ಕಾವ್ಯ ಸಂಗಾತಿ
ಚಪ್ಪಲಿಯ ಉವಾಚ-
ಕೆ.ಶಶಿಕಾಂತ
ಚಮ್ಮಾವುಗೆ, ಚಮ್ಮಾವುಗೆ
ಎಂದೇಕೆ ಮೈ-ಮನ
ಉರಿದುಕೊಳ್ಳುತ್ತಿದ್ದಾರಿವರು?
ಧೂಳು ಮೆತ್ತಿದ
ಮನೆಯ ಜಗುಲಿ-ಗೋಡೆಯ
ಮೇಲಿನ ದೇವರ ಚಿತ್ರಕ್ಕೆ
ಗಂಧ ಕುಂಕುಮ ಹಚ್ಚಿ ಪೂಜಿಸಿ
ಕೈ ಮುಗಿದು ವರವ ಬೇಡುವ
ಡಂಭ ಭಕ್ತರು ನೀವು,
ಮನೆಯ ಹೊರಗೆ ಬಿಟ್ಟರು ಕೂಡ
ಅಂಗಡಿಯಲ್ಲಿ ಬಹು ಬೆಲೆಯ
ಕೊಟ್ಟು ತಂದು ದಿನವೂ ತಿಕ್ಕಿ
ಹಸನಾಗಿಸಿ,ಕಾಲಲ್ಲಿ ಮೆಟ್ಟಿ
ಸಂಭ್ರಮಿಸುತ್ತೀರಿ,
ಮತ್ತೇ ಮಾನ ಮರ್ಯಾದಸ್ತರೆಂದು
ಬೀಗುತ್ತೀರಿ.
ದೇವರ ಗುಡಿಯಲ್ಲಿ
ಪಾದುಕೆ ಎಂದು ಹಣೆ ಮುಟ್ಟಿ
ಮೈಗೆಲ್ಲಾ ಬಡಿದುಕೊಂಡು
ಭಕ್ತರಾಗುತ್ತೀರಿ
ಮತ್ತೇ ಚಪ್ಪಲಿ ಎಂದು
ಹೀಗಳೆಯುತ್ತೀರಿ…..
ಹರಳಯ್ಯನ ಚಮ್ಮಾವುಗೆ
ಮಧುವರಸರ ಸುಟ್ಟದ್ದು
ನಿಮಗಿನ್ನೂ ಪಾಠವಾಗಿಲ್ಲ….
ಸಲಹುವ ದೇವರನ್ನೇ
ಬೇಕಾ ಬಿಟ್ಟಿಯಾಗಿ
ಬಳಸಿಕೊಳ್ಳುವ ನಿಮ್ಮ
ಸಮಯ ಸಾಧಕತನ
ಚಪ್ಪಲಿಯಾದ ನನಗೆ
ತಿಳಿದಂತೆ
ಆ ನಿಮ್ಮ
ದೇವರಿಗೆ ತಿಳಿದಿದ್ದರೆ
ವರ್ತಮಾನದಲ್ಲೂ
ಮಧುವರಸರನ್ನು
ನೋಡಬಹುದಿತ್ತು
ಅಂಗಾಲಿನ ನೋವಿನ
ಮರ್ಮವನಾದರೂ
ಅರಿಯಬಹುದಿತ್ತು.
ರೊಕ್ಕದ ಬೆಲೆಗೆ
ಉಬ್ಬುವ ನಿಮಗೆ
ಚಪ್ಪಲಿಯ ತ್ಯಾಗದ
ಬೆಲೆ ಅರ್ಥವಾಗುತಿತ್ತು.