ಅಂಕಣ ಸಂಗಾತಿ

ಗಜಲ್ ಲೋಕ

ಆನಂದ ಭೋವಿಯವರ

ಗಜಲ್ ಗಳಲ್ಲಿ ಸಾಮಾಜಿಕ ಚಿತ್ರಣ

ಗುಂಡಾಗಿರುವ ಈ ಭೂಮಿಯಲ್ಲಿ ಪಂಚಾಂಗವೂ ಗುಂಡಾಗಿದೆ, ಏನಂತೀರಿ ; ಅದಕ್ಕೆ ಅಲ್ಲವೇ ‘ಗುರುವಾರ’ ಮತ್ತೆ ಮತ್ತೆ ಬರುತ್ತಿದೆ! ಗುರುವಾರ ಹತ್ತಿರವಾಗುತಿದ್ದಂತೆ ಗಜಲ್ ಗುಲ್ಶನ್ ನ ಮಹೆಕ್ ನನ್ನನ್ನು ಆವರಿಸಿಬಿಡುತ್ತದೆ. ಅದರ ಪ್ರತಿಫಲವಾಗಿ ಇಂದು ಮತ್ತೊಮ್ಮೆ ಗಜಲ್ ಲೋಕದ ಗುಲಾಬ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ. ಗುಲಾಬಿಯನ್ನು ಪ್ರೀತಿಸದ ಅರಸಿಕರುಂಟೆ ಜಗದಲ್ಲಿ, ಇಲ್ಲ ಎನ್ನುವ ವಿಶ್ವಾಸದೊಂದಿಗೆ….!! 

ಜೀವನವೆ ಪ್ರತಿ ಉಸಿರಾಟದಲ್ಲೂ  ನಿನ್ನೊಂದಿಗೆ ರಾಜಿ ಮಾಡಿಕೊಳ್ಳಬೇಕು

ಬದುಕುವ ಆಸೆಯೆನೊ ಇದೆ ನನಗೆ ಆದರೆ ಇಷ್ಟೊಂದು ಇಲ್ಲ”

