ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲಹರಿ

ಸವತೆ ಪುರಾಣ

ಅಧ್ಯಾಯ –5

ರೂಪ ಮಂಜುನಾಥ

ಬಲು ಸುಗುಣವಂತೆ, ನಮ್ಮ  ಸವತೆ,

ಡಾಕ್ಟರರಿಗೂ,ಡಯಟಿಷನ್ನುಗಳಿಗೂ

ಈಕೆ ಬಲು ಬೇಕಾದವಳಂತೆ!

ಫ್ಯಾಟಿಲ್ಲ, ಕಾರ್ಬಿಲ್ಲದ ಸಚ್ಚರಿತೆ!

ಉಚ್ಛ ಕಾಯವ ನೀಡಿ ಪೊರೆಯುವಳಂತೆ!

ಸವತೆಯಲ್ಲೂ ಈಗ ಕಲಬೆರಕೆ

ಶುರುವಾಗೈತೆ¡

ಮಾರುಕಟ್ಟೆಗೂ ಮೋಸ ಕಾಲಿಟ್ಟೈತೆ¡

ನಾಟಿ ಕಾಯಿಯ ಜೊತೆ

 ಫಾರಂ ಕಾಯಿಯೂ ಬೆರೆತಿರುತ್ತೆ¡

ಕೊಳ್ಳುವಾಗ ಎಚ್ಚರಿಕೆ ಬೇಕಾಗುತ್ತೆ¡

ಇಲ್ದೇ ಹೋದ್ರೆ, ಟೋಪಿ ಬೀಳುತ್ತೆ¡

ಹಬ್ಬಹರಿದಿನ ಬರಲು,

ಬೇಸಿಗೆಯ ಬಿಸಿಲಲ್ಲು,

ಮುಗಿಲು ಮುಟ್ಟಿ ಕೂರುವಳು¡

ಧಮಾಕಿನಲ್ಲಿ ನಮ್ ಸವತೆ¡

ಮಳೆ, ಛಳಿಗಾಲದಲ್ಲಿ,

ಮಾಗಿ ಕೊರೆವ ಕಾಲದಲ್ಲಿ,

ಅನಾಥಳಂತೆ  ಕೊಳೆಯುವಳು,

ಪಾಪ ಛೇ ,ನಮ್ ಸವತೆ¡

ಶಾಲಾ ಕಾಲೇಜಿನ ಅಕ್ಕಪಕ್ಕದಲ್ಲೂ,

ಬಸ್ಸು ರೈಲು ನಿಲ್ದಾಣಗಳಲ್ಲೂ,

ಗಾಡಿಗಳಲ್ಲಿ, ಮಂಕರಿಗಳಲ್ಲಿ,

ಉಪ್ಪು ಖಾರ ಹಚ್ಚಿದ,

ಸವತೆ,ಕಾಣಸಿಗುತ್ತೆ¡

ಒಣಗಿ ನಿಂತ ನಾಲಗೆಗೆ,

ಹಾಯ್ ಎನಿಸುವುದು¡

ತಿನ್ನಲೆರಡು ಸೀಳು ಸವತೆ!

ವೆಜ್ಜುಗಳಿಗೂ ನಾನ್ ವೆಜ್ಜುಗಳಿಗೂ,

ಒಗ್ಗುವಳಲ್ಲಾ, ನಮ್ಮ ಈ ಸವತೆ¡

ವೀಗನ್ ಗಳಿಗೂ ಕೀಟೋಗಳಿಗೂ,

ಏ ಒನ್‌ ಕಂಪನಿ,ನಮ್ಮಯ ಸವತೆ¡

ಎಲ್ಲರಿಗೂ ಪರ್ಫೆಕ್ಟಾಗಿ, ಹೊಂದಿಹೋಗುವಳು,

ಅತ್ತೆ ಮನೆ ಸೇರಿದ ಸುಗುಣಿ ಸೊಸೆಯಂತೆ¡

ಈಗಿನ  ವೇಸ್ಟು ಚಾಟುಗಳಿಗಿಂತಲೂ,

 ಮಾರಕ ಸ್ನ್ಯಾಕುಗಳಿಗಿಂತಲೂ,

ಕೆಟ್ಟ ಫಾಸ್ಟ್ ಫುಡ್ಡುಗಳಿಗಿಂತಲೂ,

ಬಲೇ ಬೆಸ್ಟು,ಕಣ್ರೀ¡ ತಿನ್ರೀ ಸವತೆ¡

ಫಲಶ್ರುತಿ……

ಸವತೆಯ ಸನ್ನಡತೆ, ಇಷ್ಟು

ಕೇಳಿದ ಮೇಲೂ,

ತಿನ್ನದಿದ್ರೆ. ಏನಾಗುತ್ತೆ ಗೊತ್ತೇ?

