ಕಾವ್ಯಸಂಗಾತಿ
ಗಜಲ್
ಡಾ.ತನುಶ್ರೀ ಹೆಗಡೆ
ಉರಿವ ಕವಿತೆಗಳು ಇರುಳ ತಂಪಲ್ಲೇಕೆ ಹುಟ್ಟುತ್ತವೆ ಹೇಳು
ಹನಿವ ಮುತ್ತುಗಳು ಕಡಲ ಗೂಡಲ್ಲೇಕೆ ಕಟ್ಟುತ್ತವೆ ಹೇಳು
ತೇಲಿ ಬಂದ ಪರಿಮಳವ ಅರಸಿ ಹೊರಟವ ನಾನು
ಚೆಂಗುಲಾಬಿ ತೋಟದಲಿ ಮುಳ್ಳುಗಳೇಕೆ ಹೆಟ್ಟುತ್ತವೆ ಹೇಳು
ಇನ್ನೂ ದೂರ ಸಾಗಬೇಕಿದೆ ನನಗೆ ಬಯಲ ದಾಟಬೇಕಿದೆ
ಹೊರಳಿದ ಹಾದಿಯನ್ನೆ ಮತ್ತೆ ಹೆಜ್ಜೆಗಳೇಕೆ ಮೆಟ್ಟುತ್ತವೆ ಹೇಳು
ಕಾಲಕ್ಕೆಲ್ಲಿಯ ಹಂಗು ,ಒಮ್ಮೆ ತಿರುಗುತ್ತದೆ ಒಮ್ಮೆ ಹರಿಯುತ್ತದೆ
ಅದಾವ ನಿರುಕಲಿ ‘ಇಂದು’, ‘ನಾಳೆ’ಗಳ ಅಟ್ಟುತ್ತವೆ ಹೇಳು
‘ತನು’ ವ ಮೋಹ ಮನದ ದಾಹ ತೀರುವುದೆಂತು ಕಾಣೆ
ಇಹದ ಲೀಲೆಗಳೇಕೆ ಬಿಡದೆ ತೆರತೆರಳಿ ತಟ್ಟುತ್ತವೆ ಹೇಳು