ಮುಜಾಫರ್ ವಾರಸಿ

        ಜೀವನ ಎಂದಮೇಲೆ ಜಗಳ, ಅಪವಾದ, ತಪ್ಪು ತಿಳುವಳಿಕೆ, ಮನಸ್ತಾಪ, ಹೊಂದಾಣಿಕೆ ಕೊರತೆ, ಜಿದ್ದು…. ಎಲ್ಲ ಸರ್ವೆ ಸಾಮಾನ್ಯ ಎಂದು ನಿರ್ಲಕ್ಷಿಸಬಹುದಾದರೂ ಈ ಎಲ್ಲ ಒತ್ತಡಗಳಿಂದ ಮುಷ್ಠಿ ಗಾತ್ರದ ಹೃದಯದ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂದು ಒಮ್ಮೆ ಯೋಚಿಸಿದರೆ ಬದುಕಿನ ನಶ್ವರತೆ ನಮ್ಮ ಮನಸನ್ನು ಆವರಿಸಿ ಬಿಡುತ್ತದೆ. ಎಲ್ಲವನ್ನೂ ತೊರೆದು ಬಯಲಲ್ಲಿ ಲೀನವಾಗಬೇಕು, ಸಾಮಾಜಿಕ ವ್ಯವಸ್ಥೆಯಿಂದ ಬೆತ್ತಲೆಗೊಂಡು ಫಕೀರನಾಗಬೇಕು ಎಂದನಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಫಕೀರನಾಗುವುದೆಂದರೆ ಆವೇಶದ, ಉದ್ವೇಗದ ನಡೆಯಲ್ಲ. ಭೂತ, ಭವಿಷ್ಯತ್ತಿನ ಗೋಜಲುಗಳನ್ನು ಹರಿದ್ಹೋಗೆದು ನಿರ್ಲಿಪ್ತ ವರ್ತಮಾನವನ್ನು ಆಲಂಗಿಸುವುದಾಗಿದೆ.‌ ಕಾಲದ ಪ್ರವಾಹದಲ್ಲಿ ಮಿಂದೇಳುವುದಾಗಿದೆ. ಫಕೀರನಾಗುವೆ ಎಂದವರೆಲ್ಲರೂ ಫಕೀರರಾಗುವುದಿಲ್ಲ, ಫಕೀರನಾಗಲಾರೆ ಎಂದವರೆ ಫಕೀರರಾದದ್ದು ಹೆಚ್ಚು ಸಂಸಾರದಲ್ಲಿ. ಬೆತ್ತಲಾಗಲು ಬಯಸುವುದು ಬೇರೆ, ಮನದಲ್ಲಿ ಬೆತ್ತಲಾಗೋದು ಬೇರೆ. ಈ ನೆಲೆಯಲ್ಲಿ ಮನಸ್ಸು ಒತ್ತಡ, ಉದ್ವೇಗ, ಮೋಹ, ಲೋಭದಿಂದ ಮುಕ್ತವಾಗಿರಬೇಕು, ಮುಕ್ತವಾಗಿರುವಂತೆ ನೋಡಿಕೊಳ್ಳುವುದೆ ನಮಗೆಲ್ಲರಿಗೂ ಇರುವ ದೊಡ್ಡ ಚಾಲೆಂಜ್. ಇದಕ್ಕಿರುವ ದಾರಿಯೆಂದರೆ ಮನಸ್ಸನ್ನು ಬೇರೆಡೆಗೆ ಹೊರಳಿಸುವುದು. ಜಗತ್ತಿನಲ್ಲಿ ಮನಸ್ಸು ಪಲ್ಲಟಗೊಳಿಸಲು ಹಲವು ಮಾರ್ಗಗಳಿವೆ. ಆದರೆ ಮೈ-ಮನವನ್ನು ಘಾಸಿಗೊಳಿಸದೆ, ಮುದ ನೀಡುವ ಸಂಜೀವಿನಿಯೆಂದರೆ ಅದು ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಂಗಮ. ಸಂಗೀತದಲ್ಲಿಯ ರಾಗ, ತಾಳ, ಲಯ ಮನವನ್ನು ಮುದಗೊಳಿಸುತ್ತವೆಯಾದರೂ ಆ ಗೀತೆಯ ಸಾಹಿತ್ಯವೂ ಅಷ್ಟೇ ಮುಖ್ಯವಾಗುತ್ತದೆ. ಸಾಹಿತ್ಯ ಹೃದಯದ ಕದ ತಟ್ಟಿದಾಗ ಮಾತ್ರ ನಾಲಿಗೆಯ ತುದಿಯಲ್ಲಿ ನೆಲೆಯೂರುತ್ತದೆ. ಅನವರತವಾಗಿ ಗುನುಗಲೂ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಗಮನಿಸಿದಾಗ ಅಸಂಖ್ಯಾತ ಜನರ ನಾಲಿಗೆಯ ತುದಿಯಲ್ಲಿ ಗಜಲ್ ಚಾಂದನಿಯ ಹಲವಾರು ಅಶಅರ್ ಜೀವಂತವಾಗಿವೆ. ಇವುಗಳಲ್ಲಿ ಉರ್ದು, ಹಿಂದಿ ಭಾಷೆಯದೆ ಪಾರುಪತ್ಯ! ನಮ್ಮ ಕನ್ನಡ ಕಸ್ತೂರಿ ಆ ನಿಟ್ಟಿನಲ್ಲಿ ಕ್ರಮಿಸಬೇಕಾದ ಹಾದಿ ಬಹಳ ಇದೆ. ಕನ್ನಡದಲ್ಲಿ ಗಜಲ್ ಕೃಷಿ ಹೇರಳವಾಗಿ ಸಾಗುತ್ತಿದೆಯಾದರೂ ಜಾನಪದ ಆಯಾಮ ಪಡೆದುಕೊಳ್ಳುವಲ್ಲಿ ಮುಗ್ಗರಿಸುತ್ತಿದೆ.  ಆದಾಗ್ಯೂ ಇದನ್ನು ನಾವು ಗಜಲ್ ಸೆಲೆಯಲ್ಲಿ ಕನ್ನಡದ ಅರುಣೋದಯ ಕಾಲ ಎನ್ನಲಡ್ಡಿಯಿಲ್ಲ. ಈ ಮುಂಜಾನೆಯ ಮಂಜಲ್ಲಿ ಗಜಲ್ ಪರಿಯನ್ನು ಪ್ರೀತಿಸುತ್ತಿರುವ ಗಜಲ್ ಕಾರರಲ್ಲಿ ಶ್ರೀ ಆನಂದ ಭೋವಿ ಇವರೂ ಒಬ್ಬರು.

