ಕಾವ್ಯಸಂಗಾತಿ
ಗಜಲ್
ನಯನ. ಜಿ. ಎಸ್
ಕೊನರುತಿಹ ನೆನಪುಗಳ ಪುಟಗಳಲಿ ಕಾಡುತಿದೆ ನೋವಿನ ಛಾಯೆ
ಬಿರಿಯುವ ನಿಶೆಯ ಸಾಂಗತ್ಯದಲಿ ಕನವರಿಸುತಿದೆ ನೋವಿನ ಛಾಯೆ
ಕಡಲಾಗುತಿಹ ಒಡಲ ಬೇನೆಗೆ ಚಕ್ಷುಗಳಲಿ ಝರಿಯಾಗುವ ಹಂಬಲ
ಮಿನುಗುವ ಹಾರೈಕೆಯ ಸೆಲೆಯಲಿ ಆಕ್ರಂಧಿಸುತಿದೆ ನೋವಿನ ಛಾಯೆ
ಹಿಡಿ ಹಿಡಿಯುವ ಭಾವಗಳ ಕಣ ಕಣಕೂ ಹೃನ್ಮನವಾಗಿದೆ ತೊಟ್ಟಿಲು
ಜೀಕುತಿಹ ಕರ್ಮದುಸಿರಿನ ವೇಗದಲಿ ನರ್ತಿಸುತಿದೆ ನೋವಿನ ಛಾಯೆ
ಗೆದ್ದಲ ಬೇಡಿಯಲಿ ಹಪಹಪಿಸುವ ಆಕಾಂಕ್ಷೆಗಳಿಗೆ ಸ್ವತಂತ್ರವೆಲ್ಲಿ ಸಾಕಿ
ಟಿಸಿಲೊಡೆದ ಹಾಸ ಮಂಜರಿಯಲಿ ಗೆಲುವಾಗುತಿದೆ ನೋವಿನ ಛಾಯೆ
ಛಲ ಬಿಡದ ಚಲನೆಯ ವ್ಯೂಹದಿ ದಿಟ್ಟೆಯಾದರಷ್ಟೇ ಬದುಕು ನಯನ
ಗಮ್ಯವನು ಅಳಿಸುವ ಬೇಗುದಿಯಲಿ ಉಳಿಯುತಿದೆ ನೋವಿನ ಛಾಯೆ
Very nice and meaningful ಗಝಲ್ for life of a person who is facing difficulties in life… …