ಕಾವ್ಯ ಸಂಗಾತಿ
ನೀನು
ಯಮುನಾ.ಕಂಬಾರ
ಪ್ರಭಾವದ ಪುಟಗಳನ್ನು ಸುಟ್ಟು ಹಾಕಿ ಬಿಡು
ಜಾಣತನದ ಮಾತು ಬೂದಿಯಾಯಿತು.
ಪ್ರಚಾರ ಪುರಾಣವಾಯಿತು.
ತುತ್ತು ಕೂಳು ಬಂಗಾರವಾಯಿತು.
ಜಪ ತಪ ಒಂದೂ ಅಳತೆಗೆ ಮಾಪನವಾಗಲಿಲ್ಲ.
ಕಣ್ಣೀರಿಗೆ ಒಡ್ಡಾಗಿ ಬಂದು ನಿಲ್ಲಲಿಲ್ಲ.
ಪ್ರಭಾವದ ಪುಟಗಳನ್ನು ಸುಟ್ಟು ಹಾಕಿ ಬಿಡು
ಮುಖದ ಮೇಲಿನ ರೇಖೆಗಳೇನು ಸೀದಾವಿಲ್ಲ.
ಆದರೆ,
ರಕ್ತ, ಶಕ್ತಿ, ಯುಕ್ತಿಗಳಿಗೆ – ಹೆಸರುಂಟೇ…??
ಅದು ತಪ್ಪು.
ಆಯ್ಕೆ ಮನೆಯೋ…..ಮಠವೋ….
ಗೊಂದಲದ ಗೂಡಾಯಿತಲ್ಲ.
ಪೂಜೆಯೋ……ಶ್ರಂಗಾರವೋ…..
ಎಡೆವಿದೆಯಲ್ಲ.
ಆದರೆ, ಕಾಲ ಬಲು ಕೆಟ್ಟವ ನೋಡು.
ಹಣ್ಣಿಗೆ ಇಟ್ಟು ನುಣ್ಣಗೆ ಮಾಡಿ
ರಾಜ್ಯ , ದೇಶ ಮೀರಿ ಮತ್ತೆ ವಿದೇಶಕ್ಕೂ ಸುದ್ದಿ ಮಾಡಿದ್ದಾನೆ.
ಹಣ್ಣಿನ ವರ್ಣನೆ ಹೇಳುತ್ತಾನೆ
ಟಿ.ವಿ.ಚಾನಲ್ಲು, ವೃತ್ತ ಪತ್ರಿಕೆಗಳಲ್ಲಿ
ಡಾಣಾ ಡಂಗುರ ಸಾರಿದ್ದಾನೆ.
ಅದು ಕಾಲನ ಕೀಲಿಯಲ್ಲಿದೆ……!!
ಮುಳು ಮುಳು ಅಳುವುದು ಯ್ಯಾಕೆ…?
ಕಟಕಟೆ ಅಲ್ಲಿದೆ.ಅದು ಆತ್ಮದ ನಿಲುವು.
ಹೇಳಲು, ತೋರಲು, ಪ್ರದರ್ಶಿಸಲು.
ಅವನೇ ದೇವ. ಕಿಟಕಿಯಲಿ ಕಣ್ಣು ಬಿಟ್ಟು ನ್ಯಾಯಾಧೀಶನ ರೂಪ ದರಿಸಿದವ.
ತೋರಿಸು ಕಾಪಿಟ್ಟ ಶಕ್ತಿ
ಅದು ನೇಯ್ದ ವೈರಾಗ್ಯದ ಭಕ್ತಿ…….ಇದ್ದರೆ.
ಬಂಧು- ಬಳಗ ಯಾರೂ ಇಲ್ಲದ ನೀನು ತೋರಿದ ಧೈರ್ಯ
ಈಗ ಸತ್ತು ಹೆಣವಾಗಿ ನಾರತೊಡಗಿದೆ.
ಯಾರು ಹೊಣೆ…?
ಸಂಘ – ಸಂಸ್ಥೆಗಳಿಗೆ ಅಧ್ಯಕ್ಷ , ನಿರ್ಧೇಶಕನಾದ ನಿನಗೆ
ಮತ್ತೆ ಬಣ್ಣ ಬಿಡಿಸುವವರು ಬೇಕಾಗಿತ್ತೇ..?
ಪ್ರಭಾವ ಗಾಳಿ ಪಟದಂತೆ ಹಾರಾಡಿ
ರಾವಣನ ರೂಪ ತಾಳಿದ ನಿದರ್ಶನಗಳಿವೆ …..ಇಲ್ಲಿ.
ಇಟ್ಟ ಹೆಜ್ಜೆಗಳು ಬಲು ಪ್ರಾಮಾಣಿಕ.
ಜತನಗೊಂಡು ಮಾತನಾಡತೊಡಗಿವೆ.
ಕಳಚಿಕೊಂಡಿವೆ- ಮುಖವಾಡಗಳನ್ನು,
ತೊಳೆದುಕೊಂಡಿವೆ – ರಂಗು ರಂಗಿನ ಬಣ್ಣಗಳನ್ನು.
ಹೇಳು…
ಈ ನೆಲ….ಆ ಕಲ್ಲು…..
ಮತ್ತೆ ಅದೇ ಆ ಮಠ…….
ನುಡಿಯುತ್ತಿವೆ- ತಮ್ಮದೇ ತಮ್ಮ ಮಾತನ್ನು.
ಕಾಲ ಸುಂಟರಗಾಳಿಯಾಗಿ ಸುತ್ತಿ
ಅಲ್ಲಿ….ಇಲ್ಲಿಯ ಕಸ ಎತ್ತಿ
ಕಲ್ಲಿನ ಬಲು ಗಟ್ಟಿಯ
ಬಹಳ ದಿನಗಳಿಂದಲೂ ಅಪರಾಧಗಳನ್ನೇ ಉಸಿರುತ್ತ ಬಂದಿರುವ
ಆ ಗೋಡೆಗಳು….ಆ ಕಂಬಿಗಳೂ
ಈಗ ನಿನ್ನ ಬಾಂಧವರಾಗಿ
ಕಾವಲುಗಾರರಾಗಿ ಹಗಲಿರುಳು ಕಾಯುತ್ತಿವೆ ಅಷ್ಟೇ