       ಆನಂದ ಭೋವಿಯವರು ಸವದತ್ತಿ ತಾಲೂಕಿನ ಉಗರಗೋಳದಲ್ಲಿ ರಾಮಪ್ಪ-ಈರವ್ವ ದಂಪತಿಗಳ ಮಗನಾಗಿ ೧೯೭೭ ರ ಏಪ್ರಿಲ್ ೦೧ ರಂದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮ ಊರಲ್ಲಿ, ಧಾರವಾಡದಲ್ಲಿ ಪದವಿ ಪೂರ್ವ ವ್ಯಾಸಂಗವನ್ನು, ಮೈಸೂರಿನ ಜೆ.ಎಸ್.ಎಸ್ ಕಾಲೇಜ್ ನಲ್ಲಿ ಟಿ.ಸಿ.ಎಚ್, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ( ಬಾಹ್ಯ)ದಿಂದ ಬಿ.ಎ., ಎಂ.ಎ ಪದವಿಯನ್ನು ಹಾಗೂ ಮುನವಳ್ಳಿಯಲ್ಲಿ ಬಿ.ಇಡಿ ಪದವಿಯನ್ನು ಪೂರೈಸಿದ್ದಾರೆ. ಸದ್ಯ ಇವರು ನರಗುಂದ ತಾಲೂಕಿನ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೨೦೧೨ ನೇ ಸಾಲಿನ ಕೆ.ಇ.ಎಸ್ ಅಧಿಕಾರಿಯಾಗಿರುವ ಇವರು ಸವದತ್ತಿ, ಬೈಲಹೊಂಗಲ, ಹಳಿಯಾಳ ತಾಲೂಕುಗಳಲ್ಲಿ ಇಪ್ಪತ್ತು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಥೆ, ಕಾವ್ಯ, ಕಾದಂಬರಿ, ನಾಟಕ ಹಾಗೂ ಗಜಲ್ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತಿರುವ ಇವರು ೨೦೧೪ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಪಡೆದ ‘ಮುತ್ತು ಕಟ್ಯಾಳ ನಮ್ಮವ್ವ’ (ಕಥಾಸಂಕಲನ), ‘ಹಿಡಿ ಮಣ್ಣಿನ ಬೊಗಸೆ’ (ಕಥಾಸಂಕಲನ), ‘ಕೆಂಪು ಹಾಳೆಯ ಹೂವು’ (ಕಥಾಸಂಕಲನ), ‘ಮಾತಂಗಿ’ (ಕಾದಂಬರಿ), ಹಾಗೂ ‘ಸುಮ್ಮನಿರದ ಗಜಲ್’, ‘ದೀಪ ಆರುವ ಹೊತ್ತು’,  ಎಂಬ ಗಜಲ್ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ‘ಹೋಳಿ ಹುಣ್ಣಿಮೆ’ ಎನ್ನುವ  ಕಥಾಸಂಕಲನವು ಪ್ರಕಟಣೆಯ ಹಂತದಲ್ಲಿರುವುದು ಶ್ರೀಯುತರ ಸಾಹಿತ್ಯ ಅಭಿರುಚಿ, ಅಭಿಮಾನವನ್ನು ಸಾರುತ್ತದೆ.

         ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಆನಂದ ಭೋವಿಯವರ ಹಲವಾರು ಕತೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಹಲವು ಕತೆಗಳು ಬಹುಮಾನ ಪಡೆದಿವೆ. ಸವದತ್ತಿಯ ರಂಗ ಆರಾಧನಾ ತಂಡದಿಂದ ಇವರ ‘ಬಿಳುಪಿನ ಹೆಣ’, ‘ಕಲ್ಲೂರು ವಾಡೆದಾಗ’, ‘ಮಣ್ಣು’ ಮತ್ತು ‘ಬೀರವ್ವನ ಬಾಳೆಹಣ್ಣು’ ಕತೆಗಳು ನಾಟಕಗಳಾಗಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿವೆ. ಇದರೊಂದಿಗೆ ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ನಾಡಿನ ಸಂಘ, ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ೨೦೧೫ ರಲ್ಲಿ ಬೇಂದ್ರೆ ಗ್ರಂಥ ಬಹುಮಾನ, ಚಿಕ್ಕುಂಬಿ ಮಠದಿಂದ ಅಜಾತಶ್ರೀ ಪ್ರಶಸ್ತಿ ಸಮ್ಮಾನ, ದಸಾಪದಿಂದ -ಗಜಲ್ ಕಾವ್ಯ ಪ್ರಶಸ್ತಿ-೨೦೨೧…. ಮುಖ್ಯವಾಗಿವೆ.

