ಪ್ರೇಮ ಪತ್ರ-

ಆದಪ್ಪ ಹೆಂಬಾ ಮಸ್ಕಿ

ಆದಪ್ಪ ಹೆಂಬಾ ಮಸ್ಕಿ ಅವರ ಪ್ರೇಮ ಪತ್ರ

ಪ್ರೀತಿಯ ರಾಜಿ…..

ನನ್ನ ಹೃದಯ ಪ್ರತಿ ಸೆಕೆಂಡಿಗೆ ಅದೆಷ್ಟು ಸಲ ಬಡಿದು ಕೊಳ್ಳತ್ತೋ ನನಗಂತೂ ಗೊತ್ತಿಲ್ಲ ಆದ್ರೆ ಅಷ್ಡೂ ಸಲ ಬಡಿದುಕೊಳ್ಳುವುದು ನಿನಗಾಗಿಯೇ. ಆಫ್ ಕೋರ್ಸ್ ನಾನದನು ಬಾಯ್ಬಿಟ್ಡು ಹೇಳಿಲ್ಲಬಿಡು. ಅದ್ಹೇಗೆ ಹೇಳೋದು ? ಈ ಪ್ರೇಮ ಅನ್ನೋದು ಹೃದಯ ಬಡಿತದಷ್ಟೇ ಸೂಕ್ಷ್ಮ ಕಣೇ. ಅದು ಮೈಕನಲ್ಲಿ ಕೂಗಿ ಹೇಳೋ ಸರಕಲ್ಲ. ಅದು ಹೃದಯದ ಪಿಸುಮಾತು. ಪ್ರೇಮ ಅಂದ್ರೆ ಈ ಪಡ್ಡೆ  ಹುಡಗ್ರು ಅದ್ಯಾವುದೋ ಡಿಜೆ ಸ್ಪೀಕರ್ ಹಾಕಿ ಡ್ಯಾನ್ಸ್ ಮಾಡ್ತಾರಲ್ಲ ? ಅಂಥ ರೊಚ್ಚೆ ಕುಣಿತ ಅಲ್ವೇ ? ಅದು ಎದೆಯೊಳಗಿನ ತಣ್ಣನೆ ತಳಮಳ. ನಿನ್ನಲ್ಲೂ ಆ ಪ್ರೇಮ ಸೋನೆ ಹನಿಯಾಗಿ ನಿನ್ನ ಕಂಣಂಚ ಮಿಂಚಲ್ಲಿ ಬಂದು ಕುಳಿತಿದೆ. ಆ ಕಣ್ಣ ಮಾತನೊಮ್ಮೆ ಕೇಳು. ಅದು ನನ್ನೆಡೆಗೆ ಪ್ರೇಮ ಸಂದೇಶಗಳನ್ನು ಕಳಿಸುತ್ತಲೇ ಇದೆ. ನೋಡುವ ಮನಸ್ಸಿಲ್ಲ ನಿನಗೆ,  ನನ್ನನ್ನು ಕಾಡುವ ಹುಕಿ. ಯಾಕೇ ರಾಜೀ ನನ್ನ ಸತಾಯಿಸುವಲ್ಲಿ ನಿನಗೆ ಸಿಗುವ ಸಂತೋಷವಾದರೂ ಏನು ?. ಹೇಳಿ ಬಿಡು. ಮುಗ್ಧ, ಪರಿಶುದ್ಧ ಪ್ರೇಮಿ ನಾನು. ಹೀಗೆ ಸತಾಯಿಸಬೇಡವೇ ಅರಸಿ. ನಿನ್ಯಾವತ್ತೂ ನನ್ನ ಹೃದಯದ ಅರಸಿಯೇ.

