ಚಲಾವಣೆಯಲಿದ್ದರಷ್ಟೇ ಬೆಲೆ

ಲಹರಿ

ಚಲಾವಣೆಯಲಿದ್ದರಷ್ಟೇ ಬೆಲೆ

ಅಮುಭಾವಜೀವಿ ಮುಸ್ಟೂರು

ಇದು ಭ್ರಮಾ ಜಗತ್ತು  .ಇಲ್ಲಿ ಚಲಾವಣೆಯಲಿದ್ದರಷ್ಟೇ ಬೆಲೆ. ಮೂಲೆಗುಂಪಾದರೆ ಮರೆತೇಬಿಡುವರು ಕ್ಷಣದಲ್ಲೇ.

ಇಲ್ಲಿ ವ್ಯಕ್ತಿತ್ವಕಿಂತ ವ್ಯಕ್ತಿ ಪೂಜೆಗೆ ಮಹತ್ವ ಕೊಡುವ ಜನರೆದುರು ಅಪರಿಚಿತನಾಗುಳಿಯುವುದು ಮೇಲು. ಕಾಲಕ್ಕೆ ತಕ್ಕಂತೆ ಜನರ  ಅಭಿಪ್ರಾಯಗಳು  ಬದಲಾಗುತ್ತವೆ.ಹೀಗೆ ಬದಲಾಗುವ ಜನರೊಂದಿಗೆ ನಂಟು ಹೊಂದುವ ದರ್ದು ಏನಿಲ್ಲ. ತಿರಸ್ಕರಿಸಿದ ಜನರನ್ನೂ ನಾವು ತಿರಸ್ಕಾರದಿಂದ ದೂರವಿಡಬೇಕು.ಇಲ್ಲಿ ಯಾರನ್ನೂ ಯಾರೂ ನಂಬಿ ಕೂತಿಲ್ಲ. ಅವರವರ ಪಾಡಿಗೆ ಅವರು ಸಾಗತಿರಬೇಕು.ಗೆದ್ದೆತ್ತಿನ ಬಾಲ ಹಿಡಿದು ಎಲ್ಲ ಸವಲತ್ತುಗಳ ಪಡೆಯುವರೆ ಅಧಿಕರಿರುವರು.

       ಬೇಕೆಂದಾಗ ಬಳಸಿಕೊಂಡು ಬೇಡವಾಗಲು ಇಲ್ಲಸಲ್ಲದ ಆರೋಪ ಮಾಡಿ ಕೆಟ್ಟವನಾಗಿಸಿ ತಾನೇ ಒಳ್ಳೆಯವನು/ ಳು ಎಂದು ಬೀಗುವ ಜನರನ್ನೇ ಎಲ್ಲರೂ ನಂಬುತ್ತಾರೆ. ಒಬ್ಬರ ಓಲೈಕೆಗಾಗಿ ಇನ್ನೊಬ್ಬರ ತೇಜೋವಧೆ ಮಾಡುವ  ಆಷಾಢಭೂತಿಗಳೇ ತುಂಬಿ ಹೋಗಿದ್ದಾರೆ.ಅವಕಾಶವಾದಿಗಳ ಮುಂದೆ ಸ್ವಾಭಿಮಾನಿಯಾಗಿ ಬದುಕುವ  ಆತ್ಮಗೌರವ  ಹೊಂದಿರುವ ಯಾರೂ ಕೂಡ  ಅಂತವರ  ಆರೋಪಗಳಿಗೆ ತಲೆಕೆಡಿಸಿಕೊಳ್ಳಬಾರದು. ಬದಲಾಗಿ ಟೀಕೆ ಟಿಪ್ಪಣಿಗಳು ಎಂದಿಗೂ ಮೇಲೆಳಲು ಮೆಟ್ಟಿಲಾಗಬೇಕೇ ವಿನಃ ತುಳಿಯುವವರ ಮುಂದೆ ತಲೆಬಾಗಬಾರದು.

       ವ್ಯಕ್ತಿಯ ವ್ಯಕ್ತಿತ್ವ  ಎಂಬುದು ಯಾರೋ ಕೊಡುವ ಪ್ರಮಾಣ ಪತ್ರದಲ್ಲಿ. ಅದು ನಾವು ನಂಬಿದ ತತ್ವ ಸಿದ್ದಾಂತ ಆದರ್ಶಗಳ ಮೂರ್ತರೂಪ. ಯಾವ ಕುನ್ನಿಗಳ ಕುಹಕಿಗಳ ಬಾಯಿಚಪಲದ ಮಾತುಗಳಿಗೆ ಕಿವಿಗೊಡಬಾರದು. ಇನ್ನೊಬ್ಬರ ವ್ಯಕ್ತಿತ್ವಕೆ ಮಸಿ ಬಳಿಯುವವರೆಂದಿಗೂ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು  ಆಗದವರೇ ಆಗಿರುತ್ತಾನೆ.ಕೊಚ್ಚೆಯಲಿ ಮಿಂದವನಿಗೆ ಸ್ವಚ್ಛ ವ್ಯಕ್ತಿತ್ವದ ಹಿನ್ನೆಲೆ ತಿಳಿಯಲೂ ಸಾಧ್ಯವಾಗದು. ಕೇವಲ ಯಾವುದೋ ಪೂರ್ವಾಗ್ರಹ ಪೀಡಿತನಾಗಿ ಬೊಗಳುತ್ತಿರುತ್ತಾನೆ.

       ಆನೆ ನಡೆದದ್ದೇ ಹಾದಿ ಎಂಬಂತೆ ನಮ್ಮ ಪಾಡಿಗೆ ನಾವು ಸಾಗುತಿರಬೇಕು.ಕೊಚ್ಚೆ ಜನರ ತುಚ್ಛ ಮಾತುಗಳಿಗೆ ಉತ್ತರಿಸಲು ಹೋಗಬಾರದು. ಚರಂಡಿಯಲಿ ವಟಗುಡುವ ಕಪ್ಪಗೆ ಶೃಂಗ ಶಿಖರವನ್ನು ಸ್ಪರ್ಶಿಸಲೂ ಆಗದು  ಆ ಯೋಗ್ಯತೆಯಾಗಲಿ ಅರ್ಹತೆಯಾಗಲಿ ಇರದು. ಆತ್ಮಸಾಕ್ಷಿಗೆ ಅಂಜಿದವನು ಆತ್ಮ ಗೌರವದಿಂದ ಬಾಳುತ್ತಾನೆ.ಅವಹೇಳನ ಮಾಡುವವನು ಅವನತಿ ಹೊಂದುತ್ತಾರೆ. ಸತ್ಯದ ಮುಖ ಕಾಣುವ ತನಕ ಪ್ರಾಮಾಣಿಕವಾಗಿ ಪಾರದರ್ಶಕ ನಡೆನುಡಿಯಿಂದ ಮುನ್ನ್ನಡೆಯುತಿರಬೇಕಷ್ಟೇ.


Leave a Reply

Back To Top