        ಜಾಗತಿಕ ಸಾರಸ್ವತ ತೊಟ್ಟಿಲಲ್ಲಿ ಅಪರಿಮಿತ ಸಾಹಿತ್ಯ ಪ್ರಕಾರಗಳು ಲವಲವಿಕೆಯಿಂದ ಓದುಗರ ಮನವನ್ನು ತಣಿಸುತ್ತಿವೆ. ಅವುಗಳಲ್ಲಿ ನೂರ್ ನಂತೆ ಹೊಳೆಯುತ್ತಿರುವ ಮುತ್ತು, ಮತ್ತು ಎಂದರೆ ‘ಗಜಲ್’. ನೋವನ್ನು ತನ್ನ ಅಶಅರ್ ನಲ್ಲಿ ಪೋಣಿಸುವ ಹೂವಾಡಗಿತ್ತಿ ಮನುಕುಲದ ನಾಡಿ ಮಿಡಿತವನ್ನು ಚೆನ್ನಾಗಿಯೇ ಅರಿತುಕೊಂಡಿದ್ದಾಳೆ. ಈ ಕಾರಣಕ್ಕಾಗಿಯೇ ಪ್ರತಿ ಓದುಗ, ಪ್ರತಿ ಬರಹಗಾರ ಗಜಲ್ ನಲ್ಲಿ ತನ್ನನ್ನು ತಾನು ಅರಸುವ, ಸಂತೈಸುವ ಭಾವ ಹೊಂದಿರುತ್ತಾನೆ. ಈ ನೆಲೆಯಲ್ಲಿ ಗಜಲ್ ಗೋ ಆನಂದ ಭೋವಿಯವರ ಗಜಲ್ ಗಳನ್ನು ಗಮನಿಸಿದಾಗ ಮನುಷ್ಯನ ಬದುಕಿನ ನೈಜ ಚಿತ್ರಣವನ್ನು ಕಟ್ಟಿಕೊಡುತ್ತವೆ ಎಂದೆನಿಸುತ್ತದೆ. ಹದಭರಿತ ಪ್ರೀತಿಯ ಪಿಸುಮಾತು, ಏಕಾಂತದ ಕನವರಿಕೆ, ಪ್ರೇಮದ ಆಲಿಂಗನ, ತುಂಟಾಟದ ತರ್ಲೆ, ಕಂಬನಿ ಮಿಡಿಯುವ ವಿರಹ ಹಾಗೂ ಇವುಗಳೊಂದಿಗೆ ಬಾಳಿನ ವಿವಿಧ ಮಗ್ಗುಲಗಳ ಪರಿಚಯ, ಸಂಬಂಧಗಳ ಪಲ್ಲಟ, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಜಾತಿಯ ಆರ್ಭಟ, ಮೇಲು-ಕೀಳೆಂಬ ರಾಜಕೀಯ ತಲ್ಲಣ, ಕೋಮು ಸೌಹಾರ್ದತೆಯ ಹಂಬಲ, ಮೌಢ್ಯತೆಯ ಖಂಡನೆ..ಎಲ್ಲವುಗಳ ಸಂಗಮವಿದೆ. ಈ ದಿಸೆಯಲ್ಲಿ ಇವರ ಕೆಲವು ಅಶಅರ್ ನ ಸ್ವಾದ ಸವಿಯಬಹುದು.

ಮಂದಿರ ಕಟ್ಟುವವರಿದ್ದಾರೆ ಮನಸ್ಸು ಕಟ್ಟುವವರು ಯಾರಿದ್ದಾರೆ ಹೇಳು

ಕಸಗುಡಿಸಲು ಸಾಲಾಗಿದ್ದಾರೆ ಕಲ್ಮಶ ತೊಳೆಯುವವರು ಎಲ್ಲಿದ್ದಾರೆ ಹೇಳು”

