ಮರಗಳಲ್ಲಿಯ ಗೂಡಿಗೆ ಬಂದು ಸೇರುತ್ತಿದ್ದವು. ಚಿಕ್ಕ ಕರುಗಳ ಜೋತೆ ಚೆಲ್ಲಾಟವಾಡಿ ಮರಳಿ ಬಂಡಿಯಲ್ಲಿ ಕುಳಿತು ಮನೆಸೇರುತ್ತಿದ್ದೆವು. ನಾನಂತೂ ನಮ್ಮಜ್ಜನ ಕುದುರೆಯ ಮೇಲೆಯೇ ಕುಳಿತು ತೋಟದಲ್ಲಿ ತಿರಗಿದ್ದೆ ತಿರುಗಿದ್ದು.  ನಮ್ಮಜ್ಜ ಆರುವರೆ ಫೀಟ್ ಎತ್ತರ. ಆಗಿನ ಜನ ಸಹಸಾ ಬಹಳ ಎತ್ತರವಾಗಿರುತ್ತಿದ್ದರು. ತೆಲೆಯ ಮೇಲೆ ಬಿಳಿ ರುಂಬಾಲು ಬಿಳಿಯ ಅಂಗಿ ಧೋತರ ಮುಖದಲ್ಲಿ ಹುರಿಮಿಸೆ. ಊರೊಳಗೆ ಹೊರಟರೆ ಜನಾ ಎಲ್ಲಾ ಬದಿಗೆ ಸರಿದು ನಮಸ್ಕರಿಸುವ ಸಂಸ್ಕಾರ. ಒಬ್ಬರಿಗೊಬ್ಬರು ಪ್ರೀತಿ ವಾತ್ಸಲ್ಯ ಸಹಕಾರದಿಂದ ಬಾಳುವ ಹಳ್ಳಿಯ ಜನ. ಒಗ್ಗಟ್ಟಾಗಿ ಮನೆಯ ಕಾರಣಗಳು, ಊರು ಜಾತ್ರೆಗಳು ಬಹಳ ವೈಭವದಿಂದ ಮಾಡುವವರು.

