ಕಾವ್ಯಸಂಗಾತಿ
ಮನಸು
ಅನ್ನಪೂರ್ಣ ಸಕ್ರೋಜಿ
ಬದುಕು ನಾಕು ದಿನದ ಸಂತಿ
ನೀ ಯಾಕ ಮಾಡತಿ ಚಿಂತಿ
ಸಂಸಾರದಾಗ ಸಿಕ್ಕೊಂಡ ಕುಂತಿ
ವಿಷಯ ವಿಷ ತಿಳಿದ ಸಂಗತಿ
ಬೆಕ್ಕಸ ಬೆರಗಾಗಿ ಯಾಕ ನಿಂತಿ
ಏಳೊ ಹುಚ್ಚಾ ಇದೆಲ್ಲಾ ಭ್ರಾಂತಿ
ನಿನ್ನ ಮನಸ ಎಲ್ಲಾದಕೂ ಕಾರಣ
ವಿಷಯ ವಾಸನೆಗಳ ಆಕರ್ಷಣ
ಅದನ್ನೆಲ್ಲ ಮಾಡಿಬಿಡು ಅರ್ಪಣ
ಮನಸನ್ನ ಪ್ರೀತಿಯಿಂದ ರಮಿಸು
ಅಧ್ಯಾತ್ಮದ ಮಾರ್ಗ ತೋರಿಸು
ಸಚ್ಚಿದಾನಂದನೆಂದು ಅರುಹಿಸು
ನೀನು ಮನಸಿನ ದಾಸನಾಗಬೇಡ
ನೀ ಅಹಂಕಾರದಿ ಮೆರೆಯಬೇಡ
ಜಾತಿಭೇದ ಎಂದೂ ಮಾಡಬೇಡ
ಮನಸೇ ನಿನ್ನ ಶತ್ರು ಮತ್ತು ಮಿತ್ರ
ಚಾಕು ಹಣ್ಣಿಗೊ ಶಸ್ತ್ರಚಿಕಿತ್ಸೆಗೊ
ನೀನೊಂದು ಮಾಧ್ಯಮ ಮಾತ್ರ
ಮನಸೊಂದು ಮಗುವಂತೆ ಮುಗ್ಧ
ಬೆಣ್ಣೆಯಂತೆ ಸ್ನೇಹಿತನಂತೆ ಸ್ನಿಗ್ಧ
ಬಂಡಖೋರ ಪುಂಡ ಒಮ್ಮೊಮ್ಮೆ
ಸುಖ ದುಃಖ ಬೇಕು ಬೇಡಗಳ
ಆಶೆ ನಿರಾಶೆ ಬಂಧ ಮೋಕ್ಷಗಳ ದ್ವಂದ್ವ ಜೀವನದ ಕೇಂದ್ರ ಮನಸು
ಶಕ್ತಿಶಾಲಿ ಸಾಮರ್ಥ್ಯದ ಮನಸೇ
ಭಕ್ತಿಯ ಅನಂತ ಆಕಾಶದ ಕನಸೇ
ಮುಕ್ತವಾಗಿ ಆನಂದದಲಿ ನೆಲೆನಿಲ್ಲು