“Religion is what keeps the poor from murdering the rich”. ಎಂಬ ನೆಪೋಲಿಯನ್ ಬೋನಪಾರ್ಟಿ ಅವರ ಮಾತು ನಿಜವಾದ ಹಾಗೂ ಇಂದಿನ ದಿನಕ್ಕೆ ಬೇಕಾದ ಧರ್ಮವನ್ನು ಪ್ರತಿನಿಧಿಸುತ್ತಿದೆ. ಬಡವರು ಶ್ರೀಮಂತರನ್ನು ಕೊಲೆ ಮಾಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ, ಕರ್ತವ್ಯ ಆಗಬೇಕಿದೆ. ಆದರೆ ನಾವಿಂದು ಅಹಂನ ಕೋಟೆಯಲ್ಲಿ ನಮ್ಮ ನಮ್ಮ ಧರ್ಮಗಳಿಗೆ ಸಂಕೋಲೆ ತೊಡಿಸಿದ್ದೇವೆ. ರೋಮನ್ ಲೇಖಕ ಲೂಸಿಯಸ್ ಅನ್ನಿಯಸ್ ಸೆನೆಕಾ ಅವರ “ಧರ್ಮವನ್ನು ಸಾಮಾನ್ಯ ಜನರು ಸತ್ಯವೆಂದು ಪರಿಗಣಿಸುತ್ತಾರೆ, ಬುದ್ಧಿವಂತರು ಸುಳ್ಳು ಎಂದು ಮತ್ತು ಆಡಳಿತಗಾರರು ಉಪಯುಕ್ತವೆಂದು ಪರಿಗಣಿಸುತ್ತಾರೆ” ಎಂಬುದು ಅಕ್ಷರಶಃ ಸತ್ಯವಾಗಿದೆ. ಆಡಳಿತಗಾರ ಹಿತಾಸಕ್ತಿಯಿಂದ ದೇಶದ ಮೂಲೆ ಮೂಲೆಯಲ್ಲೂ ಮಂದಿರ, ಮಸ್ಜಿದ್, ಚರ್ಚುಗಳು ತಲೆ ಎತ್ತುತ್ತಿವೆ, ಅದೂ ಮನಸುಗಳ ಗೋರಿಯ ಮೇಲೆ!! ಇಲ್ಲಿ ಸುಖನವರ್ ಆನಂದ ಭೋವಿಯವರ ಸಾಮಾಜಿಕ ಕಳಕಳಿ ಮುನ್ನೆಲೆಗೆ ಬರುತ್ತದೆ. ಬಾಹ್ಯವಾಗಿ ಬಿದ್ದ ಕಸಗಿಂತ ಅಂತರಂಗದಲ್ಲಿ ಹೆಪ್ಪುಗಟ್ಟಿರುವ ಕಸವನ್ನು ವಿಲೇವಾರಿ ಮಾಡಬೇಕಿದೆ ಎಂಬುದನ್ನು ಈ ಮೇಲಿನ ಷೇರ್ ಗಟ್ಟಿಯಾಗಿ ಕೂಗಿ ಹೇಳುತ್ತಿದೆ.

       ಇಂದು ‘ಬಡತನ’ ಎಂಬುದು ನಮ್ಮ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹವಣಿಸುತ್ತಿದೆ. ಮೂಲಭೂತ ಸೌಕರ್ಯಗಳ ಬಡತನ, ಸಂಸ್ಕಾರದ ಬಡತನ, ಬೌದ್ಧಿಕ ಬಡತನ….ಮುಂತಾದ ಬಡತನಗಳು ನಮ್ಮನ್ನು ಆವರಿಸಿವೆ. ತುಂಡು ರೊಟ್ಟಿ, ಹರಿದ ನೋಟಿಗಾಗಿ ಮನುಷ್ಯ ತುಂಬಾನೇ ಮಜಬೂರ್ ಆಗುತಿದ್ದಾನೆ. ಅಸಂಖ್ಯಾತ ಸಮಸ್ಯೆಗಳು ತಾಯಿಯಾದ ಬಡತನ ಕುರಿತು ಗಜಲ್ ಗೋ ಆನಂದ ಭೋವಿಯವರ ಈ ಷೇರ್ ಇಲ್ಲಿ ದಾಖಲಿಸಬಹುದು.

