ದೂರುವ ಮುನ್ನ -ಸುರೇಶ್ ಕಲಾಪ್ರಿಯಾ

ಕಾವ್ಯಸಂಗಾತಿ

ದೂರುವ ಮುನ್ನ

ಸುರೇಶ್ ಕಲಾಪ್ರಿಯಾ

ಬಂದಿಲ್ಲ ನಾನು ನಿಮ್ಮ ದಾರಿಗೆ
ಪದೇ ಪದೇ ಎಳೆಯುವಿರೇಕೆ ಮಾತಿಗೆ
ಹೆಮ್ಮೆಪಡಿ…ಬೀಗದೇ ಬಾಗಿಬಿಡಿ.
ಪಾಪ.. ಕಪ್ಪೆಗಳ ಮದುವೆ ತಪ್ಪಿಸಿದ್ದೇನೆ.

ಅಡ್ಡವಾದಿರೇಕೆ ನೀವು ಗುಡ್ಡ ಕೊರೆದು
ಧರೆಯ ಸೌಂದರ್ಯವ ಮಾಡಿ ಬರಿದು
ನಿಮ್ಮ ನೆಲೆಯ ಚಿಂತೆ ನಿಮಗಾದರೆ
ನನಗೂ ಚಿಂತಿಸಬೇಕಲ್ಲ ಕೊಂಚ ಆಸರೆ

ನನ್ನೆದೆಯ ಒತ್ತಿ ಕಟ್ಟಿದಿರಿ ಮಹಲು
ನನ್ನೊಡಲಿಗೆ ಅವನು ಸೇರಿಸಿದೆನಷ್ಟೇ
ನನ್ನ ದಾರಿಯ ನಾನೇ ಹುಡುಕಿಕೊಂಡಿದ್ದೇನೆ ಮತ್ತೆ
ದೂರಬೇಡಿರಿ ತಪ್ಪು ಮಾಡಿಲ್ಲ ನಾನು

ಆಸೆ ಉಂಟು ನನಗೂ ನಾನಾಗಿ ಉಳಿವಂತೆ
ದುರಾಸೆಯಂತೂ ಇಲ್ಲ ನಿಮಗಿರುವಂತೆ
ರಾಜನಂತೆ ನಾ ಮೆರೆದ ರಾಜಕಾಲುವೆ
ಆಪೋಶನ ಮಾಡಿಕೊಂಡಿದ್ದು ತರವೇ

ಪಾಪಗಳ ಲೆಕ್ಕ ಎಂದಿಗೂ ಕೂಡುತ್ತದೆ ಒಟ್ಟಿಗೆ
ಪೂರ್ಣವಾಗಿ ಬೆಲೆತೆರುವತನಕ ತಪ್ಪಿಗೆ
ಈಗದರ ಸರದಿ ಬಂದಿದೆಯಷ್ಟೇ ಸತ್ಯವು
ಅನುಭವಿಸಬೇಕು ತಪ್ಪಿಸಿಕೊಳ್ಳುವ ಮಾತು ಮಿಥ್ಯವು

ದೂರುವ ಮುನ್ನ ಚಿಂತಿಸಿ ಸತತ
ನನಗೂ ದಾರಿಬಿಡಿ ಸಾಗಿಬಿಡಲು ನಿರತ
ಒಳಿತಿಗಿರುವೆ ನಾನು…. ಕೆಡುಕಿಗೆ ಕೊಡಬೇಡಿ ದಾರಿ
ಉಳಿಸಿ ಉಳಿಯುವ ಸತ್ಯ ಅರಿಯಿರಿ


Leave a Reply

Back To Top