ಕಾವ್ಯ ಸಂಗಾತಿ
ಕಾಲಚಕ್ರ
ಮಾಲಾ ಕಮಲಾಪುರ್
ಸುಂದರ ಬಾಳ ನೌಕೆಯಲಿ
ಒಲವ ತಂಗಾಳಿಯಲಿ ಬದುಕಿನ ಭವ್ಯ ಸಮಾಗಮದಲಿ
ಸ್ಫೂರ್ತಿಯ ಸುಂದರ ಸ್ವಪ್ನದಲ್ಲಿ
ಸಾಗುತಿಹವು ಜೋಡಿ ಜೀವಗಳು
ಸಪ್ತಪದಿಯ ಹಾದಿಯಲಿ.
ಹೃದಯ ತಂತಿಗಳ ಮೀಟುತ್ತ
ಭರವಸೆಯ ಬೆಳಕಿನ ಸಂತೃಪ್ತಿ ಕಾಣುತ್ತ
ಮನದಂಗಳಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸುತ್ತ
ವರ್ತಮಾನದ ಭವ್ಯ ಚಿತ್ರ ಕಾಣುತ್ತ
ದಾಟುತಿಹರು ನೌಕೆಯಲಿ ಬಿರುಗಾಳಿಯ ಹೊಡೆತಕೆ ಒಮ್ಮೆ ತೇಲುತ್ತ ಒಮ್ಮೆ ಮುಳುಗುತ್ತಾ.
ಭೂತಕಾಲದ ಬಾಲ್ಯದ ನೆನಪಿನ ಗುಂಗಿನಲಿ
ಇರಿಸು ಮುನಿಸು ಕಂಗಳ ನೋಟದಲಿ
ಎಣಿಸಲಾಗದ ಎಡರು ತೊಡರುಗಳಲಿ
ಮರೆತಿಹರು ನೋವನು ಕರುಳ ಕುಡಿಯ ನಗುವಿನಲಿ.
ತನ್ನ ನೋವನು ಬದಿಗೊತ್ತಿ ಮಕ್ಕಳ ಭವಿಷ್ಯಕೆ ಬೆಳಕಾಗುತ
ಜಗದ ಮಾನ ಅಪಮಾನಗಳ ಸಹಿಸುತ
ಆಧುನಿಕ ಬದಲಾವಣೆಗೆ ಒಲ್ಲದ ಮನಸಿನಲ್ಲಿ ಸೋಲುತ
ಭವಿಷತ್ತಿನ ಕಾಲದಲಿ ಬರುವ ಸವಾಲುಗಳ ಎದುರಿಸುತ.
ಮೌನದ ಭಾಷೆಯಲಿನೋಡುತಿಹರು ವೃದ್ಧ ತಂದೆತಾಯಿಗಳು ಸಾವಿನ ಕಾಲಗಣನೆ ಕಾಯುತ
ಭಾರವಾಗದಿರಲಿ ಮಕ್ಕಳಿಗೆ ನಮ್ಮಯ ಬದುಕು ಎನ್ನುತ
ಮುಕ್ತಿಕೊಡಲು ಬೇಡುತಿಹರು ಚಿನ್ಮಯನನ್ನು ಅನುಗಾಲ ಸ್ಮರಿಸುತ್ತ.