ಕಾವ್ಯ ಸಂಗಾತಿ
ಗಝಲ್
ಜಯಶ್ರೀ ಭ.ಭಂಡಾರಿ
ನಾಳೆಯ ಅರಮನೆ ನೋಡುವ ಆತುರಕೆ ಹೆಜ್ಜೆಗಳೇ ಜಾರಿತಲ್ಲ ಇಂದು
ಹಳೆಯ ಹೆಂಚಿನ ಮನೆಗಳ ಮಂದ ಬೆಳಕಿನ ಹಣತೆ ಆರಿತಲ್ಲ ಇಂದು.
ಸಿರಿಮನೆಯ ಪುಟ್ಟ ಗೌರಿಯಾಗಿ ನಗೆ ಬೀರುವದ ಕಲಿತು ಸಾಗು
ಅರಿತು ಬೆರೆತು ಬಾಂಧವ್ಯ ಬೇಕೆನುತ ಮನ ಮೊರೆಯುತ ಸಾರಿತಲ್ಲ ಇಂದು.
ಮಕ್ಕಳ ಬದುಕಿಗಾಗಿ ಬೆವರ ಸುರಿಸಿ ನಂದಾದೀಪ ಎನಿಸುವುದು
ಇಕ್ಕಳದಂತೆ ಇರಿಸುಮುರಿಸು ತೋರಿಸಿ ಮನ ಇರುಳು ಕಾರಿತಲ್ಲ ಇಂದು.
ನೋವು ನಲಿವುಗಳು ಏನೇ ಬರಲಿ ದೂರುವುದ ಬಿಡುವೆಯಲ್ಲ.
ಮಾವು ಬೇವುಗಳು ಬಾಳಿನ ಸಿಹಿ ಕಹಿಗಳ ಅರ್ಥ ಹೇರಿತಲ್ಲ ಇಂದು.
ದೇಶ ಸುತ್ತುವುದಕ್ಕಿಂತ ಕೋಶ ಓದು ಎಂಬುದ ಜಯ ತಿಳಿದಿಹಳು.
ಸಂದೇಶ ಹರಡುತ ಗಂಧದ ನಾಡಿನ ಕಂಪ ಎಲ್ಲೆಡೆ ಬೀರಿತಲ್ಲ ಇಂದು.