ಪ್ರತಿ ವರ್ಷ ಹೊಲದಲ್ಲಿ ಕಬ್ಬಿನ ಗಾಣ ನಡೆಸುತ್ತಿದ್ದರು. ಕಬ್ಬಿನ ಹಾಲಿನ ಪಾಕ್, ಪಾಕದಿಂದ ಬೆಲ್ಲ ತಯಾರಿಸುವ ವಿಧಾನ ನೋಡುವಂತೆ ಇರುತ್ತಿತ್ತು. ಹೊಲದ ಮುಂದೆ ಹಾದಿಯಲ್ಲಿ ಹೊರಟವರನ್ನೆಲ್ಲ ಕರೆದು ಬನ್ರಿ ಬನ್ರಿ ಒಂದು ಗ್ಲಾಸ್ ಕಬ್ಬಿನ ಹಾಲು ಕುಡುದ ಹೋಗರಿ ಅಂತ ಕರೆದು ಕುಡಿಸುವ ಸಂಭ್ರಮ. ಬೆಲ್ಲ ತಯಾರಿಸುವುದು ನೋಡಲು ಬಹಳ ಆಕರ್ಷಣೆಯದ್ದು. ಕಬ್ಬಿನ ಹಾಲು ಕುಡಿಯುವುದು, ಪಾಕದ ರಸ ಸವಿಯುವುದು, ಜೋಳ, ಹಸಿಕಡ್ಲೆ  ಮೆಕ್ಕೆತೆನೆ ಬೆಂಕಿಯಲ್ಲಿ ಸುಟ್ಟು ತಿನ್ನುವುದು ಎಲ್ಲ ನೆನೆಸಿಕೊಂಡರೆ ಮೈ ರೊಮಾಂಚನಗೊಳ್ಳುತ್ತದೆ. ಆಹಾ ಎಂತಹ ದಿನಗಳು ಅವು. ಇವತ್ತಿನ ಮತ್ತು ಮೊದಲಿನ ಒಕ್ಕಲುತನ ಪದ್ಧತಿ ಭಿನ್ನವಾಗಿದೆ. ಮೊದಲಿನ ಜನ ಕಷ್ಟಾಳುಗಳು, ತಿಂದ ಆಹಾರ ಮೈಗೆ ಹತ್ತುತ್ತಿತ್ತು. ರೋಗ ರುಜಿನಗಳು ಇರುತ್ತಿರಲಿಲ್ಲ. ಈಗಿನ ವ್ಯವಸಾಯ ಪದ್ಧತಿ ಲಾಭವಿದೆ. ಆದರೆ ಎಲ್ಲ ಹ್ಯಾಬ್ರಿಡಿ. ಸಂಜೆಗೆ ಎಲ್ಲ ಹುಡುಗರು ಒಟ್ಟಾಗಿ ಮಲಗುವುದು. ಮನೆಯ ಮಹಡಿಯ ಮೇಲೆ ನೆಲದ ಮೇಲೆ ಒಂದು ದೊಡ್ಡ ಕೌದಿ ಹಾಕಿಸಿದರೆ ಹನ್ನೆರಡು ಜನ ಮಲಗುತ್ತಿದ್ದೆವು. ಮೇಲೆ ಹೊಚ್ಚಗೊಳಿಕ್ಕೆ ದೊಡ್ಡ ಕೌದಿ ಇರುತ್ತಿತ್ತು. ಮನೆ ತುಂಬಾ ಕೌದಿಗಳ ಸಾಮ್ರಾಜ್ಯ. ಒಬ್ಬರಿಗೊಬ್ಬರು ಕಚ್ಚಾಡುತ್ತ, ಅಜ್ಜಿಯ ಕಥೆ ಕೆಳುತ್ತ ಮಲಗುತ್ತಿದ್ದೆವು.  ಅದರಲ್ಲಿ ನಮ್ಮ ಅಜ್ಜಿ ಒಂದು ಕಥಿ ಮೂರ ಮೂರ ದಿನ ಹೆಳಕ್ಕಿ. ಹಳೆಯ ಕಥೆಗಳು ಕೂಡ ಅಷ್ಟೆ ಕೌತುಕದಿಂದ ಕೇಳುವಂತಹದಿರುತ್ತಿದ್ದವು. ಕಥೆಯಲ್ಲಿ ಒಂದು ಮನೆತನದ ವಂಶಸ್ಥರ ಬಾಳಿ ಬದುಕಿದ ಜೀವನ,  ಆಳಿ ಮೆರೆದ ಸಾಮ್ರಾಜ್ಯದ ಮಹಾರಾಜರ ವಂಶಸ್ಥರ ಬಗ್ಗೆ ಕಥೆಗಳಿರುತ್ತಿದ್ದವು. ಹಾಗೆಯೇ ದೆವ್ವ ಭೂತಗಳ ಕಥೆಯಂತೂ ಕೇಳುವಾಗ ಕೌದಿ ಮುಸಿಕಯೊಳಗ ಹುಂ ಹುಂ ಅನ್ನುತಾ ಒಬ್ಬರಿಗೊಬ್ಬರು ಬಿಗಿಯಾಗಿ ಹಿಡಿದು ಅಜ್ಜಿ ಮುಗಿತ ಇಲ್ಲ ಅನ್ನುತ್ತಾ ನಿದ್ದೆಗೆ ಜಾರುತ್ತಿದ್ದೆವು. ಮುಂಜಾನೆ ಎದ್ದಕೂಡಲೆ ಕೌದಿ ಹಿಡಿದು ಜಗ್ಗಾಡೋದು ಅಲ್ಲದೆ ಆ ಕೌದಿಯಲ್ಲಿ ನಮ್ಮ ಹಳೆಯ ಉಡುಗೆಗಳು ಕತ್ತರಿಸಿ ಹೊಲದದ್ದು ಎದ್ದು ಕಾಣುತ್ತಿದ್ದವು. ಇದು ನನ್ನ ಅಂಗಿ ಇದು ನಿನ್ನ ಅಂಗಿಯಂತ ಅಜ್ಜಿ ಹೊಲದ ಕೌದಿಯ ಕೌತುಕತೆಯ ಮಾತುಗಳು ಆಗುತ್ತಿದ್ದವು.  ನಾನಂತೂ ನನ್ನ ಮಕ್ಕಳಿಗೆ ಆಗಿನ ಕಾಲದ ವ್ಯವಸಾಯ ಪದ್ಧತಿ, ಪ್ರೀತಿ ವಾತ್ಸಲ್ಯದ ರಕ್ತಸಂಬಂಧದ ಕೊಂಡಿಗಳ ಬಗ್ಗೆ ಅಲ್ಲದೆ ನಾ ತೋಟದಲ್ಲಿ ಕಳೆದ ದಿನಗಳ ಬಗ್ಗೆ  ಆನಂದದಿಂದ ವರ್ಣಿಸುತ್ತಲಿರುತ್ತೇನೆ.

ನಿಜವಾಗಿಯೂ ಆ ಬೆಸುಗೆಯ ಕೊಂಡಿಗಳು ಮರೆಯಾದವು ಅಲ್ಲಾ! ವ್ಯಥೆಯಾಗುತ್ತದೆ. ಮತ್ತೆ ಮರಳಿ ಆ ದಿನಗಳನ್ನು ನಾವು ಕಾಣ ಬಲ್ಲೆವೆ?

.—————————————-

  ಸುಲೋಚನಾ ಮಾಲಿಪಾಟೀಲ

Leave a Reply

Back To Top