ಕಾವ್ಯ ಸಂಗಾತಿ
ಪದಗಳು.
ಹಂಸಪ್ರಿಯ
ಬಳಲಿದೆವು ನಾವು, “ಪದಗಳು”.
ಹುಡುಕುತ್ತಾ ಬದುಕಿನರ್ಥವ.
ಅಕ್ಷರಗಳಲಿ ಜನ್ಮತಾಳಿ
ಬೆಸೆ – ಬೆಸೆದು ಪದಗಳಾಗಿ
ಅರ್ಥಗಳ ಹಡೆಯಬೇಕು
ಬದುಕಿನ ‘ಗಮ್ಯ’ ಅರಿಯಲು…..
ಭಾಷೆಗೊಂದು ರೂಪತಾಳಿ
ಚಲನಶೀಲವಾಗಬೇಕು.
ಪ್ರಾಣಿ – ಪಕ್ಷಿಗಳಿಗೊಂದು ಧ್ವನಿ
ಗಿಡ – ಮರಗಳಿಗೊಂದು ಧ್ವನಿ
ಜಲಚರಗಳಿಗೊಂದು ಧ್ವನಿ
ಭಿನ್ನವಾದ ಮನುಜನಿಗೆ ವಿಶೇಷ ಧ್ವನಿ……
ಸತ್ಯಕೂ ನಾವೇ ಸಾಕ್ಷಿ ; ಮಿಥ್ಯಕೂ…
ಆಡಿದ ಪದಗಳು ಗಾಳಿಯ ಪಾಲು
ಬರೆದ ಪದಗಳು ಹೊತ್ತಿಗೆಯಲಿ
ಹೂತ ಶವಗಳಂತೆ ಸಾಲು ಸಾಲು…
ಅರಿವಿಲ್ಲದ ಮನ
ಉರು ಹೊಡೆದರೆ
ಮನನವಾಗದಿರೆ ಪದಗಳ ಅರ್ಥ;ಬದುಕಿನರ್ಥ
‘”ತೊಳೆದಂತೆ ಹೊಳೆಯಲ್ಲಿ ಹುಣಿಸೆಹಣ್ಣು.”….
ಅಡಗಿವೆ ವೇದಗಳು ; ಭಗವದ್ಗೀತೆಗಳು
ಖುರಾನ್ ; ಬೈಬಲ್ ಗುರು ಗ್ರಂಥಸಾಹೇಬ್
ಶರಣರ ವಚನಗಳು ಪದಗಳಲಿ,…
ಬಳಲುವುವೆವು ನಾವು ‘ಪದಗಳು’, ಶ್ರೇಷ್ಠ – ಕನಿಷ್ಠಗಳೆಂಬ ತರಾತಮ್ಯ ಮನಗಳಲಿ…
ಪದಗಳಿಗೇಕೆ? ಜಾತಿಯ ಸೀಲು ( ಶಿಕ್ಕಾ ).
ಪದಗಳು ನಾವು ಹೊಡೆದಾಡುವುದಿಲ್ಲ.
ಹೊಡೆದಾಡಿಸುವರು ಸ್ವಾರ್ಥ ಜಗತ್ತಿನ ಮನಸ್ಥಿತಿಗಳು
ಪಟ್ಟಕ್ಕೇರಿದ ಪುಡಾರಿ ಮನಸುಗಳು…
ಪದಗಳು ನಾವು ಉಕ್ಕಿಸುವೆವು,
ಭಾವನೆಗಳ ” ಬೆಸೆಯಲು ಪ್ರೀತಿ – ಪ್ರೇಮಗಳ..”
ಪದಗಳು ನಾವು ಉಡುಗಿಸುವೆವು
ದ್ವೇಷ – ತಿರಸ್ಕಾರ….
ಕಣ್ಣೀರ ಕಂಬನಿಗೊಂದು ಅರ್ಥ
ಕಣ್ಣೀರಬಾಷ್ಪಕೂ ಅರ್ಥ.
ಪದಗಳು ನಾವು ಸ್ಫೂರ್ತಿಕಾರಣ
ಹಾಸ್ಯ -ಲಾಸ್ಯಕೂ ;ರೌದ್ರ – ಭೀಬತ್ಸಕೂ
ಕರುಣೆ – ಶಾಂತಕೂ.. ಪದಾರ್ಥಗಳೇ ಕಾರಣ…
ಬದುಕಿನರ್ಥ ಕಳೆವ ಅರ್ಥಹೀನ ಪದಗಳು
ಕಳೆದು ಹೋಗಲಿ….
“ಜೀವವಿರದ ಹಸುಳೆಗಳು ಮರಣಹೊಂದಿದಂತೆ”.
ಚಿಗಿಯುತ್ತಿರಲಿ ಹೊಳೆವ ಪದಗಳು
ಬದುಕಿನರ್ಥ ಅರಿಯಲು
ಹೊಳೆ ದಂಡೆಯ ಮೇಲಿನ ಕರ್ಕಿಯಂತೆ….