         ನಿನ್ನ ಹೃದಯವನ್ನೂ ಕೇಳಿನೋಡು ಅದೂ ಕೂಡ ಯಾವಾಗಲೂ ನನ್ನನ್ನೇ ಧೇನಿಸುತ್ತದೆ. ಜಾಣೆ ನೀನು ನಿನ್ನ ಹೃದಯದಾಸೆಯನ್ನು ಮೌನ ಹೊದಿಕೆಯಿಂದ ಮುಚ್ಚಿಬಿಡುವೆ. ನಿನ್ನ ಆ ಮೌನವೇ ನನಗಿಷ್ಟ ಕಣೇ. ಆ ಮೌನ ಮುರಿದು ಯಾವಾಗಲೊಮ್ಮೆ ಮುಗುಳು ನಗೆ ಹೊರಸೂಸುವೆಯಲ್ಲ. ಆ ನಗುವಿಗಾಗಿ ನಾನು ಕಾಯುತ್ತಿರುತ್ತೇನೆ ಉಸಿರು ಹಿಡಿದು. ನಿನ್ನ ತುಟಿಯಂಚಿನ ಆ ಮುಗುಳುನಗೆಯ ಶಕ್ತಿ ನಿನಗೇ ಗೊತ್ತಿಲ್ಲ.  ಆ ನಗು ಉಸಿರಿಡಿದು ಕುಳಿತ ನನ್ನ ಪ್ರಾಣ ಪಕ್ಷಿಗೆ ಸಾವಿರ ವರ್ಷಗಳ ಆಯುಷ್ಯ ತರುತ್ತೆ. ಯುಗ ಯುಗ ಕಳೆದರೂ ಆ ನಿನ್ನ ನಗುವಿಗಾಗಿ ಕಾಯುವ ತಾಕತ್ತು ನೀಡುತ್ತೆ.

          ರಾಜೀ ನನ್ನದು ಮುಗ್ಧ ಪರಿಶುದ್ಧ ಪ್ರೇಮವೆಂದೆನಲ್ಲವೆ ? ಅದು ಆಚಂದ್ರಾರ್ಕ ಸತ್ಯ. ಅದಕ್ಕೆ ನಿನ್ನ ನಗುವೇ ಸಾಕ್ಷಿ. ನಮ್ಮ ಕಣ್ಣುಗಳ ಮಾತಿಗೆ ಅದೆಷ್ಟು ವರ್ಷಗಳಾಯ್ತು ನೆನಪಿದೆಯಾ ? ಆ ಕಣ್ಣೋಟ  ಬಂಧನದಲ್ಲಿ ಎಂದಾದರೂ ಕಳಂಕ ಬಂದಿದೆಯೇ ? ಇಷ್ಟು ಸಾಕಲ್ಲವೇ ನಮ್ಮದು ಪವಿತ್ರ ಪ್ರೇಮ ಎನಲು ? ನಿಜ ಕಣೇ ರಾಜೀ ನಮ್ಮದು ದೈಹಿಕ ಆಕರ್ಷಣೆಯಲ್ಲ. ಭಾವ ಬಂಧನದ ಸೆಳೆತ.

           ಮೊನ್ನೆ ಎಂಥದೋ ಸಂದರ್ಭದಲ್ಲಿ ನೀನು ನನ್ನ ಹತ್ರ ಬಂದು “ಥ್ಯಾಂಕ್ಸ್”  ಅಂತ ಹೇಳಿದೆಯಲ್ಲ ? ಅದನ್ನು ಕೇಳಿ ನನ್ನ ಹೃದಯ ಬಡಿತವೇ ನಿಂತಂತಾಗಿತ್ತು. ಮತ್ತದೇ ನಿನ್ನ ನಗು ನನಗೆ ಮರುಜನ್ಮ ನೀಡಿತು. ನಿನ್ನ ದನಿಯ ಇಂಪಿನ ಮುಂದೆ ಕೋಗಿಲೆಯದ್ಯಾವ ಲೆಕ್ಕ ಬಿಡು. ರಾಜೀ ಮನಸ್ಸು ಬಿಚ್ಚಿ ಹೇಳ್ತೇನೆ ನಿನ್ನ ಮಾತುದು ಸೊಗಸು ಸೊಗಸು ಜೊತೆಗಿದ್ದರೆ ಆ ಮೌನ. ನಿನ್ನ ಬದುಕೂ ಸೊಗಸು ಸೊಗಸು ಜೊತೆಗಿದ್ದರೆ ನನ್ನ ಧ್ಯಾನ.

