ತರ್ಪಣ-ಶಾಲಿನಿ ಕೆಮ್ಮಣ್ಣು

ಕಾವ್ಯಸಂಗಾತಿ

ತರ್ಪಣ

ಶಾಲಿನಿ ಕೆಮ್ಮಣ್ಣು

ಕರೆದಾಗ ಬರುವ ಬದ್ಧತೆಯ
ಭರವಸೆಯ ಮೂಡಿಸು
ಮರೆವಿಗೆ ಮರೆಯಾಗಿ
ಸ್ಥಿರವಾಗಿ ಸ್ಥಾಯಿಯಾಗು
ಕಣ್ತೆರೆದರೆ ನಿನ್ನ ಕಲಾ ಶಾಲೆಯ
ಬಿತ್ತಿಬಿಡಿಸಿಡು
ಕಣ್ಮುಚ್ಚಲು ಹೃದಯದೆ ನಿನ್ನ
ಸಾಕ್ಷಾತ್ಕಾರದ ನಗುವ ಚೆಲ್ಲು

ಮುಂಜಾನೆಯ ಮಂಜಾಗು
ಮಧ್ಯದೆ ಮಂದವಾಗು
ಸಂಜೆಗೆ ಸಂಪಾದ ಸವಿಯಾಗು
ದಿನದ ದೀಪವಾಗು
ರಾತ್ರಿ ರಂಗಿನ ರತಿಯಾಗು
ಪ್ರಣಯ ಪ್ರಮೋದಕೆ ಪ್ರಲೋಭವಾಗು

ಜಿಹ್ವೆಯೊಳು ಜೇನಾಗು
ಮಾತಿಗೆ ಮುತ್ತಾಗು
ಪದಗಳಿಗೆ ಪಂಕ್ತಿಯಾಗು
ಮೌನದಿ ಜೊತೆಯಾಗು
ಹರ್ಷದ ವರ್ಷವಾಗು
ಸಡಗರದಿ ಸಾಗರವಾಗು

ದಾರಿದ್ರ್ಯದಿ ದಯೆ ಯಾಗು
ಭಯದಿ ಬಲವಾಗು
ಕತ್ತಲೆಗೆ ಕಂದೀಲಾಗು
ಬಿಸಿಲಿಗೆ ನೆರಳಾಗು
ಭಾವನೆಗೆ ಭಾವ ತುಂಬು
ಜೀವನಕೆ ಜೀವ ತುಂಬು

ದೀನಳಿಗೆ ದೇವನಾಗು
ಆಸರೆಯ ಅಂಬರವಾಗು
ಗೆಳೆತನಕೆ ಕೊಂಡಿಯಾಗು
ಪ್ರೇಮದ ಪರಾಕಾಷ್ಟೆಯಾಗು
ಹೆಜ್ಜೆಗೆ ಗುರುತಾಗು
ಪಯಣದ ಪ್ರಕಾರವಾಗು

ಸಂಬಂಧಗಳ ಸಂಕೋಲೆಯಾಗು
ಸಕನಾಗು ಸುಖಿಯಾಗು
ಸಂಧಿ ಯಾಗು ಸಲಿಲನಾಗು
ಸತತವಾಗು ಸಬಲವಾಗು
ಸಚೇತನವಾಗು ಸದ್ಗುರುವಾಗು

ಆನಂದದ ಆಗರವಾಗು
ಅಚಲವಾಗು ಅಖಂಡವಾಗು
ಅನಂತವಾಗು ಅದ್ವಿತೀಯವಾಗು
ಅನಿಕೇತನವಾಗು ಅಪಾರವಾಗು
ನನ್ನೊಳು ಅಮರವಾಗು


ಶಾಲಿನಿ ಕೆಮ್ಮಣ್ಣು

Leave a Reply

Back To Top