ಸ್ಮಿತಾಭಟ್ ಹೊಸ ಕವಿತೆ-ಆತ ನೋಡುತ್ತಲೇ ಇದ್ದಾನೆ.

ಕಾವ್ಯಸಂಗಾತಿ

ಆತ ನೋಡುತ್ತಲೇ ಇದ್ದಾನೆ.

ಸ್ಮಿತಾಭಟ್

I

ದೇಹದ ತುದಿಗೆ ಬೆಳಕು ಕಟ್ಟಿಕೊಂಡ
ಹುಳವೊಂದು ಸುತ್ತುತ್ತಿದೆ
ವಾತ ನಿರ್ವಾತಗಳ ಮೀರಿ
ಲೆಕ್ಕವಿಲ್ಲದ ದಾರಿಗಳ ದಾಟಿ
ಎಲ್ಲೆಲ್ಲೋ ಸುತ್ತಿ ಏನನ್ನೋ ಹುಡುಕಿ
ಅಸ್ತಿತ್ವ ಕಂಡು ಕೊಳ್ಳುವ ಸಮರ.

ಅರೆರೆ…
ತನ್ನ ಕೈಯಿಂದಲೂ
ನುಣುಚಿ ಕೊಂಡಿತ್ತು ಒಮ್ಮೆ
ನೆನಪಾಗುತ್ತಿವೆ ಅವನಿಗೆ
ಮಿನುಗುವ ಬೆಳಕಿನಲ್ಲಿ.
ಅಸ್ಪಷ್ಟ ಚಿತ್ರ.

ಈಗದು ಅಲ್ಲೆಲ್ಲೋ ಮರೆಮಾಚಿ ಕೊಂಡಿದೆ
ಘೋರ ಕತ್ತಲು
ಕಟ್ಟಿಕೊಂಡ ಬೆಳಕು ಸುಮ್ಮನಿರುತ್ತಿಲ್ಲ
ವೈರಿಗಳನ್ನೂ ಕರೆಯುತ್ತದೆ
ಕುಳಿತಿದೆ ಬೆದರಿದ ಹುಳ
ಸರೀಸೃಪ ಬಣ್ಣ ಬದಲಿಸಿದೆ
ಬೆಕ್ಕು ಹೊರಡುವದನ್ನೇ ಕಾಯುತ್ತಾ.

ಕಣ್ಣಿದ್ದೂ ಕುರುಡನಂತೆ
ಆತ
ಯಾರು ಹೊರಡುತ್ತಾರೆ ಮೊದಲು
ಬೆಳಕಿನ ಹುಳಕ್ಕೀಗ ಹಸಿವು
ಬೆಕ್ಕಿಗೂ
ಕತ್ತಲು ಮುಗಿಯಲಿ
ಅಂಟಿಕೊಂಡ ಬೆಳಕು ಕರಗಲಿ
ಬೇಡುತ್ತದೆ ಹುಳ.

ಕೊನೆಗೆ ಏನಾಗುತ್ತದೆ!
ಮುಗಿದಿಲ್ಲ ಆತನಿಗೂ ಕುತೂಹಲ!

ಬೇರೇಯೂ ಆಗಬಹುದು
ಹುಳ ಹಾರಬಹುದು
ಎಲೆ ಉದುರಬಹುದು
ಹಾವು ಸುಳಿಯಬಹುದು
ಸರೀಸೃಪ ಚಾಚಬಹುದು ನಾಲಗೆ
ಬೆಕ್ಕು ನೆಗೆಯಬಹುದು
ಅಥವಾ
ಸುಮ್ಮನೇ ಹೋಗಬಹುದು ಎಲ್ಲರೂ
ಖಾಲಿ ಹೊಟ್ಟೆ ಕಟ್ಟಿಕೊಂಡು.

ಆತ ಈಗಲೂ ನೋಡುತ್ತಲೇ ಇದ್ದಾನೆ
ವ್ಯತ್ಯಾಸ ವಿಲ್ಲದೇ
ಇಲ್ಲಿ ನನ್ನದೇನಿಲ್ಲ
ಇತರರ ಬದುಕಿನಲ್ಲಿ
ಇಣುಕುವುದು ಬಿಟ್ಟು
ಯುಗಗಳೆ ಆಗಿದೆ ಎಂದು.



4 thoughts on “ಸ್ಮಿತಾಭಟ್ ಹೊಸ ಕವಿತೆ-ಆತ ನೋಡುತ್ತಲೇ ಇದ್ದಾನೆ.

Leave a Reply

Back To Top