ಡಾ.ತನುಶ್ರೀ ಹೆಗಡೆ–ಗಜ಼ಲ್

ಕಾವ್ಯಸಂಗಾತಿ

ಗಜ಼ಲ್

ಡಾ.ತನುಶ್ರೀ ಹೆಗಡೆ

ದೂರ ದೂಡಿದರೂ ನೆನಪಲಿ ಕಾಡುವುದು ಗೊತ್ತಿಲ್ಲವೇನು ನನಗೆ
ಮುನಿಸು ತೋರಿದರೂ ಪ್ರೀತಿ ಮಾಡುವುದು ಗೊತ್ತಿಲ್ಲವೇನು ನನಗೆ

ಎಲ್ಲಿ ಉದುರಿದೆ ಹೇಳು ಆಯುವ ಅರಳು ಮಲ್ಲಿಗೆಯ ಒನಪು
ಮೌನ ಮುಡಿಗೇರಿದರೆ ಮೊಗ ಬಾಡುವುದು ಗೊತ್ತಿಲ್ಲವೇನು ನನಗೆ

ಈ ಸರಸ ವಿರಸಗಳ ಕಣ್ಣುಮುಚ್ಚಾಲೆ ಇರುವಂತೆ ಇರಲಿ ಬಿಡು
ನಿನ್ನೆದೆಯ ಕವಾಟಗಳ ಜಾಲಾಡುವುದು ಗೊತ್ತಿಲ್ಲವೇನು ನನಗೆ

ನೀ ಮರೆತು ಬಿಡು ಎಂದೊಡನೆ ನಾ ಮರೆತು ಬಿಡುವೆನು ಹೇಗೆ
ಬಾಗಿಲೆಳೆದರೂ ಕದ ತಟ್ಟಿ ಹಾಡುವುದು ಗೊತ್ತಿಲ್ಲವೇನು ನನಗೆ

ನನ್ನ – ನಿನ್ನ ‘ತನು’- ಮನ ಕಲೆಯಲು ಕಾರಣವೇ ಬೇಕೆ ಹೇಳು
ಕಟ್ಟು ಕಟ್ಟಳೆಯಿಡದೆ ಆಟ ಆಡುವುದು ಗೊತ್ತಿಲ್ಲವೇನು ನನಗೆ


Leave a Reply

Back To Top