ಒಂದು ತುಂಡು ರೊಟ್ಟಿಗಾಗಿ ನಮ್ಮ ಹಸಿವನ್ನು ಅವಮಾನಿಸುತಿದ್ದಿರಿ

ಒಂದು ಹರಿದ ನೋಟಿಗಾಗಿ ನಮ್ಮ ಬೆವರನ್ನು ಅವಮಾನಿಸುತಿದ್ದಿರಿ

ಸಮಾನತೆಯ ಬೀಜ ಬಿತ್ತಲು ನಮ್ಮ ನೆಲ ಇನ್ನೂ ಹದವಾಗದೇ ಇರೋದು ದುರಂತವೇ ಸರಿ. ದುಡ್ಡು ಮಾತಾಡುವಾಗ ಮೌಲ್ಯ ಮೂಲೆಗುಂಪಾಗುತ್ತದೆ. ಇಂಥಹ ಭೀಕರ ಕಾಲಘಟ್ಟದಲ್ಲಿ ನಮ್ಮ ಉಸಿರು ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಂಡು ಹೋಗುತ್ತಿರುವುದು ನಮ್ಮೆಲ್ಲರ ಅಧಃಫತನದ ಕಿಂಡಿಯಾಗಿದೆ. ಆರ್ಥಿಕ ಅಸಮಾನತೆಯಿಂದ ಬಂಡವಾಳಶಾಹಿಯ ಅಟ್ಟಹಾಸ ಮುಗಿಲು ಮುಟ್ಟುತ್ತಿದೆ. ತುತ್ತು ಅನ್ನಕ್ಕಾಗಿ ಹಸಿದ ಒಡಲನ್ನು ಅವಮಾನಿಸುವ, ಕುರುಡು ಕಾಂಚಾಣಕ್ಕಾಗಿ ಬೆವರನ್ನು ನಿಕೃಷ್ಟವಾಗಿ ಕಾಣುವ ಒಂದು ವ್ಯವಸ್ಥೆಯೆ ನಮ್ಮ ಮುಂದೆ ಇರುವುದನ್ನು ಈ ಷೇರ್ ದಾಗಲಿಸುತ್ತಿದೆ.

ಇಂದು ‘ಗಜಲ್’ ಪ್ರೇಮ ಸಂವೇದನೆಯೊಂದಿಗೆ ಸಮಾಜಮುಖಿ ಚಿಂತನೆಯತ್ತ ಮುಖ ಮಾಡಿ ನಿಂತಿದೆ, ನಿಲ್ಲುತ್ತಿದೆ. ಸಮಾಜದ ಪ್ರತಿ ಅಂಕು ಡೊಂಕಿಗೂ ಪ್ರೀತಿಯಿಂದ ಸ್ಪಂದಿಸುತ್ತಿದೆ. ಇಂಥಹ ಗಜಲ್ ಲೋಕ ಶ್ರೀ ಆನಂದ ಭೋವಿಯವರ ಗಜಲ್ ಗಳಿಂದ ಮತ್ತಷ್ಟು ಮೊಗೆದಷ್ಟೂ ಪ್ರಕಾಶಿಸಲಿ ಎಂದು ತುಂಬು ಹೃದಯದಿಂದ ಶುಭ ಕೋರುತ್ತೇನೆ.

ನಮ್ಮಿಬ್ಬರಿಗೂ ಹೊಂದಿಕೆಯಾಗುತ್ತದೆ ನನ್ನಂತೆಯೆ ನೀನು ಇದ್ದೀಯಾ

ನಾನು ಸ್ವಲ್ಪ ಸುಳ್ಳುಗಾರ, ಸ್ವಲ್ಪ ಸುಳ್ಳುಗಾರ ನೀನು ಇದ್ದೀಯಾ”

ಫರಾಗ್ ರೋಹವಿ

       ಹೂಬನದಲ್ಲಿ ಸುತ್ತಾಡುತಿದ್ದರೆ ಕಾಲುಗಳೂ ದಣಿಯವು, ಮನವೂ ತಣಿಯದು!! ಈ ಗಜಲ್ ಜನ್ನತ್ ಅಂದರೇನೆ ಹಾಗೆ, ಇಂಗದ ದಾಹ, ಸಾಕೆನಿಸದ ಮೋಹ. ಆದರೂ….ಬೇಲಿ ಹಾಕುವ ಕಾಲದ ಮುಂದಿರುವ ಮುಸಾಫಿರ್ ನಾನು. ಇಂದು ಹೋಗಿ, ಮತ್ತೆ ಮುಂದಿನ ಗುರುವಾರ‌ ತಮ್ಮ ಪ್ರೀತಿಯನ್ನರಸುತ ಬರುವೆ.. ಹೋಗಿ ಬರುವೆ, ಬಾಯ್.. ಟೇಕ್ ಕೇರ್ ದೋಸ್ತೊ…


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top