ಕಾವ್ಯ ಸಂಗಾತಿ
ಗಜಲ್
ಯಮುನಾ


ಬೆಂಗಾಡಿನ ಕನಸುಗಳ ಆವುಗೆಗೆ ಮುಂಗಾರು ಮಳೆಯಾದವನು ನೀನಲ್ಲವೇ….?
ನಾಚಿಕೆಯ ಪೊರೆ ಕಳಚಿ ಮೋಹದುಡುಗೆಯ ತೊಡಸಿದವನು ನೀನಲ್ಲವೆ….?
ಹನಿಗೆ ನೆಲ ಹಸುರೊಡೆದು ಹೂ ಮೊಗ್ಗು ಹಬ್ಬಗಳದೇ ಸುಗ್ಗಿ
ನೆಲ ಮರೆಯ ಹುಳು ಹತ್ತಿ ಬಳ್ಳಿ ಬಾಡುತಿರಲು – ದೂರಾದವನು ನೀನಲ್ಲವೆ…?
ಮನವು ಮರ್ಕಟವಾಗಿ ಚಂದಿರನ ತಂಪಿಗೆ ಕಾಯುತಿದೆ
ಮೋಡಗಳ ಮರೆಯಲ್ಲಿ ಆಟವಾಡಿದವನು ನೀನಲ್ಲವೇ…?
ಶಾಪಗ್ರಸ್ತ ಶಿಲೆಯು ಬಿಡುಗಡೆಗೆ ಹಂಬಲಿಸಿತು.
ಭವದ ಈತಾಪದಲಿ ಶ್ರೀರಾಮನಾಗದೇ ರಾವಣನಾದವನು ನೀನಲ್ಲವೆ…?
ಗುಡುಗು ಮಿಂಚುಗಳಿದ್ದು ಕಾರ್ಮೋಡಗಳು ಮೊರೆಯುತಿವೆ
ಯಮುನೆಯಾ ಪಾತ್ರದಲಿ ವರುಣಾಗಿ ಹರಿಯದೇ ಬತ್ತಿಹೋದವನು ನೀನಲ್ಲವೆ…..?