ಉದರ ಬಾಧೆಗಳು ಶುರುವಾಗುತ್ತೆ!

ಅಜೀರ್ಣ ತೊಂದರೆಗಳು ಕಾಣಿಸಿಕೊಳ್ಳುತ್ತೆ!

ಮಲಬದ್ದತೆ ಅಟಕಾಯಿಸಿಕೊಳ್ಳುತ್ತೆ!

ಹಲವಾರು ರೋಗಗಳು ವಕ್ಕರಿಸಿಕೊಳ್ಳುತ್ತೆ!

ಆದ್ದರಿಂದ,ಸವತೆ ಪುರಾಣದಲ್ಲಿ  ಹೇಳಿದಂತೆ,

ಸವತೆ ತಿಂದು ಉದರದ

ಸುಸ್ಥಿತಿಗೆ ಪಾತ್ರರಾಗಿರಿ¡¡¡

ಒಳ್ಳೇದಾಗುತ್ತೆ,

ಸವತೆ ತಿನ್ನಲು ಸಕಲರಿಗೂ,

ಶುಭವಾಗುತ್ತೆ¡¡

ಎಂಬಲ್ಲಿಗೆ ಹೊಳೆನರಸೀಪುರ ಕ್ಷೇತ್ರದ ರೂಪಾ ಕಾವ್ಯಕಾಂಡದ ಖ್ಯಾತ ಪುರಾಣಿಕರು,ದೇಹ ಸೋತ ಮುನಿಗಳಿಗೆ ಹೇಳಿದ ಸವತೆ ಪುರಾಣದ ಐದನೇ ಅಧ್ಯಾಯವು ಮುಗಿಯಿತು. ಸೌತೇದೇವಿಗೆ ಐದು ಕಣ್ಣಿನ ತುಪ್ಪದಾರತಿ ಬೆಳಗಿ ಎಲ್ಲ ಬಗೆಯ ಸವತೆ ಫಲಗಳ ಚಿವುಟಿ, ದೇವಿಗೆ ಸಮರ್ಪಿಸಿ,ನೇವೇದ್ಯ ಮಾಡಿ ಆಕೆಯನ್ನ ಸಂಪ್ರೀತಿಗೊಳಿಸಿ.

ಈ ಐದು ಅಧ್ಯಾಯವನ್ನು  ಪ್ರತಿನಿತ್ಯವೂ   ಓದಿದವರಿಗೂ,ಕೇಳಿದವರಿಗೂ,

ಸವತೆಯ ಕೊಂಡು ತಂದು ವಿಧವಿಧವಾಗಿ ಬಳಸಿ ತಿಂದವರಿಗೂ,ಕುಕುಂಬರೀ ದೇವಿಯು ಸುಖ, ತಾಳ್ಮೆ,ಸಿರಿ ಸಂಪದ, ನೆಮ್ಮದಿಗಳ ವರ ಕರುಣಿಸುವಳು.ಸವತೆ ಮಾತೆಯನ್ನು ನಿತ್ಯ ಸೇವಿಸಲು,ಸೇವಿಸಿದವರಿಗೂ, ಬೆಳೆದವರಿಗೂ ಸಕಲ ಸಿರಿ ಸಂಪತ್ತುಗಳನ್ನು ನೀಡಿ,ಕರುಣಿಸುವಳು.

ಸವತೆರಾಣಿಯು ಆಯುರಾರೋಗ್ಯ, ತೇಜ, ಸೌಂದರ್ಯ,  ಕೊಟ್ಟು

ಕಾಪಾಡುವಳು. ಇಲ್ಲಿಗೆ,ಲೋಕವಿಖ್ಯಾತ ಸೂಪರ್ ಡೂಪರ್  ಫುಡ್ ಖ್ಯಾತಿಯ,ಗ್ರೀನ್ ವೆಜ್ಜೀ,

ಮಹಾ ಮಾತೆ, ಆರೋಗ್ಯ ದಾತೆ,ತೇಜ ವರದಾತೆ, ಸಕಲ ಸಂಪತ್ ಪ್ರದಾತೆ,ಸವತೇ  ಭಗವತಿಯ ಪುರಾಣ ಸಂಪೂರ್ಣಂ¡


About The Author

Leave a Reply

You cannot copy content of this page

Scroll to Top