ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ಸಮುದ್ರದಾಚೆಯ ಜೀವಕ್ಕೆ ಭೇಟಿಯಾಗಬೇಕೆಂದು ಬಯಸುತ್ತಿದೆ ಜೀವ
ಹಿಮಾಲಯ ಪರ್ವತ ಹತ್ತಿ ನೋಡಬೇಕೆಂದು ತವಕಿಸುತ್ತಿದೆ ಜೀವ
ನೋಟಕ್ಕೆ ನಿಲುಕದ ನಿನ್ನ ರೂಪ ಕಣ್ ಅಕ್ಷಿಯಲ್ಲಿ ನಿಂತಿದೆ ಇಂದು
ನಿನ್ನ ನೆನಪಾದಾಗಲೆಲ್ಲ ದಿಲ್ ಸೇರಬೇಕೆಂದು ಹುರಿದುಂಬಿಸುತ್ತಿದೆ ಜೀವ
ಭಾಷೆ ಮಾತಿನ ವಾಹಿನಿಯಂತು ಇಲ್ಲವೇ ಇಲ್ಲ ಇನಿಯ ಇಲ್ಲಿ
ತರಂಗಗಳಲ್ಲಿ ತೇಲಿ ನಿನ್ನಲ್ಲಿ ಕರಗಬೇಕೆಂದು ಹಂಬಲಿಸುತ್ತಿದೆ ಜೀವ
ಅಮಾವಾಸ್ಯೆಯ ಕತ್ತಲೆಯನ್ನು ಬೆಳದಿಂಗಳಾಗಿಸುವ ಹುಚ್ಚಾಸೆ ನನಗೆ
ಮನ ಹೂದೋಟದಲ್ಲಿ ತಂಬೆಳಕಿನಲ್ಲಿ ಸುತ್ತಾಡಬೇಕೆಂದು ಪ್ರೇರೆಪಿಸುತ್ತಿದೆ ಜೀವ
ನನಸಾಗದ ಕನಸುಗಳೆಂದು ಏಕೆ ಹಳಹಳಿಸುವೆ “ಮಾಜಾ”
ದಿನಗಳು ಉರುಳಿದಂತೆ ಪ್ರೀತಿ ಪಡೆಯಲೇಬೇಕೆಂದು ಹೇಳುತ್ತಿದೆ ಜೀವ