ಇಷ್ಟು ವರ್ಷ ಕಳೆದದ್ದು ಸಾಕು. ನಾವು ಮಾತಾಗಿಬಿಡೋಣ. ಒಂದಾಗಿ ಚೆಂದದ ಬದುಕು ಕಟ್ಟಿಕೊಳ್ಳೋಣ. ನಾಳೆ ಸಂಜೆ ನಮ್ಮೂರ ಆ ಹಾಳು ಪಾರ್ಕಿನಲಿ ಗಾಂಧೀ ತಾತನ ಹಿಂದೊಂದು ಕಲ್ಲು ಬೆಂಚಿದೆಯಲ್ಲಾ. ಅಲ್ಲಿ ಕೂಡೋಣ. ನೀ ಬರುವ ಮುಂಚೆ ಆ ಕಲ್ಲು ಬೆಂಚಿನ ಮೇಲಿನ, ನನ್ನೆದೆಯೊಳಗಿನ ಕೊಳೆಯನ್ನು ಸ್ವಚ್ಛಗೊಳಿಸಿ, ಒಪ್ಪ ಮಾಡಿಟ್ಡಿರುತ್ತೇನೆ. ಇಬ್ಬರೂ ಒಂದೇ ಬೆಂಚಿನ ಮೇಲೆ , ಸ್ವಲ್ಪ ದೂರ. ಆ ದೂರದ ತುಂಬೆಲ್ಲ ನಮ್ಮ ಪ್ರೇಮ. ನಮ್ಮ ಹೃದಯಗಳು ಮಾತಾಡಿಕೊಳ್ಳಲಿ ಬಿಡು. ನಾವು ಮೌನವಾಗಿರೋಣ.ಮಾತಿಗಿಂತ ಮೌನಕ್ಕೆ ಶಕ್ತಿ ಜಾಸ್ತಿ.  ಎದೆಯ ತಲ್ಲಣವಳಿಯೆ ಹೃದಯದಲಿ ಶಾಂತ ಸಾಗರವೇ ತಾನೆ…..  ಆ ಶಾಂತ ಸಾಗರ ನನ್ನ ಪಾಲಿನ ಪ್ರೇಮದಾಗರ.  ತಲೆ ತಗ್ಗಿಸಿ ಕುಳಿತ ನಿನ್ನ ಹುಬ್ಬುಗಳ ಮೇಲೆ ಕುಣಿಯುತ್ತಿರುವ ಆ ಮುಂಗುರುಳುಗಳನ್ನು ನಾನು ನಯವಾಗಿ ಸರಿಸುತ್ತೇನೆ. ನಿನ್ನ ಪ್ರೇಮ ತುಂಬಿದ ಕಣ್ಣ ಮಿಂಚನ್ನು ನೋಡುವ ಶಕ್ತಿ ನನಗೆಲ್ಲಿದೆ ? . ಭಯ. ಸುಟ್ಡುಹೋದೇನು. ನಾನು ಕಣ್ಮುಚ್ಚಿಬಿಡುತ್ತೇನೆ. ಇಷ್ಡವಾದರೆ ನೀನು ನನ್ನ ಹಣೆಗೊಂದು ಮೃದು ಮಧುರ ಮುತ್ತು ಕೊಡು. ಸಾರ್ಥಕವಾಯಿತು ಎಂದುಕೊಳ್ಳುತ್ತೇನೆ. ಆಗ ನನ್ನ ತುಟಿಗಳೂ ಒಂದಿನಿತು ನಕ್ಕಾವು. ಬರುತ್ತೀಯಲ್ಲ ? ನಾಳೆ ಸಂಜೆ ಆ ಕಲ್ಲುಬೆಂಚಿನ ಮೇಲೆ ಎದೆ ಹಿಡಿದುಕೊಂಡು ನಿನ್ನನ್ನು ಕಾಯಿತ್ತಿರುತ್ತೇನೆ.  ನೀ ಬರುವವರೆಗೂ.

ಇಂತಿ

ಸದಾ ನಿನ್ನನು ಬಯಸುವ

ನಿನ್ನ ಪ್ರೇಮಿ

ನಾನು.


6 thoughts on “ಪ್ರೇಮ ಪತ್ರ-

  1. ಪ್ರೇಮದ ಸಂದೇಶ ಅದ್ಭುತ.
    ಕವಿರತ್ನ ಕಾಳಿದಾಸ ಅವರನ್ನು ಜೀವಂತವಾಗಿ ಉಳಿಯುವಂತೆ ಮಾಡಿದಿರಿ

  2. ಇನ್ನೂ ಉಂಟೇ ಈ ರೀತಿಯ ಪ್ರೇಮ ನಿವೇದನೆ
    ಅದ್ಭುತ ಸರ್
    ನಿಜವಾಗಲೂ ಪ್ರೇಮಿ ಧನ್ಯೆ

Leave a Reply

Back To Top